ನವ ದೆಹಲಿ: ಕಾಳಿ ಚಿತ್ರದ ಪೋಸ್ಟರ್ ಅನ್ನು ಸಮರ್ಥಿಸಿಕೊಂಡ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ತಮ್ಮ ಫೈರ್‌ಬ್ರಾಂಡ್ ಹೇಳಿಕೆಗಳನ್ನು ಮುಂದುವರಿಸಿದ್ದಾರೆ. ಬಿಜೆಪಿಯ ವಾಗ್ದಾಳಿ, ಪೊಲೀಸ್ ದೂರು ಇತ್ಯಾದಿಗಳು ತನ್ನನ್ನು ವಿಚಲಿತಗೊಳಿಸಲಾರವು ಎಂದಿದ್ದಾರೆ ಮೋಯಿತ್ರಾ.
ʻʻಬಿಜೆಪಿ ಇನ್ನಷ್ಟು ದಾಳಿ ಮಾಡಲಿ! ನಾನು ಕಾಳಿ ಆರಾಧಕಿ. ನಾನು ಯಾವುದಕ್ಕೂ ಅಂಜುವುದಿಲ್ಲ. ನಿಮ್ಮ ಅಜ್ಞಾನದ ಟೀಕೆಗಳಿಗೆ, ನಿಮ ಗೂಂಡಾಗಳಿಗೆ, ನಿಮ್ಮ ಪೊಲೀಸರಿಗೆ, ನಿಮ್ಮ ಟ್ರೋಲ್‌ಗಳಿಗೆ ನಾನು ಅಳುಕುವುದಿಲ್ಲ. ಸತ್ಯಕ್ಕೆ ಬೆಂಬಲವಾಗಿ ಭದ್ರತಾ ಪಡೆ ಬೇಕಿಲ್ಲʼʼ ಎಂದು ಮಹುವಾ ಕಿಡಿ ಕಾರಿದ್ದಾರೆ.
ʼʼಜೈ ಮಾ ಕಾಳಿ! ಬಂಗಾಳಿಗಳು ಪೂಜಿಸುವ ಮಹಾಕಾಳಿಯು ಭಯವಿಲ್ಲದವಳು ಹಾಗೂ ಯಾರನ್ನೂ ಓಲೈಸದವಳುʼʼ ಎಂದು ಟ್ವೀಟ್ ಮಾಡಿದ್ದಾರೆ ಮೋಯಿತ್ರಾ.
ಇದಕ್ಕೂ ಮುನ್ನ ಬುಧವಾರ ಅವರ ವಿರುದ್ಧ ಬಿಜೆಪಿ ನಾಯಕ ಜಿತೇಜ್ ಚಟರ್ಜಿ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ. ಲೀನಾ ಮಣಿಮೇಕಲೈ ಅವರ ʻಕಾಳಿʼ ಚಿತ್ರದ ಪೋಸ್ಟರ್‌ನಲ್ಲಿ ಸಿಗರೇಟು ಸೇವಿಸುತ್ತಿರುವ ಕಾಳಿಯ ಚಿತ್ರವನ್ನು ಸಮರ್ಥಿಸಿಕೊಂಡಿದ್ದ ಅವರು, ʼʼನನ್ನ ಪಾಲಿಗೆ ಕಾಳಿ ಎಂದರೆ ಮಾಂಸ ತಿನ್ನುವ, ಮದ್ಯ ಸೇವಿಸುವ ದೇವತೆʼʼ ಎಂದಿದ್ದರು. ಮಹುವಾ ಅವರ ಹೇಳಿಕೆ ಬಿಜೆಪಿಯಿಂದ ಕಟು ಟೀಕೆಗೆ ಒಳಗಾಗಿತ್ತು. ಹಿಂದೂ ದೇವತೆಯ ಅವಹೇಳನ ಮಾಡಿದ್ದಾರೆ ಎಂದು ಮಹುವಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಒಂದು ಸಮಾವೇಶದಲ್ಲಿ ಮಾತಾಡುತ್ತ ಅವರು, ʼʼನೀವು ಭೂತಾನ್ ಅಥವಾ ಸಿಕ್ಕಿಂಗೆ ಹೋದರೆ ಅಲ್ಲಿ ದೇವತೆಗಳಿಗೆ ಪೂಜೆ ಸಲ್ಲಿಸುವಾಗ ವಿಸ್ಕಿ ನೀಡುತ್ತಾರೆ. ಆದರೆ ಉತ್ತರಪ್ರದೇಶದಲ್ಲಿ ಇದನ್ನೇ ಹೋಗಿ ಹೇಳಿದರೆ ಧರ್ಮನಿಂದನೆ ಎನ್ನುತ್ತಾರೆ. ನನ್ನ ಪಾಲಿಗೆ ಕಾಳಿ ಎಂದರೆ ಮಾಂಸ ಸೇವಿಸುವ, ಆಲ್ಕೋಹಾಲ್ ಕುಡಿಯುವ ದೇವತೆ. ತಾರಾಪೀಠಕ್ಕೆ (ಪಶ್ಚಿಮ ಬಂಗಾಳದ ಶಕ್ತಿ ಧಾಮ) ಅಲ್ಲಿ ಸಾಧುಗಳು ಧೂಮಪಾನ ಮಾಡುತ್ತಾರೆ. ಇದು ಅಲ್ಲಿನವರ ಕಾಳಿ ಪೂಜಾವಿಧಾನ. ಹಿಂದೂಧರ್ಮದ ಒಳಗೆ ಒಬ್ಬ ಕಾಳಿ ಆರಾಧಕಿಯಾಗಿ, ನನಗೆ ಹಾಗೆ ಕಾಳಿಯನ್ನು ಕಲ್ಪಿಸಿಕೊಳ್ಳುವ ಹಕ್ಕಿದೆ, ಅದು ನನ್ನ ಸ್ವಾತಂತ್ರ್ಯʼʼ ಎಂದಿದ್ದರು.
