Site icon Vistara News

ಮಹಾರಾಷ್ಟ್ರ ಮಹಾ ಅʼಗಾಡಿʼ ಸರ್ಕಾರ ಪಂಕ್ಚರ್‌?; ಶುರುವಾದಂತಿದೆ ಆಪರೇಶನ್‌ ಕಮಲ !

Maharashtra Politics

ಮುಂಬೈ: ಮಹಾರಾಷ್ಟ್ರ ಮೈತ್ರಿ ಸರ್ಕಾರಕ್ಕೀಗ ಪತನ (Maharashtra Political Crisis) ಭಯ ಶುರುವಾಗಿದೆ. ಶಿವಸೇನೆಯ ನಾಯಕ, ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ್‌ ಶಿಂಧೆ, ತನ್ನ 11 ಮಂದಿ ಬೆಂಬಲಿಗ ಶಾಸಕರೊಂದಿಗೆ ಸೂರತ್‌ನ ರೆಸಾರ್ಟ್‌ ಸೇರಿಕೊಂಡು ಯಾರ ಸಂಪರ್ಕಕ್ಕೂ ಸಿಗದಂತಾಗಿದ್ದಾರೆ (ಸುಮಾರು ೨೧ ಶಾಸಕರು ರೆಸಾರ್ಟ್‌ಗೆ ಹೋಗಿದ್ದಾರೆಂದು ಹೇಳಲಾಗುತ್ತಿದ್ದರೂ ಅಧಿಕೃತವಾಗಿ ಮಾಹಿತಿ ಸಿಕ್ಕಿಲ್ಲ) ಹೀಗೆ ಭಿನ್ನಾಭಿಪ್ರಾಯ ಎದ್ದು ಅಲ್ಲಿಗೆ ಶಮನವಾಗುತ್ತದೆಯೋ? ಇಡೀ ಸರ್ಕಾರವೇ ಉರುಳಿ ಹೋಗುತ್ತದೆಯೋ?-ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ. ಹೀಗೆ ರೆಸಾರ್ಟ್‌ ಸೇರಿಸಿಕೊಂಡ ಸಚಿವರು-ಶಾಸಕರು ಸರ್ಕಾರವನ್ನು ಪತನ ಮಾಡದೆ ವಾಪಸ್‌ ಬಂದಿರುವ ಉದಾಹರಣೆ ತುಂಬ ಕಡಿಮೆ. ಹೀಗಾಗಿ ಮಹಾರಾಷ್ಟ್ರ ರಾಜಕೀಯದಲ್ಲಿ ಬಿಕ್ಕಟ್ಟು ಪ್ರಾರಂಭವಾಗಿದ್ದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.

2019ರಲ್ಲಿ ಮಹಾರಾಷ್ಟ್ರ ಸರ್ಕಾರ ರಚನೆ ಮಾಡುವಾಗ ನಡೆದ ಹೈಡ್ರಾಮವನ್ನು ಇಡೀ ದೇಶ ನೋಡಿದೆ. ರಾಜ್ಯದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳು ಇದ್ದು, 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 106 ಕ್ಷೇತ್ರಗಳನ್ನು, ಶಿವಸೇನೆ 55, ಕಾಂಗ್ರೆಸ್‌ 44 ಮತ್ತು ಎನ್‌ಸಿಪಿ 52 ಸೀಟ್‌ಗಳನ್ನು ಗೆದ್ದುಕೊಂಡಿತ್ತು. ಮುಖ್ಯಮಂತ್ರಿ ಹುದ್ದೆಯನ್ನು 50:50 ಹಂಚಿಕೆ ಮಾಡಿಕೊಳ್ಳುವ ವಿಚಾರಕ್ಕೆ ಬಿಜೆಪಿ ಮತ್ತು ಅದರ ಮೈತ್ರಿಪಕ್ಷವಾಗಿದ್ದ ಶಿವಸೇನೆ ನಡುವೆ ಜಗಳ ಶುರುವಾಗಿತ್ತು. ಹೀಗಾಗಿ ಚುನಾವಣೆ ನಡೆದು ಎರಡು ವಾರಗಳೇ ಕಳೆದುಹೋದರೂ ಸರ್ಕಾರ ರಚನೆಯಾಗಲಿಲ್ಲ. ರಾಷ್ಟ್ರಪತಿ ಆಳ್ವಿಕೆಯೂ ಜಾರಿಯಾಗಿತ್ತು. ಇತ್ತ ಬಿಜೆಪಿ-ಶಿವಸೇನೆ ಕಗ್ಗಂಟು, ಅತ್ತ ಎನ್‌ಸಿಪಿಗಾಗಲೀ, ಕಾಂಗ್ರೆಸ್‌ಗಾಗಲೀ ಇಲ್ಲದ ಬಹುಮತ ಒಟ್ಟಾರೆ ಮಹಾರಾಷ್ಟ್ರ ರಾಜಕಾರಣ ಅತಂತ್ರವಾಗಿತ್ತು.

