ಪ್ರೀತಿ ಎಂಬುದು ಎಲ್ಲ ಎಲ್ಲೆಗಳನ್ನೂ ಮೀರಿದ್ದು ಎಂಬ ಮಾತಿದೆ. ಸಪ್ತಸಾಗರದ ಆಚೆ-ಈಚೆ ಇರುವವರ ಮಧ್ಯೆಯೂ ಪ್ರೀತಿ ಹುಟ್ಟಿ, ಅಲ್ಲೊಂದು ಸುಂದರ ಲೋಕವೇ ಸೃಷ್ಟಿಯಾಗಬಲ್ಲದು!-ಅದೇ ರೀತಿ, ಪ್ರೀತಿಯಲ್ಲಿ ಬಿದ್ದು, ಮದುವೆಯನ್ನೂ ಆಗಿ ಒಮ್ಮೆ ದೂರವಾಗಿ, ಮತ್ತೆ ಹತ್ತಿರವಾದ ಭಾರತದ ಹುಡುಗ-ಸ್ವೀಡನ್ನ ಹುಡುಗಿಯ ಲವ್ಸ್ಟೋರಿ ಈಗ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪ್ರೀತಿಸಿ, ಮದುವೆಯಾದವಳನ್ನು ಬಿಟ್ಟಿರಲಾರದೆ, ಅವಳನ್ನು ನೋಡಲೆಂದು ಭಾರತದಿಂದ ಸ್ವೀಡನ್ವರೆಗೆ ಸೈಕಲ್ ತುಳಿದ ಡಾ. ಪ್ರದ್ಯುಮ್ನ ಕುಮಾರ್ ಮಹಾನಂದಿಯಾ ನೆಟ್ಟಿಗರ ಕಣ್ಣಲ್ಲಿ ಹೀರೋ ಎನ್ನಿಸಿಕೊಂಡಿದ್ದಾರೆ. ಪ್ರೀತಿ ಬಗ್ಗೆ ಇವರಿಗೆ ಇರುವ ಶ್ರದ್ಧೆ, ಬದ್ಧತೆಯನ್ನು ಹೊಗಳುತ್ತಿದ್ದಾರೆ.
mignonettetakespictures ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ಈ ಲವ್ಸ್ಟೋರಿಯನ್ನು ಚಿಕ್ಕದಾಗಿ ವಿವರಿಸಲಾಗಿದೆ. ಒಡಿಶಾ ಮೂಲದ ಪ್ರದ್ಯುಮ್ನಕುಮಾರ್ ಖ್ಯಾತ ಚಿತ್ರಕಲಾವಿದ. ಇವರು ತಮ್ಮ ಪತ್ನಿ ಷಾರ್ಲೆಟ್ ವಾನ್ ಶೆಡ್ವಿನ್ರನ್ನು ಭೇಟಿಯಾಗಲೆಂದು 1977ರಲ್ಲಿ ದೆಹಲಿಯಿಂದ ಸ್ವೀಡನ್ಗೆ ಸೈಕಲ್ ತುಳಿದುಕೊಂಡೇ ಹೋಗಿದ್ದರು. ಈ ಪ್ರದ್ಯುಮ್ನ ಕುಮಾರ್ ಅವರು 1975ರ ದಶಕದಲ್ಲಿ ದೆಹಲಿಯಲ್ಲಿ ಒಂದು ಕಲಾ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದರು. ಆದರೆ ತುಂಬ ಬಡವರಾಗಿದ್ದರು. ಆಗ 19ವರ್ಷದಲ್ಲಿದ್ದ ಷಾರ್ಲೆಟ್ ವಾನ್ ಶೆಡ್ವಿನ್ ಅವರು ದೆಹಲಿಗೆ ಪ್ರವಾಸಕ್ಕೆಂದು ಬಂದಾಗ ಪ್ರದ್ಯುಮ್ನಕುಮಾರ್ ಪರಿಚಯವಾಯಿತು. ತಾನು ಯಾರದ್ದೇ ಚಿತ್ರವನ್ನಾದರೂ ಕ್ಷಣದಲ್ಲಿ ಬಿಡಿಸಬಲ್ಲೆ ಎಂದು ಆಕೆಯ ಬಳಿ ಇವರು ಹೇಳಿಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ವಾನ್ ಷಾರ್ಲೆಟ್ ಅವರು ತಮ್ಮ ಚಿತ್ರವನ್ನು ಬಿಡಿಸುವಂತೆ ಕೋರಿದ್ದರು. ಹೀಗೆ ಪ್ರದ್ಯುಮ್ನ ಕುಮಾರ್ ಅವರು ಎರಡು ಬಾರಿ ತಮ್ಮ ಚಿತ್ರ ಬಿಡಿಸಿದ್ದರೂ, ಷಾರ್ಲೆಟ್ಗೆ ಅದು ಇಷ್ಟವಾಗದೆ ಹೋಗಿತ್ತು. ಅದೇ ಹೊತ್ತಲ್ಲಿ, ಇವರಿಬ್ಬರ ನಡುವಿನ ಸ್ನೇಹ, ಮಾತು ಹೆಚ್ಚಾಗಿ, ಪ್ರೀತಿಯಾಗಿ ಮಾರ್ಪಾಡಾಗಿತ್ತು.
