Site icon Vistara News

Mahua Moitra: ಮಹುವಾ ಮೋಯಿತ್ರಾ ವಿರುದ್ಧ ಸರ್ಕಾರಿ ತನಿಖೆಗೆ ಸದನ ಸಮಿತಿ ಶಿಫಾರಸು

Mahua Moitra gets summoned by ed in FEMA probe

ಹೊಸದಿಲ್ಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (TMC MP Mahua Moitra) ಅವರನ್ನು ‘ಪ್ರಶ್ನೆ ಕೇಳಲು ಲಂಚ’ (Cash for Query) ಪಡೆದ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಲೋಕಸಭೆ ನೈತಿಕ ಸಮಿತಿಯ ಶಿಫಾರಸ್ಸಿನ ಮೇರೆಗೆ ಲೋಕಸಭೆಯಿಂದ ಉಚ್ಛಾಟನೆ ಮಾಡಲಾಗಿದ್ದು, ಮೊಯಿತ್ರಾ ಮತ್ತು ಉದ್ಯಮಿ ದರ್ಶನ್ ಹಿರಾನಂದಾನಿ ನಡುವಿನ ನಗದು ವಹಿವಾಟಿನ ಕುರಿತು ಪರಿಶೀಲಿಸಲು ಸರ್ಕಾರ ತನಿಖೆಯನ್ನು ಪ್ರಾರಂಭಿಸಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.

ಬಿಜೆಪಿ ಸಂಸದ ವಿನೋದ್ ಸೋಂಕರ್ ನೇತೃತ್ವದ ಲೋಕಸಭೆ ಸಮಿತಿಯು 502 ಪುಟಗಳ ವರದಿ ನೀಡಿದೆ. ಅದರಲ್ಲಿ ಮಹುವಾ ಅವರ ನಡವಳಿಕೆಯು ಅನೈತಿಕ, ಸದನದ ನಿಯಮಗಳ ಉಲ್ಲಂಘನೆ. ಇದು ರಾಷ್ಟ್ರೀಯ ಭದ್ರತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಿರಾನಂದಾನಿ ಜೊತೆಗೆ ಈ ವಿಚಾರಗಳನ್ನು ಹಂಚಿಕೊಳ್ಳಲು ಮಹುವಾ ನಗದು ಜೊತೆಗೆ ಇನ್ನೂ ಹಲವು ಕೊಡುಗೆಗಳನ್ನೂ ಸ್ವೀಕರಿಸಿದ್ದಾರೆ ಎಂದು ವರದಿಯು ಹೇಳಿದೆ.

ವರದಿಯು ಮೂರು ಅಂಶಗಳನ್ನು ಗಮನಿಸಿದೆ. ಒಂದು, “ಮೊಯಿತ್ರಾ ಅವರು ತಮ್ಮ ಲೋಕಸಭೆಯ ಸದಸ್ಯರ ಪೋರ್ಟಲ್‌ನ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್ ಅನ್ನು ಅನಧಿಕೃತ ವ್ಯಕ್ತಿಗೆ ಹಂಚಿಕೊಂಡಿದ್ದಾರೆ. ಈ ಅನೈತಿಕ ನಡವಳಿಕೆ ಮತ್ತು ಸದನದ ಅವಹೇಳನಕ್ಕಾಗಿ ತಪ್ಪಿತಸ್ಥರಾಗಿದ್ದಾರೆ. ಮಹುವಾ ಅವರದು ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಕ್ರಿಮಿನಲ್ ನಡವಳಿಕೆ. ಅದು ರಾಷ್ಟ್ರೀಯ ಭದ್ರತೆಯ ಮೇಲೂ ಸಹ ಪ್ರಭಾವ ಬೀರುತ್ತದೆ. ಈ ದೃಷ್ಟಿಯಿಂದ ಮೊಯಿತ್ರಾ ಅವರ ಮೇಲೆ ಕಾಲಮಿತಿಯಲ್ಲಿ ಭಾರತ ಸರ್ಕಾರದಿಂದ ತೀವ್ರವಾದ, ಕಾನೂನಾತ್ಮಕ ತನಿಖೆಗೆ ಸಮಿತಿ ಶಿಫಾರಸು ಮಾಡಿದೆʼʼ ಎಂದು ವರದಿ ಹೇಳಿದೆ.

