Site icon Vistara News

ತೃಣಮೂಲ ಸಂಸದೆ ಮಹುವಾ ಮೋಯಿತ್ರಾ ಉಚ್ಚಾಟನೆಗೆ ಸದನ ಸಮಿತಿ ಶಿಫಾರಸು, ಪ್ರತಿಪಕ್ಷ ಗದ್ದಲ

Supreme Court issue notice to lok sabha secretary about Mahua Moitra expulsion

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್‌ ಸಂಸದೆ (TMC MP) ಮಹುವಾ ಮೊಯಿತ್ರಾ (Mahua Moitra) ವಿರುದ್ಧದ ʼಪ್ರಶ್ನೆಗಾಗಿ ಲಂಚʼ ಪಡೆದ ಪ್ರಕರಣದ ಕುರಿತು ಸದನ ನೈತಿಕ ಸಮಿತಿಯ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಮೊಯಿತ್ರಾ ಅವರನ್ನು ಉಚ್ಚಾಟಿಸುವಂತೆ ವರದಿ ಶಿಫಾರಸು ಮಾಡಿದ್ದು, ವಿಪಕ್ಷಗಳು ಈ ಬಗ್ಗೆ ಸದನದಲ್ಲಿ ಕೋಲಾಹಲ ಎಬ್ಬಿಸಿವೆ.

ನೈತಿಕ ಸಮಿತಿಯ ಈ ವರದಿಯು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ನಡೆಯುತ್ತಿರುವ ತಿಕ್ಕಾಟವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದೆ. ವರದಿಯ ಮಂಡನೆ ನಂತರ ಲೋಕಸಭೆ ಕಲಾಪದಲ್ಲಿ ಭಾರಿ ಗದ್ದಲ ಉಂಟಾಯಿತು. ವಿರೋಧ ಪಕ್ಷದ ಸಂಸದರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತೃಣಮೂಲ ಕಾಂಗ್ರೆಸ್‌ ಪಕ್ಷದ ಸಂಸದರು ಸದನದ ಬಾವಿಗೆ ಇಳಿದು ಗದ್ದಲ ಎಬ್ಬಿಸಿದರು. ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಮಹುವಾ ಮೊಯಿತ್ರಾ ಅವರ ನಡೆ “ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಕ್ರಿಮಿನಲ್” ಎಂದು ಸಮಿತಿಯ ವರದಿ ಘೋಷಿಸಿದೆ. ವರದಿಯ ಪರವಾಗಿ ಸದನವು ಮತ ​​ಚಲಾಯಿಸಿದರೆ ಮೋಯಿತ್ರಾ ಅವರನ್ನು ಸಂಸತ್‌ ಸದಸ್ಯತ್ವದಿಂದ ಉಚ್ಚಾಟಿಸಬಹುದಾಗಿದೆ.

ಇಂದು ಮುಂಜಾನೆ ಕಲಾಪ ಆರಂಭವಾಗುವ ಮುನ್ನ ಮಹುವಾ ಮೋಯಿತ್ರಾ ಆತ್ಮವಿಶ್ವಾಸದಿಂದ ಸಂಸತ್ತಿಗೆ ಆಗಮಿಸಿದ್ದು, ಸಂಸತ್ತಿನ ಮುಂದೆ ಮಾಧ್ಯಮಗಳ ಮುಂದೆ, “ತಾಯಿ ದುರ್ಗೆ ಬಂದಿದ್ದಾಳೆ. ನೀವು ಈಗ ನೋಡಬಹುದು, ವಿನಾಶದ ಕ್ಷಣ ಬಂದಾಗ ಆತ್ಮಸಾಕ್ಷಿಯು ಮೊದಲು ಸಾಯುತ್ತದೆ. ಅವರು ʼವಸ್ತ್ರಾಪಹರಣ’ ಪ್ರಾರಂಭಿಸಿದ್ದಾರೆ. ಇನ್ನು ನೀವು ಮಹಾಭಾರತದ ಯುದ್ಧವನ್ನು ನೋಡುತ್ತೀರಿ” ಎಂದು ಹೇಳಿದರು.

