Site icon Vistara News

Mahua Moitra: ಲೋಕಸಭೆಯಿಂದ ಅಮಾನತು ಪ್ರಶ್ನಿಸಿ ಸುಪ್ರೀಂ ಕೋರ್ಟ್​​ ಕದ ತಟ್ಟಿದ ಮಹುವಾ

Mahua Moitra

Mahua Moitra

ನವದೆಹಲಿ: ‘ಪ್ರಶ್ನೆ ಕೇಳಲು ಲಂಚ’ (Cash for Query) ಪಡೆದ ಪ್ರಕರಣಕ್ಕೆ ಸಂಬಂಧಿಸಿ ಲೋಕಸಭೆಯಿಂದ ಉಚ್ಛಾಟಿತರಾಗಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ(TMC MP Mahua Moitra) ಇದೀಗ ಅಮಾನತು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದಾರೆ. ಲೋಕಸಭೆ ನೈತಿಕ ಸಮಿತಿಯ ಶಿಫಾರಸ್ಸಿನ ಮೇರೆಗೆ ಲೋಕಸಭೆಯಿಂದ ಮಹುವಾ ಮೊಯಿತ್ರಾ ಅವರನ್ನು ಉಚ್ಛಾಟನೆ ಮಾಡಲಾಗಿತ್ತು. ತನ್ನನ್ನು ಅಮಾನತು ಮಾಡುವ ಅಧಿಕಾರ ನೈತಿಕ ಸಮಿತಿಗೆ ಇಲ್ಲ ಎಂದು ಮಹುವಾ ಮೊಯಿತ್ರಾ ಶುಕ್ರವಾರ ಹೇಳಿದ್ದರು. ಉದ್ಯಮಿಯಿಂದ ಹಣವನ್ನು ಸ್ವೀಕರಿಸಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಇದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ಅವರ ಮಾಜಿ ಪಾಲುದಾರ ಜೈ ಅನಂತ್ ದೆಹದ್ರಾಯ್ ಮಾಡಿದ ಸುಳ್ಳು ಆರೋಪ ಎಂದು ಅವರು ಹೇಳಿದ್ದರು. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ನೈತಿಕ ಸಮಿತಿಯು ಡಿಸೆಂಬರ್ 8ರಂದು ತನ್ನ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಬಿಜೆಪಿ ಸಂಸದ ವಿನೋದ್ ಸೋಂಕರ್ ನೇತೃತ್ವದ ಲೋಕಸಭೆ ಸಮಿತಿಯು 502 ಪುಟಗಳ ವರದಿ ನೀಡಿತ್ತು. ಅದರಲ್ಲಿ ಮಹುವಾ ಅವರ ನಡವಳಿಕೆಯು ಅನೈತಿಕ, ಸದನದ ನಿಯಮಗಳ ಉಲ್ಲಂಘನೆ. ಇದು ರಾಷ್ಟ್ರೀಯ ಭದ್ರತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಿರಾನಂದಾನಿ ಜತೆಗೆ ಈ ವಿಚಾರಗಳನ್ನು ಹಂಚಿಕೊಳ್ಳಲು ಮಹುವಾ ನಗದಿನೊಂದಿಗೆ ಇನ್ನೂ ಹಲವು ಕೊಡುಗೆಗಳನ್ನೂ ಸ್ವೀಕರಿಸಿದ್ದಾರೆ ಎಂದು ವರದಿ ತಿಳಿಸಿತ್ತು. ಮೊಯಿತ್ರಾ ಮತ್ತು ಉದ್ಯಮಿ ದರ್ಶನ್ ಹಿರಾನಂದಾನಿ ನಡುವಿನ ನಗದು ವಹಿವಾಟಿನ ಕುರಿತು ಪರಿಶೀಲಿಸಲು ಸರ್ಕಾರ ತನಿಖೆಯನ್ನು ಪ್ರಾರಂಭಿಸಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿತ್ತು.

ಏನಿದು ವಿವಾದ?

49 ವರ್ಷದ ಮಹುವಾ ಮೊಯಿತ್ರಾ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು ₹2 ಕೋಟಿ ನಗದು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದಾರೆ. ಮೊಯಿತ್ರಾ ಅವರು ತಮ್ಮ ಸಂಸತ್ತಿನ ಲಾಗ್-ಇನ್ ವಿವರಗಳನ್ನು ಉದ್ಯಮಿ ದರ್ಶನ್ ಹಿರಾನಂದಾನಿಗೆ ಒಪ್ಪಿಸಿದ್ದಾರೆ. ಅವರು ಲಂಚವನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಮೊಯಿತ್ರಾ ಲಾಗಿನ್‌ ವಿವರ ನೀಡಿದ್ದನ್ನು ಮೋಯಿತ್ರಾ ಒಪ್ಪಿಕೊಂಡಿದ್ದರು. ಅಲ್ಲದೆ ಇದು ಸಂಸದರಲ್ಲಿ ಸಾಮಾನ್ಯ ಅಭ್ಯಾಸ ಎಂದು ವಾದಿಸಿದ್ದರು. ಆರು ಸದಸ್ಯರ ಸಮಿತಿಯಲ್ಲಿ ನಾಲ್ಕು ಮಂದಿ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸಲು ಮತ ಹಾಕಿದ್ದರು. 

ಯಾರು ಈ ಮಹುವಾ ಮೊಯಿತ್ರಾ?

1974ರಲ್ಲಿ ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿ ಜನಿಸಿದ ಮಹುವಾ ಮೊಯಿತ್ರಾ ತಮ್ಮ ಆರಂಭಿಕ ಶಿಕ್ಷಣವನ್ನು ಕೋಲ್ಕತ್ತಾದಲ್ಲಿ ಪಡೆದರು ಮತ್ತು ಉನ್ನತ ಶಿಕ್ಷಣಕ್ಕಾಗಿ ಬ್ರಿಟನ್‌ಗೆ ತೆರಳಿದ್ದರು. ಆರಂಭದಲ್ಲಿ ನ್ಯೂಯಾರ್ಕ್ ಮತ್ತು ಲಂಡನ್‌ನಲ್ಲಿ ಜೆಪಿ ಮೋರ್ಗಾನ್ ಚೇಸ್‌ನಲ್ಲಿ ಹೂಡಿಕೆ ಬ್ಯಾಂಕರ್ ಆಗಿದ್ದರು. ಲಂಡನ್‌ ತಮ್ಮ ಉನ್ನತ ಬ್ಯಾಂಕಿಂಗ್ ವೃತ್ತಿ ಜೀವನವನ್ನು ತೊರೆದ ಅವರು 2009ರಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದರು. 2010ರಲ್ಲಿ ಮೊಯಿತ್ರಾ ಟಿಎಂಸಿಯ ಭಾಗವಾದರು.

ಇದನ್ನೂ ಓದಿ: Mahua Moitra: ಮಹುವಾ ಮೋಯಿತ್ರಾ ವಿರುದ್ಧ ಸರ್ಕಾರಿ ತನಿಖೆಗೆ ಸದನ ಸಮಿತಿ ಶಿಫಾರಸು

ಮಹುವಾ ಮೊಯಿತ್ರಾ 2016ರ ವಿಧಾನಸಭಾ ಚುನಾವಣೆಯಲ್ಲಿ ಕರೀಂಪುರ ಕ್ಷೇತ್ರದಿಂದ ಗೆಲುವು ಸಾಧಿಸಿದರು. ರಾಜ್ಯ ಸಚಿವ ಸಂಪುಟದಲ್ಲಿ ಸೇರ್ಪಡೆಗೊಳ್ಳದಿದ್ದರೂ ಅವರು ನಿರರ್ಗಳ ಭಾಷಣ ಮತ್ತು ಚರ್ಚಾ ಕೌಶಲ್ಯದಿಂದ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದರು. 2019ರಲ್ಲಿ ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version