ಬೆಂಗಳೂರು: ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ, ಇತ್ತೀಚೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಮೈಸೂರಿನ ಹುಡುಗಿ ಕಲ್ಪನಾ ಅತ್ಯುತ್ತಮ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ತಮ್ಮ 89ನೇ ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮದಲ್ಲಿ ಅನೇಕ ವಿಚಾರಗಳ ಕುರಿತು ಮಾತನಾಡಿದರು.
ಇತ್ತೀಚೆಗಷ್ಟೆ (ಮೇ 26) ಪ್ರಧಾನಿಯಾಗಿ ಎಂಟು ವರ್ಷ ಪೂರೈಸಿದ ಬೆನ್ನಲ್ಲೆ ನಡೆದ Mann Ki Baat ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಭಾರತದ ಯುವ ಸಮೂಹದ ಸ್ಟಾರ್ಟ್‌ಅಪ್ ಸಾಧನೆಗಳು, ಮಹಿಳಾ ಸ್ವಸಹಾಯ ಸಂಘಗಳು, ಇತ್ತೀಚೆಗಷ್ಟೆ ನವದೆಹಲಿಯಲ್ಲಿ ಉದ್ಘಾಟನೆಯಾದ ಪ್ರಧಾನಮಂತ್ರಿ ಸಂಗ್ರಹಾಲಯ, ಕೇದಾರನಾಥದಲ್ಲಿ ಕಸದ ಸಂಗ್ರಹ, ಮುಂದಿನ ತಿಂಗಳು ಆಗಮಿಸುವ ಅಂತಾರಾಷ್ಟ್ರೀಯ ಯೋಗದಿನ ಸೇರಿ ಅನೇಕ ವಿಚಾರಗಳನ್ನು ಚರ್ಚಿಸಿದರು.
ಇದನ್ನೂ ಓದಿ | ಪ್ರತಿ ಪ್ರಧಾನಿಯನ್ನೂ ಸ್ಮರಿಸುವ ಪ್ರಯತ್ನ: ‘ಮನ್ ಕಿ ಬಾತ್’ ನಲ್ಲಿ PM ಸಂಗ್ರಹಾಲಯ ಪ್ರಸ್ತಾಪಿಸಿದ ಮೋದಿ
ಉತ್ತರಾಖಂಡದ ಜೋಶಿಮಠದವರಾದ ಕಲ್ಪನಾ, ಚಿಕ್ಕ ವಯಸ್ಸಿನಲ್ಲೆ ತಾಯಿಯನ್ನು ಕಳೆದುಕೊಂಡಳು. ತಂದೆ ಮತ್ತೊಂದು ಮದುವೆಯಾದ್ಧರಿಂದ ತಾತ ರಾಮ್ ಸಿಂಗ್ ಆಶ್ರಯದಲ್ಲೆ ಬೆಳೆಯುತ್ತಿದ್ದಳು. ಈ ನಡುವೆ ಟಿಬಿ ಕಾಯಿಲೆಗೆ ತುತ್ತಾಗಿ ಎರಡು ಕಣ್ಣುಗಳನ್ನೂ ಕಳೆದುಕೊಂಡಳು. ಈ ಸಮಯದಲ್ಲಿ ಮೈಸೂರಿನವರಾದ ಹಾಗೂ ಈಶಾ ಫೌಂಡೇಷನ್ ಸ್ವಯಂಸೇವಕರಾದ ಪ್ರೊಫೆಸರ್ ತಾರಾಮೂರ್ತಿ ಅವರಿಗೆ ಮಾಹಿತಿ ಲಭಿಸಿದೆ. ಬಾಲಕಿಯನ್ನು ಕರೆತಂದ ತಾರಾಮೂರ್ತಿಯವರು ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದ್ದರು. ಕೇವಲ ಮೂರು ತಿಂಗಳಲ್ಲಿ ಕನ್ನಡ ಕಲಿತು, ಕನ್ನಡದಲ್ಲೆ ಪರೀಕ್ಷೆ ಬರೆದಿದ್ದಳು. ತೇರ್ಗಡೆ ಹೊಂದುವುದಷ್ಟೆ ಅಲ್ಲದೆ, ಕನ್ನಡದಲ್ಲಿ 92 ಅಂಕ ಗಳಿಸಿದ್ದಳು. ಈ ಉದಾಹರಣೆಯನ್ನು ಮೋದಿ ಭಾನುವಾರ ನೀಡಿದರು.
ನಮ್ಮ ದೇಶವು ಅನೇಕ ಭಾಷೆಗಳ ಕಣಜ. ಈ ವೈವಿಧ್ಯತೆಯೆ ನಮ್ಮನ್ನು ಸಂಘಟಿತರನ್ನಾಗಿಸಿದೆ. ಏಕ ಭಾರತ ಶ್ರೇಷ್ಠ ಭಾರತ ಎಂಬ ವಿಚಾರವನ್ನು ಮನದಲ್ಲಿರಿಸಿಕೊಂಡ ಕಲ್ಪನಾ ಎಂಬ ಬಾಲಕಿ ಕನ್ನಡದಲ್ಲಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದಾಳೆ. ಕೆಲ ಸಮಯದ ಹಿಂದೆ ಆಕೆಗೆ ಕನ್ನಡವೇ ಗೊತ್ತಿರಲಿಲ್ಲ. ಮೈಸೂರಿನ ಪ್ರೊ. ತಾರಾಮೂರ್ತಿ ಅವರ ಸಂಪರ್ಕಕ್ಕೆ ಬಂದ ಕಲ್ಪನಾ, ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಛಲದಿಂದ ಕನ್ನಡ ಕಲಿತು ತೇರ್ಗಡೆ ಹೊಂದಿದ್ದಾಳೆ ಎಂದು ಶ್ಲಾಘನೆ ವ್ಯಕ್ತಡಿಸಿದರು.
