Site icon Vistara News

Manipur: ಅಪಹರಿಸ್ಪಟ್ಟ ಸೈನಿಕನನ್ನು 8 ಗಂಟೆಯೊಳಗೆ ರಕ್ಷಿಸಿದ ಭದ್ರತಾ ಪಡೆ; ರೋಚಕ ಕಾರ್ಯಾಚರಣೆ ಹೇಗಿತ್ತು?

manipur

manipur

ಇಂಫಾಲ: ಮಣಿಪುರ (Manipur)ದ ತೌಬಲ್ ಜಿಲ್ಲೆಯ ಮನೆಯಿಂದ ಅಪಹರಣಕ್ಕೊಳಗಾದ ಭಾರತೀಯ ಸೇನೆ (Indian Army)ಯ ಜೂನಿಯರ್ ಕಮಿಷನ್ಡ್ ಆಫೀಸರ್ (Junior Commissioned Officer) ಅವರನ್ನು ಭದ್ರತಾ ಪಡೆಗಳು ರಕ್ಷಿಸಿವೆ.

ರಜೆಯಲ್ಲಿದ್ದ ಜೆಸಿಒ ಕೊನ್ಸಾಮ್ ಖೇಡಾ ಸಿಂಗ್ ಅವರನ್ನು ಶುಕ್ರವಾರ (ಮಾರ್ಚ್ 8) ಬೆಳಗ್ಗೆ ದುಷ್ಕರ್ಮಿಗಳು ಅಪಹರಿಸಿದ್ದು, ಸಂಜೆ ವೇಳೆ ಅವರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಚರಂಗಪತ್ ಮಾಮಂಗ್ ಲೀಕೈ ಗ್ರಾಮದಲ್ಲಿರುವ ಕೊನ್ಸಾಮ್ ಖೇಡಾ ಸಿಂಗ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿಳಗೆ ಬೆಳಗ್ಗೆ ಸುಮಾರು 9 ಗಂಟೆಗೆ ಅಪಹರಿಸಿಕೊಂಡು ವಾಹನವೊಂದರಲ್ಲಿ ಪರಾರಿಯಾಗಿದ್ದರು.

ಸಿಂಗ್ ಅವರನ್ನು ರಕ್ಷಿಸಲು ಭದ್ರತಾ ಪಡೆಗಳು ಸಂಘಟಿತ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದವು. “ಭದ್ರತಾ ಪಡೆಗಳ ಸಮನ್ವಯದ ಪ್ರಯತ್ನಗಳ ಪರಿಣಾಮವಾಗಿ ಇಂದು ಸಂಜೆ 6.30ಕ್ಕೆ ಸಿಂಗ್‌ ಅವರನ್ನು ಸುರಕ್ಷಿತವಾಗಿ ಕರೆ ತರಲಾಯಿತು. ಅವರು ಪ್ರಸ್ತುತ ತೌಬಲ್ ಜಿಲ್ಲೆಯ ವೈಖೋಂಗ್ (ಕಾಕ್ಚಿಂಗ್ ಬಳಿ) ಪೊಲೀಸ್ ಠಾಣೆಯಲ್ಲಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ. ಘಟನೆಯ ಬಗ್ಗೆ ಮಣಿಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಪಹರಣಕ್ಕೆ ಕಾರಣ ತಿಳಿದು ಬಂದಿಲ್ಲ. ಸಿಂಗ್ ಅವರ ಕುಟುಂಬವು ಈ ಹಿಂದೆಯೂ ಇಂತಹ ಬೆದರಿಕೆಗಳನ್ನು ಎದುರಿತ್ತು. ಹೀಗಾಗಿ ಇದು ಸುಲಿಗೆಯ ಪ್ರಯತ್ನ ಎಂದು ಅಂದಾಜಿಸಲಾಗಿದೆ. ಮಾತ್ರವಲ್ಲ ಮಣಿಪುರದಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಇದು ನಾಲ್ಕನೇ ಘಟನೆ ಎನಿಸಿಕೊಂಡಿದೆ. ಕರ್ತವ್ಯ ನಿರತ ಸೈನಿಕರು ರಜೆಯಲ್ಲಿರುವಾಗ ಅಥವಾ ಅವರ ಸಂಬಂಧಿಕರನ್ನು ಗುರಿಯಾಗಿಸಿ ಇಂತಹ ಕೃತ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಅಸ್ಸಾಂ ರೆಜಿಮೆಂಟ್‌ನ ಮಾಜಿ ಸೈನಿಕ ಸೆರ್ಟೊ ಥಂಗ್ಥಾಂಗ್ ಕೋಮ್ ಅವರನ್ನು ಅಪರಿಚಿತ ಸಶಸ್ತ್ರ ಗುಂಪು ಅಪಹರಿಸಿ ಹತ್ಯೆ ಮಾಡಿತ್ತು. ಅವರು ಮಣಿಪುರದ ಲೀಮಾಖಾಂಗ್‌ನಲ್ಲಿ ರಕ್ಷಣಾ ಸೇವಾ ದಳದಲ್ಲಿ (DSC) ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿತ್ತು.

