ನವ ದೆಹಲಿ: ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳಿಂದ ಅಮೂಲ್ಯ ಲೋಹಗಳನ್ನು ತೆಗೆಯುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಬೆಂಗಳೂರಿನ ಇ-ಪರಿಸರ ಸಂಸ್ಥೆಯ (E-Parisara) ಚಟುವಟಿಕೆಗಳನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ. 97ನೇ ಮನ್ ಕಿ ಬಾತ್‌ನಲ್ಲಿ (Mann Ki Baat) ಮಾತನಾಡಿದ ಅವರು, ಮೊಬೈಲ್ ಫೋನ್, ಲ್ಯಾಪ್ ಟಾಪ್, ಟಾಬ್ಲೆಟ್ ಇವತ್ತು ಪ್ರತಿ ಮನೆಮನೆಯಲ್ಲೂ ಸಾಮಾನ್ಯವಾಗಿದೆ. ದೇಶದಲ್ಲಿ ಅವುಗಳ ಸಂಖ್ಯೆ ಬಿಲಿಯನ್‌ಗಟ್ಟಲೆಯಾಗಿದೆ. ಇದರ ಪರಿಣಾಮವಾಗಿ ಇ-ತ್ಯಾಜ್ಯಗಳೂ(E-Waste) ಹೆಚ್ಚುತ್ತಿವೆ. ಹಳೆಯ ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್‌ಗಳು ಇ-ತ್ಯಾಜ್ಯವಾಗುತ್ತಿವೆ. ಇವುಗಳ ಸಮರ್ಪಕ ವಿಲೇವಾರಿ ಕೂಡ ಮುಖ್ಯ. ಇಲ್ಲದಿದ್ದರೆ ಪರಿಸರಕ್ಕೆ ಹಾನಿಕಾರಕವಾಗಿ ಬಿಡುತ್ತವೆ ಎಂದು ಪ್ರಧಾನಿ ವಿವರಿಸಿದರು.
ಆದರೆ ಇ-ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿದರೆ ಅದು ಉತ್ತಮ ಸಂಪನ್ಮೂಲವಾಗುತ್ತದೆ. ವಿಶ್ವಸಂಸ್ಥೆಯ ವರದಿಯ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ 5 ಕೋಟಿ ಟನ್ನಿಗೂ ಹೆಚ್ಚು ಇ-ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದುವರೆಗೆ ತಯಾರಿಸಿದ ಎಲ್ಲ ವಿಮಾನಗಳ ತೂಕಕ್ಕಿಂತಲೂ ಇದು ಹೆಚ್ಚು. ಪ್ರತಿ ಸೆಕೆಂಡ್‌ಗೆ 800 ಲ್ಯಾಪ್ ಟಾಪ್‌ಗಳನ್ನು ಕಸವಾಗಿ ಎಸೆಯಲಾಗುತ್ತದೆ. ಇ-ತ್ಯಾಜ್ಯಗಳನ್ನು ಸಂಸ್ಕರಿಸಿದರೆ ಇದರಿಂದ 17 ಮಾದರಿಯ ಅಮೂಲ್ಯ ಲೋಹಗಳನ್ನು ತೆಗೆಯಬಹುದು. ಇದರಲ್ಲಿ ಚಿನ್ನ, ಬೆಳ್ಳಿ, ತಾಮ್ರ ಮತ್ತು ನಿಕ್ಕೆಲ್ ಸೇರಿದೆ.
ಇವತ್ತು 500ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಇ-ತ್ಯಾಜ್ಯ ಸಂಸ್ಕರಣೆ ವಲಯದಲ್ಲಿ ಇವೆ. ಬೆಂಗಳೂರಿನ ಇ-ಪರಿಸರ ಕೂಡ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳಿಂದ ಅಮೂಲ್ಯ ಲೋಹಗಳನ್ನು ಹೊರ ತೆಗೆಯುವ ಸ್ವದೇಶಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಮುಂಬಯಿನ ಎಕೋರೆಕೊ ಸ್ಟಾರ್ಟಪ್ ಮೊಬೈಲ್ ಅಪ್ಲಿಕೇಶನ್ ಬಳಸಿ ಇ-ತ್ಯಾಜ್ಯವನ್ನು ಸಮಗ್ರಹಿಸುತ್ತದೆ. ಹೀಗಿದ್ದರೂ ಈಗ ಪ್ರತಿ ವರ್ಷ ಕೇವಲ 15-17% ಇ-ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿದೆ. ಮತ್ತಷ್ಟು ಪ್ರಗತಿ ಈ ನಿಟ್ಟಿನಲ್ಲಿ ಆಗಬೇಕಿದೆ ಎಂದು ವಿವರಿಸಿದರು.