Site icon Vistara News

Mani shankar Aiyar: ಪಾಕಿಸ್ತಾನದ ಜನ ಒಳ್ಳೆಯವರು, ಅವರ ಸಂಕಟಕ್ಕೆ ಮೋದಿ ಕಾರಣ ಎಂದ ಕಾಂಗ್ರೆಸ್‌ ನಾಯಕ

Mani shankar Aiyar

ಹೊಸದಿಲ್ಲಿ: ಪಾಕಿಸ್ತಾನದ ಜನ ಭಾರತವನ್ನು ಶತ್ರುಗಳಂತೆ ಕಾಣುವುದಿಲ್ಲ. ಬದಲಿಗೆ, ಭಾರತದ ಬಗ್ಗೆ ಸದ್ಭಾವನೆಯೇ ಇದೆ ಎಂದು ಕಾಂಗ್ರೆಸ್‌ ಮುಖಂಡ ಮಣಿಶಂಕರ್‌ ಅಯ್ಯರ್‌ (Mani shankar Aiyar) ಹೇಳಿದ್ದಾರೆ.

ತಮ್ಮ ಪುಸ್ತಕ, ʻಮೆಮಾಯಿರ್ಸ್‌ ಆಫ್‌ ಎ ಮೆವರಿಕ್‌- ದಿ ಫಸ್ಟ್‌ ಫಿಫ್ಟಿ ಇಯರ್ಸ್‌ 1941-1991ʼ ಬಿಡುಗಡೆಗೆ ಸಿದ್ಧವಾಗಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನದಲ್ಲಿ ಭಾರತದ ಕನ್ಸೂಲ್‌ ಜನರಲ್‌ ಆಗಿ ಕೆಲಸ ಮಾಡಿದ್ದ ದಿನಗಳನ್ನು ಅವರು ನೆನಪಿಸಿಕೊಂಡರು. 1978ರಿಂದ 1982ರವರೆಗೆ ಅವರು ಕರಾಚಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದರು.

ಭಾರತದ ಬಗ್ಗೆ ಪಾಕಿಸ್ತಾನದಲ್ಲಿ ದ್ವೇಷ ಭಾವವೂ ಇಲ್ಲ, ಹಾಗಂತ ಸ್ನೇಹ ಭಾವವೂ ಇಲ್ಲ. ಪ್ರಧಾನಿ ಮೋದಿ ಅವರಿಗಿಂತ ಮೊದಲಿದ್ದ ಪ್ರತಿಯೊಬ್ಬ ಪ್ರಧಾನಮಂತ್ರಿಯೂ ಒಂದಿಲ್ಲೊಂದು ರೀತಿಯಲ್ಲಿ ಪಾಕಿಸ್ತಾನದೊಂದಿಗೆ ಮಾತುಕತೆಗೆ ಯತ್ನಿಸಿದ್ದರು. ಆದರೀಗ ಎಲ್ಲವೂ ನಿಂತು ಹೋಗಿದೆ ಎಂದಿರುವ ಅವರು, ಉಭಯ ದೇಶಗಳ ನಡುವಿನ ಮಾತುಕತೆಯನ್ನು ಮತ್ತೆ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

ಪಾಕಿಸ್ತಾನದಲ್ಲಿ ಭಾರತಕ್ಕಿರುವ ದೊಡ್ಡ ಆಸ್ತಿಯೆಂದರೆ ಅಲ್ಲಿನ ಜನ. ಅವರು ಭಾರತವನ್ನು ತಮ್ಮ ವೈರಿ ದೇಶವೆಂದು ಪರಿಗಣಿಸಿಲ್ಲ ಎಂದ ಅವರು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡರು. “ಅಲ್ಲಿ ನಿಯೋಜಿತರಾಗಿದ್ದ ಪ್ರಾರಂಭದ ದಿನಗಳಲ್ಲಿ, ಒಮ್ಮೆ ಡಿನ್ನರ್‌ ಮುಗಿಸಿ ಬರುತ್ತಿದ್ದೆವು. ಆಗ ನನ್ನ ಪತ್ನಿ ಸುನೀತಾ ಕೇಳಿದ ಪ್ರಶ್ನೆಯೊಂದು ಕರಾಚಿಯಲ್ಲಿದ್ದಷ್ಟೂ ದಿನಗಳು ನನ್ನ ಮನದಲ್ಲಿತ್ತು. ʻಇದು ನಮ್ಮ ಶತ್ರು ದೇಶ ಅಲ್ಲವೇ?ʼ ಎಂದಾಕೆ ಕೇಳಿದ್ದರು”.

