Site icon Vistara News

maha politics: ಶಿಂಧೆ ಟೀಮ್‌ಗೆ ಸುಪ್ರೀಂ ರಿಲೀಫ್‌, ವಿಚಾರಣೆ ಜುಲೈ 11ಕ್ಕೆ ಮುಂದೂಡಿಕೆ, ಅಲ್ಲಿವರೆಗೆ 16 ಶಾಸಕರು ಸೇಫ್

supreme court

ನವ ದೆಹಲಿ: ಮಹಾರಾಷ್ಟ್ರದ ಶಿವಸೇನೆಯ ಬಂಡಾಯ ನಾಯಕ ಏಕನಾಥ್‌ ಶಿಂಧೆ ಮತ್ತು ಟೀಮ್‌ ಡೆಪ್ಯೂಟಿ ಸ್ಪೀಕರ್‌ ನರಹರಿ ಜೈರ್ವಾಲ್‌ ಅವರ ತೀರ್ಮಾನಗಳನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಜುಲೈ ೧೧ಕ್ಕೆ ಮುಂದೂಡಿದೆ. ಅದುವರೆಗೆ ಯಾವುದೇ ಶಾಸಕರನ್ನು ಅನರ್ಹಗೊಳಿಸುವಂತಿಲ್ಲ ಎಂದು ಹಿರಿಯ ವಕೀಲರ ಮೂಲಕ ಡೆಪ್ಯೂಟಿ ಸ್ಪೀಕರ್‌ ಅವರಿಗೆ ಸೂಚಿಸಿದೆ.

ಈ ಬೆಳವಣಿಗೆ ಏಕನಾಥ್‌ ಶಿಂಧೆ ಗ್ರೂಪ್‌ಗೆ ದೊಡ್ಡ ರಿಲೀಫ್‌ ನೀಡಿದ್ದರೆ, ಉದ್ಧವ್‌ ಠಾಕ್ರೆ ಬಣಕ್ಕೆ ಭಾರಿ ಹಿನ್ನಡೆಯಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ೧೬ ಶಾಸಕರಿಗೆ ಅನರ್ಹತೆ ನೋಟಿಸ್‌ ಜಾರಿ ಮಾಡಿದ ಡೆಪ್ಯೂಟಿ ಸ್ಪೀಕರ್‌ ಅವರಿಗೆ ಸುಪ್ರೀಂ ಕೋರ್ಟ್‌ ಹಲವು ಪ್ರಶ್ನೆಗಳನ್ನು ಕೇಳಿದೆ.

ಪ್ರಮುಖ ಸೂಚನೆಗಳು

ಈ ನಡುವೆ ಸುಪ್ರೀಂಕೋರ್ಟ್‌ ಶಿಂಧೆ ಮತ್ತು ಅನರ್ಹತೆ ನೋಟಿಸ್‌ ಪಡೆದ ೧೫ ಶಾಸಕರ ಅರ್ಜಿಗೆ ಸಂಬಂಧಿಸಿ ಮಹಾರಾಷ್ಟ್ರದ ಡೆಪ್ಯೂಟಿ ಸ್ಪೀಕರ್‌ ನರಹರಿ ಜೈರ್ವಾಲ್‌, ಶಿವಸೇನೆಯ ಮುಖ್ಯ ಸಚೇತಕ ಸುನಿಲ್‌ ಪ್ರಭು, ಶಾಸಕಾಂಗ ಪಕ್ಷ ನಾಯಕ ಅಜಯ್‌ ಚೌಧರಿ ಅವರಿಗೆ ನೋಟಿಸ್‌ ನೀಡಿದೆ. ಮುಂದಿನ ಐದು ದಿನಗಳ ಒಳಗೆ ಕೌಂಟರ್‌ ಅಫಿಡವಿಟ್‌ ಸಲ್ಲಿಸುವಂತೆ ಅವರಿಗೆ ಸೂಚಿಸಲಾಗಿದೆ. ಇದಾಗಿ ಮೂರು ದಿನಗಳ ಒಳಗೆ ಶಿಂಧೆ ಮತ್ತು ೧೫ ಶಾಸಕರು ಅದಕ್ಕೆ ಪ್ರತಿಕ್ರಿಯೆಯನ್ನು ನೀಡಬೇಕಾಗಿದೆ. ಇದೆಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಜುಲೈ ೧೧ರಂದು ಮುಂದಿನ ವಿಚಾರಣೆ ನಡೆಸುವುದಾಗಿ ಜಸ್ಟಿಸ್‌ ಸೂರ್ಯಕಾಂತ್‌ ಮತ್ತು ಜೆ.ಪಿ. ಪಡಿವಾಳ ಅವರನ್ನೊಳಗೊಂಡ ವಿಭಾಗೀಯ ಪೀಠ ತಿಳಿಸಿತು. ಅಲ್ಲಿವರೆಗೆ ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆ ಮುಂದುವರಿಸುವಂತಿಲ್ಲ ಎಂದು ಡೆಪ್ಯೂಟಿ ಸ್ಪೀಕರ್‌ ಅವರಿಗೆ ತಿಳಿಸಲಾಗಿದೆ.

