ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024)ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳಿಗೆ ಶುಭ ಹಾರೈಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಪ್ರೋತ್ಸಾಹಿಸುವಂತೆ ದೇಶವಾಸಿಗಳಲ್ಲಿ ಮನವಿ ಮಾಡಿದರು. ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ʼಮನ್ ಕಿ ಬಾತ್ʼ (Mann Ki Baat)ನ 112ನೇ ಸಂಚಿಕೆಯನ್ನುದ್ದೇಶಿಸಿ ಮಾತನಾಡಿದ ವೇಳೆ ಅವರು ಈ ಕರೆ ನೀಡಿದರು.
“ಇದೀಗ ಇಡೀ ಜಗತ್ತಿನ ಕಣ್ಣು ಪ್ಯಾರಿಸ್ ಒಲಿಂಪಿಕ್ಸ್‌ನತ್ತ ನೆಟ್ಟಿದೆ. ನಮ್ಮ ಕ್ರೀಡಾಪಟುಗಳಿಗೆ ಜಾಗತಿಕ ವೇದಿಕೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಮತ್ತು ದೇಶಕ್ಕಾಗಿ ಗಮನಾರ್ಹ ಕೊಡುಗೆ ನೀಡಲು ಒಲಿಂಪಿಕ್ಸ್ ಅವಕಾಶ ಒದಗಿಸುತ್ತದೆ. ನೀವೂ ಸಹ ನಮ್ಮ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಮತ್ತು ಭಾರತವನ್ನು ಹುರಿದುಂಬಿಸಿ” ಎಂದು ಅವರು ಹೇಳಿದರು.
In the International Mathematics Olympiad, our students have performed exceptionally well. #MannKiBaat pic.twitter.com/6UClVrhIIO
— PMO India (@PMOIndia) July 28, 2024
ಇದೇ ವೇಳೆ ಅವರು ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್ (International Mathematics Olympiad)ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಿದರು. “ಕೆಲವು ದಿನಗಳ ಹಿಂದೆ ನಡೆದ ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ ಭಾರತದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಆ ಮೂಲಕ 4 ಚಿನ್ನದ ಪದಕ ಮತ್ತು 1 ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. 100ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ಈ ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿದ್ದರು. ನಮ್ಮ ತಂಡ ಅಗ್ರ 5ರಲ್ಲಿ ಸ್ಥಾನ ಪಡೆದುಕೊಂಡಿದೆʼʼ ಎಂದು ಮೋದಿ ಹೆಮ್ಮೆಯಿಂದ ಹೇಳಿದರು.
ʼʼಪುಣೆಯ ಆದಿತ್ಯ ವೆಂಕಟ ಗಣೇಶ್, ಪುಣೆಯ ಸಿದ್ಧಾರ್ಥ್ ಚೋಪ್ರಾ, ದೆಹಲಿಯ ಅರ್ಜುನ್ ಗುಪ್ತಾ, ಗ್ರೇಟರ್ ನೋಯ್ಡಾದ ಕನವ್ ತಲ್ವಾರ್, ಮುಂಬೈಯ ರುಶಿಲ್ ಮಾಥುರ್ ಮತ್ತು ಗುವಾಹಟಿಯ ಆನಂದ ಭಾದುರಿ ಈ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆʼʼ ಎಂದು ಪ್ರಧಾನಿ ಮೋದಿ ಮೆಚ್ಚುಗೆ ಸೂಚಿಸಿದರು.
Let us #Cheer4Bharat! #MannKiBaat #Olympics pic.twitter.com/LILTkTXh9h
— PMO India (@PMOIndia) July 28, 2024
ʼಮನ್ ಕಿ ಬಾತ್ʼ ಸಂಚಿಕೆಯಲ್ಲಿ ಭಾಗವಹಿಸುವಂತೆ ಅವರು ಇತ್ತೀಚೆಗೆ ಈ ಯುವ ಸಾಧಕರನ್ನು ವಿಶೇಷವಾಗಿ ಆಹ್ವಾನಿಸಿದ್ದರು. ತಮ್ಮ ಅನುಭವಗಳನ್ನು ದೇಶದೊಂದಿಗೆ ಹಂಚಿಕೊಳ್ಳುವಂತೆ ಮೋದಿ ಕೇಳಿಕೊಂಡಿದ್ದರು. ಗಣಿತದಲ್ಲಿನ ತಮ್ಮ ಆಸಕ್ತಿಯೇ ಸಾಧನೆಗೆ ಮುಖ್ಯ ಕಾರಣ ಎಂದು ವಿದ್ಯಾರ್ಥಿಗಳು ತಿಳಿಸಿದರು.
