Site icon Vistara News

ಇಂಟರ್‌ವ್ಯೂವ್‌ಗೆ ಹೋಗಿ ಕಚೇರಿಯ ಟಾಯ್ಲೆಟ್‌ ಫ್ಲಶ್‌ ಮಾಡದವನಿಗೆ ಜಾಬ್‌ ಮಿಸ್; ನೀವು ಹುಷಾರ್!

Toilet Flush

Man loses job offer after forgetting to flush toilet during interview

ನವದೆಹಲಿ: ಉದ್ಯೋಗಕ್ಕಾಗಿ ಸಂದರ್ಶನಕ್ಕೆ ತೆರಳಿದವರು ಏಕೆ ಜಾಬ್‌ ಗಿಟ್ಟಿಸಿಕೊಳ್ಳುವುದಿಲ್ಲ? ಬಾಸ್‌ ಕೇಳಿದ ಪ್ರಶ್ನೆಗೆ ಉತ್ತರ ಹೊಳೆದಿರುವುದಿಲ್ಲ. ಎಲ್ಲ ಉತ್ತರ ಗೊತ್ತಿದ್ದೂ ಗಾಬರಿಯಲ್ಲಿ ಉತ್ತರಿಸಲು ಆಗದೆ, ಏನೋ ಹೇಳಲು ಹೋಗಿ, ಇನ್ನೇನೋ ಹೇಳಿ ಭಾನಗಡಿ ಮಾಡಿಕೊಳ್ಳುತ್ತಾರೆ. ಆ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಎಡವುತ್ತಾರೆ. ಆದರೆ, ವ್ಯಕ್ತಿಯೊಬ್ಬ ಸಂದರ್ಶನಕ್ಕೆಂದು (Job Interview) ಕಂಪನಿಗೆ ತೆರಳಿ, ಆ ಕಂಪನಿಯ ಶೌಚಾಲಯದಲ್ಲಿ ಫ್ಲಶ್‌ (Toilet Flush) ಮಾಡದ ಕಾರಣಕ್ಕಾಗಿ ಉದ್ಯೋಗ ಕಳೆದುಕೊಂಡಿದ್ದಾನೆ. ಈ ಸುದ್ದಿ ಈಗ ವೈರಲ್‌ (Viral News) ಆಗಿದೆ.

ಹೌದು, ಶೌಚಾಲಯದಲ್ಲಿ ಫ್ಲಶ್‌ ಮಾಡದ ಕಾರಣ ವ್ಯಕ್ತಿಯೊಬ್ಬ ಉದ್ಯೋಗದ ಅವಕಾಶ ಕೈತಪ್ಪಿಸಿಕೊಂಡಿರುವ ಕುರಿತು ರೆಡಿಟ್‌ನಲ್ಲಿ (Reddit) ಪೋಸ್ಟ್‌ ಮಾಡಿದ್ದಾನೆ. “ನಾನು ಮಾಡಿದ ಸಣ್ಣ ತಪ್ಪಿಗೆ ದೊಡ್ಡ ಬೆಲೆ ತೆತ್ತಿದ್ದೇನೆ. ನನ್ನ‌ ಕನಸಿನ ಜಾಬ್‌ ಈಗ ಕೈತಪ್ಪಿದೆ. ಸಂದರ್ಶನದ ಬಳಿಕ ಶೌಚಾಲಯಕ್ಕೆ ತೆರಳಿದ ನಾನು, ಮೂತ್ರ ವಿಸರ್ಜನೆ ಬಳಿಕ ಫ್ಲಶ್‌ ಮಾಡುವುದನ್ನು ಮರೆತೆ. ಇದೇ ಕಾರಣಕ್ಕೆ ನಾನಿಂದು ಉದ್ಯೋಗ ಗಿಟ್ಟಿಸಿಕೊಳ್ಳಲು ಆಗಲಿಲ್ಲ” ಎಂದು ದುಃಖತಪ್ತನಾಗಿ ಪೋಸ್ಟ್‌ ಮಾಡಿದ್ದಾನೆ. ‌

