ಮುಂಬಯಿ: ಶಿವಸೇನೆಯ ಎರಡು ಬಣಗಳ ನಡುವೆ ಕಾನೂನು ಹೋರಾಟ ಶುರುವಾಗಿದೆ. ಇದರಲ್ಲಿ ಗೆಲ್ಲುವವರು ಯಾರು ಎನ್ನುವ ಕುತೂಹಲವೂ ಜತೆಗೇ ಹುಟ್ಟಿಕೊಂಡಿದೆ. ಮೇಲ್ನೋಟಕ್ಕೆ ೫೬ ಶಿವಸೇನೆ ಶಾಸಕರ ಪೈಕಿ ೪೭ರಷ್ಟು ಶಾಸಕರನ್ನು ತಕ್ಕ ತೆಕ್ಕೆಯೊಳಗೆ ಇಟ್ಟುಕೊಂಡಿರುವ ಏಕನಾಥ್ ಶಿಂಧೆ ಬಣ ಮೇಲುಗೈ ಸಾಧಿಸಿದಂತೆ ತೋರುತ್ತಿದೆ. ಉದ್ಧವ್ ಠಾಕ್ರೆ ಗುಂಪು ಯುದ್ಧ ಆರಂಭಕ್ಕೆ ಮೊದಲೇ ಸೋಲುತ್ತಿರುವಂತೆ ಕಾಣುತ್ತಿದೆ. ಆದರೆ, ನಿಜವಾದ ಪರಿಸ್ಥಿತಿ ಇದೆಲ್ಲದಕ್ಕಿಂತಲೂ ಭಿನ್ನವಾಗಿದೆ!
ಹಾಗಿದ್ದರೆ ಈ ಕಾನೂನು ಹೋರಾಟ ಹೇಗೆ ಸಾಗಲಿದೆ?
ಶಾಸಕಾಂಗ ಪಕ್ಷ ಸಭೆಯಲ್ಲಿ ಭಾಗವಹಿಸದೆ ಇರುವುದಕ್ಕಾಗಿ ಏಕನಾಥ್ ಶಿಂಧೆ ಬಣದ ೧೬ ಮಂದಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಉದ್ಧವ್ ಠಾಕ್ರೆ ಬಣ ಡೆಪ್ಯೂಟಿ ಸ್ಪೀಕರ್‌ಗೆ ಮನವಿ ಮಾಡಿದೆ. ಇದರನ್ವಯ ಡೆಪ್ಯೂಟಿ ಸ್ಪೀಕರ್ ನರಹರಿ ಜೈರ್ವಾಲ್ ಅವರು ೧೬ ಮಂದಿಗೂ ನೋಟಿಸ್ ನೀಡಿದ್ದಾರೆ. ಸೂಚನೆಯ ಪ್ರಕಾರ ಅವರು ಸೋಮವಾರ ಸಂಜೆ ೫.೩೦ರೊಳಗೆ ತಮ್ಮ ಉತ್ತರವನ್ನು ಸಲ್ಲಿಸಬೇಕು. ಆದರೆ, ಈ ರೀತಿ ಬೇಡಿಕೆ ಮಂಡಿಸುವ ಹಕ್ಕೇ ಉದ್ಧವ್ ಠಾಕ್ರೆ ಗುಂಪಿಗೆ ಇಲ್ಲ ಎನ್ನುವ ವಾದವನ್ನು ಏಕನಾಥ್ ಶಿಂಧೆ ಬಣ ಮಂಡಿಸುತ್ತಿದೆ. ಅದಕ್ಕೆ ಅದು ಎರಡು ಕಾರಣವನ್ನು ನೀಡುತ್ತಿದೆ. ಮೊದಲನೆಯದು, ಏಕನಾಥ್ ಶಿಂಧೆ ಸರ್ವ ಶಾಸಕರ ಸಮ್ಮತಿಯಿಂದ ಆಯ್ಕೆಯಾದ ಶಾಸಕಾಂಗ ಪಕ್ಷ ನಾಯಕ. ಅವರನ್ನು ಬದಲಿಸುವಾಗ ಕನಿಷ್ಠ ಕೋರಂ ಕೂಡಾ ಇರಲಿಲ್ಲ. ಇದು ಮಾನ್ಯವಲ್ಲ.
