Site icon Vistara News

Maha Politics | ಬಹುಮತ ಸಾಬೀತು ಪಡಿಸಬೇಕೆಂಬ ರಾಜ್ಯಪಾಲರ ಸೂಚನೆಗೆ ತಡೆ ನೀಡಲು ಸುಪ್ರೀಂ ನಕಾರ

supreme-court

ನವ ದೆಹಲಿ: ಗುರುವಾರ ಸಂಜೆ ೫ ಗಂಟೆಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕೆಂಬ ಮಹಾರಾಷ್ಟ್ರದ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರ ಸೂಚನೆಯ ವಿರುದ್ಧ ಮಹಾವಿಕಾಸ ಅಘಾಡಿ ಸರಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ರಾಜ್ಯಪಾಲರ ಸೂಚನೆಯನ್ನು ಎತ್ತಿ ಹಿಡಿದಿದೆ.

ಇದರಿಂದಾಗಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಗುರುವಾರ ವಿಶ್ವಾಸ ಮತ ಸಾಬೀತು ಪಡಿಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದು, ಅವರು ರಾಜೀನಾಮೆ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನ್ಯಾಯಮೂರ್ತಿಗಳಾದ ಜಸ್ಟಿಸ್‌ ಸೂರ್ಯಕಾಂತ್‌ ಮತ್ತು ಜೆ.ಬಿ ಪಡಿವಾಳ ಅವರನ್ನು ಒಳಗೊಂಡ ವಿಭಾಗೀಯ ಪೀಠ ಗುರುವಾರ ಸಂಜೆಯಿಂದ ವಿಚಾರಣೆ ನಡೆಸಿ, ರಾತ್ರಿ ೮.೩೦ಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು. ತಾನು ತಿಳಿಸಿದಂತೆ ರಾತ್ರಿ ೯ ಗಂಟೆಗೆ ಈ ತೀರ್ಪು ಪ್ರಕಟಿಸಿದೆ.

ರಾಜ್ಯ ಸರಕಾರದ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನುಸಿಂಘ್ವಿ, ಏಕನಾಥ್‌ ಶಿಂಧೆ ಬಣದ ಪರವಾಗಿ ಹಿರಿಯ ವಕೀಲ ನೀರಜ್‌ ಕೌಲ್‌ ಅವರು ವಾದ ಮಂಡಿಸಿದ್ದರು.

ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರು ಗುರುವಾರ ಸಂಜೆ ೫ ಗಂಟೆಯೊಳಗೆ ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಮಹಾ ವಿಕಾಸ ಅಘಾಡಿ ಸರಕಾರಕ್ಕೆ ಸೂಚನೆ ನೀಡಿದ್ದರು. ಮಂಗಳವಾರ ರಾತ್ರಿ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರು ರಾಜಭವನಕ್ಕೆ ಭೇಟಿ ನೀಡಿ ಸರಕಾರಕ್ಕೆ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಮನವಿ ಮಾಡಿದ್ದರು. ಅದಾದ ಬಳಿಕ ರಾಜ್ಯಪಾಲರು ಉದ್ಧವ್‌ ಠಾಕ್ರೆ ಸರಕಾರಕ್ಕೆ ಸೂಚನೆ ನೀಡಿದ್ದರು.

ಆದರೆ, ೧೬ ಮಂದಿ ರೆಬೆಲ್‌ ಶಾಸಕರ ಅನರ್ಹತೆ ವಿಚಾರವನ್ನು ಬದಿಗಿಟ್ಟು ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ ನಡೆಸುವುದು ಸಮ್ಮತವಲ್ಲ ಎಂದು ಆಕ್ಷೇಪಿಸಿ ಉದ್ಧವ್‌ ಠಾಕ್ರೆ ಬಣ ಬುಧವಾರ ಬೆಳಗ್ಗೆ ಸುಪ್ರಿಂಕೋರ್ಟ್‌ ಮೆಟ್ಟಿಲೇರಿತ್ತು. ಅನರ್ಹತೆ ಕುರಿತ ವಿಚಾರಣೆಯನ್ನು ಜುಲೈ ೧೨ಕ್ಕೆ ಮುಂದೂಡಿದ್ದರಿಂದ ಅಲ್ಲಿವರೆಗೆ ವಿಶ್ವಾಸ ಮತ ಯಾಚನೆಗೂ ಅವಕಾಶ ಕೊಡಬಾರದು ಎಂದು ಉದ್ಧವ್‌ ಠಾಕ್ರೆ ಬಣ ವಾದಿಸುತ್ತಿದೆ.