ಇದನ್ನೂ ಓದಿ | Drone Modi: ಮೋದಿ ಡ್ರೋನ್ ಹಾರಿಸಲೂ ಸೈ! ಮೇಲೇರುವುದನ್ನು ನೋಡಿ ಖುಷಿಯೋ ಖುಷಿ
ದೇಶದ ಪ್ರಸಿದ್ಧ ತೀರ್ಥಕ್ಷೇತ್ರ ಕೇದಾರನಾಥದಲ್ಲಿ ಕಸದ ಗುಡ್ಡ ಕಾಣಿಸಿಕೊಂಡಿರುವುದಕ್ಕೆ Mann Ki Baat ಕಾರ್ಯಕ್ರಮದಲ್ಲಿ ಮೋದಿ ಬೇಸರ ವ್ಯಕ್ತಪಡಿಸಿದರು. ಕೆಲವು ಯಾತ್ರಾರ್ಥಿಗಳಿಂದ ಈ ರೀತಿ ಆಗಿದೆ. ನಾವು ಯಾವುದೇ ತೀರ್ಥಕ್ಷೇತ್ರಕ್ಕೆ ಹೋದಾಗ ಇಂತಹ ಕಸದ ಗುಡ್ಡೆಗಳನ್ನು ನೋಡಲು ಬಯಸುವುದಿಲ್ಲ ಎಂದರು.
ಸ್ಥಳೀಯವಾಗಿ ಇರುವ ಮಹಿಳಾ ಸ್ವಸಹಾಯ ಗುಂಪುಗಳಿಂದ ಉತ್ಪನ್ನ ಖರೀದಿಸಲು ಮೋದಿ ಉತ್ತೇಜನ ನೀಡಿದರು. ನಿಮ್ಮ ಸುತ್ತಮುತ್ತಲಿನ ಮಹಿಳಾ ಸ್ವಸಾಹಯ ಸಂಘಗಳನ್ನು ಗುರುತಿಸಿ. ಆ ಸಂಘಗಳು ಉತ್ಪಾದಿಸುವ ಉತ್ಪನ್ನಗಳನ್ನು ಪಟ್ಟಿ ಮಾಡಿ. ಅಂತಹ ವಸ್ತುಗಳನ್ನು ಖರೀದಿಸಿ ಎಂದರು.
ಭಾರತದಲ್ಲಿ ಯುನಿಕಾರ್ನ್‌ಗಳ ಸಂಖ್ಯೆ ಮೇ 5ರಂದು 100ಕ್ಕೆ ಏರಿಕೆ ಕಂಡಿರುವ ಕುರಿತು ಮೋದಿ ಸಂತಸ ವ್ಯಕ್ತಪಡಿಸಿದರು. ಕನಿಷ್ಠ ಏಳೂವರೆ ಸಾವಿರ ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಗಳನ್ನು ಯೂನಿಕಾರ್ನ್ ಎಂದು ಕರೆಯಲಾಗುತ್ತದೆ. ಈ ನೂರು ಯೂನಿಕಾರ್ನ್‌ಗಳ ಒಟ್ಟು ಮೌಲ್ಯ 330 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ ಸುಮಾರು 25 ಲಕ್ಷ ಕೋಟಿ ರೂಪಾಯಿ ಆಗುತ್ತದೆ. ಇವುಗಳಲ್ಲಿ 44% ಯೂನಿಕಾರ್ನ್‌ಗಳು ಕಳೆದೊಂದು ವರ್ಷದಲ್ಲೆ ತಲೆಯೆತ್ತಿವೆ. ಅದರಲ್ಲೂ 14 ಯೂನಿಕಾರ್ನ್‌ಗಳು ಕಳೆದ 3-4 ತಿಂಗಳಲ್ಲಷ್ಟೆ ಈ ಹಂತ ತಲುಪಿವೆ. ಅಂದರೆ ಜಾಗತಿಕವಾಗಿ ಸಂಕಷ್ಟ ನೀಡುತ್ತಿರುವ ಕೊರೊನಾ ಮಹಾಮಾರಿಯ ನಡುವೆಯೂ ನಮ್ಮ ಯೂನಿಕಾರ್ನ್‌ಗಳು ಪ್ರಗತಿ ಸಾಧಿಸುತ್ತಿವೆ. ನಮ್ಮ ಯೂನಿಕಾರ್ನ್‌ಗಳ ಪ್ರಗತಿಯ ವೇಗವು ಅಮೆರಿಕ, ಬ್ರಿಟನ್ ಯೂನಿಕಾರ್ನ್‌ಗಳಿಗಿಂತಲೂ ಹೆಚ್ಚಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ | PM Narendra Modi: ರಾಷ್ಟ್ರಸೇವೆ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂದ ಪ್ರಧಾನಿ ಮೋದಿ