Site icon Vistara News

ರೈಲಿನ ಬಿಸಿಬಿಸಿ ಎಂಜಿನ್‌ ಪಕ್ಕದಲ್ಲೇ ಅವಿತು ಕುಳಿತು 190 ಕಿ.ಮೀ. ಪ್ರಯಾಣಿಸಿದ ಯುವಕ!

ಪಟನಾ: ರೈಲಿನ ಎಂಜಿನ್‌ ಎಷ್ಟು ಬಿಸಿ ಇರುತ್ತದೆ ಎಂದು ಊಹಿಸುವುದೂ ಕಷ್ಟ. ಹತ್ತಾರು ಬೋಗಿಗಳು, ಸಾವಿರಾರು ಪ್ರಯಾಣಿಕರನ್ನು ಹೊತ್ತು ಅತಿವೇಗದಲ್ಲಿ ಓಡುವ ಅದರ ತಾಕತ್ತಿಗೆ ಮೂಲವಾಗಿರುವುದೇ ಈ ಎಂಜಿನ್‌ನ ಬಲ. ಅದು ವಸ್ತುಶಃ ಹೊತ್ತು ಉರಿದರಷ್ಟೇ ರೈಲು ಓಡೋದು. ಇನ್ನು ರೈಲಿನ ಎಂಜಿನ್‌ನ ಆಸುಪಾಸು ವಸ್ತುಶಃ ಜಾಗವೇ ಇಲ್ಲ. ಇರುವುದು ಸಣ್ಣ ಇರುಕಲು ಜಾಗ ಅಷ್ಟೆ. ಅಂಥ ಭಯಾನಕ ಬಿಸಿಯ, ಒಬ್ಬ ಮನುಷ್ಯ ಅತ್ಯಂತ ಕಷ್ಟಪಟ್ಟು ಮುದುರಿ ಕುಳಿತುಕೊಳ್ಳಬಹುದಾದ ಸಣ್ಣ ಜಾಗದಲ್ಲೇ ಕುಳಿತು ಯುವಕನೊಬ್ಬ 190 ಕಿ.ಮೀ. ಪ್ರಯಾಣಿಸಿದ ಎಂದರೆ ನಂಬುತ್ತೀರಾ?
ನಂಬಲೇ ಬೇಕು.. ಬಿಹಾರದ ರಾಜ್‌ಗಿರಿಯಿಂದ ಗಯಾಕ್ಕೆ ಹೋಗುವ ಸಾರನಾಥ್‌ ಬುದ್ಧ ಪೂರ್ಣಿಮಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸೋಮವಾರ ಈ ಘಟನೆ ನಡೆದಿದೆ.

ಆಗಿದ್ದೇನು?
ರೈಲು ಸೋಮವಾರ ಮುಂಜಾನೆ ನಾಲ್ಕು ಗಂಟೆ ಹೊತ್ತಿಗೆ ಗಯಾ ನಿಲ್ದಾಣದಲ್ಲಿ ನಿಲ್ಲುತ್ತಿದ್ದಂತೆಯೇ ಲೋಕೊಪೈಲಟ್‌ಗೆ ಕ್ಷೀಣವಾದ ಸ್ವರವೊಂದು ಕೇಳಿಸಿತು. ಅದು ʻಅಣ್ಣಾ ನೀರು ಕೊಡಿ… ನೀರು ಕೊಡಿʼ ಎಂದು ಬೇಡುತ್ತಿತ್ತು. ಲೋಕೊಪೈಲಟ್‌ಗೆ ಎಲ್ಲಿಂದ ಸೌಂಡ್‌ ಬರುತ್ತಿದೆ ಎನ್ನುವುದೇ ಗೊತ್ತಾಗಲಿಲ್ಲ. ಕೊನೆಗೆ ಗಮನವಿಟ್ಟು ಕೇಳಿದಾಗ ಅದು ಅವರು ಕುಳಿತ ಕೆಳಭಾಗದಿಂದ ಬರುತ್ತಿರುವುದು ಅರಿವಾಯಿತು. ಕೂಡಲೇ ಕೆಳಗಿಳಿದು ಟಾರ್ಚ್‌ ಹಾಕಿ ನೋಡಿದರೆ ಎಂಜಿನ್‌ ಪಕ್ಕದ ಅತ್ಯಂತ ಇಕ್ಕಟ್ಟಾದ ಸಣ್ಣ ಜಾಗದಲ್ಲಿ ಯುವಕನೊಬ್ಬ ಮುದುರಿ ಕುಳಿತಿರುವುದು ಕಂಡಿತು. ಕೂಡಲೇ ರೈಲ್ವೆ ರಕ್ಷಣಾ ಪಡೆಗೆ ವಿಷಯ ತಿಳಿಸಿ ಅವರ ನೆರವು ಪಡೆದು ಯುವಕನನ್ನು ರಕ್ಷಿಸಲಾಯಿತು. ಎಂಜಿನ್‌ನ ಬಿಸಿಗೆ ಬಸವಳಿದಿದ್ದ ಯುವಕನಿಗೆ ನೀರು ಕೊಟ್ಟು ಉಪಚರಿಸಲಾಯಿತು. ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ ಆತನನ್ನು ಆಸ್ಪತ್ರೆಗೆ ಸೇರಿಸಬೇಕು, ವಿಚಾರಣೆ ನಡೆಸಬೇಕು ಎಂದು ಪೊಲೀಸರು ಯೋಚಿಸುತ್ತಿದ್ದಂತೆಯೇ ಆತ ಅಲ್ಲಿಂದ ಅವರೆಲ್ಲರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ!