ಎರಡನೆಯದು, ಉದ್ಧವ್ ಠಾಕ್ರೆ ಬಣದಲ್ಲಿ ಈಗ ಇರುವುದು ೫೬ ಶಾಸಕರ ಪೈಕಿ ಕೇವಲ ಎಂಟತ್ತು ಜನರು ಮಾತ್ರ. ಮೂರನೇ ಎರಡು ಬಹುಮತ ನಮಗೇ ಇದೆ. ಹೀಗಾಗಿ ಬಹುಮತ ಹೊಂದಿರುವ ಬಣವನ್ನು ಧಿಕ್ಕರಿಸಿ ನಿರ್ಧಾರ ತೆಗೆದುಕೊಳ್ಳುವ ಹಾಗಿಲ್ಲ.
ಸುಪ್ರೀಂಕೋರ್ಟ್‌ನಲ್ಲಿ ಈ ವಿಚಾರದ ಬಗ್ಗೆ ವಿಚಾರಣೆ ನಡೆದು ಡೆಪ್ಯೂಟಿ ಸ್ಪೀಕರ್ ಅವರ ನಿರ್ಧಾರ ಸರಿ ಇದೆಯೇ ಎನ್ನುವ ಪ್ರಶ್ನೆ ಮೊದಲು ನಿರ್ಧಾರವಾಗುತ್ತದೆ. ಅದರ ಜತೆಗೆ ನಿರ್ಧಾರವಾಗಬೇಕಾಗಿರುವ ಇನ್ನೊಂದು ಮಹತ್ವದ ಪ್ರಶ್ನೆ ಗುಂಪಿನ ಮಾನ್ಯತೆಗೆ ಸಂಬಂಧ ಪಟ್ಟದ್ದು. ಅಂದರೆ ಮೂರನೇ ಎರಡು ಬಹುಮತ ಹೊಂದಿರುವ ತನ್ನ ಗುಂಪಿಗೆ ಪ್ರತ್ಯೇಕ ಗುಂಪಾಗಿ ಮಾನ್ಯತೆ ನೀಡಬೇಕು ಎನ್ನುವ ಶಿಂಧೆ ಬಣದ ವಾದ ಗೆಲ್ಲುತ್ತದೆಯೇ ಎನ್ನುವುದು ಪ್ರಶ್ನೆ.
ಜನಜನಿತ ತಪ್ಪು ತಿಳಿವಳಿಕೆ ಹೀಗಿದೆ..
ರಾಜಕೀಯ ವಿಪ್ಲವಗಳಾದಾಗ ಪ್ರತಿ ಸಾರಿಯೂ ಒಂದು ಮಾತು ಕೇಳುತ್ತೇವೆ. ಯಾವುದೇ ಪಕ್ಷದ ಒಂದು ಗುಂಪು ಮೂರನೇ ಎರಡು ಬಹುಮತವನ್ನು ಹೊಂದಿದ್ದರೆ ಅದಕ್ಕೆ ಪ್ರತ್ಯೇಕ ಮಾನ್ಯತೆ ನೀಡಬಹುದು. ಅದರ ಮೂಲಕ ಅದು ಅನರ್ಹತೆಯ ಶಿಕ್ಷೆಯಿಂದ ಪಾರಾಗುತ್ತದೆ. ಅದಕ್ಕಿಂತ ಕಡಿಮೆ ಇದ್ದರೆ ಮಾನ್ಯತೆ ನೀಡಲಾಗದು. ಶಾಸಕತ್ವದಿಂದ ಅನರ್ಹಗೊಳ್ಳುವುದು ಖಾತ್ರಿ ಎನ್ನುವ ವಾದ.
