Site icon Vistara News

Mamata Banerjee: ಮಮತಾ ಬ್ಯಾನರ್ಜಿ ಹಣೆಗೆ ಗಾಯ; ಭದ್ರತೆ ಬಗ್ಗೆ ಬಿಜೆಪಿ ಕಳವಳ

mamtha

mamtha

ಕೋಲ್ಕತ್ತಾ: ಗುರುವಾರ (ಮಾರ್ಚ್‌ 14) ರಾತ್ರಿ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಹಣೆಗೆ ಪೆಟ್ಟಾಗಿದ್ದ ಅವರನ್ನು ರಾಜ್ಯ ಸರ್ಕಾರ ನಡೆಸುತ್ತಿರುವ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರನ್ನು ಇಂದು (ಶುಕ್ರವಾರ) ಡಿಸ್‌ಚಾರ್ಜ್‌ ಮಾಡಲಾಗಿದೆ.

ಮಮತಾ ಬ್ಯಾನರ್ಜಿ ಅವರ ಸುರಕ್ಷತೆ ಬಗ್ಗೆ ಸಂದೇಹ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಬಿಜೆಪಿ, ʼʼಮುಖ್ಯಮಂತ್ರಿಯ ಭದ್ರತೆಯನ್ನು ಪರಿಶೀಲಿಸಬೇಕು ಮತ್ತು ಯಾವುದೇ ಉಲ್ಲಂಘನೆ ಕಂಡುಬಂದರೆ ಅವರನ್ನು ಅಧಿಕೃತ ನಿವಾಸಕ್ಕೆ ಸ್ಥಳಾಂತರಿಸಬೇಕುʼʼ ಎಂದು ಆಗ್ರಹಿಸಿದೆ. ಗುರುವಾರ ಮಮತಾ ಬ್ಯಾನರ್ಜಿ ತಮ್ಮ ಕಾಲಿಘಾಟ್ ನಿವಾಸದಲ್ಲಿದ್ದಾಗ ಹಿಂದಿನಿಂದ ಯಾರೋ ತಳ್ಳಿದ ಪರಿಣಾಮ ನೆಲಕ್ಕೆ ಬಿದ್ದಿದ್ದರು ಎಂದು ಹೇಳಲಾಗಿದೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದೂ ಬಿಜೆಪಿ ಆಗ್ರಹಿಸಿದೆ.

ವೈದ್ಯರು ಹೇಳಿದ್ದೇನು?

ಮಮತಾ ಬ್ಯಾನರ್ಜಿ ಅವರನ್ನು ಪರಿಶೀಲಿಸಿದ ಎಸ್‌ಎಸ್‌ಕೆಎಂ ಆಸ್ಪತ್ರೆಯ ನಿರ್ದೇಶಕ ಡಾ. ಮಣಿಮೋಯ್ ಬಂಡೋಪಾಧ್ಯಾಯ ಮಾಹಿತಿ ನೀಡಿ, ʼʼಮಮತಾ ಬ್ಯಾನರ್ಜಿ ಅವರು ಗುರುವಾರ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಪರಿಶೀಲಿಸಿದಾಗ ಹಿಂದಿನಿಂದ ಯಾರೋ ತಳ್ಳಿದ್ದರಿಂದ ಬಿದ್ದು ಆಗಿರುವ ರೀತಿಯ ಗಾಯ ಅವರ ಹಣೆಯ ಮೇಲೆ ಕಂಡು ಬಂದಿತ್ತುʼʼ ಎಂದು ಹೇಳಿದ್ದರು. ʼʼಅವರ ಹಣೆಯ ಮೇಲೆ ಮತ್ತು ಮೂಗಿನ ಮೇಲೆ ತೀಕ್ಷ್ಣವಾದ ಗಾಯವಾಗಿದೆ. ಈ ವೇಳೆ ತೀವ್ರವಾಗಿ ರಕ್ತಸ್ರಾವವಾಗಿದೆ. ಅವರನ್ನು ನಮ್ಮ ಆಸ್ಪತ್ರೆ ನರಶಸ್ತ್ರಚಿಕಿತ್ಸಕ ವಿಭಾಗದ ಮುಖ್ಯಸ್ಥರು, ನಮ್ಮ ಸಂಸ್ಥೆಯ ಹೃದ್ರೋಗ ತಜ್ಞರು ನಿಗಾವಹಿಸಿದ್ದಾರೆʼʼ ಎಂದು ತಿಳಿಸಿದ್ದರು.

ಮಮತಾ ಅವರ ಹಣೆಗೆ ಮೂರು ಹೊಲಿಗೆ ಮತ್ತು ಮೂಗಿಗೆ ಒಂದು ಹೊಲಿಗೆ ಹಾಕಿದ ನಂತರ ಅವರನ್ನು ಡಿಸ್‌ಚಾರ್ಜ್‌ ಮಾಡಲಾಯಿತು. “ಸಿಎಂ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಹಿರಿಯ ವೈದ್ಯರು ಈ ಅವಧಿಯುದ್ದಕ್ಕೂ ಅವರನ್ನು ಸೂಕ್ಷ್ಮವಾಗಿ ಗಮನಿಸಿದ್ದರಿಂದ ರಾತ್ರಿ ಉತ್ತಮ ನಿದ್ರೆ ಮಾಡಿದ್ದರು” ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಸಿಜಿ, ಎಕೋಕಾರ್ಡಿಯೋಗ್ರಾಮ್, ಸಿಟಿ-ಸ್ಕ್ಯಾನ್ ಇತ್ಯಾದಿ ಪರೀಕ್ಷೆಗಳನ್ನೂ ನಡೆಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ವಿವಿಧ ರಾಜಕೀಯ ನಾಯಕರಿಂದ ಹಾರೈಕೆ

ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವು ನಾಯಕರು ಮಮತಾ ಬ್ಯಾನರ್ಜಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಅವರು, ʼʼಮಮತಾ ದೀದಿ ಕೂಡಲೇ ಚೇತರಿಸಿಕೊಳ್ಳಲಿ. ಅವರು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆʼʼ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿ ಧನ್ಯವಾದ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಅವರು ಮಮತಾ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. “ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶೀಘ್ರವಾಗಿ ಚೇತರಿಸಿಕೊಳ್ಳಲಿ. ಅವರು ಶೀಘ್ರ ಗುಣಮುಖರಾಗಿ ಮೊದಲಿನಂತೆ ಆಗಲಿ ಎಂದು ದೇವರನ್ನು ಪ್ರಾರ್ಥಿಸುತ್ತೇವೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Lok Sabha Election: ತೃಣಮೂಲ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ; ಪಕ್ಷ ತೊರೆದ ಇಬ್ಬರು ನಾಯಕರು

ʼʼಸಿಎಂ ಮಮತಾ ಬ್ಯಾನರ್ಜಿ ಶೀಘ್ರ ಗುಣಮುಖರಾಗಲಿʼʼ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾರೈಸಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಮಮತಾ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಟಿಡಿಪಿ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಸಿಎಂ ಎನ್ ಚಂದ್ರಬಾಬು ನಾಯ್ಡು ಕೂಡ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version