ನವದೆಹಲಿ: ಗುಜರಾತ್‌ನಲ್ಲಿ ದ್ವಿತೀಯ ಹಂತದ ಮತದಾನಕ್ಕೆ ದಿನಗಣನೆ ಆರಂಭವಾದ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ವಾಕ್ಸಮರ ಜೋರಾಗಿದೆ. ಸಣ್ಣ ವಿಷಯಗಳನ್ನೂ ಗಣನೆಗೆ ತೆಗೆದುಕೊಂಡು ತಿರುಗೇಟು, ಪ್ರತ್ಯುತ್ತರ ನೀಡಲಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಮೋದಿ ಚುನಾವಣೆ ರ‍್ಯಾಲಿ, ರೋಡ್‌ಶೋ ವೇಳೆ ಪದೇಪದೆ ಆಂಬ್ಯುಲೆನ್ಸ್‌ಗಳು ಕಾಣಿಸಿಕೊಳ್ಳುತ್ತಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಹಾಗೆಯೇ, “ಆಂಬ್ಯುಲೆನ್ಸ್‌ಅನ್ನೇ ಬಿಜೆಪಿಯ ಸ್ಟಾರ್ ಪ್ರಚಾರಕ (Ambulance Campaigner) ಎಂಬುದಾಗಿ ಘೋಷಿಸಿ” ಎಂದು ವ್ಯಂಗ್ಯ ಮಾಡಿದೆ.
ಹಿಮಾಚಲ ಪ್ರದೇಶ, ಗುಜರಾತ್ ಸೇರಿ ಹಲವು ಚುನಾವಣೆ ರ‍್ಯಾಲಿ, ರೋಡ್‌ಶೋಗಳ ವೇಳೆ ನರೇಂದ್ರ ಮೋದಿ ಅವರು ಆಂಬ್ಯುಲೆನ್ಸ್‌ಗಳಿಗೆ ದಾರಿ ಬಿಟ್ಟುಕೊಟ್ಟರು, ಬೆಂಗಾವಲು ಪಡೆಯನ್ನು ತಡೆದರು ಎಂಬ ಸುದ್ದಿಗಳ ಕ್ಲಿಪ್ಪಿಂಗ್‌ಗಳನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
“ನಾನು ಎರಡು ಬೇಡಿಕೆಗಳನ್ನು ಹೊಂದಿದ್ದೇನೆ. ಮೊದಲನೆಯದಾಗಿ, ಮೋದಿ ರ‍್ಯಾಲಿ ವೇಳೆ ಪದೇಪದೆ ಭದ್ರತಾ ವೈಫಲ್ಯವಾಗುತ್ತಿದೆ. ಇದರ ಕುರಿತು ತನಿಖೆಯಾಗಬೇಕು. ಎರಡನೆಯದಾಗಿ, ಆಂಬ್ಯುಲೆನ್ಸ್‌ಅನ್ನು ಬಿಜೆಪಿ ಚುನಾವಣೆ ಸ್ಟಾರ್ ಪ್ರಚಾರಕ ಎಂಬುದಾಗಿ ಘೋಷಿಸಬೇಕು” ಎಂದು ವ್ಯಂಗ್ಯ ಮಾಡಿದ್ದಾರೆ.
ಮೋದಿ ರ‍್ಯಾಲಿ, ರೋಡ್ ಶೋ ಸಾಗುವ ದಾರಿ ಮೊದಲೇ ನಿರ್ಧಾರವಾಗಿರುತ್ತದೆ, ಎಸ್‌ಪಿಜಿ ಭದ್ರತೆ ಇರುತ್ತದೆ. ಹೀಗಿದ್ದರೂ ಆಂಬ್ಯುಲೆನ್ಸ್ ಹೇಗೆ ರ‍್ಯಾಲಿ ಸಾಗುವ ಮಾರ್ಗದಲ್ಲೇ ಬರುತ್ತದೆ ಎಂಬುದು ಕಾಂಗ್ರೆಸ್ ನಾಯಕರ ಪ್ರಶ್ನೆಯಾಗಿದೆ. ಡಿಸೆಂಬರ್ ೧ರಂದು ಅಹಮದಾಬಾದ್‌ನಲ್ಲಿ ಮೋದಿ ಮೆಗಾ ರೋಡ್‌ಶೋ ನಡೆಸುವಾಗ ಆಂಬ್ಯುಲೆನ್ಸ್‌ಗೆ ಮೋದಿ ದಾರಿ ಮಾಡಿಕೊಟ್ಟಿದ್ದರು.
ಇದನ್ನೂ ಓದಿ | Modi Mega Roadshow | ಗುಜರಾತ್ ರೋಡ್ ಶೋ ವೇಳೆ ಕಾರು ನಿಲ್ಲಿಸಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಮೋದಿ