Site icon Vistara News

ಮಂಗಲ್ ಪಾಂಡೆ ಜನ್ಮದಿನ | ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಚಾಲನೆ ಕೊಟ್ಟ ಧೀರ

ಮಂಗಲ್ ಪಾಂಡೆ ಎಂಬ ಹೆಸರು ಕೇಳುತ್ತಿದ್ದಂತೆ ಎದೆಯಲ್ಲೊಂದು ರೋಮಾಂಚನ, ಭಾರವಾದ ಹೃದಯದ ಜತೆಗೆ ಕಣ್ಣಂಚಿನಲ್ಲಿ ಒಂದು ಹನಿ ಮೂಡುತ್ತದೆ. ಮೊತ್ತಮೊದಲು ಕೋವಿ ಹಿಡಿದು ಬ್ರಿಟಿಷರ ಎದುರು ನಿಂತ, ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ ಧೀರ! ಮಂಗಲ್ ಪಾಂಡೆ ಬದುಕಿದ್ದು ಅಲ್ಪಾವಧಿಯಾದರೂ, ಅವರ ಕಾರ್ಯದಿಂದ ಅಜರಾಮರ! ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದ, ಭಾರತೀಯರಲ್ಲಿ ಬಂಧಮುಕ್ತಿಯ ಕಿಚ್ಚೆಬ್ಬಿಸಿದ, ತಮ್ಮ 30ನೇ ವಯಸ್ಸಿಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮನಾದ ಯುವಕನ ಸ್ಫೂರ್ತಿ ಕಥೆ ಇಲ್ಲಿದೆ.

ಮಂಗಲ್‌ ಪಾಂಡೆ 19 ಜುಲೈ 1827ರಂದು ಈಗಿನ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ನಾಗವ ಹಳ್ಳಿಯಲ್ಲಿ ಭೂಮಿಹಾರ್‌ ಬ್ರಾಹ್ಮಣ ಕುಟುಂಬದಲ್ಲಿ ದಿವಾಕರ್ ಪಾಂಡೆ, ಅಭೈರಾಣಿ ಪಾಂಡೆ ದಂಪತಿಗೆ ಮಗನಾಗಿ ಜನ್ಮ ಪಡೆದರು. ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ಎಳೆ ವಯಸ್ಸಿನಲ್ಲೇ ತಂದೆ ದಿವಾಕರ್‌ ಪಾಂಡೆಯನ್ನು ಕಳೆದುಕೊಂಡು ಅನಾಥರಾದರು. ನಂತರ, 1849ರಲ್ಲಿ ಬ್ರಿಟಿಷರ ಈಸ್ಟ್‌ ಇಂಡಿಯಾ ಕಂಪನಿಯನ್ನು ಸೇರಿದರು. ಆಗ ಮಂಗಲ್‌ ಪಾಂಡೆಗೆ 22 ವಯಸ್ಸು. ಬೆಂಗಾಲ್ ನೇಟಿವ್ ಇನ್‌ಫೆಂಟ್ರಿಯ 34ನೇ ರೆಜಿಮೆಂಟ್‌ನಲ್ಲಿ ಸಿಪಾಯಿಯಾಗಿ ಸೇರಿದರು.

1857, ಮಾರ್ಚ್‌ನಲ್ಲಿ ನಡೆದ ಒಂದು ಘಟನೆ ಮಂಗಲ್ ಪಾಂಡೆ ಹೆಸರು ಇತಿಹಾಸದಲ್ಲಿ ಅಜರಾಮರವಾಗುವುದಕ್ಕೆ ಕಾರಣವಾಯಿತು.

ಮಂಗಲ್ ಪಾಂಡೆ

ಏನಾಯಿತು 1857ರಲ್ಲಿ?

