Site icon Vistara News

Viral Video : ನಾಯಿಮರಿಯನ್ನು ನೆಲಕ್ಕೆ ಬಡಿದು ತುಳಿದು ಸಾಯಿಸಿದ ಕ್ರೂರಿ, ಭಯಾನಕ ವಿಡಿಯೊ ಇಲ್ಲಿದೆ

Dog killing

ಗುನಾ (ಮಧ್ಯಪ್ರದೇಶ): ಕ್ರೌರ್ಯಕ್ಕೆ ಒಂದು ಮಿತಿ ಇರುತ್ತದೆ. ಶತ್ರುವಿನ ಮೇಲೆ ಅಥವಾ ಅಪಾಯಕಾರಿ ಮೃಗಗಳ ಮೇಲೆ ಮನಷ್ಯ ಕೋಪದಲ್ಲಿ ದಾಳಿ ಮಾಡಿದರೆ ಕನಿಷ್ಠ ಪಕ್ಷ ಅದಕ್ಕೊಂದು ಕಾರಣ ಇರುತ್ತದೆ. ಆದರೆ, ಯಾವುದೇ ದುರುದ್ದೇಶವಿಲ್ಲದ ಆಹಾರದ ಆಸೆಗೆ ಸನಿಹ ಬರುವ ಮುಗ್ಧ ಪ್ರಾಣಿಗಳನ್ನು ಬಡಿದು, ವಿಕೃತವಾಗಿ ಕೊಲ್ಲುವುದೆಂದರೆ ಆ ವ್ಯಕ್ತಿ ಶಿಕ್ಷೆ ಅರ್ಹ. ಜತೆಗೆ ಇಂಥ ದೃಶ್ಯಗಳು ನೋಡುಗರ ಕಣ್ಣಲ್ಲಿ ನೀರು ತರದೇ ಇರದು. ಇದೇ ಮಾದರಿಯ ಘಟನೆಯೊಂದು ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಮುಗ್ಧ ನಾಯಿ ಮರಿಯೊಂದು ತನ್ನ ಬಳಿಗೆ ಬಂದಾಗ ವ್ಯಕ್ತಿಯೊಬ್ಬ ಹಾಡಹಗಲೇ ಅದನ್ನು ಎತ್ತಿ ನೆಲಕ್ಕೆ ಅಪ್ಪಳಿಸಿ ಬಳಿಕ ತುಳಿದು ಸಾಯಿಸಿದ ಘಟನೆ ನಡೆದಿದೆ. ಈ ಘಟನೆಯು ಶನಿವಾರ ಬೆಳಿಗ್ಗೆ ಪ್ರದೇಶದ ಸಿಸಿಟಿವಿ ಕ್ಯಾಮೆರಾದಲ್ಲಿ (Viral Video) ಸೆರೆಯಾಗಿದ್ದು, ಭಯಂಕರ ವಿರೋಧ ವ್ಯಕ್ತವಾಗಿದೆ.

ಇಡೀ ಘಟನೆಯ ಆತಂಕಕಾರಿ ವೀಡಿಯೊ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ವ್ಯಕ್ತಿಯು ಅಂಗಡಿಯೊಂದರ ಹೊರಗೆ ಕುಳಿತಿರುವುದ ಕಂಡು ಬಂದಿದೆ. ಆತ ಕುಳಿತಲ್ಲಿಎ ನಾಯಿಮರಿಯೊಂದು ಬರುತ್ತದೆ ಮತ್ತು ಪ್ರೀತಿಯಿಂದ ಬಾಲ ಅಲ್ಲಾಡಿಸುತ್ತದೆ. ಆತ ನಾಯಿಮರಿಯನ್ನು ಎತ್ತಿಕೊಂಡು ಕ್ರೂರವಾಗಿ ಹೊಡೆಯುತ್ತಾನೆ. ನಂತರ ಅದನ್ನು ಒಂದು ಕೈಯಿಂದ ಎತ್ತಿ ನೆಲಕ್ಕೆ ಜೋರಾಗಿ ಎತ್ತಿ ಎಸೆಯುತ್ತಾನೆ. ನೋವಿನಿಂದ ಅರಚುತ್ತಾ ಬಿದ್ದಿದ್ದ ಕುನ್ನಿಯನ್ನು ಪಾದಗಳ ಕೆಳಗೆ ಕ್ರೂರವಾಗಿ ತುಳಿಯುತ್ತಾನೆ. ಅನೇಕ ಬಾರಿ ತುಳಿದು ಪುಡಿಮಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ.

