Site icon Vistara News

Mahua Moitra: ಲೋಕಸಭೆಯಿಂದ ಉಚ್ಚಾಟನೆ; ಸರ್ಕಾರಿ ಬಂಗಲೆ ಖಾಲಿ ಮಾಡಿದ ಟಿಎಂಸಿ ನಾಯಕಿ

Mahua Moitra

Mahua Moitra

ನವದೆಹಲಿ: ತೃಣಮೂಲ ಕಾಂಗ್ರೆಸ್‌ (Trinamool Congress) ನಾಯಕಿ ಮಹುವಾ ಮೊಯಿತ್ರಾ (Mahua Moitra) ಶುಕ್ರವಾರ (ಜನವರಿ 19) ಸರ್ಕಾರಿ ಬಂಗಲೆ ತೊರೆದಿದ್ದಾರೆ. ಸರ್ಕಾರಿ ನಿವಾಸವನ್ನು ತೆರವು ಮಾಡುವಂತೆ ನೀಡಲಾದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮಹುವಾ ಕೋರಿದ್ದರು. ಆದರೆ ಅವರ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ (Delhi High court) ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸರ್ಕಾರಿ ಬಂಗಲೆ ತೊರೆದಿದ್ದಾರೆ. ಕಳೆದ ತಿಂಗಳು ಲೋಕಸಭೆ ಸದಸ್ಯತ್ವದಿಂದ ಉಚ್ಚಾಟನೆಗೊಂಡಿದ್ದ ಮಹುವಾ ಅವರಿಗೆ, ಈ ಕೂಡಲೇ ಅಧಿಕೃತ ಬಂಗಲೆ ತೆರವುಗೊಳಿಸಲು ಡೈರೆಕ್ಟೊರೇಟ್ ಆಫ್ ಎಸ್ಟೇಟ್ಸ್ (ಡಿಒಇ) ನೋಟಿಸ್ ನೀಡಿತ್ತು.

ಶುಕ್ರವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಮೊಯಿತ್ರಾ ಅವರು ಮನೆಯನ್ನು ಸಂಪೂರ್ಣವಾಗಿ ಖಾಲಿ ಮಾಡಿದ್ದಾರೆ ಎಂದು ಅವರ ವಕೀಲ ಶಾದನ್ ಫರಾಸತ್ ತಿಳಿಸಿದ್ದಾರೆ. “ಮಹುವಾ ಮೊಯಿತ್ರಾ ಅವರು ವಾಸಿಸುತ್ತಿದ್ದ ಮನೆ ಸಂಖ್ಯೆ 9 ಬಿ ಟೆಲಿಗ್ರಾಫ್ ಲೇನ್ ಅನ್ನು ಇಂದು ಬೆಳಗ್ಗೆ ಸಂಪೂರ್ಣವಾಗಿ ಖಾಲಿ ಮಾಡಿ ಬಂಗಲೆಯ ಸ್ವಾಧೀನವನ್ನು ಎಸ್ಟೇಟ್ ನಿರ್ದೇಶನಾಲಯಕ್ಕೆ ಹಸ್ತಾಂತರಿಸಲಾಗಿದೆ. ಅಧಿಕಾರಿಗಳು ಬರುವ ಮೊದಲೇ ಆವರಣವನ್ನು ಖಾಲಿ ಮಾಡಲಾಗಿತ್ತು. ಯಾವುದೇ ʼತೆರವುʼ ನಡೆದಿಲ್ಲ” ಎಂದು ವಕೀಲರು ಹೇಳಿದ್ದಾರೆ. ಸರ್ಕಾರಿ ಬಂಗಲೆಯಿಂದ ಮಹುವಾ ಮೊಯಿತ್ರಾ ಅವರನ್ನು ತೆರವುಗೊಳಿಸಲು ಡಿಇಒ ಶುಕ್ರವಾರ ಅಧಿಕಾರಿಗಳ ತಂಡವೊಂದನ್ನು ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ವಕೀಲರು ಸ್ಪಷ್ಟನೆ ನೀಡಿದ್ದಾರೆ.

