ಇಂಫಾಲ್: ಗಲಭೆಗ್ರಸ್ತ ಮಣಿಪುರದಲ್ಲಿ (Manipur Violence) ನಡೆದ ಬುಡಕಟ್ಟು ಕುಕೀ (kuki tribe) ಮಹಿಳೆಯರಿಬ್ಬರ ಅಮಾನುಷ ಬೆತ್ತಲೆ ಮರವಣಿಗೆ ಹಾಗೂ ಸಾಮೂಹಿಕ ಅತ್ಯಾಚಾರ ಕೃತ್ಯ ದೇಶಾದ್ಯಂತ ಆಕ್ರೋಶ ಭುಗಿಲೆಬ್ಬಿಸಿರುವ ನಡುವೆಯೇ, ಅಷ್ಟೇ ಬೀಭತ್ಸಕರವಾದ ಇನ್ನೊಂದು ಪ್ರಕರಣ ನಡೆದಿರುವುದು ವರದಿಯಾಗಿದೆ. ಈ ಘಟನೆ ಹಿಂದಿನ ಘಟನೆ ನಡೆದ ಅದೇ ದಿನ (ಮೇ 4) ನಡೆದಿದ್ದು, ರಾಜ್ಯದ ರಾಜಧಾನಿಯಲ್ಲೇ ನಡೆದಿದೆ.
ರಾಜಧಾನಿ ಇಂಫಾಲದಲ್ಲಿ ಇಬ್ಬರು ಕುಕೀ ಯುವತಿಯರನ್ನು ಸಾಮೂಹಿಕವಾಗಿ ಅತ್ಯಾಚಾರ (sexual assault) ನಡೆಸಿ ಕೊಲೆ (murder case) ಮಾಡಲಾಗಿದೆ. ಎರಡೂ ಪ್ರಕರಣಗಳಲ್ಲೂ ಸಂತ್ರಸ್ತರು ಬುಡಕಟ್ಟು ಕುಕೀ ಸಮುದಾಯದವರಾಗಿದ್ದು, ಕೊಲೆಪಾತಕಿಗಳು ಬಲಿಷ್ಠ ಮೈತೈ ಸಮುದಾಯಕ್ಕೆ (Meitei tribe) ಸೇರಿದ್ದಾರೆ. ಹಿಂದಿನ ಪ್ರಕರಣ ಬಿ ಫೈನಂ ಎಂಬ ಗ್ರಾಮದಲ್ಲಿ ನಡೆದಿದ್ದರೆ, ಇದು ರಾಜಧಾನಿಯಲ್ಲಿ ನಡೆದಿದೆ. ಮೊದಲ ಪ್ರಕರಣ ಘಟಿಸಿದ ಒಂದು ಗಂಟೆಯ ನಂತರ ಎರಡನೇ ಪ್ರಕರಣ ನಡೆದಿದೆ. ಮೊದಲ ಪ್ರಕರಣದಲ್ಲಿ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದರೆ, ಇಂಫಾಲದ ಪ್ರಕರಣದಲ್ಲಿ ಇನ್ನೂ ಯಾವುದೇ ಬಂಧನ ಆಗಿಲ್ಲ.
ಸಂತ್ರಸ್ತರ ತಂದೆ ನೀಡಿರುವ ದೂರಿನ ಪ್ರಕಾರ ಇವರಿಬ್ಬರೂ ಅಕ್ಕತಂಗಿಯರಾಗಿದ್ದು, ಕಾರ್‌ವಾಶ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 21 ಹಾಗೂ 24 ವರ್ಷದವರಾದ ಇವರ ರೂಮಿಗೆ ಅಕ್ರಮವಾಗಿ ನುಗ್ಗಿ ಎಳೆದೊಯ್ದ ಮೈತೈ ದುಷ್ಟರ ಗುಂಪು, ಸಾಮೂಹಿಕವಾಗಿ ರೇಪ್ ಮಾಡಿ ಕೊಂದುಹಾಕಿದೆ.
ʼʼನಾವು ಕುಕೀ ಸಮುದಾಯದವರು. ನನ್ನ ಮಕ್ಕಳ ಸ್ನೇಹಿತೆ ಮೈತೈ ಸಮುದಾಯದವಳಾಗಿದ್ದು, ಅವಳು ನೀಡಿದ ಮಾಹಿತಿಯಂತೆ, ಮೈತೈ ಸಮುದಾಯದ ಯುವಕರ ಒಂದು ಗುಂಪು ಮನೆಗೆ ನುಗ್ಗಿ ಅವರನ್ನು ಕೊಂದುಹಾಕಿದೆ. ನನ್ನ ಮಕ್ಕಳನ್ನು ರೇಪ್ ಮಾಡಿ ಕೊಲ್ಲಲಾಗಿದೆ ಎಂದು ಶವಪರೀಕ್ಷೆ ಮಾಡಿದ ವೈದ್ಯರು ತಿಳಿಸಿದ್ದಾರೆ. ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ತಾವು ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರು ತಿಳಿಸಿಲ್ಲʼʼ ಎಂದು ಹತ್ಯೆಗೀಡಾದ ಸೋದರಿಯರ ತಂದೆ ಹೇಳಿದ್ದಾರೆ.