ಬಿಜೆಪಿ ಕೂಡ ಮೋಯಿತ್ರಾ ಹಾಗೂ ತೃಣಮೂಲ ಸಂಸದರ ದಾಳಿ ಎದುರಿಸಲು ಚೆನ್ನಾಗಿಯೇ ಪೂರ್ವಸಿದ್ಧತೆ ಮಾಡಿಕೊಂಡಿದೆ. ಬಿಜೆಪಿ ಸಂಸದರಿಗೆ ಮೂರು ಸಾಲಿನ ವಿಪ್ ನೀಡಲಾಗಿದೆ. ಇದರರ್ಥ ಎಲ್ಲರೂ ಹಾಜರಿದ್ದು ಪಕ್ಷದ ನಿಲುವಿಗೆ ಸ್ಥಾನಕ್ಕೆ ಅನುಗುಣವಾಗಿ ಮತ ಚಲಾಯಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಡಿಸೆಂಬರ್ 22ರಂದು ಮುಕ್ತಾಯಗೊಳ್ಳುವ ಸಂಸತ್ತಿನ ಈ ಅಧಿವೇಶನದ ಆರಂಭಿಕ ದಿನವಾದ ಸೋಮವಾರ ವರದಿಯನ್ನು ಮಂಡಿಸಬೇಕಿತ್ತು.

ಅಂತಿಮವಾಗಿ ಇಂದು ಮಂಡನೆಯಾಗಿದ್ದು, ವಿಸ್ತೃತ ಚರ್ಚೆಗೆ ಒತ್ತಾಯಿಸುವುದಾಗಿ ಪ್ರತಿಪಕ್ಷಗಳು ಹೇಳಿವೆ. ನೈತಿಕ ಸಮಿತಿಯ ಸದಸ್ಯರಲ್ಲೊಬ್ಬರಾದ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, “ವರದಿಯನ್ನು ಮಂಡಿಸಿದರೆ, ನಾವು ಪೂರ್ಣ ಪ್ರಮಾಣದ ಚರ್ಚೆಗೆ ಒತ್ತಾಯಿಸುತ್ತೇವೆ. ವರದಿ ಕರಡನ್ನು ಎರಡುವರೆ ನಿಮಿಷದಲ್ಲಿ ಅಂಗೀಕರಿಸಲಾಗಿದೆʼʼ ಎಂದು ಹೇಳಿದ್ದು, ಬಿಜೆಪಿ ನೇತೃತ್ವದ ಸಮಿತಿ ವರದಿಯನ್ನು ಮಂಡಿಸಲು ಆತುರದಲ್ಲಿತ್ತು ಎಂದಿದ್ದಾರೆ.

49 ವರ್ಷದ ಮಹುವಾ ಮೊಯಿತ್ರಾ ಅವರು ನರೇಂದ್ರ ಮೋದಿ (PM Narendra Modi) ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು ₹2 ಕೋಟಿ ನಗದು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದಾರೆ. ಅವರು ಆರೋಪಗಳನ್ನು ನಿರಾಕರಿಸಿದ್ದಾರೆ. ಮೊಯಿತ್ರಾ ಅವರು ತಮ್ಮ ಸಂಸತ್ತಿನ ಲಾಗ್-ಇನ್ ವಿವರಗಳನ್ನು ಉದ್ಯಮಿ ದರ್ಶನ್ ಹಿರಾನಂದಾನಿಗೆ ಒಪ್ಪಿಸಿದ್ದಾರೆ. ಅವರು ಲಂಚವನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಮೊಯಿತ್ರಾ ಲಾಗಿನ್‌ ವಿವರ ನೀಡಿದ್ದನ್ನು ಮೋಯಿತ್ರಾ ಒಪ್ಪಿಕೊಂಡಿದ್ದಾರೆ. ಇದು ಸಂಸದರಲ್ಲಿ ಸಾಮಾನ್ಯ ಅಭ್ಯಾಸ ಎಂದು ವಾದಿಸಿದ್ದಾರೆ.

ಬಂಗಾಳದ ನಾಯಕಿಯ ವಿರುದ್ಧದ ಆರೋಪಗಳು ಬಿಜೆಪಿಯಿಂದ ಉಗ್ರ ಪ್ರತಿಭಟನೆಯನ್ನು ಕೆರಳಿಸಿದ್ದವು. ಸಂಸದ ನಿಶಿಕಾಂತ್ ದುಬೆ ಅವರು ತನಿಖೆಗೆ ಮನವಿ ಮಾಡಿದ್ದರು. ತನಿಖೆ ಆರಂಭಿಸುವಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ನೈತಿಕ ಸಮಿತಿಯು ವಿಚಾರಣೆ ನಡೆಸಿದ್ದು, 6:4 ಬಹುಮತದಲ್ಲಿ ಉಚ್ಚಾಟನೆ ನಿರ್ಧಾರ ತೆಗೆದುಕೊಂಡಿತ್ತು.

