Site icon Vistara News

Mahua Moitra: ಪ್ರಶ್ನೆ ಕೇಳಲು ಲಂಚ; ತೃಣಮೂಲ ಸಂಸದೆ ಮಹುವಾ ಮೋಯಿತ್ರಾ ಲೋಕಸಭೆಯಿಂದ ಉಚ್ಚಾಟನೆ

mahua moitra

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್‌ ಸಂಸದೆ (Trinamool MP) ಮಹುವಾ ಮೊಯಿತ್ರಾ (Mahua Moitra) ಅವರನ್ನು ʼಪ್ರಶ್ನೆಗಾಗಿ ಲಂಚʼ (cash for query scam) ಪಡೆದ ಪ್ರಕರಣಕ್ಕೆ ಸಂಬಂಧಿಸಿ ಲೋಕಸಭೆಯಿಂದ ಉಚ್ಚಾಟಿಸಲಾಗಿದೆ.

ವರದಿ ಮಂಡನೆ ಬಳಿಕ ಚರ್ಚೆಯ ವೇಳೆ ಮಹುವಾ ಮೊಯಿತ್ರಾ ಅವರು ತೃಣಮೂಲ ಪಕ್ಷದ ಪರವಾಗಿ ಮಾತಾಡಲು ಅವಕಾಶ ನೀಡುವಂತೆ ತೃಣಮೂಲ ಕಾಂಗ್ರೆಸ್‌ ಮನವಿ ಮಾಡಿದರೂ ಸ್ಪೀಕರ್‌ ಅವಕಾಶ ಕೊಡಲಿಲ್ಲ. ಮಹುವಾ ಮೊಯಿತ್ರಾ ಅವರ ಉಚ್ಚಾಟನೆಯ ಕುರಿತು ಮತದಾನ ನಡೆದು, ಬಿಜೆಪಿ ಸದಸ್ಯರು ಅದರ ಪರವಾಗಿ ಮತ ಚಲಾಯಿಸಿದರು. ವರದಿಯನ್ನು ಸದನ ಅಂಗೀಕರಿಸಿತು.

ಉಚ್ಚಾಟನೆಯ ಬಳಿಕ ಮೋಯಿತ್ರಾ ಲೋಕಸಭೆಯ (lok sabha) ಹೊರಗೆ ತಮ್ಮ ಹೇಳಿಕೆ ಓದಿದರು. “ಇದು ಕಾಂಗರೂ ನ್ಯಾಯಾಲಯದ ನಡವಳಿಕೆ. ನಾನು ಲಂಚ ಪಡೆದಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಲಂಚ ನೀಡಿದ್ದಾರೆ ಎನ್ನಲಾದ ದರ್ಶನ್ ಹಿರಾನಂದಾನಿಯನ್ನೂ ಸಮಿತಿ ವಿಚಾರಿಸಿಲ್ಲ. ಎಲ್ಲಿಯೂ ಯಾವುದೇ ಲಂಚ, ಯಾವುದೇ ಉಡುಗೊರೆಯ ಪುರಾವೆ ಇಲ್ಲ. ನಾನು ನನ್ನ ಲಾಗಿನ್ ಅನ್ನು ಹಂಚಿಕೊಂಡಿದ್ದೇನೆ ಅಷ್ಟೇ. ಅದೊಂದೇ ದೂರಿನ ಆಧಾರದ ಮೇಲೆ ಮಾತ್ರ ಹೊರಹಾಕುವಿಕೆಯ ಶಿಫಾರಸು ಮಾಡಲಾಗಿದೆ. ಆದರೆ ಲಾಗಿನ್‌ ಹಂಚಿಕೊಳ್ಳುವಿಕೆ ವಿಷಯದಲ್ಲಿ ಯಾವುದೇ ನಿಯಮವಿಲ್ಲʼʼ ಎಂದು ಮಹುವಾ ಮೊಯಿತ್ರಾ ಹೇಳಿದರು.

