Site icon Vistara News

‘ರಾ’ ಅಧಿಕಾರಿ ಹೆಸರಲ್ಲಿ ‘ಚಾಣಕ್ಯ’ ಗೋಲ್ಮಾಲ್! ಗರ್ಲ್‌ಫ್ರೆಂಡ್ ಜತೆ ಇದ್ದಾಗಲೇ ಎತ್ತಾಕ್ಕೊಂಡು ಬಂದ ಪೊಲೀಸ್ರು

Army Major Arrested

ಅಹ್ಮದನಗರ, ಮಹಾರಾಷ್ಟ್ರ: ಭಾರತೀಯ ಗುಪ್ತಚರ ಸಂಸ್ಥೆಯ ರಾ (Research and Analysis Wing) ಅಧಿಕಾರಿ ಎಂದು, ಕೋಡ್‌ನೇಮ್ ಚಾಣಕ್ಯ (Codename Chanakya) ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರದ ಪೊಲೀಸರು (Maharashtra Police) ಬಂಧಿಸಿ, ಶುಕ್ರವಾರ ಸೆರೆಮನೆಗೆ ಅಟ್ಟಿದ್ದಾರೆ. ಬಂಧಿತ ಚಾಣಕ್ಯ, ಆದಾಯ ತೆರಿಗೆ ಇಲಾಖೆ ಮತ್ತು ಸಶಸ್ತ್ರ ಪಡೆಗಳಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಜನರನ್ನು ವಂಚಿಸುತ್ತಿದ್ದ (Conman) ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಕಾರ್ಯಾಲಯದ ಅಧಿಕಾರಿಯೆಂದು ಹೇಳಿ ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿದ್ದ ವ್ಯಕ್ತಿಯನ್ನು ಜಮ್ಮು ಕಾಶ್ಮೀರ ಪೊಲೀಸರು ಅರೆಸ್ಟ್ ಮಾಡಿದ್ದರು. ಇದಾದ ತಿಂಗಳ ಬಳಿಕ, ರಾ ಅಧಿಕಾರಿಯ ಹೆಸರಿನಲ್ಲಿ ವ್ಯಕ್ತಿಯೊಬ್ಬ ವಂಚೆ ಮಾಡುತ್ತಿರುವ ಮಾಹಿತಿಯನ್ನು ಸೇನೆಯ ದಕ್ಷಿಣ ಕಮಾಂಡ್ ನೀಡಿದ ಸುಳಿವು ಆಧಾರದ ಮೇಲೆ ಮಹಾರಾಷ್ಟ್ರ ಪೊಲೀಸರು ವಂಚಕನನ್ನು ಬಂಧಿಸಿದ್ದಾರೆ.

ಚಾಣಕ್ಯ ಹೆಸರಿನಲ್ಲಿ ವಂಚನೆ ಮಾಡತ್ತಿದ್ದ ಬಂಧಿತ ವ್ಯಕ್ತಿಯ ಹೆಸರು ಸಂತೋಷ್ ಆತ್ಮಾರಾಮ್ ರಾಥೋಡ್. ಈತನಿಗೆ 35 ವರ್ಷ ವಯಸ್ಸಾಗಿದೆ. ಅಹ್ಮದ್ ನಗರ ಜಿಲ್ಲೆಯಲ್ಲಿ ತನ್ನ ಗೆಳತಿಯೊಂದಿಗೆ ವಸತಿ ಗೃಹದಲ್ಲಿ ತಂಗಿದ್ದಾಗಲೇ ಆತನನ್ನು ಪೊಲೀಸರು ಬಂಧಿಸಿದ್ದಾರೆ. ರಾ ಸಂಸ್ಥೆಯ ನಕಲಿ ಐಡಿ ಕಾರ್ಡ್ ಮತ್ತು ಆಧಾರ್ ಕಾರ್ಡ್‌ಗಳನ್ನು ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಲೇ ಚಾಲಾಕಿ ಈ ವಂಚಕ

ಬಂಧಿತ ಸಂತೋಷ್ ಆತ್ಮಾರಾಮ್ ರಾಥೋಡ್, ತಾನು ಆಂತರಿಕ ಭದ್ರತೆಯ ವಿಭಾಗದಲ್ಲಿ ಡೆಪ್ಯುಟಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಅಲ್ಲದೇ, ತನ್ನ ಕೋಡ್ ನೇಮ್ ಚಾಣಕ್ಯ ಎಂದು ಹೇಳಿಕೊಂಡು ವಂಚನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಕೆಲಸ ಕೊಡ್ತೇನೆ ಎಂದ ಆನ್​ಲೈನ್ ವಂಚಕನಿಗೇ ದಾರಿ ತಪ್ಪಿಸಿದ ಯುವತಿ; ಸಾಯುವ ಆಟ, ಸತ್ತೇ ಹೋದಳು ಎಂದ ಅಮ್ಮ!

ಅಹ್ಮದ್‌ನಗರದ ಶೇವ್‌ಗಾಂವ್‌ನಲ್ಲಿ ರಾ ಏಜೆಂಟ್‌ನಂತೆ ವರ್ತಿಸುತ್ತಿರುವ ವ್ಯಕ್ತಿಯ ಇರುವ ಬಗ್ಗೆ ಮಿಲಿಟರಿ ಗುಪ್ತಚರ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಸುಳಿವು ನೀಡಿದ್ದರು. ಬಂಧಿತ ವ್ಯಕ್ತಿಯು ಆದಾಯ ತೆರಿಗೆ ಇಲಾಖೆ, ಸಶಸ್ತ್ರ ಪಡೆ ಹಾಗೂ ಇತರೆ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಸ್ಥಳೀಯರಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಂಧಿತ ವ್ಯಕ್ತಿಯನ್ನು ಪೊಲೀಸ್ ಹಾಗೂ ಸೇನಾ ಗುಪ್ತಚರ ಸಂಸ್ಥೆಯ ಜಂಟಿ ತಂಡವು ವಿಚಾರಣೆಗೊಳಪಡಿಸಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version