ಮುಂಬಯಿ: ಮಹಾರಾಷ್ಟ್ರದಲ್ಲಿ ನಡೆದ ತ್ವರಿತ ರಾಜಕೀಯ ಬೆಳವಣಿಗೆಯಲ್ಲಿ (Maha politics) ಬಂಡಾಯ ನಾಯಕ ಏಕನಾಥ್ ಶಿಂಧೆ ಬಣ ಶಿವಸೇನೆಯಲ್ಲಿ ಮೇಲುಗೈ ಸಾಧಿಸಿದೆ. ಇದುವರೆಗೂ ಶಿಂಧೆ ಬಣದ ಮೇಲೆ ಅನರ್ಹತೆಯ ಅಸ್ತ್ರ ಝಳಪಿಸುತ್ತಿದ್ದ ಉದ್ಧವ್ ಠಾಕ್ರೆ ಬಣ ಈಗ ತಾನೇ ಅನರ್ಹತೆಯ ಭೀತಿಗೆ ಒಳಗಾಗಿದೆ. ಕೆಲವೇ ದಿನಗಳಲ್ಲಿ ವಾತಾವರಣ ತಿರುಗುಮುರುಗು ಆಗಿದೆ!
ಶಿವಸೇನೆಯ ಶಾಸಕಾಂಗ ಪಕ್ಷ ನಾಯಕರಾಗಿ ಏಕನಾಥ್ ಶಿಂಧೆ ಅವರು ಮತ್ತು ಪಕ್ಷದ ಮುಖ್ಯ ಸಚೇತಕರಾಗಿ ಭರತ್ ಗೋಗಾವಾಲೆ ಅವರನ್ನು ಆಯ್ಕೆ ಮಾಡಲಾಗಿದ್ದು, ಇದಕ್ಕೆ ಭಾನುವಾರಷ್ಟೇ ಸ್ಪೀಕರ್ ಆಗಿ ಆಯ್ಕೆಯಾದ ರಾಹುಲ್ ನಾರ್ವೇಕರ್ ಅವರು ಮಾನ್ಯತೆ ನೀಡಿದ್ದಾರೆ. ಇದರೊಂದಿಗೆ ಶಿವಸೇನೆಯಲ್ಲಿ ಉದ್ಧವ್ ಠಾಕ್ರೆ ಬಣ ಭಾರಿ ಹಿನ್ನಡೆಯನ್ನು ಅನುಭವಿಸಿದಂತಾಗಿದೆ. ಈ ನೇಮಕದ ವಿರುದ್ಧ ಉದ್ಧವ್ ಬಣ ಸುಪ್ರೀಂಕೋರ್ಟ್ ಮೊರೆ ಹೊಕ್ಕಿದೆಯಾದರೂ ತುರ್ತು ವಿಚಾರಣೆಗೆ ನ್ಯಾಯಾಲಯ ಸಮ್ಮತಿಸಿಲ್ಲ.
ಅನರ್ಹತೆಯೀಗ ತಿರುಗುಬಾಣ
ಜೂನ್ ೨೦ರಂದು ಶಿವಸೇನೆಯಿಂದ ಬಂಡೆದ್ದು ರೆಸಾರ್ಟ್‌ಗೆ ತೆರಳಿದ್ದ ಏಕನಾಥ್ ಶಿಂಧೆ ಬಣದ ವಿರುದ್ಧ ಉದ್ಧವ್ ಠಾಕ್ರೆ ಬಣ ತೀವ್ರವಾಗಿ ಸಿಡಿದೆದ್ದಿತ್ತು. ಜೂನ್ ೨೨ರಂದು ಏಕನಾಥ ಶಿಂಧೆ ಅವರನ್ನು ಶಿವಸೇನೆಯ ಶಾಸಕಾಂಗ ಪಕ್ಷ ಸ್ಥಾನದಿಂದ ಕಿತ್ತುಹಾಕಿ ಅವರ ಸ್ಥಾನಕ್ಕೆ ಅಜಯ್ ಚೌಧರಿ ಅವರನ್ನು ನೇಮಕ ಮಾಡಿದ್ದರು. ಸುನಿಲ್ ಪ್ರಭು ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿದ್ದರು.