ಇಂದೇ ಉತ್ತರಿಸಬೇಕಿತ್ತು
ಶಿವಸೇನೆಯಿಂದ ಬಂಡೆದ್ದ ಏಕನಾಥ್‌ ಶಿಂಧೆ ಬಣ ಜೂ. ೨೦ರಂದು ಸೂರತ್‌ಗೆ ಹೋಗಿ ಅಲ್ಲಿಂದ ಜೂನ್‌ ೨೨ರಂದು ಗುವಾಹಟಿಗೆ ಪ್ರಯಾಣಿಸಿತ್ತು. ಅದೇ ದಿನ ಕ್ಷಿಪ್ರ ಕಾರ್ಯಾಚರಣೆಗೆ ಇಳಿದ ಉದ್ಧವ್‌ ಠಾಕ್ರೆ ಬಣವು ಶಾಸಕಾಂಗ ಪಕ್ಷ ಸ್ಥಾನದಿಂದ ಏಕನಾಥ ಶಿಂಧೆ ಅವರನ್ನು ಕಿತ್ತು ಹಾಕಿ ಅಜಯ್‌ ಚೌಧರಿ ಅವರನ್ನು ನೇಮಿಸಿತ್ತು. ಅಂದೇ ಉದ್ಧವ್‌ ಠಾಕ್ರೆ ಬಣದ ಸುನಿಲ್‌ ಪ್ರಭೂ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಿತ್ತು. ಶಾಸಕಾಂಗ ಪಕ್ಷ ಸಭೆಯನ್ನು ಕರೆದು ತುರ್ತಾಗಿ ಬಂದು ಭಾಗವಹಿಸುವಂತೆ ಸೂಚಿಸಿತ್ತು. ಆಗಮಿಸದೆ ಇದ್ದರೆ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿತ್ತು. ಆದರೆ, ಬಂಡಾಯ ಗುಂಪಿನ ಯಾವ ಶಾಸಕರೂ ಭಾಗವಹಿಸಿರಲಿಲ್ಲ.