ವಿದ್ಯಾರ್ಥಿಗಳು ಹೇಳಿದ್ದೇನು?
ಪುಣೆಯ ಆದಿತ್ಯ ಮತ್ತು ಸಿದ್ಧಾರ್ಥ್ ತಮ್ಮ ಗಣಿತ ಶಿಕ್ಷಕ ಪ್ರಕಾಶ್ ಅವರ ಕೊಡುಗೆಯನ್ನು ನೆನೆದರು. ಅವರಿಂದಲೇ ತಮ್ಮ ಗೆಲುವು ಸಾಧ್ಯವಾಯಿತು ಎಂದರು. ಅರ್ಜುನ್ ಗುಪ್ತಾ ಪ್ರಧಾನಿ ಅವರೊಂದಿಗೆ ಮಾತನಾಡಲು ಹೆಮ್ಮೆ ವ್ಯಕ್ತಪಡಿಸಿದರು. ಗಣಿತವು ಸಮಸ್ಯೆಯನ್ನು ಪರಿಹರಿಸುವ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಇದು ಜೀವನದ ಪ್ರತಿಯೊಂದು ಅಂಶಕ್ಕೂ ಅನ್ವಯವಾಗುತ್ತದೆ ಎಂದು ತಿಳಿಸಿದರು.
ಕನವ್ ತಲ್ವಾರ್ ಪೋಷಕರು ಮತ್ತು ಸಹೋದರಿ ನೆರವಿನಿಂದ ಯಶಸ್ಸು ಪಡೆದಿರುವುದಾಗಿ ನುಡಿದರು. ಕಳೆದ ವರ್ಷ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದ ಅನುಭವವನ್ನು ಹಂಚಿಕೊಂಡು, ಈ ಬಾರಿ ಹೇಗಾದರೂ ಸ್ಥಾನ ಪಡೆಯಬೇಕೆಂಬ ಛಲದಲ್ಲಿ ಶ್ರಮ ಹಾಕಿದ್ದನ್ನು ವಿವರಿಸಿದರು. ಗಣಿತವು ತಾರ್ಕಿಕ ಚಿಂತನೆಯನ್ನು ಮಾತ್ರವಲ್ಲ ಸೃಜನಶೀಲತೆಯನ್ನೂ ಹೆಚ್ಚಿಸುತ್ತದೆ. ಸಮಸ್ಯೆ ಪರಿಹರಿಸುವಾಗ ಔಟ್ ಆಫ್ ಬಾಕ್ಸ್ ಯೋಚಿಸಲು ಸಹಾಯ ಮಾಡುತ್ತದೆ ಎನ್ನುವ ಅಭಿಮತ ರುಶಿಲ್ ಮಾಥುರ್ ಅವರದ್ದು. ಎರಡನೇ ಬಾರಿ ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿರುವುದಕ್ಕೆ ಆನಂದ ಭಾದುರಿ ಹೆಮ್ಮೆ ವ್ಯಕ್ತಪಡಿಸಿದರು.
ಸಿದ್ದಗಂಗಾ ಮಠದಲ್ಲಿ ʼಮನ್ ಕೀ ಬಾತ್ʼ ಪ್ರಸಾರಕ್ಕೆ ವ್ಯವಸ್ಥೆ
ತುಮಕೂರು: ಕ್ಯಾತ್ಸಂದ್ರ ಬಳಿಯಿರುವ ಸಿದ್ದಗಂಗಾ ಮಠದಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಯಿತು. ಬೃಹತ್ ಎಲ್‌ಇಡಿ ಪರದೆಗಳನ್ನ ಅಳವಡಿಸಲಾಗಿದ್ದು, ಸುಮಾರು ಹತ್ತು ಸಾವಿರ ಮಕ್ಕಳು ವೀಕ್ಷಿಸಿದರು. ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Mann Ki Baat: ʼಸಂವಿಧಾನದ ಬಗ್ಗೆ ಅಚಲ ನಂಬಿಕೆ ಇರಿಸಿದ್ದಕ್ಕೆ ಧನ್ಯವಾದʼ-ಮೋದಿ ಮನ್ ಕೀ ಬಾತ್ ಹೈಲೈಟ್ಸ್ ಹೀಗಿದೆ ನೋಡಿ