ಭಾರತವನ್ನು ದೀರ್ಘಕಾಲ ಆಳಬೇಕು ಎಂಬ ಉದ್ದೇಶವನ್ನಿಟ್ಟುಕೊಂಡಿದ್ದ ಬ್ರಿಟಿಷರು ದೇಶದಲ್ಲಿ ಹೊಸ ಬಗೆಯ ಸೇನಾ ಯೋಜನೆ, ರೈಫಲ್‌ಗಳನ್ನು ಪರಿಚಯಿಸುತ್ತಿದ್ದರು. ಅದರದ್ದೇ ಭಾಗವಾಗಿ 1857ರಲ್ಲಿ ಬಂಗಾಳ ಸೇನೆಯಲ್ಲಿ ಬಳಸುತ್ತಿದ್ದ ರೈಫಲ್‌ಗೆ ಒಂದು ಹೊಸ ಬುಲೆಟ್‌ ಕಾರ್ಟ್ರಿಡ್ಜ್‌ ಪರಿಚಯಿಸಲಾಯಿತು. ಈ ಬುಲೆಟ್‌ ಕಾರ್ಟ್ರಿಡ್ಜ್‌ ಆವರೆಗೆ ಬಳಸಲಾಗುತ್ತಿದ್ದ ಬುಲೆಟ್‌ಗಿಂತ ಭಿನ್ನವಾಗಿತ್ತು. ಇದನ್ನು ಬಳಸಬೇಕಾದರೆ ಸೈನಿಕರು ಈ ರೈಫಲ್ ಲೋಡ್ ಮಾಡಲು, ಸಿಪಾಯಿ ಮೊದಲು ಬ್ಯಾರೆಲ್ ಕೆಳಗೆ ಪುಡಿ ಸುರಿಯಲು ಕಾರ್ಟ್ರಿಡ್ಜ್‌ ಹಿಂಭಾಗವನ್ನು ಕಚ್ಚಬೇಕಿತ್ತು. ನಂತರ ಟ್ಯೂಬ್ ತಲೆಕೆಳಗಾಗಿ ಮಾಡಿ, ಕೊನೆಯ-ಭಾಗವನ್ನು ಗುಂಡಿನಿಂದ ತುರುಕಿ ನಂತರ ಉಳಿದ ಕಾಗದವನ್ನು ಹರಿದುಹಾಕಬೇಕಿತ್ತು.

ಇದಕ್ಕೆ ಸೈನಿಕರ ತಕರಾರು ಏನಿರಲಿಲ್ಲ. ಆದರೆ, ಎನ್‌ಫೀಲ್ಡ್‌ ಪಿ-53 ಎಂಬ ರೈಫಲ್‌ಗೆ ಪರಿಚಯಿಸಿದ್ದ ಬುಲೆಟ್‌ ಕಾರ್ಟ್ರಿಡ್ಜ್‌ಗೆ ಹಂದಿ ಹಾಗೂ ಗೋವುಗಳ ಮಾಂಸವನ್ನು ಸವರಲಾಗಿತ್ತು ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಎಲ್ಲರೂ ಕೆಂಡಾಮಂಡಲವಾದರು. ಸೇನೆಯಲ್ಲಿದ್ದ ಹಿಂದು ಹಾಗೂ ಮುಸ್ಲಿಂ ಸೈನಿಕರು ಬ್ರಿಟಿಷರ ವಿರುದ್ಧ ಉದ್ರಿಕ್ತರಾದರು. ಏಕೆಂದರೆ ಹಿಂದುಗಳಿಗೆ ಗೋವು ಪೂಜನೀಯ, ಹಾಗೂ ಮುಸ್ಲಿಮರಿಗೆ ಹಂದಿ ವರ್ಜ್ಯ.

