ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗೆ ನೇಮಕ ಮಾಡಲಾಗಿದೆ. ರಾಷ್ಟ್ರ ರಾಜಕಾರಣವೇ ಬೇಡ ಎನ್ನುತ್ತಿದ್ದ ಯಡಿಯೂರಪ್ಪ ಅವರನ್ನು ಸ್ವತಃ ಪ್ರಧಾನಿ ಮೋದಿ ಕರೆ ಮಾಡಿ ಒಪ್ಪಿಸಿದ್ದಾರೆ ಎನ್ನಲಾಗಿದ್ದು, ಈ ನೇಮಕವು ರಾಜ್ಯ ರಾಜಕಾರಣದ ದೃಷ್ಟಿಯಿಂದ ಅನೇಕ ಸಂದೇಶಗಳನ್ನು ನೀಡುತ್ತದೆ.
ಸದ್ಯ ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನಾಯಕತ್ವದ ಸರ್ಕಾರವಿದ್ದು, ಮುಂದಿನ ಏಳೆಂಟು ತಿಂಗಳಲ್ಲಿ ಚುನಾವಣೆಗೆ ಹೋಗಬೇಕಿದೆ. ಈ ಸಮಯದಲ್ಲಿ ಸಿಎಂ ಬದಲಾಗುತ್ತಾರೆ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬದಲಾಗುತ್ತಾರೆ ಎಂಬ ಮಾತುಗಳಿದ್ದವು. ಇದೀಗ ಅಚ್ಚರಿಯೆಂಬಂತೆ ಬಿ.ಎಸ್. ಯಡಿಯೂರಪ್ಪ ಅವರನ್ನು ರಾಷ್ಟ್ರ ಮಟ್ಟದ ಪಕ್ಷ ಸಂಘಟನೆಗೆ ನೇಮಕ ಮಾಡಲಾಗಿದೆ. ಈ ನೇಮಕದಿಂದ ರಾಜ್ಯ ರಾಜಕಾರಣಕ್ಕೆ ಅನೇಕ ಸಂದೇಶಗಳನ್ನು ಬಿಜೆಪಿ ವರಿಷ್ಠರು ರವಾನೆ ಮಾಡಿದ್ದಾರೆ.
1. ರಾಜ್ಯ ಸರ್ಕಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಮುನ್ನಡೆಸುತ್ತಿದ್ದಾರೆ. ರಾಜ್ಯದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮ, ಬೆಳವಣಿಗೆಯನ್ನು ಕೇಂದ್ರ ವರಿಷ್ಠರೊಂದಿಗೆ, ಆರ್‌ಎಸ್‌ಎಸ್ ಪ್ರಮುಖರೊಂದಿಗೆ ಸಂವಹನ ನಡೆಸುವುದರಲ್ಲಿ ಬೊಮ್ಮಾಯಿ ಪಳಗಿದ್ದಾರೆ. ಸರ್ಕಾರದ ಉತ್ತಮ ಆಡಳಿತದ ಜತೆಗೆ, ಹೆಚ್ಚಿನ ಜನರನ್ನು ಪಕ್ಷದತ್ತ ಸೆಳೆಯಬೇಕೆಂದರೆ ಸದ್ಯ ವೀರಶೈವ ಲಿಂಗಾಯತ ಸಮುದಾಯಕ್ಕೆ ಬಿ.ಎಸ್. ಯಡಿಯೂರಪ್ಪ ಅವರೇ ಸರ್ವೋಚ್ಛ ರಾಜಕೀಯ ನಾಯಕರು. ಅವರನ್ನು ಬಿಟ್ಟು 2023ರ ವಿಧಾನಸಭೆ ಚುನಾವಣೆಯನ್ನು ಎದುರಿಸುವುದು ಬಹು ಕಷ್ಟ ಎನ್ನುವುದನ್ನು ಬಿಜೆಪಿ ವರಿಷ್ಠರು ಅರಿತಿದ್ದಾರೆ. ಅಂದರೆ ರಾಜ್ಯದ ಮಟ್ಟಿಗೆ ಬಿ.ಎಸ್. ಯಡಿಯೂರಪ್ಪ ಅವರು ಇನ್ನೂ ಓಡುವ ಕುದುರೆ ಎನ್ನುವುದನ್ನು ಈ ಮೂಲಕ ಒಪ್ಪಿದ್ದಾರೆ.
2. ಬಿ.ಎಸ್. ಯಡಿಯೂರಪ್ಪ ಅವರಿಗೆ ಟಿಕೆಟ್ ನೀಡುವ ಸಂಪೂರ್ಣ ಹೊಣೆಯನ್ನು ನೀಡಿದ್ದರೆ 2018ರಲ್ಲಿ ಇನ್ನೂ 8-10 ಹೆಚ್ಚು ಸ್ಥಾನಗಳು ಲಭಿಸುತ್ತಿದ್ದವು ಎಂಬ ಮಾತುಗಳು ಬಿಜೆಪಿಯಲ್ಲಿದ್ದವು. ಸ್ವತಃ ಬಿ.ಎಸ್. ಯಡಿಯೂರಪ್ಪ ಅವರೂ ಆಪ್ತರ ಬಳಿ ಈ ಮಾತನ್ನು ಹೇಳಿಕೊಂಡಿದ್ದರು. ಇದೀಗ ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪ ಸ್ಥಾನ ಪಡೆದಿರುವುದರಿಂದ, ನೇರವಾಗಿ ಕೇಂದ್ರ ಚುನಾವಣಾ ಸಮಿತಿಗೂ ನೇಮಕವಾಗಿದ್ದಾರೆ. ಎಲ್ಲ ರಾಜ್ಯಗಳ ಚುನಾವಣೆಗೂ ಟಿಕೆಟ್ ಅಂತಿಮಗೊಳಿಸುವುದು ಇದೇ ಸಮಿತಿ. ರಾಜ್ಯದ ಚುನಾವಣೆ ಟಿಕೆಟ್ ಅಂತಿಮಗೊಳಿಸುವ ಸಮಿತಿಯಲ್ಲೂ ಯಡಿಯೂರಪ್ಪ ಇರುವುದರಿಂದ, ಟಿಕೆಟ್ ನೀಡಿಕೆ ವೇಳೆ ಹೆಚ್ಚಿನ ಪ್ರಭಾವ ಬೀರಬಹುದು.
