Site icon Vistara News

Mani Shankar Aiyar: ಮಣಿಶಂಕರ್‌ ಅಯ್ಯರ್ ಮತ್ತೊಂದು ವಿವಾದ;‌ ಪಾಕ್‌ ಬಳಿಕ ಚೀನಾ ಪರ ಬ್ಯಾಟಿಂಗ್‌!

Mani Shankar Aiyar

Mani Shankar Aiyar

ನವದೆಹಲಿ: ಕಾಂಗ್ರೆಸ್ (Congress) ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ (Mani Shankar Aiyar) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ʼ1962ರಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ನಡೆಸಿದ ಆರೋಪವಿದೆʼ ಎಂದು ಉಲ್ಲೇಖಿಸುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಮಂಗಳವಾರ ವಿದೇಶಿ ಕರೆಸ್ಪಾಂಡೆಂಟ್ಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಣಿಶಂಕರ್ ಅಯ್ಯರ್ ನೀಡಿದ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಅಗುತ್ತಿದ್ದಂತೆ ಕಾಂಗ್ರೆಸ್‌ ಎಚ್ಚೆತ್ತುಕೊಂಡು ಸ್ಪಷ್ಟನೆ ನೀಡಲು ಮುಂದಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ಬಗ್ಗೆ ಮಾತನಾಡಿ, ಮಣಿಶಂಕರ್‌ ಅಯ್ಯರ್‌ ಕ್ಷಮೆಯಾಚಿಸಿದ್ದಾರೆ ಎಂದು ತಿಳಿಸಿದ್ದಾರೆ. ʼʼಮಣಿಶಂಕರ್ ಅಯ್ಯರ್ ಅವರು ʼಆಕ್ರಮಣದ ಆರೋಪʼ ಎಂಬ ಪದವನ್ನು ತಪ್ಪಾಗಿ ಬಳಸಿದ್ದಕ್ಕಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ ಮತ್ತು ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲʼʼ ಎಂದು ಹೇಳಿದ್ದಾರೆ.

ಜತೆಗೆ ಜೈರಾಮ್ ರಮೇಶ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2020ರ ಮೇಯಲ್ಲಿ ನಡೆದ ಚೀನೀಯರ ಅತಿಕ್ರಮಣಕ್ಕೆ ಸಂಬಂಧಿಸಿ ನರೇಂದ್ರ ಮೋದಿ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಜತೆಗೆ “ಅಯ್ಯರ್ ಅವರು ವಯಸ್ಸಿನ ಕಾರಣದಿಂದ ಈ ರೀತಿಯ ಹೇಳಿಕೆ ನೀಡಿದ್ದಾರೆʼʼ ಎಂದೂ ಸ್ಪಷ್ಟನೆ ನೀಡಿದ್ದಾರೆ.

ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, ‘Nehru’s First Recruits’ ಪುಸ್ತಕ ಬಿಡುಗಡೆ ಸಮಾರಂಭದ ವಿಡಿಯೊದಲ್ಲಿ ಮಣಿಶಂಕರ್ ಅಯ್ಯರ್ ʼʼ1962ರ ಅಕ್ಟೋಬರ್‌ನಲ್ಲಿ ಚೀನೀಯರು ಭಾರತದ ಮೇಲೆ ಆಕ್ರಮಣ ಮಾಡಿದ್ದರು ಎಂಬ ಆರೋಪವಿದೆʼʼ ಎಂದು ಹೇಳಿರುವುದು ಕಂಡು ಬಂದಿದೆ. ಬಳಿಕ ಅವರು ಈ ಬಗ್ಗೆ ಮಾತನಾಡಿ, “ವಿದೇಶಿ ಕರೆಸ್ಪಾಂಡೆಂಟ್ಸ್ ಕ್ಲಬ್‌ನಲ್ಲಿ ‘ಚೀನಾದ ಆಕ್ರಮಣ’ಕ್ಕೆ ಮೊದಲು ‘ಆಪಾದಿತ’ ಎಂಬ ಪದವನ್ನು ತಪ್ಪಾಗಿ ಬಳಸಿದ್ದಕ್ಕಾಗಿ ನಾನು ಮುಕ್ತವಾಗಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ಹೇಳಿದ್ದೇನು?

ಇನ್ನು ಮಣಿಶಂಕರ್‌ ಅಯ್ಯರ್‌ ಹೇಳಿಕೆಗೆ ಬಿಜೆಪಿ ಕಿಡಿ ಕಾರಿದೆ. ಅಯ್ಯರ್ ಹೇಳಿಕೆಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ತಿರುಗೇಟು ನೀಡಿ, ‘ʼNehru’s First Recruits’ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಮಣಿಶಂಕರ್‌ ಅಯ್ಯರ್‌ ಅವರು, 1962ರಲ್ಲಿ ನಡೆದ ಚೀನಾದ ಆಕ್ರಮಣವನ್ನು ‘ಆಪಾದಿತ’ ಎಂದು ಉಲ್ಲೇಖಿಸಿದ್ದಾರೆ. ಇದು ನಾಚಿಕೆಗೇಡಿನ ಹೇಳಿಕೆ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