ಉಭಯ ಮತಗಳ ಧಾರ್ಮಿಕ ಭಾವನೆಗೆ ಬ್ರಿಟಿಷರು ಧಕ್ಕೆ ಉಂಟುಮಾಡುತ್ತಿದ್ದಾರೆ ಎಂಬ ಭಾವನೆ ಎಲ್ಲ ಸೈನಿಕರಲ್ಲೂ ಚಿಗುರೊಡೆದಿತ್ತು. ಈ ಬೆನ್ನಲ್ಲೇ ಬ್ರಿಟಿಷ್‌ ಅಧಿಕಾರಿ ಕ್ಯಾಪ್ಟನ್‌ ವಿಲಿಯಮ್‌ ಹ್ಯಾಲಿಡೇ ಪತ್ನಿ ಬೈಬಲ್‌ ಪುಸ್ತಕವನ್ನು ಉರ್ದು ಹಾಗೂ ದೇವನಾಗರಿ ಲಿಪಿಗಳಲ್ಲಿ ಮುದ್ರಿಸಿ ಸೈನಿಕರಿಗೆ ನೀಡುತ್ತಿದ್ದರು. ಭಾರತೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾತಂತರಗೊಳಿಸಲು ಬ್ರಿಟಷರು ನಡೆಸುತ್ತಿರುವ ಹುನ್ನಾರ ಎಂದು ಆಕ್ರೋಶ ವ್ಯಕ್ತವಾಯಿತು.

ಬ್ರಿಟಿಷರು ಅವಧ್‌ ಎಂಬ ಪ್ರದೇಶವನ್ನು 1856ರಲ್ಲಿ ಸ್ವಾಧೀನಕ್ಕೆ ಪಡೆದರು. ಈ ಸಂದರ್ಭದಲ್ಲಿ ಬಂಗಾಳದ ಸೈನಿಕರನ್ನು ಲಖನೌನಲ್ಲಿಯೇ ಇರಿಸಲಾಯಿತು. ಈ ಸ್ವಾಧೀನವು ಬಂಗಾಳದ ಸೈನ್ಯದಲ್ಲಿನ ಸಿಪಾಯಿಗಳ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರಿತು. 19 ಹಾಗೂ 34ನೇ ರೆಜಿಮೆಂಟ್‌ನ ಸಿಪಾಯಿಗಳು ಬರಖ್‌ಪುರದಲ್ಲಿಯೇ ನೆಲೆಗೊಳ್ಳಬೇಕಾಯಿತು. ಎಲ್ಲಿಯೂ ಚಲಿಸುವಂತಿರಲಿಲ್ಲ.

ಸ್ವಾಧೀನದ ಮೊದಲು, ಈ ಸಿಪಾಯಿಗಳು ಲಖನೌದಲ್ಲಿನ ಬ್ರಿಟಿಷ್ ರೆಸಿಡೆಂಟ್‌ಗೆ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸುವ ಹಕ್ಕನ್ನು ಹೊಂದಿದ್ದರು. ಈಸ್ಟ್ ಇಂಡಿಯಾ ಕಂಪನಿಯ ಆಕ್ರಮಣದ ಪರಿಣಾಮವಾಗಿ ಅವಧ್ ಸ್ವತಂತ್ರ ರಾಜಕೀಯ ಘಟಕವಾಗಿ ಉಳಿದಿರಲಿಲ್ಲ. ಹೀಗಾಗಿ ಸಿಪಾಯಿಗಳು ಈ ವಿಶೇಷ ಸ್ಥಾನಮಾನವನ್ನು ಕಳೆದುಕೊಂಡರು.‌

ಇದನ್ನೂ ಓದಿ | ನನ್ನ ಅಮ್ಮ ಎಷ್ಟು ಅಸಾಧಾರಣಳೋ, ಅಷ್ಟೇ ಸರಳ, ತಾಯಿಯ ನೂರನೇ ಜನ್ಮದಿನ ನೂರೆಂಟು ನೆನಪು ಹರವಿಟ್ಟ ಪ್ರಧಾನಿ ಮೋದಿ

ಬ್ರಿಟಿಷರ ವಿರುದ್ಧ ಸಿಡಿದೆದ್ದ ಮಂಗಲ್‌ ಪಾಂಡೆ!

