Site icon Vistara News

Mamata Banerjee: ಮಾತನಾಡಲು 5 ನಿಮಿಷ ಮಾತ್ರ ಅವಕಾಶ ನೀಡಿದರು: ನೀತಿ ಆಯೋಗದ ಸಭೆಯಿಂದ ಹೊರ ಬಂದ ಮಮತಾ ಬ್ಯಾನರ್ಜಿ ಕಿಡಿ

Mamata Banerjee

ನವದೆಹಲಿ: ಶನಿವಾರ (ಜುಲೈ 27) ನವದೆಹಲಿಯಲ್ಲಿ ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅಧ್ಯಕ್ಷತೆಯ ನೀತಿ ಆಯೋಗ (NITI Aayog)ದ 9ನೇ ಆಡಳಿತ ಮಂಡಳಿ ಸಭೆಯಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೊರ ನಡೆದಿದ್ದಾರೆ.

“ರಾಜ್ಯ ಸರ್ಕಾರಗಳ ವಿರುದ್ಧ ಕೇಂದ್ರ ಸರ್ಕಾರ ತಾರತಮ್ಯ ಮಾಡಬಾರದು ಎಂದು ಸಭೆಯಲ್ಲಿ ನಾನು ಹೇಳಿದೆ. ನಾನು ಮಾತನಾಡಲು ಬಯಸಿದ್ದೆ. ಆದರೆ ನನ್ನ ಮೈಕ್ ಮ್ಯೂಟ್ ಆಗಿತ್ತು. ನನಗೆ ಕೇವಲ ಐದು ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಯಿತು. ಕೆಲವರು ನನ್ನ ಮುಂದೆ 10-20 ನಿಮಿಷಗಳ ಕಾಲ ಮಾತನಾಡಿದರು” ಎಂದು ಮಮತಾ ಬ್ಯಾನರ್ಜಿ ಹೊರಬಂದ ನಂತರ ಸುದ್ದಿಗಾರರಿಗೆ ತಿಳಿಸಿದರು.

“ಪ್ರತಿಪಕ್ಷದಿಂದ ನಾನು ಮಾತ್ರ ಭಾಗವಹಿಸಿದ್ದೆ. ಆದರೆ ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದು ಕೇಂದ್ರ ಮಾಡಿದ ಅವಮಾನ” ಎಂದು ಅವರು ದೂರಿದರು. ಪ್ರತಿಪಕ್ಷ ಆಡಳಿತದ ಹಲವು ರಾಜ್ಯಗಳು ಸಭೆಯನ್ನು ಬಹಿಷ್ಕರಿಸುವುದಾಗಿ ಈ ಹಿಂದೆಯೇ ಘೋಷಿಸಿದ್ದವು. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಮಾಚಲ ಪ್ರದೇಶದ ಸುಖ್ವಿಂದರ್ ಸಿಂಗ್ ಸುಖು ಮತ್ತು ತೆಲಂಗಾಣದ ರೇವಂತ್ ರೆಡ್ಡಿ ಅವರು 2024ರ ಕೇಂದ್ರ ಬಜೆಟ್‌ನಲ್ಲಿ ತಮ್ಮ ರಾಜ್ಯಗಳ ವಿರುದ್ಧ ಪಕ್ಷಪಾತ ಧೋರಣೆ ತೋರಲಾಗಿದೆ ಎಂದು ಆರೋಪಿಸಿ ಸಭೆಯಲ್ಲಿ ಭಾಗವಹಿಸಲಿಲ್ಲ.

