ದೇಶದಲ್ಲಿ ಕೊರೊನಾ ಮಿತಿಮೀರುತ್ತಿದೆ. ಶನಿವಾರ 6155 ಕೊರೊನಾ ಕೇಸ್ಗಳು (Covid-19 cases) ಪತ್ತೆಯಾಗಿದ್ದವು. ಅದರಲ್ಲೂ ಈ ಕೇರಳದಲ್ಲಿ ದಿನವೊಂದಕ್ಕೆ ಸಾವಿರಕ್ಕೂ ಹೆಚ್ಚು ಕೇಸ್ಗಳು ದಾಖಲಾಗುತ್ತಿವೆ. ಶನಿವಾರ 1801 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಆ ರಾಜ್ಯದಲ್ಲಿ ಕೊರೊನಾ ನಿರ್ಬಂಧಕ್ಕಾಗಿ ಮತ್ತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಈಗಾಗಲೇ ಕೊರೊನಾ ಸೋಂಕಿನ ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ. ಹಾಗೇ, ಕೇರಳದಲ್ಲಿ ಇನ್ನುಮುಂದೆ ವೃದ್ಧರು, ಗರ್ಭಿಣಿಯರು ಮತ್ತು ಹೃದಯ ಸಮಸ್ಯೆ, ಪಾರ್ಶ್ವವಾಯು, ಟೈಪ್ 2 ಮಧುಮೇಹ, ಅಸ್ತಮಾ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮಾಸ್ಕ್ ಕಡ್ಡಾಯ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಮನೆಯಲ್ಲಿ ಗರ್ಭಿಣಿಯರು, ವೃದ್ಧರು ಮತ್ತು ಕಾಯಿಲೆಗಳಿಂದ ಬಳಲುತ್ತಿರುವವರು ಇದ್ದರೆ, ಆ ಮನೆಯಲ್ಲಿರುವ ಇತರ ಸದಸ್ಯರೂ ಸಾರ್ವಜನಿಕ ಪ್ರದೇಶಕ್ಕೆ ಬರುವಾಗ ಮಾಸ್ಕ್ ಧರಿಸಿಯೇ ಬನ್ನಿ’ ಎಂದು ಹೇಳಿದ್ದಾರೆ.
ಕೇರಳದಲ್ಲಿ ಎಲ್ಲ ಕಡೆಗಳಲ್ಲೂ ಕೊರೊನಾ ಹೆಚ್ಚುತ್ತಿದ್ದರೂ ಕೂಡ ತಿರುವನಂತಪುರಂ, ಎರ್ನಾಕುಲಂ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇನ್ನು ಇನ್ನು ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ನಿಧಾನವಾಗಿ ಏರಿಕೆಯಾಗುತ್ತಿದೆ ಎಂದು ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಕೊವಿಡ್ 19 ತಪಾಸಣೆ ಹೆಚ್ಚಿಸಲಾಗಿದೆ. ಸದ್ಯದ ಮಟ್ಟಿಗೆ ಒಟ್ಟಾರೆ ಪತ್ತೆಯಾಗುತ್ತಿರುವ ಸೋಂಕಿತರಲ್ಲಿ 0.8 ಪರ್ಸೆಂಟ್ ಜನರಿಗೆ ಮಾತ್ರ ಆಕ್ಸಿಜನ್ ಬೆಡ್ಗಳು ಬೇಕಾಗುತ್ತಿವೆ ಮತ್ತು ಶೇ.1.2 ಸೋಂಕಿತರು ಐಸಿಯು ಬೆಡ್ಗೆ ದಾಖಲಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೇರಳದಲ್ಲಿ ಕೊರೊನಾದಿಂದ ಸಾಯುತ್ತಿರುವವರಲ್ಲಿ ಶೇ.85ರಷ್ಟು ಮಂದಿ 60ವರ್ಷ ಮೇಲ್ಪಟ್ಟವರೇ ಆಗಿದ್ದಾರೆ. ಇನ್ನು ಶೇ.15ರಷ್ಟು ಸೋಂಕಿತರು, ಅದಾಗಲೇ ಬೇರೆ ಕೆಲವು ಗಂಭೀರ ಕಾಯಿಲೆ ಇರುವವರು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಕೊರೊನಾ ಸಾಂಕ್ರಾಮಿಕ ಚೀನಾದಲ್ಲಿ ಶುರುವಾದ ಮೇಲೆ ಮೊದಲು ಕಾಲಿಟ್ಟಿದ್ದೇ ಕೇರಳಕ್ಕೆ. ಅಲ್ಲಿಂದಲೇ ಉಳಿದ ರಾಜ್ಯಗಳಿಗೂ ಹಬ್ಬಿದೆ. ಕಳೆದ ಮೂರೂ ಅಲೆಗಳಲ್ಲಿ ಕೂಡ ಕೇರಳದಲ್ಲಿ ಗರಿಷ್ಠ ಮಟ್ಟದ ಸೋಂಕಿತರು ಇದ್ದರು. ಇದೀಗ ಕೊರೊನಾದ ಹೊಸ ಅಲೆ ಶುರುವಾಗುವ ಲಕ್ಷಣಗಳು ಕಾಣುತ್ತಿದ್ದು, ಕೇರಳ, ಮುಂಬಯಿ, ದೆಹಲಿ, ಉತ್ತರ ಪ್ರದೇಶಗಳಲ್ಲಿ ಪ್ರತಿದಿನ ಹೆಚ್ಚೆಚ್ಚು ಕೇಸ್ಗಳು ದಾಖಲಾಗುತ್ತಿವೆ. ಇನ್ನು ಪುದುಚೇರಿ ಮತ್ತು ಹರ್ಯಾಣಗಳಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: Covid 19 Updates: ಕೋವಿಡ್ ಪರಿಸ್ಥಿತಿ ಎದುರಿಸಲು ಏ.10, 11ರಂದು ಆಸ್ಪತ್ರೆಗಳ ಅಣಕು ಪ್ರದರ್ಶನಕ್ಕೆ ಕೇಂದ್ರ ಸೂಚನೆ