Site icon Vistara News

Army Major: ಸೇನೆಯ ಮೇಜರ್‌ನನ್ನು ವಜಾಗೊಳಿಸಿದ ರಾಷ್ಟ್ರಪತಿ; ಏನದು ದೇಶದ್ರೋಹದ ಕೆಲಸ?

Army Major

Major terminated from Army by President Droupadi Murmu after classified info found on phone

ನವದೆಹಲಿ: ದೇಶದ ಸೈನಿಕರ ಬಗ್ಗೆ ದೇಶಾದ್ಯಂತ ಹೆಚ್ಚಿನ ಗೌರವ ಇದೆ. ಪ್ರಾಣದ ಹಂಗನ್ನೂ ತೊರೆದು ದೇಶವನ್ನು ಕಾಯುವವರು, ನಮ್ಮ ನಾಳೆಗಳಿಗಾಗಿ ಅವರು ತಮ್ಮ ವರ್ತಮಾನವನ್ನು ಬಲಿ ಕೊಡುವವರು, ಭಾರತಮಾತೆಯ ವೀರಪುತ್ರರು ಎಂದೆಲ್ಲ ಗೌರವಿಸುತ್ತೇವೆ. ಆದರೆ, ಕೆಲವೇ ಕೆಲವು ಸೈನಿಕರು ತಮ್ಮ ವೃತ್ತಿಗೆ ದ್ರೋಹ ಬಗೆಯುವ ಮೂಲಕ ತಮ್ಮ ಗೌರವವನ್ನು ತಾವೇ ಕಳೆದುಕೊಳ್ಳುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನೆಯ ಮೇಜರ್‌ (Army Major) ಒಬ್ಬರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ವಜಾಗೊಳಿಸಿದ್ದಾರೆ.

ಭಾರತದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡುವುದು ಸೇರಿ ಹಲವು ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ ಹಿನ್ನೆಲೆಯಲ್ಲಿ 2022ರ ಮಾರ್ಚ್‌ನಲ್ಲಿಯೇ ಮೇಜರ್‌ ವಿರುದ್ಧ ತನಿಖೆಗೆ ಆದೇಶಿಸಲಾಗಿತ್ತು. ಸೇನೆಯ ಮೇಜರ್‌ ದೇಶದ್ರೋಹದ ಕೆಲಸ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿಯೇ ಸೆಪ್ಟೆಂಬರ್‌ನಲ್ಲಿ ಅವರು ದೋಷಿ ಎಂದು ಘೋಷಿಸಲಾಗಿತ್ತು. ಈಗ ಅವರನ್ನು ಕೆಲಸದಿಂದ ವಜಾಗೊಳಿಸುವ ಪ್ರಸ್ತಾಪಕ್ಕೆ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರೂ ಆದ ದ್ರೌಪದಿ ಮುರ್ಮು ಅವರು ಸಹಿ ಹಾಕಿದ್ದಾರೆ.

ವಜಾಗೊಂಡಿರುವವರು ವ್ಯೂಹಾತ್ಮಕ ಪಡೆಗಳ ಕಮಾಂಡ್‌ (Strategic Forces Command) ಘಟಕದಲ್ಲಿ ಮೇಜರ್‌ ಆಗಿದ್ದರು. 1950ರ ಸೇನಾ ಕಾಯ್ದೆ ಅಡಿಯಲ್ಲಿ ಇವರ ವಿರುದ್ಧ ತನಿಖೆ ಆರಂಭಿಸಿ, ತಪ್ಪಿತಸ್ಥ ಎಂದು ಸಾಬೀತಾದ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿದೆ. ಅವರ ವಿರುದ್ಧ ಮಾಹಿತಿ ಸೋರಿಕೆ ಸೇರಿ ಹಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಳೆದ ವರ್ಷವೇ ಅವರನ್ನು ಅಮಾನತುಗೊಳಿಸಲಾಗಿತ್ತು. ಈಗ ವಜಾಗೊಳಿಸಿರುವ ಕುರಿತು ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ.

ಇದನ್ನೂ ಓದಿ: TCS Hiring Scam: 16 ನೌಕರರನ್ನು ವಜಾಗೊಳಿಸಿದ ಟಿಸಿಎಸ್, ಏನಿದು ಭಾರಿ ಹಗರಣ?

ಪಾಕಿಸ್ತಾನದ ಗುಪ್ತಚರ ಇಲಾಖೆ ಜತೆ ನಂಟು

ಭಾರತದ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಮೇಜರ್‌, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿದ್ದರು ಎಂಬ ಆರೋಪವಿದೆ. ಪಾಕಿಸ್ತಾನದ ಗುಪ್ತಚರ ಇಲಾಖೆ ಪರವಾಗಿ ಕೆಲಸ ಮಾಡುವವರ ಜತೆ ಮೇಜರ್‌ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕ ಹೊಂದಿದ್ದರು. ಭಾರತದ ಸೇನೆ, ದೇಶದ ಭದ್ರತೆಯ ಸೂಕ್ಷ್ಮ ವಿಚಾರಗಳನ್ನು ಇವರು ಪಾಕ್‌ ಗುಪ್ತಚರ ಇಲಾಖೆ ಪರ ಕೆಲಸ ಮಾಡುವವರೊಂದಿಗೆ ಹಂಚಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಹಾಗಾಗಿ, ಇವರ ವಿರುದ್ಧ ತನಿಖೆಗೆ ಆದೇಶಿಸಲಾಗಿತ್ತು.

Exit mobile version