ಆದರೆ ಅಚ್ಚರಿಯೆಂಬಂತೆ ಅವಸರದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್‌ ಅವರು ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಜತೆ ಸೇರಿಬಿಟ್ಟಿದ್ದರು. 2019ರ ನವೆಂಬರ್‌ 23ರ ಮುಂಜಾನೆ ಹೊತ್ತಲ್ಲಿ ಫಡ್ನವೀಸ್‌ ಮುಖ್ಯಮಂತ್ರಿಯಾಗಿ, ಅಜಿತ್‌ ಪವಾರ್‌ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇಲ್ಲಿ ಅಜಿತ್‌ ಪವಾರ್‌ ತಮ್ಮ ಪಕ್ಷದ ನಾಯಕ ಶರದ್‌ ಪವಾರ್‌ ಗಮನಕ್ಕೆ ಬಾರದೆ ಇಷ್ಟು ದೊಡ್ಡ ನಿರ್ಧಾರ ಮಾಡಿದ್ದರು. ಆದರೆ ಇದು ತುಂಬ ದಿನ ಉಳಿಯಲಿಲ್ಲ. ಪ್ರತಿಪಕ್ಷಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದವು. ಬಹುಮತ ಇಲ್ಲದೆ ದೇವೇಂದ್ರ ಫಡ್ನವೀಸ್‌ ಸರ್ಕಾರ ರಚನೆಗೆ ಮುಂದಾಗಿದ್ದಾರೆ ಎಂಬುದು ಆರೋಪ. ಇಷ್ಟೆಲ್ಲ ನಾಟಕೀಯ ಬೆಳವಣಿಗೆಯಾದ ಬಳಿಕ ಅಜಿತ್‌ ಪವಾರ್‌ ಮೊದಲು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ತಮ್ಮ ಪಕ್ಷ ಎನ್‌ಸಿಪಿ ಗೂಡು ಸೇರಿಕೊಂಡರು. ಇತ್ತ ಫಡ್ನವೀಸ್‌ ಅನಾಥರಾಗಿ ಸಿಎಂ ಹುದ್ದೆ ಬಿಟ್ಟರು..ನಂತರ ಶಿವಸೇನೆ-ಕಾಂಗ್ರೆಸ್‌ ಮತ್ತು ಎನ್‌ಸಿಪಿ ಮೈತ್ರಿಯಲ್ಲಿ ಮಹಾ ವಿಕಾಸ್‌ ಅಘಾಡಿ ಸರ್ಕಾರ ರಚನೆಯಾಯಿತು..ಇದು ಹಳೇ ಕತೆ.