ಇದನ್ನೂ ಓದಿ: ಕಾಳಿ ಪೋಸ್ಟರ್ ವಿವಾದ; ಟಿಎಂಸಿ ಟ್ವಿಟರ್ ಖಾತೆ ಅನ್‌ಫಾಲೋ ಮಾಡಿದ ಸಂಸದೆ ಮಹುವಾ ಮೊಯಿತ್ರಾ
ಅವರ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಟ್ರೋಲ್‌ಗಳು ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಮಹುವಾ ಟೀಕಿಸಿದ್ದರು. ಕನಿಷ್ಠ ಪಕ್ಷ 5 ಎಫ್‌ಐಆರ್‌ಗಳು ಅವರ ವಿರುದ್ಧ ದಾಖಲಾಗಿವೆ.
ಬಿಜೆಪಿ ಮಹವಾರನ್ನು ಕಟುವಾಗಿ ಟೀಕಿಸಿದ್ದಲ್ಲದೆ, ಇದು ತೃಣಮೂಲ ಪಕ್ಷದ ಅಧಿಕೃತ ನಿಲುವೇ ಎಂದು ಪ್ರಶ್ನಿಸಿತ್ತು. ಆದರೆ ಟಿಎಂಸಿ ಮಹುವಾ ಅವರಿಂದ ಈ ವಿಚಾರದಲ್ಲಿ ಅಂತರ ಕಾಪಾಡಿಕೊಂಡಿತು. ʼʼಮಹುವಾ ಅವರು ನೀಡಿದ ಹೇಳಿಕೆಗಳು ಪಕ್ಷದ ನಿಲುವು ಅಲ್ಲ. ಇಂಥ ಹೇಳಿಕೆಗಳನ್ನು ಪಕ್ಷ ಕಟುವಾಗಿ ಖಂಡಿಸುತ್ತದೆʼʼ ಎಂದು ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಸ್ಪಷ್ಟನೆ ನೀಡಲಾಯಿತು. ಪಕ್ಷದ ವಕ್ತಾರರು ಕೂಡ ಮಹುವಾ ಅವರನ್ನು ಖಂಡಿಸಿ ಹೇಳಿಕೆ ಕೊಟ್ಟಿದ್ದರು.
ಇದಾದ ಬಳಿಕ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಮಹುವಾ ಅನ್‌ಫಾಲೋ ಮಾಡಿದ್ದರು.
ಆದರೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರಿಂದ ಮಾತ್ರವೇ ಮಹುವಾ ಅವರಿಗೆ ಬೆಂಬಲ ವ್ಯಕ್ತವಾಗಿದೆ. ದೇಶದ ನಾನಾ ಕಡೆ ನಾನಾ ವಿಧದ ಪೂಜಾಕ್ರಮ ಪ್ರಚಲಿತದಲ್ಲಿದೆ. ಯಾರನ್ನೂ ನೋಯಿಸುವುದು ಮಹುವಾ ಅವರ ಉದ್ದೇಶ ಆಗಿರಲಿಕ್ಕಿಲ್ಲ. ಇಂದು ಧಾರ್ಮಿಕ ವಿಷಯಗಳಲ್ಲಿ ಯಾವ ಮಾತನ್ನೂ ಆಡಲು ಸಾಧ್ಯವಾಗದಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಅವರ ಮಾತನ್ನು ಹಗುರವಾಗಿ ತೆಗೆದುಕೊಳ್ಳಬೇಕುʼʼ ಎಂದಿದ್ದರು.
ಇದನ್ನೂ ಓದಿ: ಕಾಳಿ ಮಾಂಸ, ಮದ್ಯ ಸೇವಿಸುವ ದೇವಿ; ಉರಿಯುತ್ತಿರುವ ವಿವಾದಕ್ಕೆ ಸಂಸದೆ ಮಹುವಾ ಉರುವಲು !