Site icon Vistara News

Viral News : ಇದೆಂಥಾ ಕ್ರೌರ್ಯ; ತಂದೆ ಮೇಲಿನ ಕೋಪಕ್ಕೆ ಮೂವರು ಮಕ್ಕಳಿಗೆ ಕಾರು ಗುದ್ದಿಸಿದ

Accident

ಲಕ್ನೋ: ಉತ್ತರ ಪ್ರದೇಶದ ಲಕ್ನೋದ ಮಲಿಹಾಬಾದ್ನಲ್ಲಿ ಕಾರೊಂದು ಮೂವರು ಮಕ್ಕಳಿಗೆ ಡಿಕ್ಕಿ ಹೊಡೆದಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದೆ. ಈ ಘಟನೆ ಗುರುವಾರ ನಡೆದಿದೆ. ದೈನಿಕ್ ಭಾಸ್ಕರ್​ ವರದಿಯ ಪ್ರಕಾರ ಇದು ಉದ್ದೇಶಪೂರ್ವಕ ಕೃತ್ಯ. ಕಾರಿನ ಚಾಲಕ ಮಕ್ಕಳ ತಂದೆಯ ಮೇಲಿನ ದ್ವೇಷಕ್ಕೆ ಮಕ್ಕಳನ್ನು ಕಾರು ಗುದ್ದಿಸಿ ಕೊಲೆ ಮಾಡಲು ಯತ್ನಿಸಿದ್ದ. ಘಟನೆಯಲ್ಲಿ ಶಿವಾನಿ (8), ಸ್ನೇಹಾ (4) ಮತ್ತು ಕೃಷ್ಣ (3) ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಗುದ್ದಿಸಿ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಗೋವಿಂದ್ ಯಾದವ್​​ನನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದು ಚೆನ್ನಾಗಿ ತದುಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೊಟ್ವಾಲಿಯ ಸಿಂಧರ್ವಾದ ಕಾಜಿ ಖೇಡಾ ಗ್ರಾಮದ ನಿವಾಸಿಯಾದ ಮಕ್ಕಳ ತಂದೆ ವೀರೇಂದ್ರ ಅಲಿಯಾಸ್ ಸೀತಾರಾಮ್​ನೊಂದಿಗೆ ಆರೋಪಿ ಗೋವಿಂದ್​ ಯಾದವ್​ಗೆ ವೈಯಕ್ತಿಕ ದ್ವೇಷ ಇತ್ತು ಎನ್ನಲಾಗಿದೆ. ಈ ಕೋಪಕ್ಕೆ ಮಕ್ಕಳನ್ನು ಕೊಲೆ ಮಾಡಲು ಯತ್ನಿಸಿದ್ದ.

ವೀಡಿಯೊದಲ್ಲಿ ಸೆಡಾನ್ ಕಾರು ಚಲಾಯಿಸಿಕೊಂಡು ಬಂದ ಗೋವಿಂದ್​ ಯಾದವ್​ ಉದ್ದೇಶಪೂರ್ವಕವಾಗಿ ಕಾರನ್ನು ಮಕ್ಕಳೆಡೆಗೆ ತಿರುಗಿಸುವುದು ಕಂಡು ಬಂದಿದೆ. ಕಾರು ಬರುತ್ತಿರುವುದನ್ನು ನೋಡಿ ಭಯಭೀತರಾದ ಮಕ್ಕಳು ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಅದರೆ, ಆರೋಪಿ ಕಾರನ್ನು ತೆಗೆದುಕೊಂಡು ಹೋಗಿ ಗುದ್ದಿಸುತ್ತಾನೆ. ಘಟನೆಯು ಸಮೀಪದ ಸಿಸಿ ಟಿವಿಗಳಲ್ಲಿ ದಾಖಲಾಗಿದೆ.

ಘಟನೆ ನಡೆದ ಬಳಿ ಸ್ಥಳೀಯರು ಮಕ್ಕಳನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗೋವಿಂದ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಅಲ್ಲಿ ನೆರೆದಿದ್ದ ಜನಸಮೂಹವು ಅವನನ್ನು ಹಿಡಿದಿದೆ. ತಂದೆಯ ದೂರಿನ ಮೇರೆಗೆ ಪೊಲೀಸರು ಗೋವಿಂದ್ ಯಾದವ್ ಅವರನ್ನು ಬಂಧಿಸಿದ್ದು, ಅವರ ವಿರುದ್ಧ ಸೆಕ್ಷನ್ 504 ಮತ್ತು 307 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಡಿಯೊ ವೈರಲ್​

ಜುಲೈ 13 ರಂದು ಮಲಿಹಾಬಾದ್​ನ ಕಾಜಿ ಖೇರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೊಗಳು ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರವೇ ವೈರತ್ವದ ಮಾಹಿತಿ ಗೊತ್ತಾಗಿದೆ. ನಾಲ್ಕು, ಐದು ಮತ್ತು ಎಂಟು ವರ್ಷದ ನನ್ನ ಮೂವರು ಮಕ್ಕಳು ತಮ್ಮ ಚಿಕ್ಕಪ್ಪನ ಮನೆಯಿಂದ ಹಿಂದಿರುಗುತ್ತಿದ್ದಾಗ, ಗೋವಿಂದ್ ಅವರ ಕಾರು ಇದ್ದಕ್ಕಿದ್ದಂತೆ ತಿರುವು ತೆಗೆದುಕೊಂಡು ನನ್ನ ಮಕ್ಕಳಿಗೆ ಡಿಕ್ಕಿ ಹೊಡೆದಿದೆ ಎಂದು ವೀರೇಂದ್ರ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಗೋವಿಂದ್ ವಿರುದ್ಧ ಐಪಿಸಿ ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ನಂತರ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಡಿಸಿಪಿ (ಪಶ್ಚಿಮ) ರಾಹುಲ್ ರಾಜ್ ತಿಳಿಸಿದ್ದಾರೆ.

Exit mobile version