ಹೊಸ ಬೆಳವಣಿಗೆ ಏನು?
ಸೈದ್ಧಾಂತಿಕ ವೈರುಧ್ಯವಿದ್ದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಬೇಕು ಎಂಬ ಒಂದೇ ಕಾರಣಕ್ಕೆ ಒಂದಾದ ಶಿವಸೇನೆ-ಕಾಂಗ್ರೆಸ್‌-ಎನ್‌ಸಿಪಿ ಪ್ರಾರಂಭದಿಂದಲೂ ಹಲವು ಭಿನ್ನಾಭಿಪ್ರಾಯಗಳನ್ನು ಎದುರಿಸುತ್ತಲೇ ಬಂದಿವೆ. ಅದರ ಲಾಭವವನ್ನು ಬಿಜೆಪಿಯೂ ಪಡೆದುಕೊಂಡಿದೆ. ಮಹಾ ಸರ್ಕಾರ ಉರುಳಿಸಲು ಇದುವರೆಗೆ ಬಹಿರಂಗವಾಗಿ ಬಿಜೆಪಿ ಪ್ರಯತ್ನ ಮಾಡದೆ ಇದ್ದರೂ, ತೆರೆಮರೆಯಲ್ಲಿ ಒಂದು ಸಣ್ಣ ಯತ್ನವನ್ನು ಜಾರಿಯಲ್ಲಿಟ್ಟಿತ್ತು ಎಂಬುದು ಮೂಲಗಳಿಂದ ತಿಳಿದುಬಂದ ಮಾಹಿತಿ.

ಇತ್ತೀಚೆಗೆ ಒಮ್ಮೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಬಿಜೆಪಿ ಪ್ರತಿಪಕ್ಷ ನಾಯಕ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ʼ2024ರ ವಿಧಾನಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಖಂಡಿತವಾಗಿಯೂ ಬಿಜೆಪಿ ಸರ್ಕಾರ ರಚನೆ ಮಾಡುತ್ತದೆʼ ಎಂದು ಹೇಳಿದ್ದರು. ಆದರೆ ಕೆಲವೇ ದಿನಗಳ ಹಿಂದೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸೀಟ್‌ಗಳನ್ನು ಗೆದ್ದುಕೊಂಡಿದ್ದ ಬಿಜೆಪಿಯ ಧಾಟಿಯೇ ಬದಲಾಗಿತ್ತು. ಯಾಕೆಂದರೆ ಈ ಚುನಾವಣೆಯಲ್ಲೂ ಕೂಡ ಅಡ್ಡಮತದಾನವಾಗಿತ್ತು. ಶಿವಸೇನೆಯ ಅಧಿಕೃತ ಅಭ್ಯರ್ಥಿ ಶಿವಸೇನೆಯ ಸಂಜಯ್‌ ಪವಾರ್‌ ಸೋತು, ಬಿಜೆಪಿಯ ಧನಂಜಯ್ ಮಹಾದಿಕ್ ಗೆದ್ದಿದ್ದರು. ಆಗಲೇ ಮಹಾ ವಿಕಾಸ್‌ ಅಘಾಡಿ ಮೈತ್ರಿಯಲ್ಲಿ ಬಂಡಾಯ ಆರಂಭವಾಗುವ ಸಣ್ಣ ಮುನ್ಸೂಚನೆ ಸಿಕ್ಕಿತ್ತು. ಬಿಜೆಪಿಯ ಒಟ್ಟು ಆರು ರಾಜ್ಯಸಭಾ ಅಭ್ಯರ್ಥಿಗಳಲ್ಲಿ ಮೂವರು ಜಯಸಾಧಿಸಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಪಕ್ಷದ ವಕ್ತಾರ ಕೇಶವ್‌ ಉಪಾಧ್ಯಾಯ, ʼಮಹಾರಾಷ್ಟ್ರದ ಮಹಾ ವಿಕಾಸ್‌ ಅಘಾಡಿ ಸರ್ಕಾರ ಶೀಘ್ರವೇ ಪತನವಾಗಲಿದೆ ಮತ್ತು ಬಿಜೆಪಿ ಅಧಿಕಾರಕ್ಕೆ ಏರಲಿದೆʼ ಎಂದು ಅಚ್ಚರಿಯ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಈಗ ಶಿವಸೇನೆಯ ಸಚಿವರು ತನ್ನ ಬೆಂಬಲಿಗರನ್ನು ಕಟ್ಟಿಕೊಂಡು ರೆಸಾರ್ಟ್‌ ಹೊಕ್ಕಿದ್ದು, ದೊಡ್ಡಮಟ್ಟದ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮಹಾ ವಿಧಾನ ಪರಿಷತ್ತಿಗೆ ಬಿಜೆಪಿಯಿಂದ ನಾಲ್ವರು, ಎನ್‌ಸಿಪಿ ಹಾಗೂ ಶಿವಸೇನೆಯ ತಲಾ ಇಬ್ಬರ ಆಯ್ಕೆ

ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಗೆಲುವು
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಗೆದ್ದಿದ್ದರೆ, ಶಿವಸೇನೆ ಮತ್ತು ಎನ್‌ಸಿಪಿಯ ತಲಾ ಇಬ್ಬರು ಗೆದ್ದರು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟಾರೆ ಶಾಸಕರ ಬಲ 288. ಆದರೆ ನಿನ್ನೆ ಮಾನ್ಯತೆ ಪಡೆದ ಮತಗಳು 283 ಮಾತ್ರ. ಯಾಕೆಂದರೆ 288 ಸೀಟ್‌ಗಳಲ್ಲಿ ಒಂದು ಖಾಲಿಯಿದೆ. ಜೈಲು ಶಿಕ್ಷೆಗೊಳಗಾದ ಇಬ್ಬರು ಸದಸ್ಯರಿಗೆ ವಿಧಾನಪರಿಷತ್‌ ಚುನಾವಣೆಯಲ್ಲಿ ಮತದಾನದಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿತ್ತು. ಅಚ್ಚರಿಯೆಂದರೆ, ವಿಧಾನಸಭೆಯಲ್ಲಿ ಬಿಜೆಪಿಗೆ ಇದ್ದಿದ್ದು ೧೦೬ ಸದಸ್ಯಬಲ. ಆದರೆ ಬಿಜೆಪಿ ಅಭ್ಯರ್ಥಿಗಳಿಗೆ ಸುಮಾರು 20 ಮತಗಳು ಹೆಚ್ಚುವರಿಯಾಗಿ ಬಿದ್ದಿವೆ. ಈ 20 ಮತಗಳೂ ಶಿವಸೇನೆ-ಕಾಂಗ್ರೆಸ್‌ನಿಂದಲೇ ಬಂದಿದ್ದು ಎಂದಲ್ಲ. ಇತರ ಕೆಲವು ಪಕ್ಷಗಳ ಶಾಸಕರೂ ಮತದಾನ ಮಾಡಿರಬಹುದು. ಆದರೆ ಅಡ್ಡಮತದಾನವಾಗಿದ್ದಂತೂ ಸ್ಪಷ್ಟ.

ಈ ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ ಎಲ್ಲ 20 ಶಾಸಕರೂ ಆ ಪಕ್ಷದತ್ತ ಒಲವು ಹೊಂದಿದ್ದಾರೆ, ಅವರೊಮ್ಮೆ ಬಿಜೆಪಿ ಸೇರುತ್ತಾರೆ ಎಂದಾದರೆ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಬಲ ೧೨೬ಕ್ಕೆ ಏರುತ್ತದೆ. ಅಷ್ಟಾದರೂ ಸರ್ಕಾರ ರಚನೆಗೆ ಬಹುಮತ ಸಿಗುವುದಿಲ್ಲವಾದರೂ ಇತ್ತ ಮಹಾ ವಿಕಾಸ ಅಘಾಡಿ ಸರ್ಕಾರಕ್ಕೆ ಅಪಾಯವಂತೂ ಕಟ್ಟಿಟ್ಟ ಬುತ್ತಿ. ಯಾಕೆಂದರೆ ಇನ್ನಿತರ ಚಿಕ್ಕಪಕ್ಷಗಳು, ಸ್ವತಂತ್ರ ಶಾಸಕರನ್ನು ಸೆಳೆದುಕೊಳ್ಳುವುದು ಮತ್ತು ಕಾಂಗ್ರೆಸ್‌-ಶಿವಸೇನೆ-ಎನ್‌ಸಿಪಿಯ ಇನ್ನಷ್ಟು ಶಾಸಕರನ್ನು ಕರೆದುಕೊಳ್ಳುವುದು ಬಿಜೆಪಿಗೇನೂ ದೊಡ್ಡ ವಿಷಯವಲ್ಲ..!

