ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಭಾರತ ಹಾಗೂ ನರೇಂದ್ರ ಮೋದಿ (Narendra Modi) ವಿರುದ್ಧ ಉದ್ಧಟತನದ ಹೇಳಿಕೆ ನೀಡಿದ ಮಾಲ್ಡೀವ್ಸ್ ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮೂವರು ಸಚಿವರನ್ನು ಅಮಾನತುಗೊಳಿಸಿದೆ. ಭಾರತದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ (Boycott Maldives) ಇದು ಜಾಗತಿಕ ಮಟ್ಟದಲ್ಲಿ ಮಾಲ್ಡೀವ್ಸ್‌ಗೆ ಮುಖಭಂಗ ಉಂಟಾಗಿದೆ. ಇಷ್ಟಾದರೂ ಬುದ್ಧಿ ಕಲಿಯದ ಮಾಲ್ಡೀವ್ಸ್ ಈಗ, ತನ್ನ ದೇಶದಲ್ಲಿರುವ ಭಾರತದ ಸೈನಿಕರನ್ನು (Indian Troops) ಮಾರ್ಚ್ 15ರೊಳಗೆ ವಾಪಸ್ ಕರೆಸಿಕೊಳ್ಳಬೇಕು ಎಂದು ಡೆಡ್‌ಲೈನ್ ನೀಡಿದೆ.
ಕೆಲ ದಿನಗಳ ಹಿಂದಷ್ಟೇ ಮೊಹಮ್ಮದ್ ಮುಯಿಜು ಅವರು ಚೀನಾಗೆ ಭೇಟಿ ನೀಡಿ ಬಂದಿದ್ದಾರೆ. ಚೀನಾ ಜತೆ ವ್ಯಾಪಾರ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ಚೀನಾದಿಂದ ಮಾಲ್ಡೀವ್ಸ್ ತಲುಪಿದ ಮೊಹಮ್ಮದ್ ಮುಯಿಜು, “ನಮ್ಮದು ಚಿಕ್ಕ ದೇಶ ಇರಬಹುದು. ಹಾಗಂತ, ನಮ್ಮನ್ನು ಹೆದರಿಸುವ ಪರವಾನಗಿಯನ್ನು ಯಾರಿಗೂ ಕೊಟ್ಟಿಲ್ಲ” ಎಂದು ಭಾರತದ ವಿರುದ್ಧ ಪರೋಕ್ಷವಾಗಿ ಹೇಳಿಕೆ ನೀಡಿದ್ದರು. ಈಗ ಮಾರ್ಚ್ 15ರೊಳಗೆ ಮಾಲ್ಡೀವ್ಸ್‌ನಲ್ಲಿರುವ ಭಾರತದ ಸೈನಿಕರನ್ನು ವಾಪಸ್ ಕರೆಸಿಕೊಳ್ಳಿ ಎಂದು ಮಾಲ್ಡೀವ್ಸ್ ಸರ್ಕಾರ ಒತ್ತಾಯಿಸಿದೆ.
“ಮಾಲ್ಡೀವ್ಸ್‌ನಲ್ಲಿ ಭಾರತದ ಸೈನಿಕರು ಇರುವಂತಿಲ್ಲ. ಇದು ಅಧ್ಯಕ್ಷ ಮೊಹಮ್ಮದ್ ಮುಯಿಜು ಸರ್ಕಾರದ ನೀತಿಯಾಗಿದೆ. ಹಾಗಾಗಿ, ಮಾರ್ಚ್ 15ರೊಳಗೆ ಭಾರತವು ತನ್ನ ಸೈನಿಕರನ್ನು ವಾಪಸ್ ಕರೆಸಿಕೊಳ್ಳಬೇಕು” ಎಂದು ಮೊಹಮ್ಮದ್ ಮುಯಿಜು ಅವರ ಕಚೇರಿಯ ಸಾರ್ವಜನಿಕ ನೀತಿ ವಿಭಾಗದ ಕಾರ್ಯದರ್ಶಿ ಅಬ್ದುಲ್ಲಾ ನಜೀಂ ಇಬ್ರಾಹಿಂ ಹೇಳಿದ್ದಾರೆ.
ಭಾರತದ ಸುಮಾರು 88 ಸೈನಿಕರು ಮಾಲ್ಡೀವ್ಸ್‌ನಲ್ಲಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಭಾರತದ ಯೋಧರು ರೆಡಾರ್ ಹಾಗೂ ನಿಗಾ ಯುದ್ಧವಿಮಾನವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಚೀನಾ ಕೂಡ ಮಾಲ್ಡೀವ್ಸ್‌ನಲ್ಲಿ ಸೈನಿಕರನ್ನು ನಿಯೋಜಿಸಿದೆ. ಯಾವ ದೇಶದ ಸೇನೆಯೂ ಮಾಲ್ಡೀವ್ಸ್‌ನಲ್ಲಿ ಇರುವುದು ಬೇಕಾಗಿಲ್ಲ ಎಂದು ಮೊಹಮ್ಮದ್ ಮುಯಿಜು ಹೇಳಿದ್ದಾರೆ. ಆದರೆ, ಸೈನಿಕರನ್ನು ವಾಪಸ್ ಕಳುಹಿಸುವ ಕುರಿತು ಚೀನಾ ಜತೆ ಮಾತನಾಡಿರುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ನಮ್ಮನ್ನು ಹೆದರಿಸುವ ತಾಕತ್ತು ಯಾರಿಗೂ ಇಲ್ಲ; ಭಾರತಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಪರೋಕ್ಷ ಟಾಂಗ್
ಚೀನಾ ಪರ ಮುಯಿಜು ಹೆಚ್ಚಿನ ಒಲವು
ಚೀನಾ ಸರ್ಕಾರದಿಂದ ತೀವ್ರ ಸಾಲ ತಂದಿರುವ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಚೀನಾ ಪರ ಒಲವುಳ್ಳ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಈ ಹಿಂದಿನ ಸರ್ಕಾರವು ಚೀನಾದಿಂದ ಸಾಕಷ್ಟು ಸಾಲವನ್ನು ಪಡೆದುಕೊಂಡಿದೆ. ಈಗ ಚೀನಾಗೆ ತೆರಳಿರುವ ಮೊಹಮ್ಮದ್ ಮುಯಿಜು, 50 ದಶಲಕ್ಷ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಸಾಲ, ವ್ಯಾಪಾರದ ಆಸೆ ತೋರಿಸುತ್ತಿರುವ ಚೀನಾ, ಪಾಕಿಸ್ತಾನದಂತೆ ಮಾಲ್ಡೀವ್ಸ್ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ, ಮೊಹಮ್ಮದ್ ಮುಯಿಜು ಅವರು ಚೀನಾಗೆ ತೆರಳುವ ಕೆಲವೇ ಗಂಟೆಗಳ ಮೊದಲು ಮಾಲ್ಡೀವ್ಸ್ ಸಚಿವರು ಭಾರತದ ವಿರುದ್ಧ ಆರೋಪ ಮಾಡಿರುವುದು ಕೂಡ ಓಲೈಕೆಯ ಸಂಕೇತ ಎನ್ನಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