ಅಂದರೆ ಮಹಾರಾಷ್ಟ್ರದ ಈ ವಿದ್ಯಮಾನದಲ್ಲಿ ೫೬ ಶಿವಸೇನಾ ಶಾಸಕರ ಪೈಕಿ ೩೭ ಶಾಸಕರಿದ್ದರೂ ಅದರು ಮೂರನೇ ಎರಡು ಬಹುಮತದ ಮ್ಯಾಜಿಕ್ ನಂಬರ್ ಎನಿಸಿಕೊಳ್ಳುತ್ತದೆ. ಸಾಮಾನ್ಯ ನೆಲೆಯಲ್ಲಿ ೩೭ಕ್ಕಿಂತ ಹೆಚ್ಚು ಶಾಸಕರಿದ್ದರೆ ಆ ಗುಂಪು ಯಾವುದೇ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಬಹುದು. ಅಂದರೆ, ಏಕನಾಥ್ ಶಿಂಧೆ ಬಣ ಅಗತ್ಯಬಿದ್ದರೆ ಬಿಜೆಪಿಯನ್ನು ಬೆಂಬಲಿಸಲು ಸ್ವತಂತ್ರವಿದೆ- ಎಂಬೆಲ್ಲ ಅಭಿಪ್ರಾಯಗಳಿವೆ. ಆದರೆ, ಇದು ಸರಿಯಲ್ಲ.
ಆದರೆ, ಅದು ಅಷ್ಟು ಸರಳವಾಗಿಲ್ಲ…!
ನಿಜವೆಂದರೆ, ಈ ಮಾನ್ಯತೆ ಲೆಕ್ಕಾಚಾರ ಅಷ್ಟು ಸರಳವಾಗಿಲ್ಲ. ಇದರ ಒಳಮರ್ಮವನ್ನು ಅರಿಯಲು ನೋಡಬೇಕಾಗಿರುವುದು ಪಕ್ಷಾಂತರ ನಿಷೇಧ ಕಾಯಿದೆಯ ಪರಿಚ್ಛೇದ ೧೦ನ್ನು. ಅಂದರೆ ೧೦ನೇ ಶೆಡ್ಯೂಲ್. ಇದರ ಪ್ರಕಾರ, ಪಕ್ಷದ ಯಾವುದೇ ಒಂದು ಬಣ ಮೂಲ ಪಕ್ಷದ ನಿರ್ಣಯವನ್ನು ಧಿಕ್ಕರಿಸಿ (ವಿಪ್ ಉಲ್ಲಂಘಿಸಿ) ಬೇರೊಂದು ಪಕ್ಷವನ್ನು ಬೆಂಬಲಿಸುವಂತಿಲ್ಲ. ಹಾಗೆ ಬೆಂಬಲಿಸಿದರೆ ಅದು ಪಕ್ಷ ವಿರೋಧಿ ಚಟುವಟಿಕೆ ಆಗುತ್ತದೆ. ಇದನ್ನು ಆಧರಿಸಿ ಶಾಸಕತ್ವದಿಂದ ಅನರ್ಹಗೊಳಿಸಬಹುದು.
ಅಂದರೆ, ಈಗ ಶಿವಸೇನೆಯ ೫೦ ಮಂದಿ ಶಾಸಕರು ಒಂದು ಬಣದಲ್ಲಿದ್ದರೂ ಪಕ್ಷ ಸಂಘಟಿತವಾಗಿ ಒಂದು ತೀರ್ಮಾನವನ್ನು ತೆಗೆದುಕೊಳ್ಳದೆ, ಸಚೇತಕಾಜ್ಞೆಯನ್ನು ನೀಡದೆ ಅದು ನೇರವಾಗಿ ಬಿಜೆಪಿಯನ್ನು ಬೆಂಬಲಿಸುವ ಹಾಗಿಲ್ಲ. ಹಾಗೆ ಮಾಡಿದರೆ ಪಕ್ಷಾಂತರ ನಿಷೇಧ ಕಾಯಿದೆ ಕುಣಿಕೆಯಡಿ ಅನರ್ಹತೆಯ ಶಿಕ್ಷೆ ಕಾದಿರುತ್ತದೆ.
