Site icon Vistara News

Manipur Violence: ಮಹಿಳೆಯರು ಸೈನಿಕರಿಗೆ ಅಡ್ಡ ನಿಂತು 12 ಉಗ್ರರನ್ನು ಬಿಡಿಸಿಕೊಂಡು ಹೋದರು, ಅರಾಜಕತೆಯತ್ತ ಮಣಿಪುರ

Manipur Violence: Army Releases 12 militants

Manipur Violence: Women-led mob forces security personnel to let go of 12 militants

ಇಂಫಾಲ: ಮಣಿಪುರದಲ್ಲಿ ಹಿಂಸಾಚಾರ ಕೈಮೀರುತ್ತಿದೆ. ದಿನೇದಿನೆ ಹೊತ್ತಿ ಉರಿಯುತ್ತಿದೆ. ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ಕೊಡುವ ವಿಚಾರದ ಕಾರಣಕ್ಕೆ ಭುಗಿಲೆದ್ದಿರುವ ಸಂಘರ್ಷವು ಮಿತಿಮೀರಿದೆ. ಇನ್ನು, ಹಿಂಸಾಚಾರದಿಂದ ಸುದ್ದಿಯಾಗುತ್ತಿರುವ ರಾಜ್ಯದಲ್ಲಿ ಹೆಣ್ಣುಮಕ್ಕಳು ಕೂಡ ಬಂಡುಕೋರರಿಗೆ ಬೆಂಬಲ ನೀಡುತ್ತಿದ್ದಾರೆ. ಇದು ರಾಜ್ಯವನ್ನು ಅರಾಜಕತೆಗೆ ತಳ್ಳುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಮಣಿಪುರದಲ್ಲಿ ಸುಮಾರು 1,500 ಮಹಿಳೆಯರು ಸೈನಿಕರನ್ನೇ (Manipur Violence) ಅಡ್ಡಹಾಕಿ 12 ಬಂಡುಕೋರರನ್ನು ಬಿಡಿಸಿಕೊಂಡು ಹೋಗಿದ್ದಾರೆ.

ಹೌದು, ಮಹಿಳೆಯರ ಗುಂಪೊಂದು ಸೈನಿಕರನ್ನು ಸುತ್ತುವರಿದು, 12 ಕಾಂಗ್ಲೇಯಿ ಯವೋಲ್‌ ಕನ್ನಾ ಲುಪ್‌ (KYKL) ಉಗ್ರರನ್ನು ಬಿಡಿಸಿಕೊಂಡು ಹೋಗಿದ್ದಾರೆ ಎಂದು ಸೇನೆಯೇ ಮಾಹಿತಿ ನೀಡಿದೆ. ಮಣಿಪುರದಲ್ಲಿ ಶಾಂತಿಸ್ಥಾಪನೆ ಕುರಿತು ಭಾರತೀಯ ಸೇನೆಯು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ, ಯೋಧರು ಬಂಡುಕೋರರನ್ನು ನಿಗ್ರಹಿಸಲು ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ. ಹೀಗೆ ಕಾರ್ಯಾಚರಣೆ ಕೈಗೊಳ್ಳುವಾಗ 12 ಬಂಡುಕೋರರನ್ನು ಬಂಧಿಸಿದ್ದರು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ 1,500ಕ್ಕೂ ಅಧಿಕ ಮಹಿಳೆಯರು ಸೈನಿಕರನ್ನು ಅಡ್ಡಹಾಕಿ, ಅವರಿಂದ ಬಂಡುಕೋರರನ್ನು ಬಿಡಿಸಿಕೊಂಡು ಹೋಗಿದ್ದಾರೆ.

ದಾಳಿಯ ಮಾಸ್ಟರ್‌ ಮೈಂಡ್‌ ಸಿಕ್ಕಿದ್ದ

“ಶನಿವಾರ ಮಧ್ಯಾಹ್ನ 2.30ರ ಸುಮಾರಿಗೆ ಭದ್ರತಾ ಸಿಬ್ಬಂದಿಗೆ ನಿಖರ ಮಾಹಿತಿ ಲಭ್ಯವಾದ ಕಾರಣ ಇಂಫಾಲದ ಪೂರ್ವಭಾಗದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಇಥಮ್‌ ಎಂಬ ಗ್ರಾಮದಲ್ಲಿ ಕೆವೈಕೆಎಲ್‌ನ 12 ಬಂಡುಕೋರರನ್ನು ವಶಪಡಿಸಿಕೊಳ್ಳಲಾಗಿತ್ತು. ಇವರಲ್ಲಿ 2015ರಲ್ಲಿ ದೋಗ್ರಾ ಹಿಂಸಾಚಾರದ ಮಾಸ್ಟರ್‌ ಮೈಂಡ್‌ ಮೊಯಿರಂಗ್‌ಥೆಮ್‌ ತಂಬಾ ಎಂಬಾತನೂ ಇದ್ದ. ಆದರೆ, ಸಾವಿರಾರು ಮಹಿಳೆಯರು ಯೋಧರನ್ನು ಅಡ್ಡಹಾಕಿ ಬಂಡುಕೋರರನ್ನು ಬಿಡಿಸಿಕೊಂಡು ಹೋಗಿದ್ದಾರೆ” ಎಂದು ಸೇನೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Manipur Violence: ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಸ್ಥಳೀಯ ಶಾಸಕ, ಬಿಜೆಪಿ ಅಧ್ಯಕ್ಷರ ಮನೆ ಟಾರ್ಗೆಟ್

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಇದುವರೆಗೆ 100 ಕ್ಕೂ ಹೆಚ್ಚಿನ ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ, 300ಕ್ಕೂ ಅಧಿಕ ನಾಗರಿಕರು ಗಾಯಗೊಂಡಿದ್ದಾರೆ. ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಬಂಡುಕೋರರ ಅಟ್ಟಹಾಸ ಮುಂದುವರಿದಿದೆ. ಮಣಿಪುರದಲ್ಲಿ ಈಗಾಗಲೇ ಹಿಂಸಾಚಾರ ಭುಗಿಲೆದ್ದಿದ್ದು, ಹೆಣ್ಣುಮಕ್ಕಳನ್ನು ಬಂಧಿಸುವುದು, ಗುಂಡಿನ ದಾಳಿ ನಡೆಸುವುದರಿಂದ ಹಿಂಸೆ ಮತ್ತಷ್ಟು ವ್ಯಾಪಿಸಲಿದೆ ಎಂಬ ಕಾರಣಕ್ಕಾಗಿ ಸೈನಿಕರು ಪ್ರತಿರೋಧ ಒಡ್ಡಿಲ್ಲ ಎಂದು ತಿಳಿದುಬಂದಿದೆ.

Exit mobile version