ನವೆಂಬರ್‌ನಲ್ಲಿ ಇಂಫಾಲ ಪಶ್ಚಿಮ ಜಿಲ್ಲೆಯ ಸೈನಿಕರೊಬ್ಬರ ಕುಟುಂಬದ ನಾಲ್ವರನ್ನು ಅಪಹರಿಸಿ ಬಳಿಕ ಹತ್ಯೆ ಮಾಡಲಾಗಿತ್ತು. ಮೃತರನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸೇನೆಯ ಸೈನಿಕ ಹೆಂಥಿಂಗ್ ಹಾವೊಕಿಪ್ ಅವರ ಕುಟುಂಬದ ಸದಸ್ಯರೆಂದು ಗುರುತಿಸಲಾಗಿದೆ. ಕಳೆದ ತಿಂಗಳು ಮಣಿಪುರ ಪೊಲೀಸ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಅವರ ಮೇಲೆ ಇಂಫಾಲ ನಗರದ ಅವರ ಮನೆಯಲ್ಲಿಯೇ ಹಲ್ಲೆ ನಡೆಸಿ ನಂತರ ಅಪಹರಿಸಲಾಗಿತ್ತು.

ಇದನ್ನೂ ಓದಿ: Narendra Modi: ಕಾಜಿರಂಗ ಅಭಯಾರಣ್ಯದಲ್ಲಿ ರಾತ್ರಿ ಕಳೆಯುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ ಮೋದಿ; ಅದೇನು?

ಕೆಲವು ದಿನಗಳ ಹಿಂದೆ ಮಣಿಪುರದ ಕುಕಿ-ಜೋ ಬುಡಕಟ್ಟು ಪ್ರಾಬಲ್ಯದ ಚುರಚಂದ್‌ಪುರ ಜಿಲ್ಲೆಯಲ್ಲಿ ಸಶಸ್ತ್ರ ದುಷ್ಕರ್ಮಿಗಳೊಂದಿಗಿನ ಸೆಲ್ಫಿ ವೈರಲ್ ಆದ ನಂತರ ಹೆಡ್ ಕಾನ್ಸ್‌ಟೇಬಲ್‌ ಅವರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ನೂರಾರು ಜನರು ಪ್ರತಿಭಟನೆ ನಡೆಸಿದ ನಂತರ ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದರು.

ಮಣಿಪುರದಲ್ಲಿ 2023ರ ಮೇಯಲ್ಲಿ ಪ್ರಾರಂಭವಾದ ಕುಕಿ-ಜೋ ಮತ್ತು ಮೈಥಿ ಬುಡಕಟ್ಟು ಗುಂಪುಗಳ ನಡುವಿನ ಜನಾಂಗೀಯ ಸಂಘರ್ಣೆಯಲ್ಲಿ ಇದುವರೆಗೆ ಸುಮಾರು 180 ಮಂದಿ ಮೃತಪಟ್ಟಿದ್ದಾರೆ ಮತ್ತು 50,000ಕ್ಕೂ ಅಧಿಕ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version