ಪ್ರದ್ಯುಮ್ನ ಕುಮಾರ್ ಮತ್ತು ಷಾರ್ಲೆಟ್ ವಾನ್ ಶೆಡ್ವಿನ್ ಪ್ರೀತಿಸಲು ತೊಡಗಿ, ದೆಹಲಿಯಲ್ಲೆಲ್ಲ ಸುತ್ತಾಡಿದರು. ಬಳಿಕ ಷಾರ್ಲೆಟ್ ಅವರನ್ನು ಪ್ರದ್ಯುಮ್ನ ಕುಮಾರ್ ತಮ್ಮೂರಾದ ಒಡಿಶಾಕ್ಕೂ ಕರೆದೊಯ್ದರು. ಅಲ್ಲಿ ತಮ್ಮ ತಂದೆಗೆ ಪರಿಚಯ ಮಾಡಿಸಿದರು. ಆಗೆಲ್ಲ ಷಾರ್ಲೆಟ್ ಸೀರೆಯುಟ್ಟು, ಭಾರತೀಯ ನಾರಿಯಂತೆ ನಡೆದುಕೊಂಡರು. ಸಮಯ ಹೀಗೆ ಕಳೆಯುತ್ತಿದ್ದಾಗಲೇ ಷಾರ್ಲೆಟ್ ವಾಪಸ್ ಹೋಗುವ ಸಮಯವೂ ಬಂದೇ ಬಿಟ್ಟಿತು. ಆಕೆ ಇನ್ನೂ ವಿದ್ಯಾರ್ಥಿನಿಯಾಗಿದ್ದರಿಂದ ಓದು ಮುಂದುವರಿಯಬೇಕಿತ್ತು. ಮರಳಿ ದೇಶಕ್ಕೆ ಹೋಗುವುದು ಅನಿವಾರ್ಯವಾಗಿತ್ತು. ಹೀಗಾಗಿ ಜೋಡಿ ದೆಹಲಿಗೆ ಬಂದರು. ಪರಸ್ಪರ ದೂರವಾಗುತ್ತಿದ್ದೇವೆ ಎಂಬ ನೋವಿನಲ್ಲೇ ಅವರಿಬ್ಬರೂ ಬುಡಕಟ್ಟು ಸಮುದಾಯದ ಸಂಪ್ರದಾಯದಂತೆ ಮದುವೆಯನ್ನೂ ಆದರು. ಷಾರ್ಲೆಟ್ ವಾಪಸ್ ಸ್ವೀಡನ್ಗೆ ತೆರಳಿದರು.
