Site icon Vistara News

Manoj Jarange Patil: ಮರಾಠ ಮೀಸಲಾತಿ ಹೋರಾಟಕ್ಕೆ ಜಯ; ಮನೋಜ್‌ ಜಾರಂಗೆ ಪ್ರತಿಭಟನೆ ಅಂತ್ಯ

marata

marata

ಮುಂಬೈ: ಮಹಾರಾಷ್ಟ್ರದ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠ (Martha) ಸಮುದಾಯಗಳಿಗೆ ಮೀಸಲಾತಿ ಸಿಗಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದ ಮರಾಠ ಮೀಸಲಾತಿ ಹೋರಾಟಗಾರ ಮನೋಜ್‌ ಜಾರಂಗೆ ಪಾಟೀಲ್‌ (Manoj Jarange Patil) ಅವರಿಗೆ ಜಯ ಲಭಿಸಿದೆ. ತಮ್ಮ ಮನವಿಯನ್ನು ಸರ್ಕಾರ ಸ್ವೀಕರಿಸಿದ್ದು, ಪ್ರತಿಭಟನೆ ಹಿಂಪಡೆಯುವುದಾಗಿ ಮನೋಜ್‌ ಶನಿವಾರ (ಜನವರಿ 27) ಘೋಷಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರವು ತನ್ನ ಎಲ್ಲ ಬೇಡಿಕೆಗಳನ್ನು ಒಪ್ಪಿಕೊಂಡ ನಂತರ ಮನೋಜ್ ಜಾರಂಗೆ ಪಾಟೀಲ್ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನೋಜ್‌ ಮುಂಬೈಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ʼʼಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ನೀಡಿದ ಜ್ಯೂಸ್‌ ಕುಡಿಯುವ ಮೂಲಕ ಉಪವಾಸವನ್ನು ಅಂತ್ಯಗೊಳಿಸಿದ್ದೇನೆ. ಮುಖ್ಯಮಂತ್ರಿ ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಅಲ್ಲದೆ ನಮ್ಮ ಬೇಡಿಕೆಗಳಿಗೆ ಒಪ್ಪಿದ್ದಾರೆ. ಈ ಬಗ್ಗೆ ಅವರಿಂದ ಲಿಖಿತ ಹೇಳಿಕೆ ಲಭಿಸಲಿದೆʼʼ ಎಂದು ಮನೋಜ್‌ ತಿಳಿಸಿದ್ದಾರೆ.

ಬೇಡಿಕೆ ಏನು?

ಎಲ್ಲ ಮರಾಠರಿಗೆ ಕುಣಬಿ ಪ್ರಮಾಣ ಪತ್ರ ಒದಗಿಸಬೇಕು, ಶಿಶುವಿಹಾರದಿಂದ ಸ್ನಾತಕೋತ್ತರ ಹಂತದವರೆಗೆ ಉಚಿತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಗಳಲ್ಲಿ ಮರಾಠರಿಗೆ ಮೀಸಲಾತಿ ನೀಡಬೇಕು ಎನ್ನುವುದು ಮನೋಜ್‌ ಅವರ ಮುಖ್ಯ ಬೇಡಿಕೆ. ಈವರೆಗೆ 37 ಲಕ್ಷ ಕುಣಬಿ ಪ್ರಮಾಣ ಪತ್ರಗಳನ್ನು ನೀಡಲಾಗಿದ್ದು, ಇನ್ನು ಈ ಸಂಖ್ಯೆ 50 ಲಕ್ಷಕ್ಕೆ ಏರಲಿದೆ ಎಂದು ಅವರು ಹೇಳಿದರು.

ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬೈಯ ಆಜಾದ್ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಮನೋಜ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. “‌ನಮ್ಮ ಬೇಡಿಕೆಗೆ ಸರ್ಕಾರ ಒಪ್ಪದಿದ್ದರೆ ನಾವು ಏನು ಮಾಡಬಹುದು ಎಂಬುದನ್ನು ತೋರಿಸುತ್ತೇವೆ” ಎಂದು ಅವರು ಸವಾಲು ಹಾಕಿದ್ದರು. ಮಹಾರಾಷ್ಟ್ರ ಸರ್ಕಾರದ ಇಬ್ಬರು ಸಚಿವರಾದ ಮಂಗಲ್ ಪ್ರಭಾತ್ ಲೋಧಾ ಮತ್ತು ದೀಪಕ್ ಕೇಸರ್ಕರ್ ಶುಕ್ರವಾರ ರಾತ್ರಿ ಮನೋಜ್‌ ಅವರನ್ನು ಭೇಟಿಯಾಗಿ ಅವರ ಎಲ್ಲ ಬೇಡಿಕೆಗಳನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದರು. ಜನವರಿ 20ರಂದು ಜಲ್ನಾದಿಂದ ಆರಂಭವಾದ ಕೋಟಾ ಕಾರ್ಯಕರ್ತರ ಮೆರವಣಿಗೆ ಮುಂಬೈ ನಗರವನ್ನು ಪ್ರವೇಶಿಸಲು ಸಜ್ಜಾಗುತ್ತಿದ್ದಂತೆ ಈ ತೀರ್ಮಾನ ಹೊರ ಬಿದ್ದಿದೆ.

ವಿಜಯ ಮೆರವಣಿಗೆ ಆಯೋಜಿಸಲು ಚಿಂತನೆ

ತಮ್ಮ ಮೇಡಿಕೆ ಈಡೇರಿದ ಹಿನ್ನಲೆಯಲ್ಲಿ ಮನೋಜ್‌ ಅವರು ಇಂದು ವಿಜಯ ಮೆರವಣಿಗೆಯನ್ನು ಆಯೋಜಿಸಲು ತೀರ್ಮಾನಿಸಿದ್ದಾರೆ. ವಾಶಿಯಲ್ಲಿ ಈ ಮೆರವಣಿಗೆ ನಡೆಯಲಿದೆ. “ಮರಾಠಾ ಸಮುದಾಯಕ್ಕೆ ಬಹಳ ಸಮಯದ ನಂತರ ಈ ಸಂತೋಷದ ಸುದ್ದಿ ಸಿಕ್ಕಿದೆ. ಭವಿಷ್ಯದಲ್ಲಿಯೂ ನಾನು ಹೋರಾಟ ಮುಂದುವರಿಸುತ್ತೇನೆ. ಮೀಸಲಾತಿ ಪಡೆಯಲು ಅಥವಾ ಕುಣಬಿ ಪ್ರಮಾಣ ಪತ್ರಗಳನ್ನು ಪಡೆಯಲು ಜನರು ಯಾವುದೇ ತೊಂದರೆಗಳನ್ನು ಎದುರಿಸಿದರೆ, ನಾವು ಅವರಿಗಾಗಿ ಹೋರಾಡುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Maratha Quota: ನಾಳೆ 11 ಗಂಟೆಯೊಳಗೆ ಬೇಡಿಕೆ ಈಡೇರಿಸಿ! ಮಹಾ ಸಿಎಂಗೆ ಗಡುವು ವಿಧಿಸಿದ ಮರಾಠ ನಾಯಕ

ಮರಾಠಾ ಕೋಟಾಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ಮನೋಜ್‌ ತಮ್ಮ ಆಂದೋಲನದ ಮೂರನೇ ಹಂತದಲ್ಲಿ ಜಲ್ನಾದಿಂದ ಮುಂಬೈಗೆ ಮೆರವಣಿಗೆ ಆರಂಭಿಸಿದ್ದರು ಮತ್ತು ಅವರಿಗೆ ಅಪಾರ ಜನ ಬೆಂಬಲ ವ್ಯಕ್ತವಾಗಿತ್ತು. ಇದೀಗ ಕೊನೆಗೂ ಸರ್ಕಾರ ಅವರ ಬೇಡಿಕೆಗೆ ಒಪ್ಪಿಗೆ ನೀಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version