Site icon Vistara News

Mamata Banerjee: ಬಾಂಗ್ಲಾ ನಿರಾಶ್ರಿತರಿಗೆ ಬಂಗಾಳದಲ್ಲಿ ಆಶ್ರಯ; ಮಮತಾ ಹೇಳಿಕೆಗೆ ಭಾರೀ ವಿರೋಧ

mamatha banerjee

ಢಾಕಾ: ಬಾಂಗ್ಲಾದೇಶ(Bangladesh)ದ ನಿರಾಶ್ರಿತರಿಗೆ ಆಶ್ರಯ ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ(West Bengal) ಮಮತಾ ಬ್ಯಾನರ್ಜಿ(Mamata Banerjee) ಹೇಳಿಕೆ ಕೊಟ್ಟಿರುವ ವಿರುದ್ಧ ಬಾಂಗ್ಲಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ನಿರಾಶ್ರಿತರಿಗೆ ನೆಲೆ ಕಲ್ಪಿಸಿದರೆ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತದೆ. ಇಂತಹ ಘೋಷಣೆಗಳ ಲಾಭವನ್ನು ಭಯೋತ್ಪಾದಕರು ಪಡೆಯುವುದು ನಿಶ್ಚಿತ ಎಂದು ಹೇಳಿದೆ.

ಜು.21ರಂದು ಹುತಾತ್ಮ ದಿನದಂದು ತೃಣಮೂಲ ಕಾಂಗ್ರೆಸ್‌ ನಡೆಸಿದ ಮೆಗಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಜನರು ನಮ್ಮ ಬಾಗಿಲನ್ನು ತಟ್ಟಿದರೆ ಸರ್ಕಾರ ಅವರಿಗೆ ಆಶ್ರಯ ನೀಡುತ್ತದೆ ಎಂದಿದ್ದರು. ಅದೂ ಅಲ್ಲದೇ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಬಾಂಗ್ಲಾದೇಶದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದರು.

ಅಧಿಕೃತ ಮೂಲಗಳ ಪ್ರಕಾರ ಬಾಂಗ್ಲಾದೇಶ ಸರ್ಕಾರ ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಬಹಳ ಉಗ್ರವಾಗಿ ಖಂಡಿಸಿದೆ. ಬಾಂಗ್ಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. ನಿರ್ದಿಷ್ಟವಾಗಿ ನಿರಾಶ್ರಿತರಿಗೆ ಆಶ್ರಯ ನೀಡುವ ಭರವಸೆಯು ಅನೇಕ ಜನರನ್ನು ಪ್ರಚೋದಿಸಬಹುದು, ವಿಶೇಷವಾಗಿ ಭಯೋತ್ಪಾದಕರು ಮತ್ತು ದುಷ್ಕರ್ಮಿಗಳು ಅಂತಹ ಘೋಷಣೆಯ ಲಾಭವನ್ನು ಪಡೆದುಕೊಳ್ಳಬಹುದು ಎಂದಿದೆ.

‘ಬಾಂಗ್ಲಾದೇಶದ ಅಸಹಾಯಕ ಜನರಿಗೆ’ ಆಶ್ರಯ ನೀಡುವ ಕುರಿತು ಮಮತಾ ಬ್ಯಾನರ್ಜಿಯವರ ಹೇಳಿಕೆಯನ್ನು ಅದರ ಸರ್ಕಾರವು ‘ಪ್ರಚೋದನಕಾರಿ’ ಎಂದು ಭಾರತದ ಹೈಕಮಿಷನ್‌ಗೆ ಪ್ರತಿಭಟನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. ವಿದೇಶಾಂಗ ಸಚಿವ ಮತ್ತು ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಹಿರಿಯ ಸದಸ್ಯ ಡಾ ಮೊಹಮ್ಮದ್ ಹಸನ್ ಮಹಮೂದ್ ಅವರು ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಬ್ಯಾನರ್ಜಿ ಅವರ ಮಾತುಗಳು ಜನರನ್ನು ‘ಗೊಂದಲ’ ಮತ್ತು ‘ತಪ್ಪು’ ಮೂಡಿಸಬಹುದು ಎಂದು ಹೇಳಿದ್ದಾರೆ.

ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶ ದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾಸ್ವರೂಪ ಪಡೆದಿರುವ ಮಧ್ಯೆಯೇ ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕೋಲಾಹಲಕ್ಕೆ ಕಾರಣವಾದ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಭಾಗಿಯಾಗಿದ್ದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ ನೀಡುವ ನಿಯಮವನ್ನು ಕೋರ್ಟ್‌ ಹಿಂತೆಗೆದುಕೊಂಡಿದೆ. ಆದರೆ ಸಂಪೂರ್ಣ ರದ್ದುಗೊಳಿಸಲಿಲ್ಲ. ಶೇ. 30ರಷ್ಟಿದ್ದ ಮೀಸಲಾತಿಯನ್ನು ಶೇ. 5ಕ್ಕೆ ಇಳಿಸಲಾಗಿದೆ.

ಇದನ್ನೂ ಓದಿ: Bangladesh Protests: ಬಾಂಗ್ಲಾದಲ್ಲಿ ನಿಲ್ಲದ ಹಿಂಸಾಚಾರ; 1000 ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್‌; ಸಾವಿನ ಸಂಖ್ಯೆ 115ಕ್ಕೆ ಏರಿಕೆ

Exit mobile version