ಭೋಪಾಲ್: ಈಗ ಕಾಲ ಬದಲಾಗಿದೆ. ಹುಡುಗಿ ನೋಡಲು ಹೋದರೆ ಸರ್ಕಾರಿ ಉದ್ಯೋಗ (Government Job) ಕೇಳುತ್ತಾರೆ. ಐಟಿ ಕಂಪನಿಯಲ್ಲಿ ಜಾಬ್, 10-20 ಎಕರೆ ಜಮೀನು, ಓಡಾಡಲು ಕಾರೇ ಇರಬೇಕು ಎಂಬುದು ಹುಡುಗಿ ಹಾಗೂ ಆಕೆಯ ಮನೆಯವರ ಬೇಡಿಕೆಯಾಗಿರುತ್ತದೆ. ಅದರಲ್ಲೂ, ಆಟೋ ಚಾಲಕರಾಗಿದ್ದರೆ, ರೈತರಾಗಿದ್ದರೆ ಮದುವೆಯಾಗಲು ಯುವತಿಯರು ಹಿಂದೇಟು ಹಾಕುತ್ತಾರೆ. ಮಧ್ಯಪ್ರದೇಶದಲ್ಲಿ (Madhya Pradesh) ಇದರಿಂದ ಬೇಸತ್ತ ಆಟೋ ಚಾಲಕನೊಬ್ಬ, ತನ್ನ ಇ-ರಿಕ್ಷಾಗೆ (E-Rikshaw) ಫೋಟೊ ಹಾಗೂ ಸ್ವವಿವರವುಳ್ಳ ಬಯೋಡೇಟಾ ಅಂಟಿಸಿದ್ದಾನೆ. ಈ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ (Viral News) ಆಗಿದೆ.
ಹೌದು, ಮಧ್ಯಪ್ರದೇಶದ ದಾಮೋಹ್‌ನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿರುವ 29 ವರ್ಷದ ದೀಪೇಂದ್ರ ರಾಥೋಡ್ ಅವರು ಇಂತಹ ಉಪಾಯ ಮಾಡಿದ್ದಾರೆ. ಬಯೋಡೇಟಾ, ಫೋಟೊ ಇರುವ ದೊಡ್ಡದೊಂದು ಹೋರ್ಡಿಂಗ್‌ಅನ್ನು ತಮ್ಮ ಆಟೋಗೆ ಅಳವಡಿಸಿದ್ದಾರೆ. ಈ ಮೂಲಕವಾದರೂ ಹುಡುಗಿ ಸಿಕ್ಕು, ತಮ್ಮ ಏಕಾಂಗಿ ಜೀವನಕ್ಕೆ ವಿದಾಯ ಹೇಳಿ, ಜಂಟಿಯಾಗಬೇಕು ಎಂಬುದು ಅವರ ಉಪಾಯವಾಗಿದೆ. ಎಷ್ಟು ಹುಡುಕಿದರೂ ಹುಡುಗಿ ಸಿಗದೆ, ನೋಡಲು ಹೋದಾಗ ಅವರು ಇಡುವ ಬೇಡಿಕೆಗಳನ್ನು ಪೂರೈಸಲು ಆಗದೆ ಕೊನೆಗೆ ಇವರು ಈ ಉಪಾಯ ಮಾಡಿದ್ದಾರೆ ಎನ್ನಲಾಗಿದೆ.
ಆಟೋಗೆ ಫೋಟೊ, ಬಯೋಡೇಟಾ ಅಳವಡಿಸಿರುವ ಕುರಿತು ಸುದ್ದಿಗಾರರೊಂದಿಗೆ ದೀಪೇಂದ್ರ ರಾಥೋಡ್ ಮಾತನಾಡಿದ್ದಾರೆ. “ನಾನು ಒಂದಷ್ಟು ಹುಡುಗಿಯರನ್ನು ನೋಡಿದೆ. ಅವರು ಹಣ-ಆಸ್ತಿ ನೋಡಿದರು. ಆಟೋ ಡ್ರೈವರ್ ಎಂದ ಕೂಡಲೇ ಒಂದಷ್ಟು ಹುಡುಗಿಯರು ಮೂಗು ಮುರಿದರು. ನನ್ನ ಸಂಬಂಧಿಕರೂ ಹುಡುಗಿ ಹುಡುಕುವುದನ್ನು ಬಿಟ್ಟರು. ಹಾಗಾಗಿ, ಬಯೋಡೇಟಾ, ಫೋಟೊವನ್ನು ಆಟೋಗೆ ಅಳವಡಿಸಿದ್ದೇವೆ. ಯಾವುದಾದರು ಹುಡುಗಿ ಸಿಕ್ಕರೆ ಮದುವೆಯಾಗಲು ಸಿದ್ಧನಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: IND vs ENG: ಧೋನಿಯ ಶೈಲಿಯಲ್ಲೇ ವಿಕೆಟ್ ಕೀಪಿಂಗ್ ನಡೆಸಿದ ಜುರೆಲ್; ವಿಡಿಯೊ ವೈರಲ್
ಜಾತಿ-ಧರ್ಮದ ಸಂಕೋಲೆ ಇಲ್ಲ
“ನಮ್ಮ ಜಾತಿಯಲ್ಲಿ ಹುಡುಗಿಯರ ಸಂಖ್ಯೆ ಕಡಿಮೆ ಇದೆ. ಹಾಗಂತ, ನಾನು ಜಾತಿ-ಧರ್ಮದ ಗಡಿ ಹಾಕಿಕೊಂಡಿಲ್ಲ. ನಾನು ಯಾವುದೇ ಜಾತಿ-ಧರ್ಮದ ಹುಡುಗಿಯನ್ನು ಮದುವೆಯಾಗಲು ಸಿದ್ಧನಿದ್ದೇನೆ. ನನಗೆ ಮದುವೆಯಾಗುವುದು ಅಷ್ಟೇ ಮುಖ್ಯ” ಎಂದು ತಿಳಿಸಿದ್ದಾರೆ. “ಓದಲು-ಬರೆಯಲು ಬರುತ್ತದೆ. ದುಡಿದು ಹಾಕಲು ಆಟೋ ಇದೆ. ಮದುವೆಯಾಗುವ ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ” ಎನ್ನುವ ದೀಪೇಂದ್ರ ರಾಥೋಡ್ ಅವರನ್ನು ವರಿಸುವವರು ಸಂಪರ್ಕಿಸಬಹುದಾಗಿದೆ. ಒಟ್ಟಿನಲ್ಲಿ, ಆಟೋ ಚಾಲಕರು ತಮ್ಮ ಆಟೋಗಳ ಹಿಂದೆ ಕಿರು ಸಾಲುಗಳ (ಒನ್ ಲೈನರ್ಸ್) ಮೂಲಕವೇ ಸೃಜನಶೀಲತೆಯನ್ನು ಹೊರಹಾಕುತ್ತಿದ್ದರು. ಈಗ ದೀಪೇಂದ್ರ ಅವರು ಹೊಸ ಕ್ರಿಯೇಟಿವಿಟಿ ಪ್ರದರ್ಶಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