“ಯುಎನ್ಎಸ್‌ಸಿಯಲ್ಲಿನ ಶಾಶ್ವತ ಸ್ಥಾನದ ಮೇಲಿನ ಭಾರತದ ಹಕ್ಕನ್ನು ನೆಹರೂ ಚೀನೀಯರ ಪರವಾಗಿ ಬಿಟ್ಟುಕೊಟ್ಟದ್ದರು. ರಾಹುಲ್ ಗಾಂಧಿ ಚೀನಾ ಜತೆಗಿನ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ರಾಜೀವ್ ಗಾಂಧಿ ಫೌಂಡೇಶನ್ ಚೀನಾದ ರಾಯಭಾರ ಕಚೇರಿಯಿಂದ ಹಣವನ್ನು ಸ್ವೀಕರಿಸಿದೆ ಮತ್ತು ಚೀನೀ ಕಂಪನಿಗಳಿಗೆ ಮಾರುಕಟ್ಟೆ ಪ್ರವೇಶವನ್ನು ಶಿಫಾರಸು ಮಾಡುವ ವರದಿಗಳನ್ನು ಪ್ರಕಟಿಸಿದೆ. ಇದರ ಆಧಾರದ ಮೇಲೆ ಸೋನಿಯಾ ಗಾಂಧಿ ಅವರ ಯುಪಿಎ ಸರ್ಕಾರ ಚೀನಾದ ಸರಕುಗಳಿಗೆ ಭಾರತೀಯ ಮಾರುಕಟ್ಟೆಯನ್ನು ತೆರೆದಿತ್ತು. ಈಗ ಕಾಂಗ್ರೆಸ್ ನಾಯಕ ಅಯ್ಯರ್ ಚೀನಾದ ಆಕ್ರಮಣ ಕೇವಲ ಆರೋಪ ಎಂದು ಕರೆಯುತ್ತಿದ್ದಾರೆʼʼ ಎಂದು ಅಮಿತ್ ಮಾಳವೀಯ ದೂರಿದ್ದಾರೆ. ʼʼಕಾಂಗ್ರೆಸ್‌ಗೆ ಚೀನಾದ ಮೇಲೇಕೆ ಇಷ್ಟೊಂದು ಪ್ರೀತಿ?ʼʼ ಎಂದೂ ಪ್ರಶ್ನಿಸಿದ್ದಾರೆ.

ಇದಕ್ಕೆ ಜೈರಾಮ್‌ ರಮೇಶ್‌ ಪ್ರತಿಕ್ರಿಯಿಸಿ, “1962ರಲ್ಲಿ ನಿಜವಾಗಿಯೂ ಚಿನಾದಿಂದ ಆಕ್ರಮಣ ನಡೆದಿದೆ. ಇದು ಕೇವಲ ಆರೋಪವಲ್ಲ. 1962ರ ಅಕ್ಟೋಬರ್ 20ರಂದು ಭಾರತದ ಮೇಲೆ ಚೀನಾದ ಆಕ್ರಮಣ ಆರಂಭವಾಗಿತ್ತು. 2020ರ ಮೇ ಆರಂಭದಲ್ಲಿಯೂ ಲಡಾಖ್‌ನಲ್ಲಿ ಚೀನಾದ ಅತಿಕ್ರಮಣ ಮತ್ತೆ ನಡೆಯಿತು. ಇದರಲ್ಲಿ ನಮ್ಮ 40 ಸೈನಿಕರು ಹುತಾತ್ಮರಾಗಿದ್ದರು” ಎಂದು ರಮೇಶ್ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಮಣಿಶಂಕರ್‌ ಅಯ್ಯರ್‌, ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಭಾರತ ಪಾಕಿಸ್ತಾನಕ್ಕೆ ಗೌರವ ಕೊಡಬೇಕು ಎಂದು ಹೇಳುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ʼʼಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ಭಾರತ ಕೇವಲ ವಿಶ್ವಗುರು ಎಂದು ಹೇಳುತ್ತಾ ಇದ್ದರೆ ಸಾಲದು ನೆರೆಯ ರಾಷ್ಟ್ರ ಪಾಕಿಸ್ತಾನದ ಜತೆ ಮೊದಲು ಶಾಂತಿಯುತ ಮಾತುಕತೆ ನಡೆಸಬೇಕುʼʼ ಎಂದು ಹೇಳಿದ್ದರು.

ಇದನ್ನೂ ಓದಿ: Mani Shankar Aiyar: ಪಾಕಿಸ್ತಾನವನ್ನು ಕೆಣಕಿದರೆ ಅಣು ಬಾಂಬ್ ಬೀಳಬಹುದು ಹುಷಾರ್! ಮೋದಿಗೆ ಮಣಿಶಂಕರ್ ಅಯ್ಯರ್ ಎಚ್ಚರಿಕೆ!

Exit mobile version