ಈ ನಡುವೆಯೇ ಶಿವಸೇನೆಯ ಶಾಸಕಾಂಗ ಪಕ್ಷ ಸಭೆಯನ್ನು ಕರೆಯಲಾಗಿತ್ತು. ಅದರಲ್ಲಿ ಭಾಗವಹಿಸದಿದ್ದರೆ ಪಕ್ಷದಿಂದ ವಜಾಗೊಳಿಸುವ ಎಚ್ಚರಿಕೆ ನೀಡಲಾಗಿತ್ತು. ಆದರೆ, ಅದಾಗಲೇ ಗುವಾಹಟಿ ತಲುಪಿದ್ದ ಶಿಂಧೆ ಬಣದ ಯಾರೊಬ್ಬರೂ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಬದಲಾಗಿ ತಮ್ಮ ಬಣವೇ ಮೂರನೇ ಎರಡರಷ್ಟು ಬಹುಮತ ಹೊಂದಿರುವುದರಿಂದ ಸಭೆಯಲ್ಲಿ ಭಾಗವಹಿಸಬೇಕಾಗಿಲ್ಲ ಎಂದಿತ್ತು. ಆದರೆ, ಇದರಿಂದ ಸಿಟ್ಟಿಗೆದ್ದ ಉದ್ಧವ್ ಠಾಕ್ರೆ ಬಣ, ಶಿಂಧೆ ಬಣದ ೧೬ ಶಾಸಕರನ್ನು ಅನರ್ಹಗೊಳಿಸುವಂತೆ ಡೆಪ್ಯೂಟಿ ಸ್ಪೀಕರ್ ನರಹರಿ ಜೈರ್ವಾಲ್ ಅವರಿಗೆ ದೂರು ನೀಡಿತ್ತು. ಇದರ ಆಧಾರದಲ್ಲಿ ಜೂನ್ ೨೫ರಂದು ಜೈರ್ವಾಲ್ ಅವರು ೧೬ ಮಂದಿ ಶಿಂಧೆ ಬಣದ ಶಾಸಕರಿಗೆ ನೋಟಿಸ್ ನೀಡಿ, ಜೂನ್ ೨೭ರೊಳಗೆ ಉತ್ತರಿಸುವಂತೆ ಕೋರಿದ್ದರು.
ಇದೆಲ್ಲದರ ನಡುವೆ ಶಿಂಧೆ ಬಣ ಶಿವಸೇನಾ ಶಾಸಕಾಂಗ ಪಕ್ಷ ನಾಯಕನ ಬದಲಾವಣೆ ಮತ್ತು ೧೬ ಶಾಸಕರಿಗೆ ನೋಟಿಸ್ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿತು. ಇದರ ನಡುವೆಯೇ ಡೆಪ್ಯುಟಿ ಸ್ಪೀಕರ್ ವಿರುದ್ಧವೇ ಇಬ್ಬರು ಪಕ್ಷೇತರ ಶಾಸಕರ ಅವಿಶ್ವಾಸ ವ್ಯಕ್ತಪಡಿಸಿ ನೋಟಿಸ್ ನೀಡಿದ್ದರು. ಇದನ್ನು ನರಹರಿ ಜೈರ್ವಾಲ್ ಅವರು ತಿರಸ್ಕರಿಸಿದ್ದರು. ಈ ಎರಡೂ ವಿಚಾರಗಳು ಸುಪ್ರೀಂಕೋರ್ಟ್‌ನಲ್ಲಿ ಭಾರಿ ಸದ್ದು ಮಾಡಿದ್ದವು. ಪ್ರಕರಣವನ್ನು ಪರಿಶೀಲಿಸಿದ ಸರ್ವೋಚ್ಚ ನ್ಯಾಯಾಲಯ ದ್ವಿಸದಸ್ಯ ಪೀಠ ಡೆಪ್ಯುಟಿ ಸ್ಪೀಕರ್, ಆಗಿನ ಉದ್ಧವ್ ಸರಕಾರಕ್ಕೆ ನೋಟಿಸ್ ನೀಡಿ ಮುಂದಿನ ವಿಚಾರಣೆಯನ್ನು ಜುಲೈ ೧೧ಕ್ಕೆ ನಿಗದಿಪಡಿಸಿತ್ತು.
ಉದ್ಧವ್ ಬಣಕ್ಕೆ ಆತಂಕ ಶುರು!