ಇಂಫಾಲದಲ್ಲಿ ಮೈತೈ ಸಮುದಾಯದವರು ಹೆಚ್ಚಾಗಿರುವ ಕೊನುಗ್ ಮನಂಗ್ ಪ್ರಾಂತ್ಯದಲ್ಲಿರುವ ಈ ಸೋದರಿಯರ ಮನೆಯಲ್ಲಿ ಈ ಘಟನೆ ನಡೆದಿದೆ. ಮೇ 3ರಂದು ಇಲ್ಲಿ ಗಲಭೆ ಸ್ಫೋಟಿಸಿತ್ತು. ಸುಮಾರು 150 ಜನರನ್ನು ಇಲ್ಲಿ ಕೊಲ್ಲಲಾಗಿದೆ. ಮೈತೈ ಯುವ ಸಂಘಟನೆಗಳಿಗೆ ಸೇರಿದ ನೂರಾರು ಯುವಕರು ಇಲ್ಲಿ ಗಲಭೆಗಳಲ್ಲಿ ಪಾಲ್ಗೊಂಡು ಕುಕೀಗಳ ಮೇಲೆ ಹಲ್ಲೆ ನಡೆಸಿರುವುದು ದಾಖಲಾಗಿದೆ.
ಈ ಪ್ರಕರಣದ ಬಗ್ಗೆ ಉತ್ತರ ಅಮೆರಿಕನ್ ಮಣಿಪುರ ಬುಡಕಟ್ಟು ಸಂಘಟನೆಯು ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗಕ್ಕೆ ಜೂನ್ 12ರಂದು ದೂರು ನೀಡಿತ್ತು. ಆಯೋಗ ಉತ್ತರ ನೀಡಿಲ್ಲ. ಕೊಲೆಯಾದ ಮಹಿಳೆಯರ ಶವವನ್ನು ಇಂಫಾಲದ ಜವಾಹರಲಾಲ್ ವೈದ್ಯಕೀಯ ಸಂಸ್ಥೆಯ ಶವಾಗಾರದಲ್ಲಿಡಲಾಗಿದ್ದು, ವಿಸ್ತೃತ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ʼʼಬಿ ಫೈನಂ ಗ್ರಾಮದಲ್ಲಿ ನಡೆದ ಬೆತ್ತಲೆ ಮೆರವಣಿಗೆಯ ವಿಡಿಯೋ ಎಲ್ಲೆಡೆ ಹರಿದಾಡಿದ್ದರಿಂದ ಕ್ರಮ ತೆಗೆದುಕೊಳ್ಳುವ ಒತ್ತಡಕ್ಕೆ ಪೊಲೀಸರು ಒಳಗಾಗಿದ್ದಾರೆ. ಆದರೆ ಇಂಥ ಹಲವಾರು ಘಟನೆಗಳು ನಡೆದಿದ್ದು, ವಿಡಿಯೋಗಳು ಲಭ್ಯವಿಲ್ಲ. ಹೀಗಾಗಿ ಅವು ತೆರೆಮರೆಯಲ್ಲೇ ಉಳಿದಿವೆʼʼ ಎಂದು ಈ ಬಗ್ಗೆ ಎಚ್ಚರ ಮೂಡಿಸುತ್ತಿರುವ ಕುಕೀ ಸಮುದಾಯದ ಸಂಸದರು ಹೇಳಿದ್ದಾರೆ. ಯಥಾಪ್ರಕಾರ ಬೀರೆನ್ ಸಿಂಗ್ ಸರ್ಕಾರ ಮೌನ ಕಾಪಾಡಿಕೊಂಡಿದೆ.
ಇದನ್ನೂ ಓದಿ: Manipur Video: ಮಣಿಪುರ ದೌರ್ಜನ್ಯ; 5ನೇ ಆರೋಪಿ ಬಂಧನ, ಧ್ವನಿ ಎತ್ತಲು ಮಹಿಳಾ ಆಯೋಗವೂ ನಿರ್ಲಕ್ಷ್ಯ?