ನವದೆಹಲಿ: ಸಾಯಂಕಾಲ ಕಚೇರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ, ವಾಕಿಂಗ್ ಮುಗಿಸಿ ಹಿಂತಿರುಗುವಾಗ, ಹೆಂಡತಿ ಒತ್ತಾಯ ಮಾಡಿದಳೋ ಎಂದು ಮನೆಗೆ ತರಕಾರಿ ತೆಗೆದುಕೊಂಡು ಹೋಗುತ್ತೀರಿ. ತರಕಾರಿ ಮಾರುವವರೂ ಅಷ್ಟೇ, ಈಗಷ್ಟೇ ತೋಟದಿಂದ ಮಾರುಕಟ್ಟೆಗೆ ಬಂದಿದೆ, ತರಕಾರಿ ಫ್ರೆಶ್ ಇದೆ ಎಂದು ಕೊಡುತ್ತಾರೆ. ನೀವೂ ನೋಡುತ್ತೀರಿ, ಫ್ರೆಶ್ ಇರುವುದನ್ನು ದೃಢಪಡಿಸಿಕೊಳ್ಳುತ್ತೀರಿ ಹಾಗೂ ಖರೀದಿಸುತ್ತೀರಿ. ಆದರೆ, ಹುಷಾರ್, ಬಹುತೇಕ ಸಂದರ್ಭಗಳಲ್ಲಿ ನೀವು ಖರೀದಿಸಿದ ತರಕಾರಿ ನೈಸರ್ಗಿಕವಾಗಿ ಫ್ರೆಶ್ ಆಗಿದ್ದಲ್ಲ, ಅದು ರಾಸಾಯನಿಕದಿಂದ (Viral Video) ಫ್ರೆಶ್ ಆಗಿರುತ್ತದೆ.
ಹೌದು, ಬೆಳಗ್ಗೆಯೇ ಮಾರುಕಟ್ಟೆಗೆ ಬಂದ, ಸಂಜೆಯಾಗುತ್ತಲೇ ಬಾಡಿದ ತರಕಾರಿಯನ್ನು ಫ್ರೆಶ್ ಆಗಿ ಕಾಣುವ, ಯಾರು ನೋಡಿದರೂ, ಒಂದೇ ನೋಟಕ್ಕೆ ಖರೀದಿಸುವ ರೀತಿಯಲ್ಲಿ ಕೆಮಿಕಲ್ ಮಿಶ್ರಿತ ನೀರಿನಲ್ಲಿ ಮುಳುಗಿಸಿ ತೆಗೆಯಲಾಗುತ್ತದೆ. ರಾಸಾಯನಿಕದ ಪರಿಣಾಮದಿಂದಾಗಿ, ಯಾವುದೇ ಬಾಡಿದ ಸೊಪ್ಪು, ತರಕಾರಿ ಫ್ರೆಶ್ ಆಗಿ ಕಾಣುತ್ತದೆ. ಹೀಗೆ ರಾಸಾಯನಿಕದಿಂದ ತರಕಾರಿಯನ್ನು ಫ್ರೆಶ್ ಆಗಿ ಮಾಡುವ ವಿಡಿಯೊವನ್ನು ಅಮಿತ್ ತಧಾನಿ ಎಂಬುವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ವಿಡಿಯೊ ವೈರಲ್ ಆಗಿದೆ.
