Site icon Vistara News

Special Parliament Session: ವಿಶೇಷ ಅಧಿವೇಶನದ ಮೊದಲ ದಿನವೇ ಖರ್ಗೆ- ನಿರ್ಮಲಾ ಫುಲ್ ಫೈಟಿಂಗ್

Malliakrjun Kharge and Nirmala Sitharaman fight on GST and Womens bill

ನವದೆಹಲಿ: ಹೊಸ ಸಂಸತ್ ಭವನದಲ್ಲಿ (New Parliament Building) ನಡೆದ ವಿಶೇಷ ಸಂಸತ್ ಅಧಿವೇಶನವು (Special Parliament Session) ಮೊದಲ ದಿನವೇ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳ ನಡುವಿನ ಕಾದಾಟಕ್ಕೆ ಸಾಕ್ಷಿಯಾಯಿತು. ನೂತನ ಸಂಸತ್ತಿನಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆಗಿರುವ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು, ಮೀಸಲಾತಿಯನ್ನು ರಾಜಕೀಯ ಪಕ್ಷಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಪಿಸಿದರು. ಖರ್ಗೆ ಅವರ ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು, ಖರ್ಗೆ ಅವರು ಜನರಲೈಸ್ ಆಗಿ ಮಾತನಾಡುತ್ತಿದ್ದಾರೆಂದು ಹೇಳಿದರು.

ಪರಿಶಿಷ್ಟ ಜಾತಿಗಳಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಕಡಿಮೆ ಇದೆ. ಹಾಗಾಗಿ, ಅಸಮರ್ಥ ಮಹಿಳೆಯರನ್ನು ಆಯ್ಕೆ ಮಾಡುವ ಹವ್ಯಾಸವನ್ನು ರಾಜಕೀಯ ಪಕ್ಷಗಳು ಮಾಡಿಕೊಂಡಿವೆ. ಅವರು ಎಂದಿಗೂ ಸುಶಿಕ್ಷಿತ ಮತ್ತು ಹೋರಾಟ ಮಾಡುವ ಮಹಿಳೆಯರನ್ನು ಆಯ್ಕೆ ಮಾಡುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.

ಈ ಮಾತಿಗೆ ಆಡಳಿತ ಪಕ್ಷದ ಸಾಲುಗಳಿಂದ ಆಕ್ಷೇಪಗಳು ಕೇಳಿ ಬರುತ್ತಿದ್ದಂತೆ, ಏನು ಹಾಫ್ ಟಿಕೆಟ್? ನಾವೀಗ 1/3 ಟಿಕೆಟ್ ಬಗ್ಗೆ ಮಾತನಾಡುತ್ತಿದ್ದೇವೆ. ಸುಮ್ಮನೆ ಕುಳಿತುಕೊಳ್ಳಿ ಮತ್ತು ಶಾಂತವಾಗಿರಿ… ಪಕ್ಷಗಳು ಹೇಗೆ ಹಿಂದುಳಿದ ಮತ್ತು ಪರಿಶಿಷ್ಟ ಜಾತಿಯ ಜನರನ್ನು ಹೇಗೆ ಆಯ್ಕೆ ಮಾಡುತ್ತಾರೆಂಬ ನನಗೆ ಗೊತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಜೋರಾಗಿ ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ನಾವು ಪ್ರತಿಪಕ್ಷದ ನಾಯಕರನ್ನು ಗೌರವಿಸುತ್ತೇವೆ. ಆದರೆ ಎಲ್ಲಾ ಪಕ್ಷಗಳು ಪರಿಣಾಮಕಾರಿಯಲ್ಲದ ಮಹಿಳೆಯರನ್ನು ಆಯ್ಕೆ ಮಾಡುತ್ತವೆ ಎಂಬ ಜನರಲೈಸ್ ಹೇಳಿಕೆಯನ್ನು ನೀಡುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ನಾವೆಲ್ಲರೂ ನಮ್ಮ ಪಕ್ಷದಿಂದ, ನಮ್ಮ ಪ್ರಧಾನಿಯಿಂದ ಅಧಿಕಾರ ಪಡೆದಿದ್ದೇವೆ. ಅಧ್ಯಕ್ಷೆ ದ್ರೌಪದಿ ಮುರ್ಮು ಸಶಕ್ತ ಮಹಿಳೆಯಾಗಿದ್ದಾರೆ. ನಮ್ಮ ಪಕ್ಷದ ಪ್ರತಿಯೊಬ್ಬ ಸಂಸದರೂ ಸಶಕ್ತ ಮಹಿಳೆಯಾಗಿದ್ದಾರೆ ಎಂದು ಖರ್ಗೆ ಅವರಿಗೆ ತಿರುಗೇಟು ನೀಡಿದರು.