“ಹೀಗಾಗಿ ನಾನೊಂದು ತೀರ್ಮಾನಕ್ಕೆ ಬಂದಿದ್ದೇನೆ. ಸೇನೆಯಲ್ಲಿ ಅಥವಾ ರಾಜಕೀಯವಾಗಿ ಅಭಿಪ್ರಾಯಗಳು ಏನೇ ಇರಲಿ. ಪಾಕಿಸ್ತಾನದ ಜನದ ಮಟ್ಟಿಗೆ ಹೇಳುವುದಾದರೆ, ಅವರು ನಮ್ಮ ಶತ್ರುಗಳಲ್ಲ. ಭಾರತವನ್ನವರು ಶತ್ರುಗಳಂತೆ ಕಾಣುವುದೂ ಇಲ್ಲ” ಎಂದು ಅಯ್ಯರ್‌ ಅಭಿಪ್ರಾಯಪಟ್ಟರು. “ಅಲ್ಲಿನ ಜನತೆಯಲ್ಲಿ ಭಾರತದ ಬಗ್ಗೆ ಸದಾಶಯಗಳಿರುವುದನ್ನು ಭಾರತೀಯ ರಾಜತಾಂತ್ರಿಕ ವಲಯ ಗಮನದಲ್ಲಿ ಇರಿಸಿಕೊಳ್ಳಬೇಕು. ಪಾಕಿಸ್ತಾನ ಸರಕಾರದ ಬಗ್ಗೆ ನಮಗಿರುವ ಅಸಮಾಧಾನವನ್ನು ತೋರಿಸುವಾಗ ಜನತೆಗೆ ನೀಡುವ ವೀಸಾ ಪರವಾನಗಿಗಳು ರದ್ದಾಗುತ್ತವೆ. ಪುಸ್ತಕ, ಸಿನೆಮಾ, ಪ್ರಯಾಣ ಮುಂತಾದ ಎಲ್ಲವೂ ನಿಲ್ಲುತ್ತವೆ. ನಮ್ಮ ರಾಜತಾಂತ್ರಿಕ ಪ್ರಕ್ರಿಯೆಯ ಅಖಂಡ ಭಾಗವಾಗಿರುವ ಪಾಕಿಸ್ತಾನದ ಜನತೆಯ ಸದ್ಭಾವನೆಗಳನ್ನು ಅನುಕೂಲವಾಗಿ ಪರಿವರ್ತಿಸಿಕೊಳ್ಳಬೇಕೆಂಬ ಪ್ರಯತ್ನವೇ ಕಾಣುವುದಿಲ್ಲ” ಎಂದು ಅಯ್ಯರ್‌ ವಿಷಾದಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಮೊದಲಿದ್ದ ಪ್ರತಿಯೊಬ್ಬ ಪ್ರಧಾನಮಂತ್ರಿಯೂ ಒಂದಿಲ್ಲೊಂದು ರೀತಿಯಲ್ಲಿ ಪಾಕಿಸ್ತಾನದ ಜೊತೆಗೆ ಮಾತುಕತೆಗೆ ಯತ್ನಿಸಿದ್ದಾರೆ. ಆದರೀಗ ಎಲ್ಲವೂ ಸ್ಥಗಿತಗೊಂಡಿದೆ. ಹೀಗೆ ನಿಂತಿರುವುದರ ಪರಿಣಾಮ ಆಗುವುದು ಅಲ್ಲಿನ ಸೇನೆಯ ಮೇಲಲ್ಲ. ಆ ದೇಶದ ಜನತೆಯ ಮೇಲೆ. ಅವರ ಬಂಧುಗಳು ಅಪಾರ ಸಂಖ್ಯೆಯಲ್ಲಿದ್ದಾರೆ ಭಾರತದಲ್ಲಿ. ಈಗಲೂ ಅವರನ್ನು ಭೇಟಿ ಮಾಡುವ ಉದ್ದೇಶ ಪಾಕಿಸ್ತಾನದ ಜನತೆಗೆ ಇರುತ್ತದೆ ಎಂಬುದು ಅಯ್ಯರ್‌ ಅವರ ವಾದ.

ತಾವು ಕರಾಚಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾಗ ಒಂದು ಲಕ್ಷಕ್ಕೂ ಅಧಿಕ ವೀಸಾಗಳನ್ನು ನೀಡಿದ್ದು, ಒಂದೂ ಪರವಾನಗಿ ದುರ್ಬಳಕೆಯಾದ ದೂರು ಬಂದಿರಲಿಲ್ಲ ಎಂದು ಅವರು ಹೇಳಿದರು. “ಹಾಗಾದರೆ ಪಾಕಿಸ್ತಾನದ ಜನತೆಯನ್ನೇಕೆ ನಾವು ಗುರಿ ಮಾಡಿಕೊಂಡಿದ್ದೇವೆ? ಅಲ್ಲಿನ ಸರಕಾರವನ್ನು ಗುರಿಯಾಗಿಸಿದರೆ ಬೇರೆ ಮಾತು. ಆದರೆ ಅಲ್ಲಿನ ಜನತೆ ನಮಗೆ ಅನುಕೂಲವಾಗಿ ಒದಗಬಲ್ಲರು” ಎಂದು ಅಯ್ಯರ್‌ ತಿಳಿಸಿದರು.

ಇದನ್ನೂ ಓದಿ: Congress Working Committee : ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯಲ್ಲಿ ರೆಬೆಲ್​ಗಳಿಗೆ ಮಣೆ; ಹರಿಪ್ರಸಾದ್​, ಪೈಲೆಟ್​ಗೆ ಸ್ಥಾನ

Exit mobile version