ಎರಡು, ದುಬೈ ಮೂಲದ ಹಿರಾನಂದಾನಿಯಿಂದ ಹಣ ಮತ್ತು ಇತರ ಹಲವಾರು ಸೌಲಭ್ಯಗಳನ್ನು ಸ್ವೀಕರಿಸುವ ಮೂಲಕ ಮೊಯಿತ್ರಾ ಅವರು ಸಂಸತ್ತಿನ ಘನತೆಯನ್ನು ಕಳೆದಿದ್ದಾರೆ. ಮೊಯಿತ್ರಾ ಅವರು ನವೆಂಬರ್ 2ರಂದು ಸಮಿತಿಗೆ ಹೇಳಿದಂತೆ, ಅವರು ಹಲವು ಉಡುಗೊರೆಗಳನ್ನು ಹಿರಾನಂದಾನಿಯಿಂದ ಪಡೆದುಕೊಂಡಿದ್ದರು. ಹಿರಾನಂದಾನಿಯ ಕಾರನ್ನು ಬಳಸಿದ್ದಾರೆ ಮತ್ತು ಅವರ ಬಂಗಲೆಯ ಲೇಔಟ್ ಯೋಜನೆಗಳನ್ನು ಸಿದ್ಧಪಡಿಸಿದರು. ಹೇಳಿಕೆಗಳಲ್ಲಿ ವಿರೋಧಾಭಾಸವೂ ಇದೆ. ಈ ಉಡುಗೊರೆಗಳು ಮತ್ತು ಸೌಲಭ್ಯಗಳನ್ನು ಹಿರಾನಂದಾನಿ ನೀಡಿದ್ದಾರೆ ಎಂದು ಮಹುವಾ ಹೇಳಿದ್ದರು. ಆದರೆ, ಹಿರಾನಂದಾನಿ ನೀಡಿದ ಹೇಳಿಕೆಯಲ್ಲಿ, “ಮಹುವಾ ನನ್ನಲ್ಲಿ ಆಗಾಗ್ಗೆ ಬೇಡಿಕೆ ಮಂಡಿಸುತ್ತಿದ್ದರು ಮತ್ತು ನನ್ನಿಂದ ಹಲವಾರು ಅನುಕೂಲಗಳನ್ನು ಕೇಳುತ್ತಿದ್ದರು” ಎಂದಿದ್ದರು.

“ಮಹುವಾ ಮೊಯಿತ್ರಾ ಅವರು ಭಾರತದಲ್ಲಿ ಮತ್ತು ವಿವಿಧ ಭಾಗಗಳಿಗೆ ತನ್ನ ಪ್ರಯಾಣದ ವೆಚ್ಚ, ಸಾರಿಗೆ ವ್ಯವಸ್ಥೆ, ನಗದು, ದುಬಾರಿ ಐಷಾರಾಮಿ ವಸ್ತುಗಳು, ದೆಹಲಿಯಲ್ಲಿ ಅಧಿಕೃತವಾಗಿ ಮಂಜೂರಾದ ಬಂಗಲೆಯ ನವೀಕರಣಕ್ಕೆ ಧನಸಹಾಯ ಇತ್ಯಾದಿಗಳನ್ನು ಬೇಡಿ ಪಡೆದಿದ್ದಾರೆ. ಮೊಯಿತ್ರಾ ತನ್ನ ಅಧಿಕೃತ ಲಾಗಿನ್ ವಿವರ ಹಸ್ತಾಂತರಿಸಿರುವ ಉದ್ಯಮಿಯಿಂದ ಉಡುಗೊರೆ ಪಡೆದ ಬಳಿಕ ಆ ಉದ್ಯಮಿ ನೇರವಾಗಿ ಸಂಸದರ ಪೋರ್ಟಲ್ ನಿರ್ವಹಿಸಿ, ಸಂಸತ್ತಿಗೆ ಪ್ರಶ್ನೆಗಳನ್ನು ಪೋಸ್ಟ್ ಮಾಡುತ್ತಿದ್ದರು. ಇದು ಕಾನೂನುಬಾಹಿರ, ಅಯೋಗ್ಯ ಮಾತ್ರವಲ್ಲದೆ ಅನೈತಿಕ ನಡವಳಿಕೆ ಕೂಡ ಆಗಿದೆ” ಎಂದು ಸಮಿತಿ ಹೇಳಿದೆ.

ಮೂರು, ನಗದು ವಿನಿಮಯದ ವಿಚಾರದಲ್ಲಿ ಸಮಿತಿಯು ಕ್ರಿಮಿನಲ್ ತನಿಖೆ ಮತ್ತು ಹಣದ ಜಾಡುಗಳನ್ನು ಹಿಂಬಾಲಿಸಲು ಅಗತ್ಯವಾದ ಮೂಲವ್ಯವಸ್ಥೆಯನ್ನು ಹೊಂದಿಲ್ಲ. ಇದು ಕೇಂದ್ರ ಸರ್ಕಾರಿ ತನಿಖಾ ಸಂಸ್ಥೆಗಳ ಕಾರ್ಯ. ಆದ್ದರಿಂದ ಮಹುವಾ ಮೊಯಿತ್ರಾ ಮತ್ತು ದರ್ಶನ್ ಹಿರಾನಂದಾನಿ ನಡುವಿನ ನಗದು ವ್ಯವಹಾರವನ್ನು ಭಾರತ ಸರ್ಕಾರವು ಕಾಲಮಿತಿಯಲ್ಲಿ ತನಿಖೆ ನಡೆಸಬಹುದು” ಎಂದು ಶಿಫಾರಸು ಮಾಡಿದೆ.

ಇದನ್ನೂ ಓದಿ: Mahua Moitra: ಪ್ರಶ್ನೆ ಕೇಳಲು ಲಂಚ; ತೃಣಮೂಲ ಸಂಸದೆ ಮಹುವಾ ಮೋಯಿತ್ರಾ ಲೋಕಸಭೆಯಿಂದ ಉಚ್ಚಾಟನೆ

Exit mobile version