Site icon Vistara News

Mahadev App Case: ಛತ್ತೀಸ್‌ಗಢ ಸಿಎಂ ಬಘೇಲ್ ವಿರುದ್ಧ ಲಂಚದ ಪುರಾವೆ ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ

Bhupesh Baghel

ಹೊಸದಿಲ್ಲಿ: ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದ (Mahadev App Case) ಆರೋಪಿ ಶುಭಂ ಸೋನಿ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ಗೆ (chhattisgarh cm Bhupesh Baghel) ಈವರೆಗೆ ₹508 ಕೋಟಿ ಪಾವತಿಸಿರುವ ಪುರಾವೆ ಇದೆ ಎಂದು ಹೇಳುವ ವಿಡಿಯೋವನ್ನು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದೆ.

ಸದ್ಯದಲ್ಲೇ ವಿಧಾನಸಭೆ ಚುನಾವಣಾ ಕದನ ಎದುರಿಸುತ್ತಿರುವ ರಾಜ್ಯವಾದ ಛತ್ತೀಸ್‌ಗಢದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಜಿದ್ದಾಜಿದ್ದಿಗೆ ಈ ಪ್ರಕರಣ ಇನ್ನಷ್ಟು ತುಪ್ಪ ಸುರಿದಿದೆ. ಈ ವಿಡಿಯೋ ಬಿಜೆಪಿಯ ಪಿತೂರಿ ಎಂದು ಕಾಂಗ್ರೆಸ್‌ ಹೇಳಿದೆ.

ಬಿಜೆಪಿಯ ಕೇಂದ್ರ ಮಾಧ್ಯಮ ಸಂಚಾಲಕ ಸಿದ್ಧಾರ್ಥನಾಥ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಡಿಯೋವನ್ನು ಬಿಡುಗಡೆ ಮಾಡಿದರು. “ಆರೋಪಿ ಶುಭಂ ಸೋನಿ ದುಬೈನಲ್ಲಿ ಕುಳಿತಿದ್ದು, ಈ ಬೆಟ್ಟಿಂಗ್ ಆಪ್‌ ಪ್ರಕರಣದಲ್ಲಿ ಯಾರು ಸಂಪರ್ಕ ಹೊಂದಿದ್ದಾರೆ ಎಂಬುದರ ಕುರಿತು ಸಂಪೂರ್ಣ ಕಥೆಯನ್ನು ಈ ವೀಡಿಯೊದಲ್ಲಿ ವಿವರಿಸಿದ್ದಾರೆ. ಈ ಹಗರಣದಲ್ಲಿ ಸಿಎಂ ಬಘೇಲ್, ಅವರ ಪುತ್ರ ಬಿಟ್ಟು, ಅವರ ರಾಜಕೀಯ ಸಲಹೆಗಾರ ವಿನೋದ್ ವರ್ಮಾ ಮತ್ತು ಐಪಿಎಸ್ ಅಧಿಕಾರಿ ಭಾಗಿಯಾಗಿದ್ದಾರೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಒಂದು ನಿಮಿಷವೂ ಹುದ್ದೆಯಲ್ಲಿ ಉಳಿಯಲು ಬಘೇಲ್‌ಗೆ ಯಾವುದೇ ನೈತಿಕ ಹಕ್ಕಿಲ್ಲʼʼ ಎಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಶಾಸಕ ಸಿಂಗ್ ಹೇಳಿದ್ದಾರೆ.

ಅಕ್ರಮ ಬೆಟ್ಟಿಂಗ್ ಆಪ್ ಸಿಂಡಿಕೇಟ್ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದ್ದು, ಛತ್ತೀಸ್‌ಗಢದಲ್ಲಿ ಹಲವು ಕಡೆ ದಾಳಿ ನಡೆಸಿದೆ. ಇಡಿ ಕೋರಿಕೆಯ ಮೇರೆಗೆ ಮಹದೇವ್ ಆಪ್ ಸೇರಿದಂತೆ 22 ಅಕ್ರಮ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಕೇಂದ್ರವು ನಿರ್ಬಂಧ ಆದೇಶಗಳನ್ನು ಹೊರಡಿಸಿದೆ.