ಕೆಲವೇ ದಿನಗಳ ಹಿಂದೆ ಏಕನಾಥ್ ಶಿಂಧೆ ಬಣದ ವಿರುದ್ಧ ಅನರ್ಹತೆಯ ಅಸ್ತ್ರ ಝಳಪಿಸಿದ್ದ ಉದ್ಧವ್ ಠಾಕ್ರೆ ಬಣ ಈಗ ತಾನೇ ಅದರ ಪ್ರಹಾರಕ್ಕೆ ಒಳಗಾಗುವ ಅಪಾಯದಲ್ಲಿದೆ. ಏಕನಾಥ ಶಿಂಧೆ ಬಣದ ಭರತ್ ಗೋಗಾವಾಲೆ ಅವರು ಹೊಸ ವಿಪ್ ಆಗಿ ನೇಮಕಗೊಳ್ಳುತ್ತಿದ್ದಂತೆಯೇ ಉದ್ಧವ್ ಠಾಕ್ರೆ ಬಣದಲ್ಲಿರುವ ೧೬ ಶಾಸಕರನ್ನು ಭಿನ್ನರು ಎಂದು ಗುರುತಿಸಿ ಅವರನ್ನು ಅನರ್ಹಗೊಳಿಸುವಂತೆ ಹೊಸ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಮನವಿ ಮಾಡಿದ್ದಾರೆ. ಸ್ಪೀಕರ್ ಅವರು ಈ ಅರ್ಜಿಯನ್ನು ಎದುರಿಗಿಟ್ಟುಕೊಂಡು ಕೂತಿದ್ದು ಸದ್ಯವೇ ನೋಟಿಸ್ ಜಾರಿಗೊಳಿಸುವ ಸಾಧ್ಯತೆ ಇದೆ.
ಮೊರೆ ಕೇಳದ ಸುಪ್ರೀಂಕೋರ್ಟ್
ಸ್ಪೀಕರ್ ಅವರು ಯಾವಾಗ ಬೇಕಾದರೂ ನೋಟಿಸ್ ನೀಡಬಹುದಾದ ಪರಿಸ್ಥಿತಿ ಇರುವುದರಿಂದ ಠಾಕ್ರೆ ಬಣದಲ್ಲಿ ಆತಂಕ ನೆಲೆ ಮಾಡಿದೆ. ಈ ನಡುವೆ, ಠಾಕ್ರೆ ಬಣ ಸೋಮವಾರ ಮುಂಜಾನೆಯೇ ಶಿಂಧೆ ಅವರನ್ನು ಶಾಸಕಾಂಗ ಪಕ್ಷ ನಾಯಕನಾಗಿ ನೇಮಿಸಿದ್ದು ಮತ್ತು ಸಚೇತಕ ಗೋಗಾವಾಲೆ ಅವರು ತಮ್ಮ ಬಣದ ೧೬ ಶಾಸಕರ ವಿರುದ್ಧ ದೂರು ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದಾರೆ. ಆದರೆ, ಸುಪ್ರೀಂಕೋರ್ಟ್ ತುರ್ತು ವಿಚಾರಣೆಗೆ ಒಪ್ಪಿಲ್ಲ. ಬದಲಾಗಿ ಜುಲೈ ೧೧ರಂದು ನಡೆಯುವ ಪ್ರಮುಖ ಅರ್ಜಿಯ ವಿಚಾರಣೆಯ ಸಂದರ್ಭದಲ್ಲೇ ಇದನ್ನು ಪರಿಗಣಿಸುವುದಾಗಿ ಹೇಳಿದೆ.
ಶಾಸಕರಿಗೆ ಈಗ ದಿಗಿಲು
ಈ ನಡುವೆ, ಸ್ಪೀಕರ್ ಅವರಿಗೆ ಸಲ್ಲಿಸಲಾಗಿರುವ ಅನರ್ಹತೆ ಅರ್ಜಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಶಾಸಕರಲ್ಲಿ ಆತಂಕ ಮೂಡಿಸಿದೆ. ತಮ್ಮನ್ನು ಶಾಸಕತ್ವದಿಂದಲೇ ವಜಾಗೊಳಿಸಬಹುದು ಎಂಬ ಭೀತಿಯಲ್ಲಿ ಕೆಲವು ಶಾಸಕರು ಈಗಾಗಲೇ ಶಿವಸೇನೆ ಬಣವನ್ನು ಸೇರುವ ಪ್ರಯತ್ನದಲ್ಲಿದ್ದಾರೆ. ಕೆಲವು ಶಾಸಕರು ಮುಖ್ಯಮಂತ್ರಿಗಳ ವಿಶ್ವಾಸ ಮತ ಯಾಚನೆ ಕಾರ್ಯಕ್ರಮದಿಂದಲೇ ಹೊರಗಿದ್ದರು. ಅದರಲ್ಲಿ ಭಾಗವಹಿಸಿ ಟಾರ್ಗೆಟ್ ಅಗುವುದು ಬೇಡ ಎನ್ನುವ ಅಭಿಪ್ರಾಯ ಅವರದು ಎಂದು ಹೇಳಲಾಗಿದೆ.
ಇದನ್ನೂ ಓದಿ| Maha politics: ಮಹಾ ವಿಕಾಸ ಅಘಾಡಿಯಲ್ಲಿ ಬಿರುಕು, ಸದ್ಯವೇ ಕಾಂಗ್ರೆಸ್ ಹೊರಕ್ಕೆ?