ಇಂಫಾಲ: ಇಂಫಾಲ ಪೂರ್ವ ಜಿಲ್ಲೆಯಲ್ಲಿ ಮೈತೈ ಸಮುದಾಯದ (Meitei community) ಸಂಘಟನೆಯಾದ ಅರಂಬೈ ತೆಂಗೋಲ್‌ನ (Arambai Tenggol) ಶಸ್ತ್ರಸಜ್ಜಿತ ಕಾರ್ಯಕರ್ತರು (Armed men) ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಪಹರಿಸಿ (police officer abducted) ಕೊಂಡೊಯ್ದರು. ಇದರಿಂದ ಮಂಗಳವಾರ ಮಣಿಪುರದಲ್ಲಿ ಉದ್ವಿಗ್ನತೆ (manipur violence) ಮತ್ತಷ್ಟು ಹೆಚ್ಚಾಗಿದೆ.
ಮಣಿಪುರ ಪೊಲೀಸ್ ಕಾರ್ಯಾಚರಣೆ ವಿಭಾಗದಲ್ಲಿ ನಿಯೋಜಿತರಾಗಿರುವ ಇಂಫಾಲ ಪೂರ್ವ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಮಿತ್ ಸಿಂಗ್ ಅವರ ಮನೆಗೆ ದಾಳಿ ಮಾಡಿದ ಸಶಸ್ತ್ರಧಾರಿ ಅರಂಬೈ ತೆಂಗೋಲ್ ಪುಂಡರು, ಮನೆಯನ್ನು ಧ್ವಂಸಗೊಳಿಸಿದರು. ಗುಂಡಿನ ದಾಳಿಯಿಂದ ಕನಿಷ್ಠ ನಾಲ್ಕು ವಾಹನಗಳನ್ನು ಹಾನಿಗೊಳಿಸಿದರು. ನಂತರ ಅವರನ್ನು ಹೊತ್ತೊಯ್ದರು.
ಪೊಲೀಸರು ಮತ್ತು ಭದ್ರತಾ ಪಡೆಗಳ ಕ್ಷಿಪ್ರ ಕಾರ್ಯಾಚರಣೆಯ ನಂತರ ಅಮಿತ್ ಸಿಂಗ್ ಅವರನ್ನು ರಕ್ಷಿಸಲಾಯಿತು ಎಂದು ಮಣಿಪುರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ.
ಇದಾದ ಬಳಿಕ ಮಣಿಪುರದಲ್ಲಿ ಹೊಸದಾಗಿ ಉದ್ವಿಗ್ನತೆ ತಲೆದೋರಿತು. ಸೇನೆಯನ್ನು ಸ್ಥಳಕ್ಕೆ ಕರೆಸಲಾಯಿತು. ಅಸ್ಸಾಂ ರೈಫಲ್ಸ್‌ನ ನಾಲ್ಕು ದಳಗಳನ್ನು ಇಂಫಾಲ್ ಪೂರ್ವದಲ್ಲಿ ನಿಯೋಜಿಸಲಾಯಿತು.
ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ನಡೆದ ಘಟನೆಯ ವಿವರಗಳನ್ನು ಮಣಿಪುರ ಪೊಲೀಸರು ನೀಡಿದ್ದಾರೆ. ಸುಮಾರು 200 ಮಂದಿಯಷ್ಟು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಮಿತ್ ಸಿಂಗ್ ಅವರ ನಿವಾಸಕ್ಕೆ ನುಗ್ಗಿದರು. ಗುಂಡಿನ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಅಲ್ಲಿದ್ದ ವಾಹನಗಳು ಜಖಂಗೊಂಡವು. ನಂತರ ಬಂದೂಕು ತೋರಿಸಿ ಅಮಿತ್ ಸಿಂಗ್ ಅವರನ್ನು ಹೊತ್ತೊಯ್ಯಲಾಯಿತು.
ಮಾಹಿತಿ ಪಡೆದ ಕೂಡಲೇ ಹೆಚ್ಚುವರಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದವು. ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಎಸ್‌ಪಿ ಮತ್ತು ಅವರ ಬೆಂಗಾವಲು ಸಿಬ್ಬಂದಿಯೊಬ್ಬರನ್ನು ಕ್ವಾಕಿಥೆಲ್ ಕೊಂಜೆಂಗ್ ಲೈಕೈ ಪ್ರದೇಶದಿಂದ ರಕ್ಷಿಸಲಾಯಿತು. ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ವಾಹನ ಕಳ್ಳತನದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮೈತೈ ಗುಂಪಿನ ಆರು ಸದಸ್ಯರನ್ನು ಸಂಬಂಧಪಟ್ಟ ಅಧಿಕಾರಿ ಬಂಧಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಮೈತೈ ಸಂಘಟನೆ ಈ ಈ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಅಪಹರಣ ನಡೆಸಿದೆ. ಇವರ ಬಂಧನದ ನಂತರ, ಮೀರಾ ಪೈಬಿಸ್ ಎಂಬ ಮೈತೈ ಮಹಿಳಾ ಗುಂಪು ಅವರನ್ನು ಬಿಡುಗಡೆ ಮಾಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿತ್ತು.
ಆರಂಬೈ ತೆಂಗೋಲ್ ಸಂಘಟನೆಯ ಉಗ್ರರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಅಧಿಕಾರಿ ಅಸಹಾಯಕರಾಗಿದ್ದರು. ರಕ್ಷಣಾ ಕಾರ್ಯದ ನಂತರ ಪರಿಸ್ಥಿತಿ ಹದಗೆಟ್ಟಿದ್ದರಿಂದ ಮಣಿಪುರ ಸರ್ಕಾರ ಸೇನೆಯ ಸಹಾಯ ಪಡೆಯಬೇಕಾಯಿತು. ಅಸ್ಸಾಂ ರೈಫಲ್ಸ್, ಅರೆಸೇನಾ ಪಡೆಗಳು ಇಲ್ಲೀಗ ಕಾರ್ಯನಿರ್ವಹಿಸುತ್ತಿವೆ.
ಇದನ್ನೂ ಓದಿ: ಮೈತೈ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ತನ್ನ ಆದೇಶವನ್ನೇ ಬದಲಿಸಿದ ಮಣಿಪುರ ಹೈಕೋರ್ಟ್!