ಬ್ರಿಟಿಷರು ಧಾರ್ಮಿಕವಾಗಿ ಭಾರತೀಯರ ಮೇಲೆ ದಾಳಿ ನಡೆಸಿದ್ದರು. ಸೈನಿಕರ ಮೂಲಭೂತ ಸೌಕರ್ಯಕ್ಕೆ ಪೆಟ್ಟಾಗುವಂತೆ ವರ್ತಿಸಿದ್ದರು. ಇವೆಲ್ಲವೂ ಭಾರತೀಯರಲ್ಲಿ ಬ್ರಿಟಿಷರ ವಿರುದ್ಧ ಸಿಡಿದೇಳಲು ಕಿಡಿ ಹೊತ್ತಿಸಿತ್ತು. ಆದರೆ ಇದಕ್ಕೆ ಒಂದು ಸ್ವರೂಪ ನೀಡುವುದು ಅಗತ್ಯವಿತ್ತು. ಬ್ರಿಟಿಷರ ವಿರುದ್ಧ ಧ್ವನಿ ಎತ್ತಲು ಒಂದು ಗಟ್ಟಿ ಕಂಠದ ಅವಶ್ಯಕತೆಯಿತ್ತು. ಆ ಸಂದರ್ಭದಲ್ಲಿ ಧೀರತನದಿಂದ ಬ್ರಿಟಿಷರ ವಿರುದ್ಧ ತಿರುಗಿಬಿದ್ದ ಯುವಕ ಮಂಗಲ್‌ ಪಾಂಡೆ!

ಅಂದು ಮಾರ್ಚ್‌ 26, 1857. ಆ ಮಧ್ಯಾಹ್ನ ಬರಖ್‌ಪುರ್‌ನಲ್ಲಿ ಮಂಗಲ್‌ ಪಾಂಡೆ ಒಂದು ಸೇನೆಯನ್ನು ಸಿದ್ಧಪಡಿಸಿಕೊಂಡು ಹೋರಾಟಕ್ಕೆ ನಿಂತಿದ್ದರು. ಬ್ರಿಟಿಷರು ಭಾರತೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಬ್ರಿಟಿಷರನ್ನು ಹತ್ಯೆ ಮಾಡಬೇಕು ಎಂದು ಮಂಗಲ್‌ ಪಾಂಡೆ ಮುಂದಾಳತ್ವದಲ್ಲಿ ಅನೇಕರು ಭಾಗಿಯಾಗಿದ್ದರು. ಕಣ್ಣಿಗೆ ಕಾಣುವ ಬ್ರಿಟಿಷ್‌ ಅಧಿಕಾರಿಗಳನ್ನು ಹತ್ಯೆ ಮಾಡಲು ಒಂದು ಲೋಡೆಡ್ ಮಸ್ಕೆಟ್ ಜತೆ ಸಿಪಾಯಿಗಳು ನಿಂತಿದ್ದರು.

ಮೊದಲಿಗೆ ಲೆಫ್ಟಿನೆಂಟ್‌ ಬಾಘ್‌ ಮೇಲೆ ದಾಳಿ ನಡೆಯಿತು. ಪಾಂಡೆ ಹಾರಿಸಿದ ಮೊದಲ ಗುಂಡು ಬಾಘ್‌ಗೆ ತಾಗಲಿಲ್ಲ. ಆದರೆ, ಮತ್ತೊಂದು ಪ್ರಯತ್ನದಲ್ಲಿ ಬಾಘ್ಘ್‌‌ನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾದರು. ಮತ್ತೊಬ್ಬ ಬ್ರಿಟಿಷ್‌ ಅಧಿಕಾರಿ ಮೇಜರ್ ಹ್ಯೂಸನ್‌ನನ್ನೂ ನೆಲಕ್ಕುರುಳಿಸಿದರು. ಬ್ರಿಟಿಷ್‌ ಅಧಿಕಾರಿಗಳು ಹಾಗೂ ಭಾರತೀಯ ಸಿಪಾಯಿಗಳ ನಡುವೆ ಒಂದು ಸಮರವೇ ನಡೆಯಿತು. ಆದರೆ, ಈ ಸಂಗ್ರಾಮದ ಮುಂದಾಳುತನ ವಹಿಸಿದ ಮಂಗಲ್‌ ಪಾಂಡೆಯನ್ನು ಬ್ರಿಟಿಷರು ಸೆರೆ ಹಿಡಿದರು.

