ಚಂಡೀಗಢ: ಕೆನಡಾದ ಟೊರಾಂಟೊದಲ್ಲಿನ ರಿಚ್ಮಂಡ್ ಹಿಲ್ ಪ್ರದೇಶದಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯನ್ನು ವಿರೂಪಗೊಳಿಸಿದ ಬೆನ್ನಿಗೇ ಪಂಜಾಬ್‌ನ ಭಟಿಂಡಾ ಜಿಲ್ಲೆಯಲ್ಲೂ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಇಲ್ಲಿ ಮೂರ್ತಿಯನ್ನು ಸಂಪೂರ್ಣ ಧ್ವಂಸಗೊಳಿಸಲಾಗಿದೆ.
ಪಂಜಾಬ್‌ನ ರಾಮನ್ ಮಂಡಿಯಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಆದರೆ, ದುಷ್ಕರ್ಮಿಗಳು ತಡರಾತ್ರಿ ಪಾರ್ಕ್ಗೆ ನುಗ್ಗಿ ಗಾಂಧೀಜಿ ಪ್ರತಿಮೆಯನ್ನು ಒಡೆದು ಹಾಕಿದ್ದಲ್ಲದೆ ಪ್ರತಿಮೆಯ ತಲೆ ಭಾಗವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ರಾಮನ್ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ ಹರ್ಜೋತ್ ಸಿಂಗ್ ಮಾನ್ ತನಿಖೆಯನ್ನು ನಡೆಸುತ್ತಿದ್ದಾರೆ. ಈಗಾಗಲೇ ಪಾರ್ಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಕಿಡಿಗೇಡಿಗಳ ಈ ವಿಧ್ವಂಸಕ ಕೃತ್ಯಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕೃತ್ಯದ ಹಿಂದೆ ಯಾರೇ ಇದ್ದರೂ ಅವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಕೆನಡಾದ ಪ್ರಕರಣಕ್ಕೂ ಭಟಿಂಡಾ ವಿಗ್ರಹ ಧ್ವಂಸಕ್ಕೂ ಸಂಬಂಧವಿರಬಹುದು ಎಂದು ಊಹಿಸಲಾಗಿದೆ.
ಇದನ್ನು ಓದಿ| ಕೆನಡಾದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ವಿರೂಪ, ಖಲಿಸ್ತಾನಿಗಳ ಕೃತ್ಯ ಶಂಕೆ, ಭಾರತ ಆಕ್ರೋಶ