ಇಂಫಾಲ: ಕಳೆದ ಐದು ತಿಂಗಳಿಂದ ಮಣಿಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ (Manipur Violence) ಹಿಂದೆ ವಿದೇಶಿ ಉಗ್ರರ ಕೈವಾಡ ಇರುವ ಕುರಿತು ಶಂಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಎನ್‌ಐಎ (NIA) ಅಧಿಕಾರಿಗಳು ದೊಡ್ಡ ಜಾಲವೊಂದನ್ನು ಭೇದಿಸಿದ್ದಾರೆ. ಮಣಿಪುರ ಹಿಂಸಾಚಾರದ ಲಾಭ ಪಡೆದು ಭಾರತದ ವಿರುದ್ಧ ಸಂಚು ರೂಪಿಸಲು ಮುಂದಾದ ದುಷ್ಕರ್ಮಿಯೊಬ್ಬನನ್ನು ಎನ್‌ಐಎ ಅಧಿಕಾರಿಗಳು ಮಣಿಪುರದಲ್ಲಿ ಬಂಧಿಸಿದ್ದಾರೆ. ಅಷ್ಟೇ ಅಲ್ಲ, ಈತನು ಮಣಿಪುರದಲ್ಲಿ ಗಲಭೆ ಹೆಚ್ಚಿಸಲು ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದ ಉಗ್ರರ ಜತೆ ಸಂಪರ್ಕದಲ್ಲಿದ್ದ ಎಂಬ ವಿಷಯವೂ ಎನ್‌ಐಎ ಬಹಿರಂಗಪಡಿಸಿದೆ.
“ಮಣಿಪುರದ ಚುರಚಂದ್‌ಪುರದಲ್ಲಿ ಸೈಮಿನ್‌ಲುನ್ ಗಾಂಗ್ಟೆ ಎಂಬ ಒಬ್ಬ ಶಂಕಿತ ಉಗ್ರನನ್ನು ಬಂಧಿಸಲಾಗಿದೆ. ಮಣಿಪುರದಲ್ಲಿ ಎರಡು ಬುಡಕಟ್ಟು ಗುಂಪುಗಳ ಮಧ್ಯೆ ನಡೆಯುತ್ತಿರುವ ಸಂಘರ್ಷದ ಲಾಭ ಪಡೆದು, ಇನ್ನಷ್ಟು ಗಲಭೆ ಹೆಚ್ಚಿಸಿ, ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಈತ ಸಂಚು ರೂಪಿಸಿದ್ದ. ಇದಕ್ಕಾಗಿ, ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ನಲ್ಲಿರುವ ಉಗ್ರರ ಜತೆ ಸಂಪರ್ಕ ಹೊಂದಿದ್ದ. ಅವರ ನೆರವಿನೊಂದಿಗೆ ಭಾರತದಲ್ಲಿ ಗಲಭೆ, ಹಿಂಸೆ ಹೆಚ್ಚಿಸುವುದು ಈತನ ಉದ್ದೇಶವಾಗಿತ್ತು” ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ.
ಬಂಧನ ಕುರಿತು ಎನ್‌ಐಎ ಮಾಹಿತಿ
ACCUSED ARRESTED BY NIA FROM CHURACHANDPUR DISTRICT (MANIPUR) IN TRANSNATIONAL CONSPIRACY CASE. pic.twitter.com/X71QrJvzmR
— NIA India (@NIA_India) September 30, 2023
ಬಾಂಬ್ ದಾಳಿಯ ರೂವಾರಿ ಈತನೇ!
ಜೂನ್ 22ರಂದು ಮಣಿಪುರದ ಕ್ವಾಟ್ಕಾ ಎಂಬಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಸೈಮಿನ್‌ಲುನ್ ಗಾಂಗ್ಟೆ ಆಗಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಸ್ಕಾರ್ಪಿಯೋ ಎಸ್‌ಯುವಿ ಕಾರ್‌ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ ಬಳಿಕ ಒಬ್ಬ ಮೃತಪಟ್ಟಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಸೈಮಿನ್‌ಲುನ್ ಗಾಂಗ್ಟೆ ಆಗಿದ್ದಾನೆ. ಈತ ಇನ್ನಷ್ಟು ಹಿಂಸಾಚಾರ ಹೆಚ್ಚಿಸಲು ವಿದೇಶಿ ಉಗ್ರರ ನೆರವು ಪಡೆಯುತ್ತಿದ್ದ ಎನ್ನಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಮಾಡಲು ಎನ್‌ಐಎ ಅಧಿಕಾರಿಗಳು ಈತನನ್ನು ದೆಹಲಿಗೆ ಕರೆತರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Manipur Violence: ಹತ ಬಾಲಕ, ಬಾಲಕಿ ಅಪಹರಣಕಾರರ ಕೈಗೆ ಸಿಕ್ಕಿದ್ದು ಹೇಗೆ? ಹಿಂದಿದೆಯೇ ಪ್ರೇಮ ಕತೆ?
ಮಣಿಪುರದಲ್ಲಿ ಕುಕಿ ಹಾಗೂ ಮೈತೈ ಸಮುದಾಯಗಳ ಮಧ್ಯೆ ಮೇ 3ರಿಂದಲೂ ಹಿಂಸಾಚಾರ ಭುಗಿಲೆದ್ದಿದೆ. ಇದುವರೆಗೆ ಮಣಿಪುರದಲ್ಲಿ ನಡೆದ ಹಿಂಸಾಚಾರಗಳಿಂದ ಸುಮಾರು 180ಕ್ಕೂ ಅಧಿಕ ಜನ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಮಣಿಪುರ ಬಿಕ್ಕಟ್ಟಿನ ಕುರಿತು ಮಾತುಕತೆಗೆ ಸಿದ್ಧ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದರೂ ಹಿಂಸಾಚಾರ ನಿಲ್ಲುತ್ತಿಲ್ಲ. ಅಲ್ಲದೆ, ಮಣಿಪುರ ಹಿಂಸಾಚಾರ ಪ್ರಕರಣವು ಸಂಸತ್ ಅಧಿವೇಶನದಲ್ಲೂ ಪ್ರತಿಧ್ವನಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ ಮಣಿಪುರದಲ್ಲಿ ಶಾಂತಿಸ್ಥಾಪನೆಯ ಭರವಸೆ ನೀಡಿದ್ದರು.