ಈ ತರಹದ ಹೇಳಿಕೆಗಳು ಆರೋಪ ಮಾಡುವ ಹೇಳಿಕೆಗಳು, ಮಹಿಳಾ ಅಧ್ಯಕ್ಷರನ್ನು ಕಂಡಿರುವ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಅನ್ವಯಿಸಬಹುದು. ಆದರೆ, ಎಲ್ಲ ಪಕ್ಷಗಳು ಎಂದು ಹೇಳುವ ಖರ್ಗೆ ಅವರ ಹೇಳಿಕೆಯನ್ನು ನಾನು ವಿರೋಧಿಸುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

ಆಗ ಖರ್ಗೆ, ಅವರು(ನಿರ್ಮಲಾ) ದೊರೆಯುವ ಅವಕಾಶಗಳು ಹಿಂದುಳಿದ ವರ್ಗದ ಮಹಿಳೆಯರು, ಪರಿಶಿಷ್ಟ ಜಾತಿಯ ಮಹಿಳೆಯರಿಗೆ ಅವಕಾಗಳು ಇಲ್ಲ ಎಂದು ಮತ್ತೆ ತಿವಿದರು. ಇದಕ್ಕೆ ಉಗ್ರವಾಗಿ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್ ಅವರು, ಹಾಗಿದ್ದರೆ ರಾಷ್ಟ್ರಪತಿ ಯಾರು? ಜನರನ್ನು ಈ ರೀತಿಯಾಗಿ ಅನುಮಾನ ಮಾಡುವುದ ಸರಿಯಲ್ಲ. ಮಹಿಳೆಯರು ನಡುವೆ ಭೇದವನ್ನು ಸೆಳೆಯಲು ಸಾಧ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಆಕ್ರೋಶದಿಂದ ಹೇಳಿದರು.

ಈ ಸುದ್ದಿಯನ್ನೂ ಓದಿ: Women’s Reservation Bill: ಏನಿದು ಮಹಿಳಾ ಮೀಸಲು ವಿಧೇಯಕ? ಕಾಯ್ದೆ ಯಾವಾಗ ಜಾರಿ?

ಇದಕ್ಕೂ ಮೊದಲು ಗೂಡ್ಸ್ ಮತ್ತು ಸರ್ವೀಸ್ ತೆರಿಗೆಗೆ ಸಂಬಂಧಿಸಿದಂತೆ ಉಭಯ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದರು. ರಾಜ್ಯಗಳಿಗೆ ಅವುಗಳ ಪಾಲಿನ ಹಣವನ್ನು ನೀಡುತ್ತಿಲ್ಲ. ಆ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಖರ್ಗೆ ಅವರು ಆರೋಪಿಸಿದರು. ಖರ್ಗೆ ಅವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಿರ್ಮಲಾ ಸೀತಾರಾಮನ್ ಅವರು ಯಾವುದೇ ರಾಜ್ಯಕ್ಕೆ ಒಂದು ರೂಪಾಯಿ ಕೂಡ ಬಾಕಿ ಉಳಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದರು. ಆಗ ಮಧ್ಯ ಪ್ರವೇಶಿಸಿದ ರಾಜ್ಯ ಸಭಾ ಚೇರ್ಮನ್ ಜಗದೀಪ್ ಧನಕರ್ ಅವರು, ಉಭಯ ನಾಯಕರು ತಮ್ಮ ಹೇಳಿಕೆಗಳನ್ನು ಲಿಖಿತವಾಗಿ ನೀಡಬೇಕು ಎಂದು ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version