ಶರದ್‌ ಪವಾರ್‌ ಸಭೆ
ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದಲ್ಲಿ ಮಹಾವಿಕಾಸ ಅಘಾಡಿ ಸರ್ಕಾರ ರಚನೆಯಾಗಿದ್ದರೂ, ಎನ್‌ಸಿಪಿ ನಾಯಕ ಶರದ್‌ ಪವಾರ್‌ ಸೂತ್ರದಾರರು. ಮೂರು ಪಕ್ಷಗಳು ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಅಲ್ಲಲ್ಲೇ ಬಗೆಹರಿಸಿಕೊಂಡು ಈ ಮೂರುವರ್ಷ ಆಡಳಿತ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಇದೇ ಶರದ್‌ ಪವಾರ್‌. ರಾಜಕೀಯದಲ್ಲಿ ಪಳಗಿರುವ ಅವರು ತುಂಬ ಸೂಕ್ಷ್ಮವಾಗಿ ಹೆಜ್ಜೆಯಿಡುತ್ತಿದ್ದಾರೆ. ಮೂರು ಪಕ್ಷಗಳ ಕೊಂಡಿಯಂತಿದ್ದಾರೆ. ಇದೀಗ ಶಿವಸೇನೆ ಸಚಿವ-ತನ್ನ ಅನುಯಾಯಿಗಳೊಂದಿಗೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರಿಂದು ಒಂದು ತುರ್ತು ಸಭೆಯನ್ನೂ ಕರೆದಿದ್ದಾರೆ.

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ೫ಮಂದಿಯಲ್ಲಿ ೪ಸದಸ್ಯರು ಗೆದ್ದಿದ್ದರೆ, ಮಹಾವಿಕಾಸ್‌ ಅಘಾಡಿಯಿಂದ ಸ್ಪರ್ಧಿಸಿದ್ದ ಆರು ಮಂದಿಯಲ್ಲಿ ನಾಲ್ವರು ಗೆದ್ದಿದ್ದಾರೆ. ಇಲ್ಲಿ ಅಡ್ಡಮತದಾನವೇ ಸರ್ಕಾರಕ್ಕೆ ದೊಡ್ಡಮಟ್ಟದ ಅಡ್ಡಗಾಲು ಆಗುವ ಎಲ್ಲ ಲಕ್ಷಣವೂ ಗೋಚರಿಸುತ್ತಿದ್ದಾರೆ. ಇಂದು ಉದ್ಧವ್‌ ಠಾಕ್ರೆ ಕೂಡ ಸಭೆ ನಡೆಸಲಿದ್ದು, ಶರದ್‌ ಪವಾರ್‌ ಸಹ ಮಹತ್ವದ ಸಭೆ ಮಾಡಿದ್ದಾರೆ.

ಇದನ್ನೂ ಓದಿ: ಮಹಾ ಸರ್ಕಾರದಲ್ಲಿ ಭಿನ್ನಮತ?; ಸಂಪರ್ಕಕ್ಕೆ ಸಿಗದೆ, ರೆಸಾರ್ಟ್‌ ಸೇರಿದ ಶಿವಸೇನೆ ಸಚಿವ, 11 ಶಾಸಕರು


Exit mobile version