ನವ ದೆಹಲಿ: ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳಲ್ಲಿ ಹರಿದುಹಂಚಿಹೋಗಿರುವ ಶಿವಸೇನೆಯಲ್ಲಿ ನಿಜವಾದ ಶಿವಸೇನೆ ಯಾವುದು ಎಂಬ ನಿರ್ಧರಿಸಲು ಚುನಾವಣಾ ಆಯೋಗ ಆರಂಭಿಸಿರುವ ಪ್ರಕ್ರಿಯೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಉದ್ಧವ್ ಠಾಕ್ರೆ ಬಣ ಸುಪ್ರೀಂಕೋರ್ಟ್ ಮೊರೆ ಹೊಕ್ಕಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂಧೆ ಬಣ ತಮ್ಮದೇ ನಿಜವಾದ ಶಿವಸೇನೆ. ಹಾಗಾಗಿ ತಮಗೆ ಮಾನ್ಯತೆ ನೀಡಬೇಕು ಎಂದು ಕೋರಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ. ಆಯೋಗವೂ ಅರ್ಜಿಗೆ ಮಾನ್ಯತೆ ನೀಡಿ ಜುಲೈ ೨೨ರಂದು ಪ್ರಕ್ರಿಯೆಯನ್ನು ಆರಂಭ ಮಾಡಿತ್ತು. ಆದರೆ, ೧೪ ಬಂಡುಕೋರ ಶಾಸಕರ ಅನರ್ಹತೆಗೆ ಸಂಬಂಧಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆದು ತೀರ್ಮಾನ ಆಗುವವರೆಗೆ ಚುನಾವಣಾ ಆಯೋಗ ಪ್ರಕ್ರಿಯೆ ಆರಂಭಿಸುವಂತಿಲ್ಲ ಎಂದು ಉದ್ಧವ್ ಠಾಕ್ರೆ ಬಣ ವಾದಿಸಿದೆ. ಇದನ್ನೇ ಮುಂದಿಟ್ಟು ಅದು ಸುಪ್ರೀಂಕೋರ್ಟ್ ಮೊರೆ ಹೊಕ್ಕಿದೆ.
ಒಂದು ವೇಳೆ ಚುನಾವಣಾ ಆಯೋಗವು ನಿಜವಾದ ಶಿವಸೇನೆ ಯಾವುದು ಎಂಬುದನ್ನು ತೀರ್ಮಾನಿಸುವ ಪ್ರಕ್ರಿಯೆಯನ್ನು ಆರಂಭಿಸಿಬಿಟ್ಟರೆ ಕೋರ್ಟ್‌ನ ಮುಂದಿನ ಸಾಂವಿಧಾನಿಕ ವಿಚಾರಗಳಲ್ಲಿ ಮಧ್ಯ ಪ್ರವೇಶ ಮಾಡಿದಂತಾಗುತ್ತದೆ. ಮಾತ್ರವಲ್ಲ ಸುಪ್ರೀಂಕೋರ್ಟ್ ಮೊರೆ ಹೊಕ್ಕ ಅರ್ಜಿದಾರರಿಗೆ ಘಾತಕ ಹೊಡೆತ ನೀಡಿದಂತಾಗುತ್ತದೆ. ನಿಜವೆಂದರೆ, ಚುನಾವಣಾ ಆಯೋಗ ಈಗ ಆರಂಭಿಸಿರುವ ಪ್ರಕ್ರಿಯೆ ಕಾನೂನುಸಮ್ಮತವಾಗಿಯೂ ಇರುವುದಿಲ್ಲ. ಯಾಕೆಂದರೆ, ಯಾರ ಅರ್ಹತೆಯು ಸುಪ್ರೀಂಕೋರ್ಟ್‌ನ ಮುಂದೆ ಪ್ರಶ್ನಾರ್ಹವಾಗಿದೆಯೋ ಅವರೇ ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ಪ್ರಕ್ರಿಯೆ ಆರಂಭ ಮಾಡುವುದು ಸರಿಯಲ್ಲ ಎಂದು ಶಿವಸೇನೆ ಉದ್ಧವ್ ಠಾಕ್ರೆ ಬಣ ಹೇಳಿದೆ.