ಇಲ್ಲಿದೆ ಭಯಾನಕ ವಿಡಿಯೊ
ಪೂರ್ತಿಯಾಗಿ ಬಾಡಿದ, ತಿನ್ನಲು ಸಾಧ್ಯವಾಗದ ತರಕಾರಿಯನ್ನು ಮಾರಾಟಗಾರರು ರಾಸಾಯನಿಕದಲ್ಲಿ ಮುಳುಗಿಸಿ ತೆಗೆಯುತ್ತಾರೆ. ಕೆಲವೇ ಸೆಕೆಂಡ್‌ಗಳಲ್ಲಿ ಆ ತರಕಾರಿ ಹಸಿರಾಗಿ, ತಾಜಾ ತರಕಾರಿಯಂತೆ ಕಾಣುತ್ತದೆ. ಇಂತಹ ತರಕಾರಿಯನ್ನು ತಿಂದರೆ, ರಾಸಾಯನಿಕ ದೇಹ ಸೇರಿ ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. ಹಾಗಾಗಿ, ತರಕಾರಿ ಖರೀದಿಸುವಾಗ ಜನ ಎಚ್ಚರಿಕೆಯಿಂದ ಇರಬೇಕು ಎಂದೂ ಸಲಹೆ ನೀಡಲಾಗುತ್ತಿದೆ. ಆದರೆ, ಯಾವುದೇ ತರಕಾರಿಯನ್ನು ರಾಸಾಯನಿಕಯುಕ್ತವೋ, ಅಲ್ಲವೋ ಎಂಬುದನ್ನು ಹೇಗೆ ಗುರುತಿಸಬೇಕು ಎಂಬುದೇ ಗೊಂದಲ ಮೂಡಿಸಿದೆ.
ಅಮಿತ್ ತಧಾನಿ ಅವರು ಶೇರ್ ಮಾಡಿದ ವಿಡಿಯೊವನ್ನು 4.76 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ನೂರಾರು ಜನ ಪ್ರತಿಕ್ರಿಯಿಸಿದ್ದಾರೆ. “ಇದು ತುಂಬ ಭಯ ಹುಟ್ಟಿಸುವ ವಿಡಿಯೊ. ಇಂತಹ ನಕಲಿ ತರಕಾರಿಯನ್ನು ಗುರುತಿಸುವುದು ಹೇಗೆ? ಸಾಮಾನ್ಯವಾಗಿ ಮನೆಯಲ್ಲಿ ತರಕಾರಿಯನ್ನು ತೊಳೆದು ಅಡುಗೆ ಮಾಡುತ್ತೇವೆ. ಆದರೆ, ಇನ್ನು ಮುಂದೆ ಸಾಬೂನು ಹಾಕಿ ತೊಳೆಯಬೇಕೆ” ಎಂಬುದಾಗಿ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ತರಕಾರಿ ಯಾವುದರಲ್ಲಿ ತೊಳೆಯಬೇಕು?
ಮತ್ತೊಬ್ಬರು ಪ್ರತಿಕ್ರಿಯಿಸಿ, “ನಿಮಗೆ ಪರಿಚಯ ಇದ್ದವರಲ್ಲಿ ಮಾತ್ರ ತರಕಾರಿ ಖರೀದಿಸಿ. ಅದನ್ನೂ ಮನೆಗೆ ತಂದಾಗ ಚೆನ್ನಾಗಿ ತೊಳೆಯಿರಿ. ಮನೆಯಲ್ಲಿ ಸ್ವಲ್ಪ ಜಾಗವಿದ್ದರೂ ನೀವೇ ತರಕಾರಿ ಬೆಳೆಯಿರಿ. ಇದರಿಂದ ಆರೋಗ್ಯ ಸುಧಾರಿಸುತ್ತದೆ” ಎಂದು ಸಲಹೆ ನೀಡಿದ್ದಾರೆ. ಇದುವರೆಗೆ ರಾಸಾಯನಿಕ ಬಳಸಿ ಬಾಳೆ ಸೇರಿ ಹಲವು ರೀತಿಯ ಕಾಯಿಗಳನ್ನು ಹಣ್ಣು ಮಾಡಲಾಗುತ್ತಿತ್ತು. ಈಗ ತರಕಾರಿಗೂ ಇದೇ ಪದ್ಧತಿ ರೂಢಿಯಾಗಿರುವುದು ಜನರ ಆತಂಕ ಹೆಚ್ಚಿಸಿದೆ.
ಇದನ್ನೂ ಓದಿ: Viral Video : ಮಾರುದ್ದದ ವಿಷಕಾರಿ ಹಾವನ್ನು ಕೈನಲ್ಲಿ ಹಿಡಿದು ವಿಡಿಯೊ ಮಾಡಿದ ವ್ಯಕ್ತಿ; ಇಲ್ಲಿದೆ ನೋಡಿ ವೈರಲ್ ವಿಡಿಯೊ