ಬಿಜೆಪಿ ಹೊರಗೆಡಹಿರುವ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ತನ್ನನ್ನು ಶುಭಂ ಸೋನಿ ಎಂದು ಗುರುತಿಸಿಕೊಂಡಿದ್ದಾನೆ. ತಾನು ಮಹದೇವ್ ಬುಕ್ ಬೆಟ್ಟಿಂಗ್ ಅಪ್ಲಿಕೇಶನ್‌ನ ಮಾಲೀಕ ಎಂದು ಹೇಳಿಕೊಂಡಿದ್ದಾನೆ. “ಬಘೇಲ್ ಸಾಹೇಬ್ ಮತ್ತು ಇತರರಿಗೆ ಇದುವರೆಗೆ ₹ 508 ಕೋಟಿ ನೀಡಲಾಗಿದೆʼʼ ಎಂದು ಹೇಳಿದ್ದಾನೆ.

“ಹಣ ನೀಡಿದರೂ ನನ್ನ ಕೆಲಸ ಆಗುತ್ತಿಲ್ಲ. ಈ ವ್ಯವಸ್ಥೆಯನ್ನು ಏನು ಮಾಡಬೇಕೆಂದು ನನಗೆ ಅರ್ಥವಾಗುತ್ತಿಲ್ಲ. ಇಡಿ ನನ್ನ ವಿರುದ್ಧ ಕ್ರಮ ಆರಂಭಿಸಿದೆ. ನನಗೆ ಸಹಾಯ ಮಾಡಬೇಕೆಂಬುದು ಭಾರತ ಸರ್ಕಾರಕ್ಕೆ ನನ್ನ ಕೊನೆಯ ವಿನಂತಿ. ನಾನು ಈ ರಾಜಕೀಯ ವ್ಯವಸ್ಥೆಯಲ್ಲಿ ಸಿಕ್ಕಿಬಿದ್ದಿದ್ದೇನೆ. ಅದರಿಂದ ಹೊರಬರಲು ಬಯಸುತ್ತೇನೆ. ನಾನು ನೀಡಿರುವ ಹಣದ ಬಗ್ಗೆ ನನ್ನ ಬಳಿ ಸಾಕ್ಷ್ಯವಿದೆ. ದಯವಿಟ್ಟು ನನಗೆ ಸಹಾಯ ಮಾಡಿ. ನಾನು ಭಾರತಕ್ಕೆ ಹಿಂತಿರುಗಲು ಬಯಸುತ್ತೇನೆ. ಆದರೆ ನನಗೆ ಭಯವಿದೆ” ಎಂದಿದ್ದಾನೆ.

ಕಾಂಗ್ರೆಸ್‌ನ ರಾಜ್ಯ ಸಂವಹನ ವಿಭಾಗದ ಅಧ್ಯಕ್ಷ ಸುಶಿ ಆನಂದ್ ಶುಕ್ಲಾ ಅವರು ಈ ವೀಡಿಯೊವನ್ನು ಬಿಜೆಪಿಯ ಪಿತೂರಿ ಎಂದು ಬಣ್ಣಿಸಿದ್ದಾರೆ. “ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಎದುರಿಸಲು ಬಿಜೆಪಿ ವಿಫಲವಾಗಿದೆ ಮತ್ತು ಇಂತಹ ಪಿತೂರಿಗಳನ್ನು ಆಶ್ರಯಿಸಿದೆ. ಈ ಪ್ರಕರಣದ ಪ್ರಮುಖ ಆರೋಪಿ ಸೌರಭ್ ಚಂದ್ರಕರ್ ಎಂದು ಹೇಳಲಾಗಿದೆ. ಯಾರು ಬೇಕಿದ್ದರೂ ವಿಡಿಯೋವನ್ನು ಬಿಡುಗಡೆ ಮಾಡಬಹುದು ಮತ್ತು ಸ್ವತಃ ಮಹದೇವ್ ಆ್ಯಪ್‌ನ ಮಾಲೀಕ ಎಂದು ಹೇಳಿಕೊಳ್ಳಬಹುದು. ಛತ್ತೀಸ್‌ಗಢದ ಜನರು ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆʼʼ ಎಂದು ಶುಕ್ಲಾ ಹೇಳಿದ್ದಾರೆ.

Exit mobile version