ವಿಚಾರಣೆಯ ಬಗ್ಗೆಯೂ ವಿವಾದ ಎದ್ದಿತ್ತು. ನವೆಂಬರ್ 2ರಂದು ಮೊಯಿತ್ರಾ ವಿಚಾರಣೆಯಿಂದ ಹೊರನಡೆದಿದ್ದರು. ತನ್ನ ಮತ್ತು ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರೈ ಅವರೊಂದಿಗಿನ ಸಂಬಂಧದ ಬಗ್ಗೆ ʼಕೊಳಕು ಪ್ರಶ್ನೆಗಳನ್ನು ಕೇಳಲಾಗಿದೆʼ ಎಂದು ಆರೋಪಿಸಿದ್ದರು. ಈ ಬಗ್ಗೆ CBI ತನಿಖೆ ನಡೆದಿದೆ. ಮೊಯಿತ್ರಾ ವಿಚಾರಣೆಗೆ ಸಹಕರಿಸಲಿಲ್ಲ ಮತ್ತು ಕಠಿಣ ಪ್ರಶ್ನೆಗಳನ್ನು ಎದುರಿಸುವುದನ್ನು ತಪ್ಪಿಸಲು ನಾಟಕೀಯವಾಗಿ ನಿರ್ಗಮಿಸಿದರು ಎಂದು ಸಮಿತಿ ಅಧ್ಯಕ್ಷ ವಿನೋದ್ ಸೋಂಕರ್ ಹೇಳಿದ್ದಾರೆ.

ಅಂತಿಮವಾಗಿ, ಆರು ಸದಸ್ಯರ ಸಮಿತಿಯಲ್ಲಿ ನಾಲ್ಕು ಮಂದಿ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸಲು ಮತ ಹಾಕಿದ್ದರು. ಅವರಲ್ಲಿ ಕಾಂಗ್ರೆಸ್ ಸಂಸದೆ ಪ್ರಣೀತ್ ಕೌರ್ ಅವರೂ ಇದ್ದಾರೆ. ವರದಿ 500 ಪುಟಗಳಷ್ಟಿದೆ. ಕೌರ್‌ ಅವರನ್ನು ಈ ಹಿಂದೆ ʼಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ’ ಕಾಂಗ್ರೆಸ್‌ನಿಂದ ಅಮಾನತುಗೊಳಿಸಲಾಗಿತ್ತು.

ನೈತಿಕ ಸಮಿತಿಯ ಸದಸ್ಯರೂ ಸೇರಿದಂತೆ ಹಲವಾರು ವಿಪಕ್ಷ ಸಂಸದರು ಮೋಯಿತ್ರಾ ಪರವಾಗಿ ಮಾತನಾಡಿದ್ದಾರೆ. ಅವರು ವರದಿಯನ್ನು “ಫಿಕ್ಸ್ಡ್ ಮ್ಯಾಚ್” ಎಂದು ಘೋಷಿಸಿದ್ದಾರೆ. ಬಿಜೆಪಿಯ ಆರೋಪಗಳನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. ವಿಚಾರಣೆಯ ಆರಂಭಿಕ ಹಂತಗಳಲ್ಲಿ ಮೌನವಾಗಿದ್ದ ತೃಣಮೂಲ ಕಾಂಗ್ರೆಸ್‌, ನಂತರ ತನ್ನ ಸಂಸದೆಯನ್ನು ಸಮರ್ಥಿಸಿಕೊಂಡಿದೆ.

ತೃಣಮೂಲ ಮುಖ್ಯಸ್ಥೆ ಮತ್ತು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು “ಮೊಯಿತ್ರಾ ಅವರನ್ನು ಉಚ್ಚಾಟಿಸಲು ಬಿಜೆಪಿ ಸಂಚು ಹೂಡಿದೆ. ಯಾಕೆಂದರೆ ಆಕೆ ಆಡಳಿತ ಪಕ್ಷದ ಉಗ್ರ ಟೀಕಾಕಾರ್ತಿಯಾಗಿದ್ದಾಳೆ. ಆದರೆ ಇದು ಲೋಕಸಭೆ ಚುನಾವಣೆಯಲ್ಲಿ ಆಕೆಯ ಪರವಾಗಲಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Mahua Moitra: ನೀತಿ ಸಮಿತಿ ಮುಂದೆ ಹಾಜರಾದ ಟಿಎಂಸಿ ಸಂಸದೆ ಮಹಿವಾ ಮೋಯಿತ್ರಾ; ಆಕೆಯ ಮಾಜಿ ಸಂಗಾತಿ ಹೇಳಿದ್ದೇನು?

Exit mobile version