ಇದರಿಂದ ಸಿಟ್ಟಿಗೆದ್ದ ಉದ್ಧವ್‌ ಠಾಕ್ರೆ ಬಣವು, ಏಕನಾಥ್‌ ಶಿಂಧೆಯೂ ಸೇರಿದಂತೆ ೧೬ ರೆಬೆಲ್‌ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡೆಪ್ಯೂಟಿ ಸ್ಪೀಕರ್‌ ನರಹರಿ ಜೈರ್ವಾಲ್‌ ಅವರಿಗೆ ಮನವಿ ಮಾಡಿತ್ತು. ಈ ಆಧಾರದಲ್ಲಿ ಜೈರ್ವಾಲ್‌ ಅವರು ಕಳೆದ ಮೇ ೨೫ರಂದು ೧೬ ರೆಬೆಲ್‌ ಶಾಸಕರಿಗೆ ನೋಟಿಸ್‌ ಜಾರಿಗೊಳಿಸಿ ಮೇ ೨೭-ಸೋಮವಾರ (ಇಂದು) ಸಂಜೆ ೫.೩೦ರೊಳಗೆ ಉತ್ತರ ನೀಡಬೇಕು ಎಂದು ಸೂಚಿಸಿದ್ದರು.
ಈ ನಡುವೆ, ಶಿಂಧೆ ಬಣ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿದ್ದರಿಂದ ಅನರ್ಹತೆಯಿಂದ ಸದ್ಯಕ್ಕೆ ಪಾರಾಗಿದ್ದು ಮಾತ್ರವಲ್ಲ, ಸೋಮವಾರ ಸಂಜೆ ೫.೩೦ರೊಳಗೆ ನೋಟಿಸ್‌ ಉತ್ತರ ಕೊಡಬೇಕಾದ ಅಗತ್ಯವೂ ಇಲ್ಲ. ಮುಂದಿನ ಜುಲೈ ೧೨ರೊಳಗೆ ಉತ್ತರ ನೀಡಿದರೆ ಸಾಕು ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.

ಅವಸರ ಬೇಡ ಎಂದ ಸುಪ್ರೀಂ
ಈ ಪ್ರಕರಣದಲ್ಲಿ ಅವಸರದ ತೀರ್ಮಾನ ಮಾಡಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. ಆರಂಭದಲ್ಲೇ ಈ ಪ್ರಕರಣವನ್ನು ಸುಪ್ರೀಂಕೋರ್ಟ್‌ಗೆ ಯಾಕೆ ತಂದಿರಿ ಎಂದು ಏಕನಾಥ್‌ ಶಿಂಧೆ ಬಣದ ೧೬ ಶಾಸಕರ ಪರವ ವಕೀಲರಾದ ನೀರಜ್‌ ಕಿಶನ್‌ ಕೌಶಲ್‌ ಅವರನ್ನು ಕೋರ್ಟ್‌ ಪ್ರಶ್ನಿಸಿತು. ಅಂತಿಮವಾಗಿಯೂ ಅದರು ಪ್ರಕರಣವನ್ನು ಮೊದಲು ಡೆಪ್ಯೂಟಿ ಸ್ಪೀಕರ್‌ ಅವರು ನಿರ್ಧರಿಸಲಿ ಎಂಬರ್ಥದ ಮಾಃಾತುಗಳನ್ನು ಆಡಿತು.

ಸರಕಾರದಿಂದ ಭರವಸೆ
ವಿಚಾರಣೆಯ ಸಂದರ್ಭದಲ್ಲಿ ರೆಬೆಲ್‌ ಶಾಸಕರ ಪರ ವಕೀಲರು, ತಮ್ಮ ಕಕ್ಷಿದಾರರ ಮನೆ, ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಲಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಸ್ಪಂದಿಸಿದ ಸರಕಾರದ ಪರ ವಕೀಲರು, ಎಲ್ಲ ರೆಬೆಲ್‌ ಶಾಸಕರ ಮನೆಗಳಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ಹೇಳಿದರು. ಯಾವುದೇ ಜೀವ, ಆಸ್ತಿಪಾಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಕೋರ್ಟ್‌ ಕೂಡಾ ಸರಕಾರ ರೆಬೆಲ್‌ ಶಾಸಕರು, ಮನೆ ಮತ್ತು ಅವರ ಆಸ್ತಿಪಾಸ್ತಿ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ಸೂಚಿಸಿತು.

ಇದನ್ನೂ ಓದಿ| Maha Political Crisis: ಏಕನಾಥ್‌ ಶಿಂಧೆ ಬಣದಲ್ಲಿರುವ 9 ಸಚಿವರ ಕೈ ಖಾಲಿ ಮಾಡಿದ ಉದ್ಧವ್‌ ಠಾಕ್ರೆ

Exit mobile version