ತೀವ್ರವಾಗಿ ಗಾಯಗೊಂಡಿದ್ದ ಮಂಗಲ್‌ ಪಾಂಡೆ ವಿರುದ್ಧ ವಿಚಾರಣೆ ನಡೆಯಿತು. ಈ ವಿಚಾರಣೆಯಲ್ಲಿ ಕೇಳಿದ ಪ್ರಶ್ನೆಗೆ ಧೈರ್ಯದಿಂದ ಉತ್ತರಿಸಿದ ಮಂಗಲ್‌ ಪಾಂಡೆ, ದಾಳಿಯ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಮೇಲೆ ಎಳೆದುಕೊಂಡರು. ವಿಚಾರಣೆಯ ಬಳಿಕ ಮಂಗಲ್ ಪಾಂಡೆಯನ್ನು ಗಲ್ಲಿಗೇರಿಸಲು ಏಪ್ರಿಲ್ 8ರಂದು ದಿನ ನಿಗದಿಪಡಿಸಿ ಆದೇಶಿಸಲಾಯಿತು.

ಮಂಗಲ್‌ ಪಾಂಡೆ ಆ ಹೊತ್ತಿಗಾಗಲೇ ಜನಪ್ರಿಯರಾಗಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿದ್ದ ಕಾರಣದಿಂದ ಅವರ ಮೇಲೆ ಅಭಿಮಾನ ಮೂಡಿತ್ತು. ಹೀಗಾಗಿ ಅವರನ್ನು ಗಲ್ಲಿಗೇರಿಸಲು ಬರಖ್‌ಪುರದಲ್ಲಿ ಒಬ್ಬರೂ ಮುಂಬರುವುದಿಲ್ಲ. ಹೀಗಾಗಿ ಮಂಗಲ್‌ ಪಾಂಡೆಯನ್ನು ಗಲ್ಲಿಗೇರಿಸಲು ಬ್ರಿಟಿಷರು ಕೋಲ್ಕತ್ತಾದಿಂದ ಜನರನ್ನು ಕರೆಸಬೇಕಾಯಿತು. ಏಪ್ರಿಲ್‌ 8, 1857ರಂದು ಅವರನ್ನು ಗಲ್ಲಿಗೇರಿಸಲಾಯಿತು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಡಿ

ಮಂಗಲ್‌ ಪಾಡೆ ಹಾಗೂ ಇತರ ಸಿಪಾಯಿಗಳು ಬ್ರಿಟಿಷರ ವಿರುದ್ಧ ಮಾಡಿದ ಹೋರಾಟವನ್ನು ಬ್ರಿಟಿಷರು ʻಸಿಪಾಯಿ ದಂಗೆʼ ಎಂದು ಹೆಸರಿಸಿದ್ದಾರೆ. ಇದೊಂದು ಸಣ್ಣ ಗಲಭೆ ಎಂದು ಹೇಳಲಾಗಿದೆ. ಆದರೆ, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಈ ಘಟನೆ ಮುನ್ನುಡಿ. ಭಾರತೀಯರು ಮನಸ್ಸು ಮಾಡಿ, ಒಗ್ಗೂಡಿ ನಿಂತರೆ ಬ್ರಿಟಿಷರಿಗೆ ಅಪಾಯ ಎಂಬುದಕ್ಕೆ ಸಾಕ್ಷಿಯಾದ ಘಟನೆಯಾಗಿತ್ತು. ಅಲ್ಲದೆ, ಬ್ರಿಟಿಷರ ಎದೆಯಲ್ಲಿ ಶಾಶ್ವತವಾದ ನಡುಕವನ್ನು ಮಂಗಲ್‌ ಪಾಂಡೆ ಹುಟ್ಟಿಸಿದ್ದರು.

ಇದನ್ನೂ ಓದಿ | ಕವಿ ಎಚ್ಚೆಸ್ವಿ ಜನ್ಮದಿನ: ತೂಗುಮಂಚದ ಕವಿಯ ಓದಬೇಕಾದ 7 ಕವನಗಳು

Exit mobile version