Site icon Vistara News

ಗರ್ಲ್‌ಫ್ರೆಂಡ್‌ ಪರ ಪರೀಕ್ಷೆ ಬರೆಯಲು ಆಕೆಯಂತೆ ವೇಷ ಧರಿಸಿ ಹೋದ ಭೂಪ; ಸಿಕ್ಕಿಬಿದ್ದಿದ್ದು ಹೇಗೆ?‌

Girlfriend

Man Dressed As His Girlfriend To Write Exam On Her Behalf, Caught

ಚಂಡೀಗಢ: ಎವರಿಥಿಂಗ್‌ ಈಸ್‌ ಫೇರ್‌ ಇನ್‌ ಲವ್‌ ಆ್ಯಂಡ್‌ ವಾರ್‌ (Everything Is Fair In Love And War) ಎಂಬ ಮಾತಿದೆ. ಪ್ರೀತಿ ಕುರುಡು (Love Is Blind) ಎಂದು ಕೂಡ ಹಿರಿಯರು ಹೇಳಿದ್ದಾರೆ. ಇಂತಹದ್ದೇ ಮಾತುಗಳಿಂದ ಸ್ಫೂರ್ತಿಗೊಂಡು ಪಂಜಾಬ್‌ನಲ್ಲಿ ವ್ಯಕ್ತಿಯೊಬ್ಬ ಗರ್ಲ್‌ಫ್ರೆಂಡ್‌ (Girl Friend) ಪರವಾಗಿ ಪರೀಕ್ಷೆ ಬರೆಯಲು ಆಕೆಯಂತೆಯೇ ವೇಷ ಧರಿಸಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾನೆ. ಕೊನೆಗೆ ಸಿನಿಮೀಯ ರೀತಿಯಲ್ಲಿ ಪರೀಕ್ಷಾ ಕೇಂದ್ರದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಗರ್ಲ್‌ಫ್ರೆಂಡ್‌ಗೆ ಈತ ಮಾಡಿದ ಸಾಹಸದ ಸುದ್ದಿ ಈಗ ಭಾರಿ ವೈರಲ್‌ ಆಗಿದೆ.

ಪಂಜಾಬ್‌ನ ಕೊಟ್ಕಪುರದಲ್ಲಿರುವ ಡಿಎವಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಆರೋಗ್ಯ ಕಾರ್ಯಕರ್ತೆಯರ ನೇಮಕಕ್ಕಾಗಿ ಬಾಬಾ ಫರೀದ್‌ ಯುನಿವರ್ಸಿಟಿ ಆಫ್‌ ಹೆಲ್ತ್‌ ಸೈನ್ಸಸ್‌ ವತಿಯಿಂದ ಪರೀಕ್ಷೆ ನಡೆದಿದೆ. ಇದೇ ವೇಳೆ ಫಜಿಲ್ಕಾ ನಿವಾಸಿಯಾದ ಅಂಗ್ರೇಜ್‌ ಸಿಂಗ್‌ ಎಂಬ ಯುವಕನು ತನ್ನ ಗರ್ಲ್‌ಫ್ರೆಂಡ್‌ ಪರಮ್‌ಜೀತ್‌ ಕೌರ್‌ ಪರವಾಗಿ ಪರೀಕ್ಷೆ ಬರೆಯಲು ತೀರ್ಮಾನಿಸಿದ್ದಾನೆ. ತನ್ನ ಗರ್ಲ್‌ಫ್ರೆಂಡ್‌ ರೀತಿ ಕಾಣಲು ತಲೆಗೆ ವಿಗ್‌ ಧರಿಸಿ, ಮೇಕಪ್‌ ಮಾಡಿಸಿಕೊಂಡು ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾನೆ.

ಪರಮ್‌ಜೀತ್‌ ಕೌರ್‌ ಗುರುತಿನ ಚೀಟಿಯನ್ನು ನಕಲಿ ಮಾಡಿಸಿದ್ದಾನೆ. ಆಧಾರ್‌ ಕಾರ್ಡ್‌ ಸೇರಿ ಎಲ್ಲ ಗುರುತಿನ ಚೀಟಿಗಳನ್ನೂ ಪರಮ್‌ಜೀತ್‌ ಕೌರ್‌ ಹೆಸರಿನಲ್ಲಿ ಮಾಡಿಸಿದ್ದಾನೆ. ಇಷ್ಟೆಲ್ಲ ಮಾಡಿಕೊಂಡು ಆತ್ಮವಿಶ್ವಾಸದಲ್ಲಿಯೇ ಆತ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾನೆ. ಈತನನ್ನು ನೋಡಿದ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹಲವು ರೀತಿಯಲ್ಲಿ ಈತನನ್ನು ತಪಾಸಣೆ ಮಾಡಿದ್ದಾರೆ. ಆದರೂ, ಈತ ನಕಲಿ ವ್ಯಕ್ತಿ ಎಂಬುದನ್ನು ಸಾಬೀತುಪಡಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.

ಕೊನೆಗೆ ಈತ ಸಿಕ್ಕಿಬಿದ್ದಿದ್ದು ಹೇಗೆ?

ಪರೀಕ್ಷಾ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಪರಿಶೀಲಿಸಿದರೂ ಈತನನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಆಗಿಲ್ಲ. ಆದರೆ, ಕೊನೆಗೆ ಅಧಿಕಾರಿಗಳು ಈತನ ಎದುರು ಬಯೋಮೆಟ್ರಿಕ್‌ ಮಷೀನ್‌ ತಂದು ಇಟ್ಟಿದ್ದಾರೆ. ಅಂಗ್ರೇಜ್‌ ಸಿಂಗ್‌ ಬೆರಳು ಇಟ್ಟಾಗ ಬಯೋಮೆಟ್ರಿಕ್‌ನಲ್ಲಿ ಗ್ರೀನ್‌ ಸಿಗ್ನಲ್‌ ತೋರಿಸಿಲ್ಲ. ಇದಾದ ಬಳಿಕವೇ ಅಂಗ್ರೇಜ್‌ ಸಿಂಗ್‌ ಎಂಬಾತನು ತನ್ನ ಗರ್ಲ್‌ಫ್ರೆಂಡ್‌ ಪರವಾಗಿ ಪರೀಕ್ಷೆ ಬರೆಯಲು ಆಕೆಯಂತೆಯೇ ವೇಷ ಧರಿಸಿ ಬಂದಿರುವುದು ಬಯಲಾಗಿದೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಅಂಗ್ರೇಜ್‌ ಸಿಂಗ್‌ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ಇದನ್ನೂ ಓದಿ: Viral Video: ಬಹಿರಂಗ ವೇದಿಕೆಯಲ್ಲೇ ಗರ್ಲ್‌ಫ್ರೆಂಡ್‌ಗೆ ದೀರ್ಘವಾಗಿ ಚುಂಬಿಸಿದ ಪ್ರೆಸಿಡೆಂಟ್!

Exit mobile version