3. ಯಡಿಯೂರಪ್ಪ ಅವರಿಗೆ ಹೆಚ್ಚಿನ ಅಧಿಕಾರ ಸಿಕ್ಕಿರುವುದು ನಿಜವಾದರೂ ಇದರಿಂದ ಪುತ್ರ ಬಿ.ವೈ. ವಿಜಯೇಂದ್ರ ಅವರ ಮೇಲೆ ಪಕ್ಷ ಹೆಚ್ಚಿನ ನಿಯಂತ್ರಣ ಹೊಂದುವುದೇ ಎಂಬ ಚರ್ಚೆಗಳು ಪಕ್ಷದಲ್ಲಿ ನಡೆದಿವೆ. ಶಿಕಾರಿಪುರ ಕ್ಷೇತ್ರದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವಲ್ಲಿನ ಸಮಸ್ಯೆ ನಿವಾರಣೆಯಾಗಿದೆ. ಆದರೆ ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಹೆಚ್ಚಿನ ಅಧಿಕಾರ ನೀಡಿರುವುದು, ವಿಜಯೇಂದ್ರ ಅವರಿಗೆ ಪಕ್ಷದಲ್ಲಿ ಹೆಚ್ಚಿನ ಹೊಣೆಯನ್ನು ನೀಡದೇ ಇರಲು ಕಾರಣ ಒದಗಿಸುತ್ತದೆಯೇ ಎಂಬ ಅನುಮಾನ ಹುಟ್ಟು ಹಾಕಿದೆ. ವಿಜಯೇಂದ್ರ ಅವರು ಭವಿಷ್ಯದಲ್ಲಿ ಪ್ರಧಾನ ಕಾರ್ಯದರ್ಶಿ, ಕೋರ್ ಕಮಿಟಿ ಸದಸ್ಯ, ಚುನಾವಣಾ ಸಮಿತಿ ಸೇರಿ ವಿವಿಧ ಹೊಣೆ ಹೊರಲಿದ್ದಾರೆ ಎನ್ನಲಾಗಿತ್ತು. ಇದೀಗ ಅದೆಲ್ಲಕ್ಕೂ ಅಡ್ಡಿಯಾಗುವುದೇ ಎಂಬ ಚರ್ಚೆಗಳು ಪಕ್ಷದಲ್ಲಿ ನಡೆದಿವೆ.
4. ಪಕ್ಷದಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಎಂದು ಪಕ್ಷದಲ್ಲಿ ಮಾತುಗಳು ಕೇಳಿಬರುತ್ತಿದ್ದವು, ಪ್ರತಿಪಕ್ಷ ಕಾಂಗ್ರೆಸ್ ನಾಯಕರೂ ಇದೇ ಮಾತನ್ನು ಹೇಳುತ್ತಿದ್ದರು. ಕಾಂಗ್ರೆಸ್ ನಾಯಕರು ಇದೇ ಮಾತನ್ನು ಪದೇಪದೆ ಹೇಳುತ್ತ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ನಾಯಕರಾದ ಎಂ.ಬಿ. ಪಾಟೀಲ್ (ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ), ಈಶ್ವರ ಖಂಡ್ರೆ, ಬಸವರಾಜ ರಾಯರಡ್ಡಿ, ಎಸ್.ಆರ್. ಪಾಟೀಲ್ ಅವರ ಮೂಲಕ ಸಮುದಾಯದ ಮತಗಳನ್ನು ಪಡೆಯುವ ಆಲೋಚನೆ ನಡೆದಿತ್ತು. ಇದೀಗ ಯಡಿಯೂರಪ್ಪ ಅವರು ಉನ್ನತ ಸಮಿತಿಗೆ ನೇಮಕ ಆಗಿರುವುದರಿಂದ, ಅವರನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳನ್ನು ಆಡುವುದು ಕಷ್ಟ.
5. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ಚರ್ಚೆಗಳು ಪಕ್ಷದಲ್ಲಿ ಬಲವಾಗಿವೆ. ಸಿಎಂ ಬಸವರಾಜ ಬೊಮ್ಮಾಯಿ ಅವರೂ ವೀರಶೈವ ಲಿಂಗಾಯತ ಸಮುದಾಯಕ್ಕೇ ಸೇರಿರುವ ಕಾರಣ, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೂ ಇದೇ ಸಮುದಾಯದವರನ್ನು ನೇಮಕ ಮಾಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆ ಆಗಿದೆ. ಈ ಸ್ಥಾನಕ್ಕೆ, ರಾಜ್ಯದ ಮತ್ತೊಂದು ಪ್ರಭಾವಿ ಸಮುದಾಯವಾದ ಒಕ್ಕಲಿಗ, ಅಥವಾ ಇನ್ನಾವುದೇ ಹಿಂದುಳಿದ ವರ್ಗದವರಿಗೆ ಮಣೆ ಹಾಕಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ | ಸ್ವತಃ ನರೇಂದ್ರ ಮೋದಿಯೇ ಬಿ.ಎಸ್. ಯಡಿಯೂರಪ್ಪಗೆ ಫೋನ್ ಮಾಡಿ ಒಪ್ಪಿಸಿದರು!