ಇಂದು ಮುಂಜಾನೆ ಸದನ ನೈತಿಕ ಸಮಿತಿಯು ಅವರನ್ನು ಸದನದಿಂದ ಉಚ್ಚಾಟಿಸಲು ಶಿಫಾರಸು ಮಾಡಿ ವರದಿ ನೀಡಿತ್ತು. ವರದಿಯನ್ನು ವಿರೋಧಿಸಿ ತೃಣಮೂಲ ಕಾಂಗ್ರೆಸ್‌ ಸದಸ್ಯರು ಮತ್ತು ಕಾಂಗ್ರೆಸ್‌ನ ಹಲವು ಸಂಸದರು ಗದ್ದಲ ಎಬ್ಬಿಸಿದ್ದರು. ವಿರೋಧ ಪಕ್ಷದ ಸಂಸದರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತೃಣಮೂಲ ಕಾಂಗ್ರೆಸ್‌ ಪಕ್ಷದ ಸಂಸದರು ಸದನದ ಬಾವಿಗೆ ಇಳಿದು ಗದ್ದಲ ಎಬ್ಬಿಸಿದರು. ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿತ್ತು.

“ಮಹುವಾ ಮೊಯಿತ್ರಾ ಅವರ ನಡೆ ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಕ್ರಿಮಿನಲ್” ಎಂದು ಸಮಿತಿಯ ವರದಿ ಘೋಷಿಸಿದೆ. ಇಂದು ಮುಂಜಾನೆ ಕಲಾಪ ಆರಂಭವಾಗುವ ಮುನ್ನ ಮಹುವಾ ಮೋಯಿತ್ರಾ ಸಂಸತ್ತಿನ ಹೊರಗೆ ನೀಡಿದ ಹೇಳಿಕೆಯಲ್ಲಿ, “ತಾಯಿ ದುರ್ಗೆ ಬಂದಿದ್ದಾಳೆ. ನೀವು ಈಗ ನೋಡಬಹುದು, ವಿನಾಶದ ಕ್ಷಣ ಬಂದಾಗ ಆತ್ಮಸಾಕ್ಷಿಯು ಮೊದಲು ಸಾಯುತ್ತದೆ. ಅವರು ʼವಸ್ತ್ರಾಪಹರಣ’ ಪ್ರಾರಂಭಿಸಿದ್ದಾರೆ. ಇನ್ನು ನೀವು ಮಹಾಭಾರತದ ಯುದ್ಧವನ್ನು ನೋಡುತ್ತೀರಿ” ಎಂದು ಹೇಳಿದ್ದರು.

ತೃಣಮೂಲ ಸಂಸದರ ದಾಳಿ ಎದುರಿಸಲು ಚೆನ್ನಾಗಿಯೇ ಪೂರ್ವಸಿದ್ಧತೆ ಮಾಡಿಕೊಂಡಿದ್ದ ಬಿಜೆಪಿ ಸಂಸದರಿಗೆ ಮೂರು ಸಾಲಿನ ವಿಪ್ ನೀಡಿತ್ತು.

49 ವರ್ಷದ ಮಹುವಾ ಮೊಯಿತ್ರಾ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು ₹2 ಕೋಟಿ ನಗದು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದಾರೆ. ಮೊಯಿತ್ರಾ ಅವರು ತಮ್ಮ ಸಂಸತ್ತಿನ ಲಾಗ್-ಇನ್ ವಿವರಗಳನ್ನು ಉದ್ಯಮಿ ದರ್ಶನ್ ಹಿರಾನಂದಾನಿಗೆ ಒಪ್ಪಿಸಿದ್ದಾರೆ. ಅವರು ಲಂಚವನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಮೊಯಿತ್ರಾ ಲಾಗಿನ್‌ ವಿವರ ನೀಡಿದ್ದನ್ನು ಮೋಯಿತ್ರಾ ಒಪ್ಪಿಕೊಂಡಿದ್ದಾರೆ. ಇದು ಸಂಸದರಲ್ಲಿ ಸಾಮಾನ್ಯ ಅಭ್ಯಾಸ ಎಂದು ವಾದಿಸಿದ್ದಾರೆ.

ಬಂಗಾಳದ ನಾಯಕಿಯ ವಿರುದ್ಧದ ಆರೋಪಗಳ ತನಿಖೆಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ನೈತಿಕ ಸಮಿತಿಯು ವಿಚಾರಣೆ ನಡೆಸಿದ್ದು, 6:4 ಬಹುಮತದಲ್ಲಿ ಉಚ್ಚಾಟನೆ ನಿರ್ಧಾರ ತೆಗೆದುಕೊಂಡಿತ್ತು.