ಹಾಗಿದ್ದರೆ ಏನು ದಾರಿ ಇದೆ?
ಹತ್ತನೇ ಶೆಡ್ಯೂಲ್‌ನಲ್ಲಿ ಒಂದು ಸಣ್ಣ ಅವಕಾಶ ಇದೆ. ಅದೇನೆಂದರೆ ಒಂದು ಪಕ್ಷದ ಮೂರನೇ ಎರಡು ಶಾಸಕರು ಇನ್ನೋಂದು ಪಕ್ಷದೊಂದಿಗೆ ವಿಲೀನಗೊಂಡು ಮತವನ್ನು ಹಾಕಿದರೆ ಅದಕ್ಕೆ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯವಾಗುವುದಿಲ್ಲ. ಅಂದರೆ, ಇಲ್ಲಿನ ಪ್ರಕರಣದಲ್ಲಿ, ಶಿವಸೇನೆಯ ಏಕನಾಥ್ ಶಿಂಧೆ ಬಣ ತಾನು ಪ್ರತ್ಯೇಕವಾಗಿದ್ದುಕೊಂಡು ಬಿಜೆಪಿಯನ್ನು ಬೆಂಬಲಿಸುತ್ತೇನೆ, ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳುತ್ತೇನೆ ಎಂದು ಹೇಳಿದರೆ ಅದಕ್ಕೆ ಮಾನ್ಯತೆ ಇಲ್ಲ. ಅದು ಬಿಜೆಪಿಯನ್ನು ಸರಕಾರ ರಚನೆಯಲ್ಲಿ ಬೆಂಬಲಿಸಬೇಕು ಎಂದರೆ ಬಿಜೆಪಿಯ ಜತೆಗೆ ವಿಲೀನವಾಗಬೇಕು. ಹಾಗೆ ಮಾಡಿದರೆ ಪಕ್ಷದ ಅಸ್ತಿತ್ವವೇ ನಾಶವಾಗಿ ಬಿಡುತ್ತದೆ.
ಮೂರನೇ ಎರಡು ಬಹುಮತ ಹಿಂದೆ ಇತ್ತು
ಮೂರನೇ ಎರಡು ಬಹುಮತ ಪಡೆದ ಗುಂಪಿಗೆ ಪ್ರತ್ಯೇಕ ಮಾನ್ಯತೆ ನೀಡುವ ಪರಿಪಾಠ ಹಿಂದೆ ಇತ್ತು. ಆದರೆ, ೨೦೦೩ರಲ್ಲಿ ಮಾಡಿದ ತಿದ್ದುಪಡಿಯ ಬಳಿಕ ಪ್ರತ್ಯೇಕ ಗುಂಪಾಗಿ ಬೆಂಬಲಿಸಲು ಅವಕಾಶವಿಲ್ಲ. ಒಂದೋ ಇಡೀ ಪಕ್ಷ ಬೆಂಬಲಿಸಬೇಕು, ಇಲ್ಲವೇ ಹೊರಗಿನಿಂದ ಬೆಂಬಲಿಸಿದವರು ಅನರ್ಹತೆಗೆ ಒಳಗಾಗಬೇಕು.
ಶಿಂಧೆ ಬಣಕ್ಕೆ ಬೇರೆ ದಾರಿ ಏನು?