ಈ ಅನಾಹುತಕಾರಿ ದೃಶ್ಯಗಳು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಾಣಿಗಳ ಮೇಲಿನ ಇಂತಹ ಅನವರ್ಶಯಕ ಕ್ರೌರ್ಯದ ಕೃತ್ಯಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಬಹುಶಃ ಸ್ವಲ್ಪ ಆಹಾರವನ್ನು ನಿರೀಕ್ಷಿಸುತ್ತಿದ್ದ ಮುಗ್ಧ ನಾಯಿಮರಿ ಕ್ರೂರ ಕೃತ್ಯಕ್ಕೆ ಬಲಿಯಾಗಿದೆ ಎಂದು ಜನರು ಭಾವಿಸಿದ್ದರಿಂದ ಕೊಂದವನ ಮೇಲೆ ಜನರ ಕೋಪ ಹೆಚ್ಚಾಗಿದೆ.

ಇದನ್ನೂ ಓದಿ : Bhagwant Mann : ಅಪ್ಪ ಮಹಾನ್​ ಕುಡುಕ, ಲಂಪಟ; ಪಂಜಾಬ್ ಸಿಎಂ ಮಾನ್ ಮಾನ ತೆಗೆದ ಪುತ್ರಿ

ಘಟನೆಯ ಸಮಯದಲ್ಲಿ ಅಂಗಡಿಯೊಂದರೊಳಗಿದ್ದ ಇನ್ನೊಬ್ಬ ವ್ಯಕ್ತಿ, ನಾಯಿಮರಿಯ ಕಿರುಚಾಟವನ್ನು ಕೇಳುತ್ತಿದ್ದಂತೆ ಹೊರಗೆ ಧಾವಿಸುತ್ತಿರುವುದು ಕಂಡುಬಂದಿದೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಟ್ಯಾಗ್ ಮಾಡಿ ವಿಷಯವನ್ನು ಗಮನಕ್ಕೆ ತಂದಿದ್ದಾರೆ.

ವೀಡಿಯೊವನ್ನು ಗಮನಿಸಿದ ಮುಖ್ಯಮಂತ್ರಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಭಯಾನಕ ಘಟನೆಯಿಂದ ತೀವ್ರ ದುಃಖಿತನಾಗಿದ್ದೇನೆ. ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಅನಾಗರಿಕ ಕೃತ್ಯಗಳನ್ನು ಮತ್ತು ವೈಯಕ್ತಿಕ ಪ್ರತೀಕಾರವನ್ನು ನಾವು ಖಂಡಿಸುತ್ತೇವೆ ಎಂದು ಅವರು ಬರೆದುಕೊಂಡಿದ್ದಾರೆ.

ಸ್ಥಳೀಯ ಪೊಲೀಸರು ಈ ಘಟನೆಯನ್ನು ಗಮನಿಸಿ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಕೃತ್ಯ ಎಸಗಿದವನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

“ಗುನಾ ಜಿಲ್ಲೆಯಲ್ಲಿ ನಡೆದ ಪ್ರಾಣಿಗಳ ಮೇಲಿನ ಕ್ರೌರ್ಯದ ಘಟನೆ ಹೃದಯ ವಿದ್ರಾವಕವಾಗಿದೆ. ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳುತ್ತಿರುವಾಗ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇಂತಹ ಕ್ರೌರ್ಯದ ಕೃತ್ಯಗಳನ್ನು ಸಹಿಸಲಾಗದು, ಮತ್ತು ಈ ಅಪರಾಧಕ್ಕಾಗಿ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಬರೆಯಲಾಗಿದೆ.

ನೋಯ್ಡಾ ಮೂಲದ ಪ್ರಾಣಿ ದಯಾ ಸಂಘದ ಕಾರ್ಯಕರ್ತ ವಿದಿತ್ ಶರ್ಮಾ, ಬಡ ನಾಯಿಮರಿಗೆ ನ್ಯಾಯ ಕೋರಿ ದಾಳಿಯ ವೀಡಿಯೊವನ್ನು ಎಲ್ಲರ ಗಮನಕ್ಕೆ ತಂದಿದ್ದಾರೆ. ಈ ಪ್ರಕರಣದಲ್ಲಿ ತ್ವರಿತ ಕ್ರಮಕ್ಕಾಗಿ ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

“ವ್ಯಕ್ತಿಯೊಬ್ಬ ನಾಯಿಮರಿಯನ್ನು ಕೊಂದ ಪ್ರಾಣಿ ಕ್ರೌರ್ಯ ಪ್ರಕರಣದ ಬಗ್ಗೆ ತ್ವರಿತ ಕ್ರಮ ಕೈಗೊಂಡಿದ್ದಕ್ಕಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರಿಗೆ ಕೃತಜ್ಞತೆಗಳು. ಧ್ವನಿಯಿಲ್ಲದ ನಮ್ಮ ಸಹಚರರಿಗೆ ನ್ಯಾಯ ಒದಗಿಸುವ ನಿಮ್ಮ ಬದ್ಧತೆಯು ಒಂದು ಪ್ರಬಲ ಪೂರ್ವನಿದರ್ಶನವನ್ನು ರೂಪಿಸುತ್ತದೆ” ಎಂದು ಶರ್ಮಾ ಪೋಸ್ಟ್ ಮಾಡಿದ್ದಾರೆ.

Exit mobile version