ಏಕನಾಥ್ ಶಿಂಧೆ ಬಣವು ಶಿವಸೇನೆಯ ಸಂವಿಧಾನದಲ್ಲಿ ಉಲ್ಲೇಖಿತವಾದ ಅಂಶಗಳಿಗೆ ವ್ಯತಿರಿಕ್ತವಾದ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎಂದು ಕೂಡಾ ಉದ್ಧವ್ ಠಾಕ್ರೆ ಬಣ ಆರೋಪಿಸಿದೆ. ಚುನಾವಣಾ ಆಯೋಗವು ಏಕನಾಥ್ ಶಿಂಧೆ ಬಣದ ಮನವಿಯ ಆಧಾರದಲ್ಲಿ ವಿಚಾರಣೆ, ನ್ಯಾಯ ತೀರ್ಮಾನ ಶುರು ಮಾಡಿದರೆ ಅದು ನ್ಯಾಯಾಂಗ ನಿಂದನೆಯೂ ಆಗುತ್ತದೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಿದಂತೆಯೂ ಆಗುತ್ತದೆ. ಈ ವಿಚಾರದಲ್ಲಿ ಹಿಂದೆಯೂ ಹಲವು ನಿರ್ಧಾರಗಳು, ತೀರ್ಪುಗಳು ಹೈಕೋರ್ಟ್, ಸುಪ್ರೀಂಕೋರ್ಟ್‌ನಿಂದ ಬಂದಿವೆ ಎಂದು ಉದ್ಧವ್ ಠಾಕ್ರೆ ಬಣ ವಿವರಿಸಿದೆ.
ʻಈ ಬಾರಿಯ ಶಿವಸೇನೆ ಬಂಡಾಯ ಹಿಂದಿನ ಬಂಡಾಯಗಳಂತಲ್ಲ. ಈ ಬಾರಿಯ ಬಂಡಾಯ ಅದು ಸೇನೆಯಲ್ಲಿ ಸಂಪೂರ್ಣವಾಗಿ ಮುಗಿಸುವ ಉದ್ದೇಶವನ್ನು ಹೊಂದಿತ್ತು. ಶಿವಸೇನೆ ಹಿಂದುತ್ವದಕ್ಕಾಗಿ ರಾಜಕಾರಣ ಮಾಡಿದರೆ, ಬಿಜೆಪಿ ಹಿಂದುತ್ವವನ್ನು ರಾಜಕೀಯ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿದೆʼʼ ಎಂದು ಉದ್ಧವ್ ಠಾಕ್ರೆ ಅವರು ಇತ್ತೀಚೆಗೆ ಆರೋಪಿಸಿದ್ದರು.
ಯಾರಿಗಿದೆ ಮೇಲುಗೈ?
ಜೂನ್ ೨೦ರಂದು ಶಿವಸೇನೆಯ ಕೆಲವು ಶಾಸಕರು ಏಕನಾಥ್ ಶಿಂಧೆ ಅವರ ನೇತೃತ್ವದಲ್ಲಿ ಬಂಡೆದ್ದು ರೆಸಾರ್ಟ್ ರಾಜಕಾರಣ ಶುರು ಮಾಡಿದ್ದರು. ಸಣ್ಣ ಸಂಖ್ಯೆಯಲ್ಲಿದ್ದ ಶಾಸಕರ ಸಂಖ್ಯೆ ಜೂನ್ ೩೦ರ ಹೊತ್ತಿಗೆ ೩೯ಕ್ಕೆ ಹಿಗ್ಗಿತ್ತು. ಏಕನಾಥ್ ಶಿಂಧೆ ಅವರು ಬಿಜೆಪಿ ಜತೆ ಸೇರಿ ಜೂನ್ ೩೦ರಂದು ಸರಕಾರವನ್ನೇ ರಚಿಸಿದರು.