ಕೋರ್ಟ್‌ ಹೇಳಿದ್ದೇನು?

ʼʼಲೋಕಸಭಾ ಸದಸ್ಯತ್ವದ ಕಾರಣದಿಂದಾಗಿ ಬಂಗಲೆಯನ್ನು ಮಹುವಾ ಮೊಯಿತ್ರಾ ಅವರಿಗೆ ಮಂಜೂರು ಮಾಡಲಾಗಿತ್ತು. ಆದರೆ ಸದ್ಯ ಅವರನ್ನು ಲೋಕಸಭೆಯಿಂದ ಉಚ್ಚಾಟನೆಗೊಳಿಸಿರುವ ಕಾರಣ ಅವರು ಸರ್ಕಾರಿ ಬಂಗಲೆಯಲ್ಲಿ ಮುಂದುವರಿಯುವ ಹಕ್ಕನ್ನು ಹೊಂದಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.

ಏನಿದು ಪ್ರಕರಣ?

49 ವರ್ಷದ ಮಹುವಾ ಮೊಯಿತ್ರಾ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು 2 ಕೋಟಿ ರೂ. ನಗದು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದಾರೆ. ಮೊಯಿತ್ರಾ ಅವರು ತಮ್ಮ ಸಂಸತ್ತಿನ ಲಾಗ್-ಇನ್ ವಿವರಗಳನ್ನು ಉದ್ಯಮಿ ದರ್ಶನ್ ಹಿರಾನಂದಾನಿಗೆ ಒಪ್ಪಿಸಿದ್ದಾರೆ. ಅವರು ಲಂಚವನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಲಾಗಿನ್‌ ವಿವರ ನೀಡಿದ್ದನ್ನು ಮೋಯಿತ್ರಾ ಒಪ್ಪಿಕೊಂಡಿದ್ದರು. ಅಲ್ಲದೆ ಇದು ಸಂಸದರಲ್ಲಿ ಸಾಮಾನ್ಯ ಅಭ್ಯಾಸ ಎಂದು ವಾದಿಸಿದ್ದರು. ಆರು ಸದಸ್ಯರ ಸಮಿತಿಯಲ್ಲಿ ನಾಲ್ಕು ಮಂದಿ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸಲು ಮತ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಡಿಸೆಂಬರ್ 8, 2023ರಂದು ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು.

ಇದನ್ನೂ ಓದಿ: Mahua Moitra: ವಸತಿ ತೆರವು ಆದೇಶಕ್ಕಿಲ್ಲ ತಡೆ, ಮಹುವಾ ಮೋಯಿತ್ರಾಗೆ ದಿಲ್ಲಿ ಹೈಕೋರ್ಟ್‌ನಲ್ಲೂ ಹಿನ್ನಡೆ

ತಮ್ಮನ್ನು ಪದಚ್ಯುತಗೊಳಿಸುವಂತೆ ಶಿಫಾರಸು ಮಾಡಿದ ನೈತಿಕ ಸಮಿತಿಯ ವರದಿಯನ್ನು ಲೋಕಸಭೆಯು ಅಂಗೀಕರಿಸಿದ ನಂತರ ಮಹುವಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಉಚ್ಚಾಟನೆಯನ್ನು ಪ್ರಶ್ನಿಸಿದ್ದರು. ಸುಪ್ರೀಂ ಕೋರ್ಟ್‌ ಈ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನನ್ನ ಉಚ್ಚಾಟನೆಯ ಸಿಂಧುತ್ವವು ಸರ್ವೋಚ್ಚ ನ್ಯಾಯಾಲಯದ ಮುಂದೆ ತೀರ್ಪಿಗೆ ಬಾಕಿಯಿರುವುದರಿಂದ ವಸತಿ ತೆರವು ಆದೇಶವನ್ನು ರದ್ದುಪಡಿಸಬೇಕು ಎಂದು ಮಹುವಾ ಅವರು ದಿಲ್ಲಿ ಹೈ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version