ಹೈದರಾಬಾದ್: ದುಡಿದು ತಿನ್ನಲಾಗದ ಕಳ್ಳರು ಕಳ್ಳತನ (Robbery) ಮಾಡಲು ಹತ್ತಾರು ಅಡ್ಡ ಮಾರ್ಗಗಳನ್ನು ಅನುಸರಿಸುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಹೈದರಾಬಾದ್‌ನಲ್ಲಿ (Hyderabad) ವ್ಯಕ್ತಿಯೊಬ್ಬ ಬುರ್ಖಾ ಧರಿಸಿ, ಚಿನ್ನದಂಗಡಿಗೆ ನುಗ್ಗಿ, ಅಂಗಡಿ ಮಾಲೀಕನಿಗೆ ಚಾಕು ಇರಿದು ಕಳ್ಳತನ ಮಾಡಿದ್ದಾನೆ. ಕೈಗೆ ಸಿಕ್ಕ ಆಭರಣ, ವಸ್ತುಗಳನ್ನು ಕದ್ದು ವ್ಯಕ್ತಿಯು ಪರಾರಿಯಾಗಿದ್ದಾನೆ. ಸಿಸಿಟಿವಿಯಲ್ಲಿ ಕಳ್ಳತನ ಮಾಡಿದ ವಿಡಿಯೊ ವೈರಲ್ ಆಗಿದೆ. ಅಂಗಡಿ ಮಾಲೀಕರು ಇಂತಹ ಕಳ್ಳರ ಬಗ್ಗೆ ಎಚ್ಚರದಿಂದ ಇರಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಹೈದರಾಬಾದ್ ಹೊರವಲಯದ ಮೆಡ್ಚಾಲ್ ಎಂಬ ಪ್ರದೇಶದಲ್ಲಿರುವ ಚಿನ್ನದ ಅಂಗಡಿಗೆ ಗುರುವಾರ (ಜೂನ್ 20) ಇಬ್ಬರು ಕಳ್ಳರು ನುಗ್ಗಿದ್ದಾರೆ. ಬೈಕ್‌ನಲ್ಲಿ ಬಂದ ಇಬ್ಬರಲ್ಲಿ ಒಬ್ಬ ಬುರ್ಖಾ ಧರಿಸಿದ್ದರೆ, ಇನ್ನೊಬ್ಬ ಹೆಲ್ಮೆಟ್ ಧರಿಸಿದ್ದ. ಗ್ರಾಹಕರ ಸೋಗಿನಲ್ಲಿ ಬಂದ ಇವರಲ್ಲಿ ಒಬ್ಬನು ಅಂಗಡಿ ಮಾಲೀಕನಿಗೆ ಚಾಕು ಇರಿದಿದ್ದಾನೆ. ಇದರಿಂದ ವಿಚಲಿತನಾದ ಅಂಗಡಿ ಮಾಲೀಕನು ಅಂಗಡಿಯಿಂದ ಹೊರಗೆ ಓಡಿದ್ದಾನೆ. ಇದೇ ವೇಳೆ ಕಳ್ಳರು ಕೈಗೆ ಸಿಕ್ಕ ಆಭರಣ, ವಸ್ತುಗಳನ್ನು ಬ್ಯಾಗ್‌ಗೆ ತುಂಬಿಕೊಂಡು ಪರಾರಿಯಾಗಿದ್ದಾರೆ.
#WATCH : On camera, man dressed in burqa robs Hyderabad jewellery shop, stabs owner.#Hyderabad #cctv #LootVideo #Burqa #Robbery pic.twitter.com/GT7BtIeX3p
— upuknews (@upuknews1) June 21, 2024
ಚಿನ್ನದ ಆಭರಣಗಳ ಅಂಗಡಿಯಲ್ಲಿ ಇಬ್ಬರೇ ಇದ್ದರು. ಬುರ್ಖಾಧಾರಿ ಕಳ್ಳನು ಚಾಕು ತೆಗೆಯುತ್ತಲೇ ಮಾಲೀಕನ ಮಗನು ಒಳಗೆ ಹೋಗಿದ್ದಾನೆ. ಇದೇ ವೇಳೆ ಕಳ್ಳನು ಮಾಲೀಕನಿಗೆ ಚಾಕು ಇರಿದಿದ್ದಾನೆ. ಇದೇ ವೇಳೆ ಅಂಗಡಿ ಮಾಲೀಕನು ಹೊರಗೆ ಓಡಿ ಹೋಗಿದ್ದಾನೆ. ಕಳ್ಳರು ಕೆಲ ವಸ್ತುಗಳನ್ನು ಬ್ಯಾಗ್‌ಗೆ ತುಂಬಿಕೊಂಡಿದ್ದಾರೆ. ಹೊರಗೆ ಹೋದ ಮಾಲೀಕನು ಅಕ್ಕಪಕ್ಕದವರನ್ನು ಕರೆಯುವ ಭೀತಿಯಿಂದ ಕಳ್ಳರು ಭಯದಲ್ಲಿಯೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅಂಗಡಿ ಮಾಲೀಕ ಹಾಗೂ ಮಗ ಸೇರಿ ಕಳ್ಳರನ್ನು ಓಡಿಸಿದ್ದಾರೆ.
ಅಂಗಡಿ ಮಾಲೀಕನು ಚಾಣಾಕ್ಷತನದಿಂದ ಅಂಗಡಿ ಬಿಟ್ಟು ಹೊರಗೆ ಓಡಿ ಹೋಗಿದ್ದೇ ಭಾರಿ ಪ್ರಮಾಣದ ಆಭರಣಗಳ ಕಳ್ಳತನ ತಡೆಯಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ. ಅಂಗಡಿಯಲ್ಲಿದ್ದ ಕುರ್ಚಿಗಳನ್ನು ಕಳ್ಳರತ್ತ ಎಸೆಯುವ ಮೂಲಕ ಇಬ್ಬರೂ ಧೈರ್ಯ ತೋರಿದ್ದಾರೆ. ಕಳ್ಳರು ಕದ್ದಿದ್ದ ಒಂದಷ್ಟು ವಸ್ತುಗಳನ್ನು ಬಿಟ್ಟು, ಬೈಕ್ ಹತ್ತಿ ಪರಾರಿಯಾಗಿದ್ದಾರೆ. ಇಷ್ಟೂ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.