ಇನ್ನು ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್, ಕೇರಳ ಮುಖ್ಯಮಂತ್ರಿ, ಎಡಪಕ್ಷದ ನಾಯಕ ಪಿಣರಾಯಿ ವಿಜಯನ್ ಮತ್ತು ಆಮ್ ಆದ್ಮಿ ಪಕ್ಷ ನೇತೃತ್ವದ ಪಂಜಾಬ್ ಮತ್ತು ದೆಹಲಿ ಸರ್ಕಾರಗಳು ಸಹ ಸಭೆಯನ್ನು ಬಹಿಷ್ಕರಿಸಿವೆ. ತಮ್ಮ ಧ್ವನಿಯನ್ನು ಸಾಮಾನ್ಯ ವೇದಿಕೆಯಲ್ಲಿ ಎತ್ತಬೇಕು ಎನ್ನುವ ಕಾರಣಕ್ಕೆ ಸಭೆಯಲ್ಲಿ ಭಾಗವಹಿಸುತ್ತಿರುವುದಾಗಿ ಆರಂಭದಲ್ಲಿ ಮಮತಾ ಬ್ಯಾನರ್ಜಿ ತಿಳಿಸಿದ್ದರು. ಆದರೆ ಇದೀಗ ಮಾತನಾಡಲು ಅವಕಾಶವೇ ಸಿಕ್ಕಿಲ್ಲ ಎಂದು ಹೊರ ಬಂದಿದ್ದಾರೆ.

“ನೀತಿ ಆಯೋಗದ ಆಡಳಿತ ಮಂಡಳಿ ಸಭೆಯು ವಿಕಸಿತ್ ಭಾರತ್ @2047ರ ವಿಷನ್ ಡಾಕ್ಯುಮೆಂಟ್‌ನ ಅಪ್ರೋಚ್ ಪೇಪರ್ ಅನ್ನು ಚರ್ಚಿಸಲಿದೆ. ಸಭೆಯು ವಿಕಸಿತ್ ಭಾರತ್ @2047ರ ಗುರಿಯನ್ನು ಸಾಧಿಸುವಲ್ಲಿ ರಾಜ್ಯಗಳ ಪಾತ್ರದ ಕುರಿತು ವಿವರವಾದ ಚರ್ಚೆಗಳನ್ನು ಮಾಡಲಿದೆʼʼ ಎಂದು ಸಭೆಯ ಮುನ್ನ ಸರ್ಕಾರದ ಹೇಳಿಕೆ ನೀಡಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಮುಖ್ಯ ಕಾರ್ಯದರ್ಶಿಗಳ 3ನೇ ರಾಷ್ಟ್ರೀಯ ಸಮ್ಮೇಳನದ ಶಿಫಾರಸುಗಳ ಬಗ್ಗೆಯೂ ಸಭೆ ಗಮನಹರಿಸಲು ನಿರ್ಧರಿಸಲಾಗಿದೆ ಎಂದೂ ತಿಳಿಸಿತ್ತು.

ಇದನ್ನೂ ಓದಿ: DK Shivakumar: ನೀತಿಯೇ ಇಲ್ಲದಿರುವಾಗ, ನೀತಿ ಆಯೋಗದ ಸಭೆಗೆ ಹೋಗಬೇಕೆ: ಡಿ.ಕೆ. ಶಿವಕುಮಾರ್

ಸಮ್ಮೇಳನದಲ್ಲಿ ಐದು ಪ್ರಮುಖ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸಿದೆ- ಕುಡಿಯುವ ನೀರು: ಪ್ರಮಾಣ ಮತ್ತು ಗುಣಮಟ್ಟ, ವಿದ್ಯುತ್: ಗುಣಮಟ್ಟ ಮತ್ತು ವಿಶ್ವಾಸಾರ್ಹತೆ, ಆರೋಗ್ಯ: ಕೈಗೆಟಕುವಿಕೆ ಮತ್ತು ಆರೈಕೆಯ ಗುಣಮಟ್ಟ, ಶಾಲಾ ಶಿಕ್ಷಣ: ಕೈಗೆಟಕುವಿಕೆ ಮತ್ತು ಗುಣಮಟ್ಟ ಮತ್ತು ಭೂಮಿ ಮತ್ತು ಆಸ್ತಿ: ಪ್ರವೇಶ, ಡಿಜಿಟಲೀಕರಣ, ನೋಂದಣಿ. ಜತೆಗೆ ಸ್ವಾತಂತ್ರ್ಯದ 100ನೇ ವರ್ಷವಾದ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಸವನ್ನಾಗಿಸುವ ಗುರಿ ಹೊಂದಲಾಗಿದೆ.

Exit mobile version