ಶಿಂಧೆ ಬಣ ಈ ಸಮರದಲ್ಲಿ ಗೆಲ್ಲಬೇಕಾದರೆ ಮೊದಲು ತಮ್ಮದೇ ನಿಜವಾದ ಶಿವಸೇನೆ ಎನ್ನುವುದನ್ನು ಪ್ರೂವ್ ಮಾಡಬೇಕು. ಆಗ ಉದ್ಧವ್ ಠಾಕ್ರೆ ನೇತೃತ್ವದ ತಂಡವೇ ಬಂಡುಕೋರ ಎಂದು ಸಾಬೀತುಪಡಿಸಬೇಕು. ಆದರೆ, ಪಕ್ಷದ ಅಧ್ಯಕ್ಷರು ಉದ್ಧವ್ ಠಾಕ್ರೆ ಆಗಿರುವುದರಿಂದ ಇದು ಅಷ್ಟು ಸುಲಭವಿಲ್ಲ. ಈಗ ಶಿಂಧೆ ಬಣ ತಮ್ಮ ಅನರ್ಹತೆಗೆ ಡೆಪ್ಯೂಟಿ ಸ್ಪೀಕರ್ ಕೊಟ್ಟಿರುವ ನೋಟಿಸ್ ಮಾನ್ಯವಲ್ಲ ಎಂದಷ್ಟೇ ಸಾಬೀತುಪಡಿಸಬಹುದು. ಆದರೆ, ವಿಧಾನಸಭೆಯಲ್ಲಿ ನಡೆಯುವ ನಿರ್ಣಾಯಕ ಬಲಾಬಲ ಪರೀಕ್ಷೆ ಸಂದರ್ಭದಲ್ಲಿ ಅದು ಒಂದು ಗುಂಪಾಗಿ ಬಿಜೆಪಿಯನ್ನು ಬೆಂಬಲಿಸಿದರೆ ಶಾಸಕರು ಅನರ್ಹತೆಗೆ ಒಳಗಾಗುವ ಅಪಾಯ ಹೆಚ್ಚೇ ಇದೆ.
ಇಂಥ ಪರಿಸ್ಥಿತಿಯನ್ನು ಏಕನಾಥ್ ಶಿಂಧೆ ಬಣ ಹೇಗೆ ಎದುರಿಸುತ್ತದೆ ಎನ್ನುವುದು ಕುತೂಹಲಕಾರಿ. ಪ್ರತಿಯೊಂದು ರಾಜಕೀಯ ವೈಪರೀತ್ಯಗಳು ನಡೆದಾಗಲೂ ರಾಜಕಾರಣ ಕಾನೂನುಗಳನ್ನು, ನಿಯಮಗಳನ್ನು ಚೂರೇಚೂರು ಮೀರುತ್ತಾ ಹೊಸ ದಾರಿ ಕಂಡುಕೊಳ್ಳುತ್ತದೆ. ಇಲ್ಲಿ ಶಿವಸೇನೆಯ ಶಿಂಧೆ ಬಣ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಿಜೆಪಿ ಸರಕಾರವನ್ನು ಬೆಂಬಲಿಸಿ ಹೇಗೆ ಗೆಲ್ಲುತ್ತದೆ ಎನ್ನುವುದು ಕುತೂಹಲಕಾರಿ ಪ್ರಶ್ನೆ. ಉದ್ಧವ್ ಠಾಕ್ರೆ ಅವರು ಕಣ್ಣು ನೆಟ್ಟಿರುವ ಈ ಮಾನ್ಯತೆ ನಿಯಮವೇ ಅವರಿಗೆ ಸದ್ಯಕ್ಕೆ ಆಸರೆ ಆಗಿರುವುದು. ಅಂದರೆ ಬಂಡಾಯವೆದ್ದ ತಂಡ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಬಾರದು. ಅದು ಬಿಜೆಪಿಯೊಂದಿಗೆ ವಿಲೀನಗೊಳ್ಳಬೇಕು!
ಒಟ್ಟಾರೆಯಾಗಿ ಮಹಾರಾಷ್ಟ್ರ ರಾಜಕಾರಣ ಚದುರಂಗದಾಟ ಕುತೂಹಲಕಾರಿಯಾಗಿ ಸಾಗುತ್ತಿದೆ.
ಇದನ್ನೂ ಓದಿ| Maha politics: ಅನರ್ಹತೆ ನೋಟಿಸ್ ಪ್ರಶ್ನಿಸಿ ಸುಪ್ರೀಂ ಬಾಗಿಲು ಬಡಿದ ಶಿಂಧೆ ಟೀಮ್, ನಾಳೆಯೇ ವಿಚಾರಣೆಗೆ ಲಿಸ್ಟಿಂಗ್