ಈ ನಡುವೆ, ಉದ್ಧವ್ ಠಾಕ್ರೆ ಬಣ ಜೂನ್ ೨೨ರಂದು ಶಾಸಕಾಂಗ ಪಕ್ಷ ಸಭೆಯನ್ನು ಕರೆದು ಎಲ್ಲ ಶಾಸಕರು ಭಾಗವಹಿಸಬೇಕು ಎಂದು ಸೂಚಿಸಿತ್ತು. ಭಾಗವಹಿಸದಿದ್ದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ ವಿಪ್ ಜಾರಿಗೊಳಿಸಿತ್ತು. ಬಳಿಕ ಭಾಗವಹಿಸದೆ ಇರುವ ೧೪ ಶಾಸಕರ ವಿರುದ್ಧ ಡೆಪ್ಯೂಟಿ ಸ್ಪೀಕರ್ ನರಹರಿ ಜೈರ್ವಾಲ್ ಅವರಿಗೆ ದೂರು ನೀಡಿತ್ತು ಮತ್ತು ಅವರನ್ನು ಅನರ್ಹಗೊಳಿಸುವಂತೆ ಮನವಿ ಮಾಡಿತ್ತು. ಡೆಪ್ಯೂಟಿ ಸ್ಪೀಕರ್ ಅವರು ಈ ಶಾಸಕರಿಗೆ ನೋಟಿಸ್ ಜಾರಿಗೊಳಿಸಿದ್ದರು.
ಈ ನಡುವೆ, ಏಕನಾಥ್ ಶಿಂಧೆ ಬಣದ ಶಾಸಕರು ಡೆಪ್ಯೂಟಿ ಸ್ಪೀಕರ್ ಅವರ ನೋಟಿಸ್‌ನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದರು. ಸುಪ್ರೀಂಕೋರ್ಟ್ ಇದೂ ಸೇರಿದಂತೆ ಮಹಾರಾಷ್ಟ್ರ ರಾಜಕೀಯಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳ ವಿಚಾರಣೆಯನ್ನು ಜುಲೈ ೧೧ಕ್ಕೆ ಮುಂದೂಡಿತ್ತು. ಜುಲೈ ೧೧ರಂದು ಕೂಡಾ ಅರ್ಜಿ ವಿಚಾರಣೆ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಲಿಲ್ಲ.
ಈ ನಡುವೆ, ಏಕನಾಥ್ ಶಿಂಧೆ ಬಣ ಉದ್ಧವ್ ಠಾಕ್ರೆ ನೇತೃತ್ವದ ಬಣಕ್ಕೆ ತಿರುಗೇಟು ನೀಡಿದ್ದು, ಆ ಬಣದ ೧೪ ಶಾಸಕರ ಅನರ್ಹತೆ ಕೋರಿ ಹೊಸ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದೆ. ಹೊಸ ಶಾಸಕಾಂಗ ಪಕ್ಷ ನಾಯಕನಾಗಿ ಏಕನಾಥ್ ಶಿಂಧೆ ಅವರನ್ನು ಆಯ್ಕೆ ಮಾಡಿದೆ. ಈ ವಿಚಾರವೂ ಸುಪ್ರೀಂಕೋರ್ಟ್ ಮುಂದೆ ಇದೆ.
ಸದ್ಯದ ಲೆಕ್ಕಾಚಾರ ಪ್ರಕಾರ, ಏಕನಾಥ್ ಶಿಂಧೆ ಬಣದಲ್ಲಿ ೪೦ ಶಾಸಕರು, ೧೨ ಸಂಸದರು ಇದ್ದಾರೆ. ಉದ್ಧವ್ ಠಾಕ್ರೆ ಬಣದಲ್ಲಿ ೧೫ ಶಾಸಕರು ಮತ್ತು ಏಳು ಸಂಸದರು ಇದ್ದಾರೆ. ಹಲವಾರು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪಾರಮ್ಯ ಮೆರೆಯಲು ಎರಡೂ ಗುಂಪುಗಳು ಪ್ರಯತ್ನಿಸುತ್ತಿವೆ.
ಇದನ್ನೂ ಓದಿ| Maha politics: ನಮ್ಮದೇ ನಿಜವಾದ ಶಿವಸೇನೆ, ಚು.ಆಯೋಗದ ಮುಂದೆ ಹಕ್ಕು ಮಂಡಿಸಿದ ಶಿಂಧೆ