ವೈರಲ್‌ ಆಗಿರುವ ಪೋಸ್ಟ್

“ನಾನು ಸಂದರ್ಶನದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದೆ. ಬಾಸ್‌ ಕೂಡ ನನ್ನ ಉತ್ತರಗಳಿಂದ ಇಂಪ್ರೆಸ್‌ ಆಗಿದ್ದರು. ಇನ್ನೇನು ನನಗೆ ಆಫರ್‌ ಲೆಟರ್‌ ಕೊಡುವುದು ಒಂದೇ ಬಾಕಿ ಇತ್ತು. ಸಂದರ್ಶನ ಮುಗಿಯಿತಲ್ಲ ಎಂದು ನಾನು ಯುನಿಸೆಕ್ಸ್‌ (ಪುರುಷರು, ಸ್ತ್ರೀಯರು ಹೋಗಬಹುದಾದ ಒಂದೇ ಶೌಚಾಲಯ) ಶೌಚಾಲಯಕ್ಕೆ ತೆರಳಿದೆ. ಮೂತ್ರ ವಿಸರ್ಜನೆ ಮಾಡಿದ ಬಳಿಕ ನಾನು ಹೊರಗೆ ಬಂದೆ. ಇದಾದ ನಂತರ ಮಹಿಳಾ ಉದ್ಯೋಗಿಯೊಬ್ಬರು ಶೌಚಾಲಯಕ್ಕೆ ಹೋದರು. ಅವರು ಫ್ಲಶ್‌ ಮಾಡಿದ ಬಳಿಕವೇ ನನ್ನ ತಪ್ಪಿನ ಅರಿವಾಯಿತು” ಎಂದು ಬರೆದುಕೊಂಡಿದ್ದಾನೆ.

ಇದನ್ನೂ ಓದಿ: Viral Video: ವಾಕಿಂಗ್‌ ಮಾಡುತ್ತ ಬರೋಬ್ಬರಿ 2 ಟ್ರಕ್‌ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹ; ಅಧಿಕಾರಿಯ ವಿಡಿಯೊ ವೈರಲ್‌

“ಟಾಯ್ಲೆಟ್‌ ಫ್ಲಶ್‌ ಮಾಡದ ಕಾರಣ ಆ ಮಹಿಳೆಗೆ ನನ್ನ ಮೇಲೆ ಸಿಟ್ಟು ಬಂದಿದೆ. ಶೌಚಾಲಯದಿಂದ ಹೊರಬಂದ ಕೂಡಲೇ ಆಕೆ ಬಾಸ್‌ಗೆ ಹೋಗಿ ನನ್ನ ಅಚಾತುರ್ಯದ ಕುರಿತು ತಿಳಿಸಿದ್ದಾರೆ. ನನ್ನ ತಪ್ಪು ಕಚೇರಿಯಲ್ಲಿದ್ದ ಎಲ್ಲರಿಗೂ ಗೊತ್ತಾಗಿದೆ. ಇದಾದ ಬಳಿಕ ನನ್ನೆಲ್ಲ ಪೇಪರ್‌ ವರ್ಕ್‌ ಮುಗಿಸಿ, ಆಫೀಸ್‌ನಿಂದ ಹೊರಬಂದೆ. ಆದರೆ, ನನಗೆ ಕಂಪನಿಯ ಎಚ್‌ಆರ್‌ ವಿಭಾಗದಿಂದ ಆಫರ್‌ ಲೆಟರ್ ಬರಲೇ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇವರ ಪೋಸ್ಟ್‌ಗೆ ಒಂದಷ್ಟು ಜನ ಕನಿಕರ ವ್ಯಕ್ತಪಡಿಸಿದರೆ, ಇನ್ನೂ ಒಂದಷ್ಟು ಜನ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಯಾವುದಕ್ಕೂ ನೀವು ಹುಷಾರ್!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version