Site icon Vistara News

Mani Shankar Aiyar: ಪಾಕಿಸ್ತಾನವನ್ನು ಕೆಣಕಿದರೆ ಅಣು ಬಾಂಬ್ ಬೀಳಬಹುದು ಹುಷಾರ್! ಮೋದಿಗೆ ಮಣಿಶಂಕರ್ ಅಯ್ಯರ್ ಎಚ್ಚರಿಕೆ!

mani shankar iyer

ನವದೆಹಲಿ: ಕಾಂಗ್ರೆಸ್‌ ಪಾಕಿಸ್ತಾನದ ಫಾಲೋವರ್‌ ಪಕ್ಷ ಎಂದು ಪದೇ ಪದೇ ಬಿಜೆಪಿ ಜಡಿಯುತ್ತಿದ್ದರೂ ಒಂದಿಲ್ಲೊಂದು ಒಂದು ಪಾಕ್‌(Pakistan) ಪರ ಹೇಳಿಕೆ ನೀಡಿ ಕಾಂಗ್ರೆಸ್‌ ನಾಯಕರು ಪಕ್ಷಕ್ಕೆ ಮುಜುಗರ ತರುತ್ತಲೇ ಇದ್ದಾರೆ. ಅಲ್ಲದೇ ಬಿಜೆಪಿ ಆರೋಪಕ್ಕೆ ಆಹಾರವಾಗುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್‌ ನಾಯಕರು ಪಾಕ್‌ ಪರವಾಗಿ ಬ್ಯಾಟಿಂಗ್‌ ಬೀಸಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದೀಗ ಕಾಂಗ್ರೆಸ್ (Congress) ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ (Mani Shankar Aiyar) ಅವರು ಪಾಕ್‌ ಪರ ಹೇಳಿಕೆ ನೀಡಿ ವಿವಾದಕ್ಕಿಡಾಗಿದ್ದಾರೆ. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬಿಜೆಪಿ ತೀವ್ರವಾಗಿ ಖಂಡಿಸಿದೆ.

ವೈರಲ್‌ ಆಗಿರುವ ವಿಡಿಯೋದಲ್ಲೇನಿದೆ?

ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಮಣಿಶಂಕರ್‌ ಅಯ್ಯರ್‌, ಭಾರತ ಪಾಕಿಸ್ತಾನಕ್ಕೆ ಗೌರವ ಕೊಡಬೇಕು ಎಂದು ಹೇಳುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ಭಾರತ ಕೇವಲ ವಿಶ್ವಗುರು ಎಂದು ಹೇಳುತ್ತಾ ಇದ್ದರೆ ಸಾಲದು ನೆರೆಯ ರಾಷ್ಟ್ರ ಪಾಕಿಸ್ತಾನದ ಜೊತೆ ಮೊದಲು ಶಾಂತಿಯುತ ಮಾತುಕತೆ ನಡೆಸಬೇಕು. ಯಾವಾಗಲೂ ಕೈಯಲ್ಲಿ ಬಂದೂಕು ಹಿಡಿದು ಸುತ್ತಾಡಿದರೆ ಯಾವ ಕೆಲಸವೂ ಆಗಲ್ಲ, ಯಾವ ಪರಿಹಾರವೂ ಸಿಗಲ್ಲ. ಅದು ಕೇವಲ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಅಷ್ಟೇ. ಪಾಕಿಸ್ತಾನ ಕೂಡ ಸಾರ್ವಭೌಮ ರಾಷ್ಟ್ರ ಮತ್ತು ಅದಕ್ಕೆ ಅದರದ್ದೇ ಆದ ಗೌರವ ಇದೆ. ಒಂದು ವೇಳೆ ಅಲ್ಲಿ ತಲೆಕೆಟ್ಟ ಮನುಷ್ಯ ಅಧಿಕಾರಕ್ಕೆ ಬಂದರೆ.. ಲಾಹೋರ್‌ನಲ್ಲಿ ಅಣುಬಾಂಬ್‌ ಸ್ಫೋಟಿಸಿದರೆ ಅದರ ಪರಿಣಾಮ ನಮ್ಮ ದೇಶದ ಭಾಗವಾಗಿರುವ ಅಮೃತಸರದ ಮೇಲೂ ಆಗುತ್ತದೆ. ಹೀಗಾಗಿ ನಾನು ಅವರನ್ನು ಗೌರವಿಸಲು ಪ್ರಾರಂಭಿಸಿದರೆ ಅವರು ಬಾಂಬ್‌ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಒಂದು ವೇಳೆ ಅವರನ್ನು ದ್ವೇಷಿಸಿದರೆ ಹುಚ್ಚನೊಬ್ಬ ಬಂದು ಬಾಂಬ್‌ ಸ್ಫೋಟಿಸುತ್ತಾನೆ ಎಂದು ಹೇಳಿದರು. ಮಣಿಶಂಕರ್‌ ಅಯ್ಯರ್‌ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದೆ.

ಈ ಹಿಂದೆಯೂ ಒಮ್ಮೆ ಮಣಿಶಂಕರ್‌ ಅಯ್ಯರ್‌ ಪಾಕ್‌ ಪರ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಪಾಕಿಸ್ತಾನೀಯರನ್ನು ಅವರು “ಭಾರತದ ಅತಿದೊಡ್ಡ ಆಸ್ತಿ” ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. “ನನ್ನ ಅನುಭವದ ಪ್ರಕಾರ, ಪಾಕಿಸ್ತಾನಿಯರು ಬಹುಶಃ ಎದುರಿನವರಿಗೆ ಅತಿ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸುವ ಜನರು. ನಾವು ಸ್ನೇಹಪರರಾಗಿದ್ದರೆ ಅವರು ಅತಿಯಾದ ಸ್ನೇಹಪರರಾಗಿರುತ್ತಾರೆ ಮತ್ತು ನಾವು ದ್ವೇಷಿಸಿದರೆ ಅವರು ತುಂಬಾ ದ್ವೇಷಿಸಬಲ್ಲರು. ಪಾಕಿಸ್ತಾನದಂತೆ ನನ್ನನ್ನು ತೆರೆದ ತೋಳುಗಳಿಂದ ಸ್ವಾಗತಿಸಿದ ಇನ್ನೊಂದು ದೇಶಕ್ಕೆ ನಾನು ಯಾವತ್ತೂ ಹೋಗಿಲ್ಲ” ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದರು.

ಇದನ್ನೂ ಓದಿ: Murder Case : ಕೊಡಗಿನಲ್ಲಿ ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯ ರುಂಡ ಕತ್ತರಿಸಿ ಕೊಂದ ಪ್ರೇಮಿ

ಎರಡು ದಿನಗಳ ಹಿಂದೆ ಹರಿಯಾಣದ ಫರಿದಾಬಾದ್‌ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಮಹೇಂದರ್‌ ಪ್ರತಾಪ್‌ ಸಿಂಗ್‌(Mahender Pratap Singh) 2019ರಲ್ಲಿ ನಡೆದ ಪುಲ್ವಾಮಾ ದಾಳಿ(Pulwama attack) ಪಾಕಿಸ್ತಾನ ನಡೆಸಿರುವುದಲ್ಲ, ಬದಲಿಗೆ ಭಾರತ ಸರ್ಕಾರ ನಡೆಸಿರುವುದು ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿದ್ದರು.

Exit mobile version