ಎಲ್ಲಿ ಹತ್ತಿಕೊಂಡಿದ್ದ?
ಈಗ ರೈಲ್ವೆ ಇಲಾಖೆ ಮತ್ತು ಸಾರ್ವಜನಿಕರಿಗೆ ಇರುವ ದೊಡ್ಡ ಕುತೂಹಲವೆಂದರೆ ಈ ಯುವಕ ಎಲ್ಲಿ ಈ ಎಂಜಿನ್‌ ಬಾಕ್ಸ್‌ ಒಳಗೆ ತೂರಿಕೊಂಡಿದ್ದ? ಎಷ್ಟು ಹೊತ್ತಿಗೆ ಎನ್ನುವುದು.
ರಾಜ್‌ ಗಿರಿಯಿಂದ ಗಯಾದವರೆಗೆ ರೈಲು ಆರು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಇವುಗಳಲ್ಲಿ ಕೆಲವು ಕಡೆ ಎರಡೇ ನಿಮಿಷ ಮತ್ತು ಪಟನಾ ನಿಲ್ದಾಣದಲ್ಲಿ ಗರಿಷ್ಠ ಎಂದರೆ ಹತ್ತು ನಿಮಿಷ ನಿಲ್ಲುತ್ತದೆ. ಎರಡರಿಂದ ಹತ್ತು ನಿಮಿಷದಲ್ಲಿ ಯಾರೆಂದರೆ ಯಾರೂ ಈ ಇಕ್ಕಟ್ಟಿನ ಜಾಗ ಪ್ರವೇಶಿಸಿ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದು ರೈಲ್ವೆ ಅಧಿಕಾರಿಗಳ ಮಾತು. ಹಾಗಿದ್ದರೆ ರಾಜ್‌ಗಿರಿಯಲ್ಲಿ ರೈಲ್ವೆ ಯಾರ್ಡ್‌ನಲ್ಲಿ ನಿಂತಿದ್ದಾಗಲೇ ಆತ ಹತ್ತಿ ಕುಳಿತಿದ್ದನೇ ಎಂಬುದು ತನಿಖೆ ವೇಳೆ ತಿಳಿದುಬರಬೇಕಾಗಿದೆ.

ಹೇಗೆ ಕುಳಿತಿದ್ದನೋ?
ನಿಜವೆಂದರೆ ಅಲ್ಲಿ ಒಬ್ಬ ಮನುಷ್ಯ ಸರಿಯಾಗಿ ಕುಳಿತುಕೊಳ್ಳುವಷ್ಟು ಜಾಗವೇ ಇಲ್ಲ. ಎಂಜಿನ್‌ನ ಪಕ್ಕದಲ್ಲಿ ಚಕ್ರಗಳ ಮೇಲ್ಭಾಗದಲ್ಲಿ ಇರುವ ಇಷ್ಟೇ ಜಾಗದಲ್ಲಿ ಹೇಗೆ ಕುಳಿತ, ಅಷ್ಟು ಬಿಸಿಯನ್ನು ಹೇಗೆ ಸಹಿಸಿಕೊಂಡ ಎನ್ನುವುದೇ ಅಚ್ಚರಿ ಎನ್ನುತ್ತಾರೆ ಲೋಕೊಪೈಲಟ್‌ ಎಸ್‌. ಚೌಧರಿ ಅವರು.

ಆತ ಮಾನಸಿಕ ಅಸ್ವಸ್ಥ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಯಾರ್ಡ್‌ನಲ್ಲಿ ರೈಲು ನಿಂತಿದ್ದಾಗ ಆ ಕಡೆಗೆ ಹೋದವನು ಕುತೂಹಲದಿಂದ ಹತ್ತಿ ಕುಳಿತಿರಬಹುದು. ರೈಲು ಹೊರಟಾಗಲೂ ಯಾವುದೇ ಅರಿವಿಲ್ಲದೆ ಕುಳಿತು ಕೊನೆಗೆ ಏನು ಮಾಡುವುದು ಎಂದು ತಿಳಿಯದೆ ಅಲ್ಲೇ ಉಳಿದ ಅನಿಸುತ್ತದೆ. ಅದರೆ, ಆರು ನಿಲ್ದಾಣಗಳಲ್ಲಿ ರೈಲು ನಿಂತಾಗಲೂ ಆತ ಯಾಕೆ ಇಳಿದಿಲ್ಲ ಎನ್ನುವುದು ಪ್ರಶ್ನೆಯಾಗಿದೆ. ಅಂತೂ ಆ ಯುವಕನ ಸಾಹಸವಂತೂ ಭಯಾನಕವಾಗಿದೆ.

Exit mobile version