ಮುಂಬಯಿ: ಅತ್ಯಂತ ಕಷ್ಟ ಕಾಲದಲ್ಲಿ ಬೆಂಬಲವಾಗಿ ನಿಂತ ನಿಮಗೆ ಧನ್ಯವಾದಗಳು: ಹೀಗೆ ಬಂಡಾಯ ಕಾಲದಲ್ಲಿ ಬೆಂಗಾವಲಾಗಿ ನಿಂತ ೧೫ ಶಾಸಕರಿಗೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪತ್ರವೊಂದನ್ನು ಬರೆದಿದ್ದಾರೆ.
ಯಾವುದೇ ಒತ್ತಡಕ್ಕೆ, ಬೆದರಿಕೆಗಳಿಗೆ, ಆಮಿಷಗಳಿಗೆ ಶರಣಾಗದೆ ಕಷ್ಟ ಕಾಲದಲ್ಲಿ ಬೆಂಬಲವಾಗಿ ನಿಂತಿದ್ದೀರಿ ಎಂದು ಬಂಡಾಯ ಚಟುವಟಿಕೆಗಳ ನಡುವೆಯೂ ತಮ್ಮ ಜತೆ ನಿಂತ ಶಾಸಕರನ್ನು ಸ್ಮರಿಸಿದ್ದಾರೆ ಉದ್ಧವ್ ಠಾಕ್ರೆ.
ಜೂನ್ ೨೦ರಂದು ಶಿವಸೇನೆಯ ಶಾಸಕರ ದೊಡ್ಡ ಟೀಮ್ ಒಂದು ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯವೆದ್ದು ಗುಜರಾತ್‌ನ ಸೂರತ್‌ಗೆ ಹೋಗಿತ್ತು. ಅಲ್ಲಿಂದ ಗುವಾಹಟಿಗೆ ಪ್ರಯಾಣಿಸಿತ್ತು. ಮೊದಲು ೨೦ ಶಾಸಕರಿದ್ದ ತಂಡ ಅಂತಿಮವಾಗಿ ೪೦ಕ್ಕೇರಿತ್ತು. ಈ ನಡುವೆ, ಏಕನಾಥ್ ಶಿಂಧೆ ಬಣ ಬಿಜೆಪಿಯೊಂದಿಗೆ ಸೇರಿಕೊಂಡು ಸರಕಾರವನ್ನೇ ರಚಿಸಿದೆ. ಅದರ ಬೆನ್ನಿಗೇ ಉದ್ಧವ್ ಠಾಕ್ರೆ ಅವರ ಜತೆಗಿರುವ ೧೫ ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರವನ್ನು ಕೂಡಾ ಪ್ರಯೋಗಿಸಿದೆ.
ಇಷ್ಟೆಲ್ಲದರ ನಡುವೆಯೂ ಸುಮಾರು ೧೫ ಶಾಸಕರು ಉದ್ಧವ್ ಠಾಕ್ರೆ ಅವರನ್ನು ಬಿಟ್ಟು ಕದಲಲೇ ಇಲ್ಲ. ಈ ರೀತಿಯ ಪರಿಸ್ಥಿತಿಯಲ್ಲಿ ಬಿಟ್ಟುಕೊಡದೆ, ಬಂಡೆಕಲ್ಲಿನಂತೆ ನಿಂತು ನಿಜವಾದ ಶಿವಸೈನಿಕರೆಂದು ಪ್ರೂವ್ ಮಾಡಿದ್ದೀರಿ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಸಂಜೆ ಶಿವಸೇನಾ ಸಂಸದರ ಸಭೆ
ಈ ನಡುವೆ, ಶಿವಸೇನೆಯ ಸಂಸದರ ಸಭೆ ಸೋಮವಾರ ಸಂಜೆ ಉದ್ಧವ್ ಠಾಕ್ರೆ ಅವರ ನಿವಾಸವಾಗಿರುವ ಮಾತೋಶ್ರೀಯಲ್ಲಿ ನಡೆಯಲಿದೆ. ಇದಕ್ಕೆ ಎಲ್ಲ ೧೯ ಸಂಸದರನ್ನು ಆಹ್ವಾನಿಸಲಾಗಿದೆ. ಯಾರೆಲ್ಲ ಆಗಮಿಸುತ್ತಾರೆ ಎನ್ನುವ ಕುತೂಹಲ ಇನ್ನೂ ಇದೆ. ಜುಲೈ ೧೮ರಂದು ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎನ್ನುವ ಬಗ್ಗೆ ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ.
ಶಿವಸೇನೆಯ ಕೆಲವು ಸಂಸದರು ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ಅನುಮತಿ ಕೋರಿದ್ದರು. ಹೀಗಾಗಿ ಈ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ.
ಹಿಂದಿನ ಎರಡು ರಾಷ್ಟ್ರಪತಿ ಚುನಾವಣೆಗಳಲ್ಲಿ ಶಿವಸೇನೆಯ ಸಂಸದರು ಎನ್‌ಡಿಎ ಅಭ್ಯರ್ಥಿಗಳಿಗೆ ಮತ ಹಾಕಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದ ಪ್ರಣಬ್ ಮುಖರ್ಜಿ ಮತ್ತು ಪ್ರತಿಭಾ ಪಾಟೀಲ್ ಅವರನ್ನು ಬೆಂಬಲಿಸಲಾಗಿತ್ತು. ೨೦೧೯ರಲ್ಲಿ ಶಿವಸೇನೆಯು ಎನ್‌ಡಿಎ ಕೂಟದಿಂದ ಹೊರಬಂದು ಕಾಂಗ್ರೆಸ್ ಮತ್ತು ಎನ್‌ಸಿಪಿ ಜತೆ ಸೇರಿ ಮಹಾ ವಿಕಾಸ ಅಘಾಡಿಯನ್ನು ರಚಿಸಿತ್ತು.
ಇದನ್ನೂ ಓದಿ| Maha politics: ಶಿಂಧೆ ಸರಕಾರಕ್ಕೆ ಬಿಗ್ ರಿಲೀಫ್, 16 ಶಾಸಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಂತೆ ಸುಪ್ರೀಂ ಸೂಚನೆ