ವಿಶ್ವಾಸ ಮತಕ್ಕೂ ಅನರ್ಹತೆಗೂ ಏನು ಸಂಬಂಧ?
ವಿಚಾರಣೆ ವೇಳೆ ರಾಜ್ಯ ವಿಧಾನಸಭೆಯಲ್ಲಿ ನಡೆಯಲಿರುವ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೂ ಶಾಸಕರ ಅನರ್ಹತೆಗೂ ಏನು ಸಂಬಂಧ ಎಂದು ನ್ಯಾಯಮೂರ್ತಿಗಳಾದ ಜಸ್ಟಿಸ್‌ಸೂರ್ಯಕಾಂತ್‌ಅವರು ಉದ್ಧವ್‌ಠಾಕ್ರೆ ಸರಕಾರದ ಪರ ವಕೀಲರಾದ ಅಭಿಷೇಕ್‌ಮನು ಸಿಂಘ್ವಿ ಅವರನ್ನು ಪ್ರಶ್ನಿಸಿದ್ದರು.

ಅದಕ್ಕೆ ಅಭಿಷೇಕ್‌ಮನು ಸಿಂಘ್ವಿ , ಒಂದು ಕಡೆ ಸುಪ್ರೀಂಕೋರ್ಟ್‌ಶಾಸಕರ ಅನರ್ಹತೆ ವಿಚಾರಣೆಗೆ ತಡೆ ಒಡ್ಡಿದೆ. ಈ ಹಂತದಲ್ಲಿ ಒಂದೊಮ್ಮೆ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ನಡೆದರೆ ಅದೇ ಶಾಸಕರಿಗೆ ಮತ ಹಾಕಲು ಅವಕಾಶ ನೀಡುವುದು ವೈರುಧ್ಯವಾಗುತ್ತದೆ.

ಜುಲೈ ೧೨ರಂದು ಸುಪ್ರೀಂಕೋರ್ಟ್‌ತೀರ್ಪಿನ ಬಳಿಕ ಶಾಸಕರನ್ನು ಅನರ್ಹಗೊಳಿಸಿದರೆ ಅವರು ವಿಶ್ವಾಸ ಮತದಲ್ಲಿ ಹಾಕಿದ ಮತವನ್ನು ರದ್ದುಗೊಳಿಸಲು ಸಾಧ್ಯವೇ? ಅನರ್ಹತೆ ವಿಚಾರಣೆಗೆ ತಡೆಯಾಜ್ಞೆ ವಿಧಿಸಿರುವ ಕೋರ್ಟ್‌ಒಂದೋ ವಿಶ್ವಾಸ ಮತ ಯಾಚನೆಗೂ ತಡೆ ನೀಡಬೇಕು. ಇಲ್ಲವಾದರೆ, ಮೊದಲು ಅನರ್ಹತೆ ಅರ್ಜಿ ವಿಚಾರಣೆಗೆ ಅವಕಾಶ ನೀಡಿ ಬಳಿಕ ವಿಶ್ವಾಸ ಮತಕ್ಕೆ ಅವಕಾಶ ನೀಡಬೇಕು ಎಂದು ಸಿಂಘ್ವಿ ವಾದಿಸಿದ್ದರು.

ಇದನ್ನೂ ಓದಿ | ವಿಶ್ವಾಸಮತ ಯಾಚನೆ ಆದೇಶದ ವಿರುದ್ಧ ಅರ್ಜಿ ವಿಚಾರಣೆ ಪೂರ್ಣ: ರಾತ್ರಿ 9ಕ್ಕೆ ಸುಪ್ರೀಂ ಕೋರ್ಟ್‌ ತೀರ್ಪು

Exit mobile version