ಇದನ್ನೂ ಓದಿ: Viral News : ಏರ್ ಇಂಡಿಯಾ ವಿಮಾನದಲ್ಲಿ ತೆಂಗಿನ ಕಾಯಿ ಬ್ಯಾನ್! ವೈರಲ್ ಆಯ್ತು ಸುದ್ದಿ
ಇಷ್ಟೆಲ್ಲ ನಡೆದಿದ್ದು 1975ರಲ್ಲಿ. 1976 ಡಿಸೆಂಬರ್ವರೆಗೂ ಈ ಜೋಡಿ ಪರಸ್ಪರ ಪತ್ರಬರೆದುಕೊಂಡು, ಒಬ್ಬರು ಇನ್ನೊಬ್ಬರ ನೋವಿನಲ್ಲಿ-ನೆನಪಿನಲ್ಲಿ ಕಾಲ ಕಳೆಯುತ್ತಿದ್ದರು. ಆದರೆ ವಿರಹ ಎನ್ನುವುದು ನೆಮ್ಮದಿಯಾಗಿ ಇದ್ದಲ್ಲೇ ಇರಲು ಬಿಡಲಿಲ್ಲ. ಪ್ರದ್ಯುಮ್ನಕುಮಾರ್ ಅವರು ತಮ್ಮ ಪತ್ನಿಯನ್ನು ಭೇಟಿಯಾಗಲೇಬೇಕು ಎಂದು ನಿರ್ಧಾರ ಮಾಡಿಯೇ ಬಿಟ್ಟರು. ಆದರೆ ಸ್ವೀಡನ್ಗೆ ಹೋಗಲು ವಿಮಾನದ ಟಿಕೆಟ್ ಕೊಳ್ಳಲೂ ಅವರ ಬಳಿ ಹಣ ಇರಲಿಲ್ಲ. ಹೀಗಾಗಿ ತನ್ನ ಬಳಿ ಇರುವ ಕೆಲವು ವಸ್ತುಗಳನ್ನು ಮಾರಾಟ ಮಾಡಿ ಒಂದು ಸೈಕಲ್ ಖರೀದಿ ಮಾಡಿದರು. ದೆಹಲಿಯಿಂದ ಸೈಕಲ್ನಲ್ಲೇ ಸ್ವೀಡನ್ನತ್ತ ಪ್ರಯಾಣ ಬೆಳೆಸಿದರು, ಪ್ರೀತಿಯ ಮಡದಿಯನ್ನು ನೋಡಲು..!
ಡಾ.ಪ್ರದ್ಯುಮ್ನಕುಮಾರ್ ಅವರು ಭಾರತದಿಂದ ಸ್ವೀಡನ್ಗೆ ಸೈಕಲ್ನಲ್ಲಿ ಪ್ರಯಾಣ ಮಾಡಲು ತೆಗೆದುಕೊಂಡಿದ್ದು 4 ತಿಂಗಳು, 3 ವಾರ. ದಿನವೊಂದಕ್ಕೆ ಅವರು 70 ಕಿಮೀ ದೂರ ಸೈಕಲ್ ತುಳಿಯುತ್ತಿದ್ದರು. ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್, ಟರ್ಕಿ ಮಾರ್ಗದಲ್ಲಿ ಸಾಗಿದರು. ಮಧ್ಯೆಮಧ್ಯೆ ಅದೆಷ್ಟೋ ಸಲ ಅವರ ಸೈಕಲ್ ಚೈನ್ ತಪ್ಪಿತು. ಮತ್ತಿನ್ನೇನೋ ಸಮಸ್ಯೆ ಆಗುತ್ತಿತ್ತು. ಅದನ್ನೆಲ್ಲ ಸರಿಪಡಿಸಿಕೊಂಡು ಅವರು ತಮ್ಮ ಪ್ರೀತಿಯನ್ನು ತಲುಪಿದ್ದರು. ಬಳಿಕ ಇವಿರಬ್ಬರೂ ಅಧಿಕೃತವಾಗಿ ಮದುವೆಯಾಗಿ, ಇಬ್ಬರು ಮಕ್ಕಳೂ ಹುಟ್ಟಿದ್ದಾರೆ. ಈಗಲೂ ಪ್ರದ್ಯುಮ್ನಕುಮಾರ್ ಕಲಾವಿದನಾಗಿಯೇ ತಮ್ಮ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಈಗ 74 ವರ್ಷ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಖೀ ಸಂಸಾರ ಇವರದ್ದು..