ಮ್ಯಾಡ್ರಿಡ್: ಮಮತಾ ಬ್ಯಾನರ್ಜಿಯವರು ರಾಜಕಾರಣದಲ್ಲಿ ಎಷ್ಟು ಅಗ್ರೆಸ್ಸಿವ್ ಇದ್ದರೂ, ಜೀವನ ಶೈಲಿಯಲ್ಲಿ ಮಾತ್ರ ತುಂಬ ಸರಳವಾಗಿದ್ದಾರೆ. ಎಲ್ಲಿಯೇ ಹೋಗಲಿ, ಅವರು ಸಾಮಾನ್ಯ ಸೀರೆ, ಸ್ಲಿಪ್ಪರ್ ಧರಿಸಿರುತ್ತಾರೆ. ಯಾವುದೇ ಆಡಂಬರವಿಲ್ಲದ, ಮೈತುಂಬ ಚಿನ್ನಾಭರಣ ಹಾಕಿಕೊಳ್ಳದೆ, ಸಿಂಪಲ್ ಆಗಿರುವುದು ಅವರ ಜೀವನ ಶೈಲಿ. ಇಂತಹ ಮಮತಾ ಬ್ಯಾನರ್ಜಿಯವರು ಸ್ಪೇನ್‌ನಲ್ಲಿ ಬೆಳಗ್ಗೆ ಬೆಳಗ್ಗೆ ಜಾಗಿಂಗ್ ಹೋಗಿದ್ದು, ಆಗಲೂ ಅವರು ಸಾಮಾನ್ಯ ಸೀರೆ, ಸ್ಲಿಪ್ಪರ್ ಧರಿಸಿದ್ದ ವಿಡಿಯೊ ಈಗ ವೈರಲ್ ಆಗಿದೆ.
ಸಾಂಪ್ರದಾಯಿಕ ಸೀರೆ ಧರಿಸಿ, ಅದೇ ಸ್ಲಿಪ್ಪರ್ ಹಾಕಿಕೊಂಡು, ಕೈಗೊಂದು ಸ್ಮಾರ್ಟ್ ವಾಚ್ ಕಟ್ಟಿಕೊಂಡು ಮಮತಾ ಬ್ಯಾನರ್ಜಿ ಅವರು ಜಾಗಿಂಗ್ ಮಾಡಿದ್ದಾರೆ. ಇದರ ವಿಡಿಯೊವನ್ನು ಅವರೇ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ, “ಬೆಳಗ್ಗೆ ಮನಸ್ಸು ಉಲ್ಲಾಸಗೊಂಡಿತು. ದಿನ ಶುರುವಾಗುವ ಮೊದಲೇ ಒಂದೊಳ್ಳೆ ಜಾಗಿಂಗ್ ಮಾಡಿದರೆ, ಆ ದಿನಪೂರ್ತಿ ಉಲ್ಲಾಸದಿಂದ ಇರಬಹುದು. ಎಲ್ಲರೂ ಫಿಟ್ ಆಗಿರಿ, ಆರೋಗ್ಯದಿಂದ ಇರಿ” ಎಂದು ಮಮತಾ ಬ್ಯಾನರ್ಜಿ ಬರೆದುಕೊಂಡಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆಯೂ ಜಾಗಿಂಗ್, ವ್ಯಾಯಾಮಕ್ಕೆ ಆದ್ಯತೆ ನೀಡುತ್ತಾರೆ. ಮಮತಾ ಬ್ಯಾನರ್ಜಿ ಅವರು 2019ರಲ್ಲಿ ಡಾರ್ಜಿಲಿಂಗ್‌ನಲ್ಲಿ 10 ಕಿಲೋಮೀಟರ್ ಓಡಿದ್ದರು. ಆ ವಿಡಿಯೊ ಕೂಡ ಭಾರಿ ವೈರಲ್ ಆಗಿತ್ತು. ಈಗ ಸ್ಪೇನ್‌ನ ಮ್ಯಾಡ್ರಿಡ್‌ಗೆ ಹೋದರೂ ಅವರು ಬೆಳಗ್ಗೆ ಜಾಗಿಂಗ್ ಮಾಡುವುದನ್ನು ಬಿಟ್ಟಿಲ್ಲ. ಮಮತಾ ಬ್ಯಾನರ್ಜಿ ಜತೆ ಅವರ ಸಹಾಯಕರು, ಅಧಿಕಾರಿಗಳು ಕೂಡ ಓಡಿದ್ದಾರೆ.
ಇದನ್ನೂ ಓದಿ: G20 Summit 2023: ಜಿ20ಯಲ್ಲಿ ಮಮತಾ ಊಟ, ಕಾಂಗ್ರೆಸ್ ಹೊಟ್ಟೆಯಲ್ಲಿ ಸಂಕಟ!
ಸಂಗೀತ ವಾದನ ನುಡಿಸಿದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ ಅವರು ಆರೋಗ್ಯದ ಜತೆಗೆ ಸಂಗೀತದ ಕಡೆಗೂ ಹೆಚ್ಚಿನ ಒಲವು ಹೊಂದಿದ್ದಾರೆ. ಸ್ಪೇನ್‌ನಲ್ಲಿ ಜಾಗಿಂಗ್ ಮುಗಿಸಿದ ಅವರು ಸಂಗೀತ ವಾದನವೊಂದನ್ನು ನುಡಿಸುವ ಮೂಲಕ ಸಂಗೀತ ಪ್ರೇಮ ಮೆರೆದಿದ್ದಾರೆ.
ಅಕಾರ್ಡಿಯನ್ (Accordion) ಎಂಬ ಸಂಗೀತ ವಾದನವನ್ನು ಮಮತಾ ಬ್ಯಾನರ್ಜಿ ನುಡಿಸಿದ್ದಾರೆ. “ಸಂಗೀತ ಎಂದಿಗೂ ಇರುತ್ತದೆ. ಸಂಗೀತವು ಇನ್ನಷ್ಟು ಬೆಳೆಯಬೇಕು. ಕೊನೆಯವರೆಗೂ ಸಂಗೀತವು ರಂಜಿಸುತ್ತಿರಬೇಕು” ಎಂದು ಕೂಡ ಬರೆದುಕೊಂಡಿದ್ದಾರೆ.