Site icon Vistara News

Maha politics: ಬಿಜೆಪಿಗೆ 2019ರಲ್ಲೇ ಈ ಬುದ್ಧಿ ಬರುತ್ತಿದ್ದರೆ ಅಘಾಡಿ ಸರಕಾರ ರಚನೆ ಆಗುತ್ತಲೇ ಇರಲಿಲ್ಲ ಎಂದ ಠಾಕ್ರೆ

uddhav- Phadnavis

ಮುಂಬಯಿ: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರಕಾರ ಪತನಗೊಂಡು ಏಕನಾಥ್‌ ಶಿಂಧೆ ನೇತೃತ್ವದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಪ್ರತಿಕ್ರಿಯೆ ನೀಡಿದ್ದಾರೆ. ʻʻಒಂದು ವೇಳೆ ಗೃಹ ಸಚಿವ ಅಮಿತ್‌ ಶಾ ಅವರು 2019ರಲ್ಲಿ ತಮ್ಮ ಮಾತು ಉಳಿಸಿಕೊಂಡಿದ್ದಿದ್ದರೆ ಈಗಿನ ಪರಿಸ್ಥಿತಿಯೇ ಭಿನ್ನವಾಗಿರುತ್ತಿತ್ತು. ಈಗ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು ಹೊಂದಿರುತ್ತಿತ್ತು. ಅಘಾಡಿ ಸರಕಾರ ರಚನೆ ಆಗುತ್ತಲೇ ಇರಲಿಲ್ಲʼʼ ಎಂದು ಕೆಣಕಿದ್ದಾರೆ.

ಶಿವಸೇನೆಯಿಂದ ಬಂಡೆದ್ದ ಏಕನಾಥ್‌ ಶಿಂಧೆ ಅವರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸುವ ಅಚ್ಚರಿಯ ನಡೆ ಇಟ್ಟ ಬಿಜೆಪಿ ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ನಡುವೆ ಹಳೆ ವಿಚಾರವನ್ನು ಎತ್ತಿದ್ದಾರೆ ಉದ್ಧವ್‌ ಠಾಕ್ರೆ. 2019ರ ವಿಧಾನಸಭಾ ಚುನಾವಣೆಗೆ ಮುನ್ನ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಸೀಟು ಹಂಚಿಕೆ ಮಾತ್ರವಲ್ಲ, ಮುಂದೆ ಅಧಿಕಾರ ಹಂಚಿಕೆ ವಿಚಾರ ಬಂದಾಗ ಮೊದಲ ಅವಧಿಯಲ್ಲಿ ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆ ನೀಡುವುದೆಂದು ಒಪ್ಪಂದವಾಗಿತ್ತು. ಆದರೆ, ಫಲಿತಾಂಶ ಬಂದಾಗ ಬಿಜೆಪಿ ಸಿಎಂ ಹುದ್ದೆಯನ್ನು ಬಿಟ್ಟುಕೊಡದಿರಲು ನಿರ್ಧರಿಸಿದ್ದರಿಂದ ಸರಕಾರ ರಚನೆಯ ವಿಷಯವೇ ಬಿಕ್ಕಟ್ಟಾಗಿತ್ತು.

ಈ ವಿಚಾರವನ್ನು ಪ್ರಸ್ತಾಪಿಸಿರುವ ಉದ್ಧವ್‌ ಠಾಕ್ರೆ ತನ್ನ ಹಳೆಯ ಮಿತ್ರ ಮತ್ತು ಈಗಿನ ಪರಮ ಶತ್ರುವಾಗಿರುವ ಬಿಜೆಪಿಯ ನಡೆಯನ್ನು ಗೇಲಿ ಮಾಡಿದ್ದಾರೆ. ʻʻಬಿಜೆಪಿ ಶಿವಸೈನಿಕನೆಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಿದ್ದೇವೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಒಂದೊಮ್ಮೆ ಅಮಿತ್‌ ಶಾ ಅವರು ಆವತ್ತು ನನಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದರೆ ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖ್ಯಮಂತ್ರಿ ಇರುತ್ತಿದ್ದರುʼʼ ಎಂದು ಹೇಳಿದ್ದಾರೆ.

ʻʻಬಿಜೆಪಿ ಅಧಿಕಾರಕ್ಕಾಗಿ ನನಗೆ ಬೆನ್ನಿಗೆ ಚೂರಿ ಹಾಕಿತು. ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮಾತುಕತೆಯ ವೇಳೆ ನಾನು ಮೊದಲ ಎರಡೂವರೆ ವರ್ಷ ಶಿವಸೇನೆಯ ಮುಖ್ಯಮಂತ್ರಿ ಇರಬೇಕು ಎಂದು ಹೇಳಿದ್ದೆ. ಅವರೂ ಒಪ್ಪಿದ್ದರು. ಅವರು ಇದನ್ನು ಮೊದಲೇ ಅಸ್ತಿತ್ವಕ್ಕೆ ತಂದಿದ್ದರೆ ಮಹಾ ವಿಕಾಸ ಅಘಾಡಿ ಸರಕಾರ ಅಸ್ತಿತ್ವಕ್ಕೆ ಬರುತ್ತಲೇ ಇರಲಿಲ್ಲʼʼ ಎಂದಿದ್ದಾರೆ ಠಾಕ್ರೆ.

ಏಕನಾಥ್‌ ಶಿಂಧೆ ಬಣಕ್ಕೆ ಮುಖ್ಯಮಂತ್ರಿ ಹುದ್ದೆ ನೀಡಿದ ಬಿಜೆಪಿ ನಡೆಯ ಬಗ್ಗೆ ಎಲ್ಲ ವಲಯಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಿಜೆಪಿ ತನ್ನ ಮೈತ್ರಿ ಪಕ್ಷವನ್ನು ಈ ರೀತಿಯಾಗಿ ಬೆಳೆಸುತ್ತಿದೆ. ಅದಕ್ಕೆ ಅಧಿಕಾರ ದಾಹವಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಆದರೆ, ಅದೇ ಹೊತ್ತಿಗೆ, ಇದೇ ನಿರ್ಧಾರವನ್ನು 2019ರಲ್ಲಿ ತೆಗೆದುಕೊಂಡಿದ್ದರೆ ಶಿವಸೇನೆ-ಬಿಜೆಪಿ ಸರಕಾರವೇ ಅಸ್ತಿತ್ವಕ್ಕೆ ಬರುತ್ತಿತ್ತಲ್ಲ ಎಂದು ನೆಟ್ಟಿಗರು ಪ್ರಶ್ನಿಸಿದ್ದರು. 2019ರಲ್ಲಿ ಮಾತುಕತೆಯಾದಂತೆ ಬಿಜೆಪಿ ಅಧಿಕಾರವನ್ನು ಬಿಟ್ಟುಕೊಟ್ಟಿದ್ದರೆ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗುತ್ತಿರಲಿಲ್ಲ. ಒಂದು ತಿಂಗಳ ಕಾಲ ಸರಕಾರವೇ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಒಂದು ತಿಂಗಳ ಬಳಿಕ ದೇವೇಂದ್ರ ಫಡ್ನವಿಸ್‌ ಅವರು ಎನ್‌ಸಿಪಿಯನ್ನು ವಿಭಜಿಸಿ ಒಂದೆರಡು ದಿನದ ಮಟ್ಟಿಗೆ ಮುಖ್ಯಮಂತ್ರಿಯಾಗುವ ಅಪಮಾನ ಎದುರಿಸಬೇಕಾಗಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

Exit mobile version