ವಿಚಾರಣೆಯ ಬಗ್ಗೆಯೂ ವಿವಾದ ಎದ್ದಿತ್ತು. ನವೆಂಬರ್ 2ರಂದು ಮೊಯಿತ್ರಾ ವಿಚಾರಣೆಯಿಂದ ಹೊರನಡೆದಿದ್ದರು. ತನ್ನ ಮತ್ತು ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರೈ ಅವರೊಂದಿಗಿನ ಸಂಬಂಧದ ಬಗ್ಗೆ ʼಕೊಳಕು ಪ್ರಶ್ನೆಗಳನ್ನು ಕೇಳಲಾಗಿದೆʼ ಎಂದು ಆರೋಪಿಸಿದ್ದರು. ಈ ಬಗ್ಗೆ CBI ತನಿಖೆ ನಡೆದಿದೆ. ಮೊಯಿತ್ರಾ ವಿಚಾರಣೆಗೆ ಸಹಕರಿಸಲಿಲ್ಲ ಮತ್ತು ಕಠಿಣ ಪ್ರಶ್ನೆಗಳನ್ನು ಎದುರಿಸುವುದನ್ನು ತಪ್ಪಿಸಲು ನಾಟಕೀಯವಾಗಿ ನಿರ್ಗಮಿಸಿದರು ಎಂದು ಸಮಿತಿ ಅಧ್ಯಕ್ಷ ವಿನೋದ್ ಸೋಂಕರ್ ಹೇಳಿದ್ದಾರೆ.

ಅಂತಿಮವಾಗಿ, ಆರು ಸದಸ್ಯರ ಸಮಿತಿಯಲ್ಲಿ ನಾಲ್ಕು ಮಂದಿ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸಲು ಮತ ಹಾಕಿದ್ದರು. ಅವರಲ್ಲಿ ಕಾಂಗ್ರೆಸ್ ಸಂಸದೆ ಪ್ರಣೀತ್ ಕೌರ್ ಅವರೂ ಇದ್ದಾರೆ. ವರದಿ 500 ಪುಟಗಳಷ್ಟಿದೆ. ಕೌರ್‌ ಅವರನ್ನು ಈ ಹಿಂದೆ ʼಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ’ ಕಾಂಗ್ರೆಸ್‌ನಿಂದ ಅಮಾನತುಗೊಳಿಸಲಾಗಿತ್ತು.

ನೈತಿಕ ಸಮಿತಿಯ ಸದಸ್ಯರೂ ಸೇರಿದಂತೆ ಹಲವಾರು ವಿಪಕ್ಷ ಸಂಸದರು ಮೋಯಿತ್ರಾ ಪರವಾಗಿ ಮಾತನಾಡಿದ್ದಾರೆ. ಅವರು ವರದಿಯನ್ನು “ಫಿಕ್ಸ್ಡ್ ಮ್ಯಾಚ್” ಎಂದು ಘೋಷಿಸಿದ್ದಾರೆ. ಬಿಜೆಪಿಯ ಆರೋಪಗಳನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. ವಿಚಾರಣೆಯ ಆರಂಭಿಕ ಹಂತಗಳಲ್ಲಿ ಮೌನವಾಗಿದ್ದ ತೃಣಮೂಲ ಕಾಂಗ್ರೆಸ್‌, ನಂತರ ತನ್ನ ಸಂಸದೆಯನ್ನು ಸಮರ್ಥಿಸಿಕೊಂಡಿದೆ.

ತೃಣಮೂಲ ಮುಖ್ಯಸ್ಥೆ ಮತ್ತು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು “ಮೊಯಿತ್ರಾ ಅವರನ್ನು ಉಚ್ಚಾಟಿಸಲು ಬಿಜೆಪಿ ಸಂಚು ಹೂಡಿದೆ. ಯಾಕೆಂದರೆ ಆಕೆ ಆಡಳಿತ ಪಕ್ಷದ ಉಗ್ರ ಟೀಕಾಕಾರ್ತಿಯಾಗಿದ್ದಾಳೆ. ಆದರೆ ಇದು ಲೋಕಸಭೆ ಚುನಾವಣೆಯಲ್ಲಿ ಆಕೆಯ ಪರವಾಗಲಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Cash for Query Case: ಸಂಸತ್ತಿನಿಂದ ಮಹುವಾ ಉಚ್ಚಾಟಿಸಲು ಸಮಿತಿಯಿಂದ 6:4 ಶಿಫಾರಸು!

Exit mobile version