ಮುಂಬೈ: ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಪ್ರಕರಣದಲ್ಲಿ (Maoist Links Case) ಆರೋಪಿಗಳಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್.ಸಾಯಿಬಾಬಾ (GN Saibaba) ಮತ್ತು ಇತರ ಐವರನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಮಂಗಳವಾರ ಖುಲಾಸೆಗೊಳಿಸಿದೆ. ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವಾಲ್ಮೀಕಿ ಎಸ್.ಎ.ಮೆನೆಜಸ್ (Vinay Joshi and Valmiki SA Menezes) ಅವರನ್ನೊಳಗೊಂಡ ನ್ಯಾಯಪೀಠವು 2017ರಲ್ಲಿ ಜಿ.ಎನ್.ಸಾಯಿಬಾಬಾ ಮತ್ತು ಇತರರನ್ನು ತಪ್ಪಿತಸ್ಥರೆಂದು ಘೋಷಿಸಿದ್ದ ತೀರ್ಪನ್ನು ತಳ್ಳಿ ಹಾಕಿತು.
ಪ್ರಕರಣವನ್ನು ಸಾಬೀತುಪಡಿಸಲು ವಿಫಲವಾದ ಕಾರಣ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ. ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ (UAPA) ನಿಬಂಧನೆಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಆರೋಪ ಹೊರಿಸಲು ಪ್ರಾಸಿಕ್ಯೂಷನ್ ಪಡೆದ ಅನುಮತಿಯನ್ನು ʼಅನೂರ್ಜಿತʼ ಎಂದು ಪೀಠ ಹೇಳಿದೆ.
ಪ್ರಾಸಿಕ್ಯೂಷನ್ ತಕ್ಷಣವೇ ಸುಪ್ರೀಂ ಕೋರರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 54 ವರ್ಷದ ಜಿ.ಎನ್.ಸಾಯಿಬಾಬಾ ಶೇ. 90ರಷ್ಟು ಅಂಗವಿಕಲರಾಗಿದ್ದು ವ್ಹೀಲ್ ಚೇರ್ ಆಶ್ರಯ ಹೊಂದಿದ್ದಾರೆ. ಪ್ರಸ್ತುತ ಅವರನ್ನು ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಜಿ.ಎನ್.ಸಾಯಿಬಾಬಾ ಮತ್ತು ಇತರರನ್ನು 2014ರಲ್ಲಿ ಬಂಧಿಸಲಾಗಿತ್ತು. ಅವರು ಸಿಪಿಐ (ಮಾವೋವಾದಿ) ಗುಂಪಿನ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ಮಹಾರಾಷ್ಟ್ರದ ಗಡ್ಚಿರೋಲಿಯ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ವಾದಿಸಿತ್ತು. ವಶಪಡಿಸಿಕೊಳ್ಳಲಾದ ವಸ್ತುಗಳಲ್ಲಿ ದೇಶ ವಿರೋಧಿ ಅಂಶಗಳು ಕಂಡು ಬಂದಿದ್ದವು ಎಂದು ಹೇಳಿತ್ತು. ಅಬುಜ್ಮದ್ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ನಕ್ಸಲರಿಗೆ ಸಾಯಿಬಾಬಾ ಮೆಮೊರಿ ಕಾರ್ಡ್ ನೀಡಿದ್ದರು ಎಂದೂ ಆರೋಪಿಸಲಾಗಿತ್ತು.
ಅದರಂತೆ 2017ರಂದು ಯುಎಪಿಎ ಕಾಯ್ದೆಯಡಿ ಇವರನ್ನು ದೋಷಿ ಎಂದು ಘೋಷಿಸಲಾಗಿತ್ತು. ಇನ್ನು ಆರೋಪಿಗಳ ಪೈಕಿ ಪಾಂಡು ಪೊರಾ ನರೋಟೆ 2022ರಲ್ಲಿ ಸಾವನ್ನಪ್ಪಿದ್ದರು. ಮಹೇಶ್ ಟಿರ್ಕಿ, ಹೇಮ್ ಕೇಶವದತ್ತ ಮಿಶ್ರಾ, ಪ್ರಶಾಂತ್ ರಾಹಿ ಮತ್ತು ವಿಜಯ್ ನನ್ ಟಿರ್ಕಿ ಇತರ ಆರೋಪಿಗಳು.
2022ರಲ್ಲಿ ಬಾಂಬೆ ಹೈಕೋರ್ಟ್‌ನ ಇನ್ನೊಂದು ಪೀಠ ಅವರನ್ನು ದೋಷಿ ಎಂದಿದ್ದ ಆದೇಶವನ್ನು ತಳ್ಳಿ ಹಾಕಿತ್ತು. ಆದರೆ ಬಳಿಕ ಸುಪ್ರೀಂ ಕೋರ್ಟ್ ಆ ಆದೇಶವನ್ನು ತಡೆಹಿಡಿದಿತ್ತು. ಇದೀಗ ಮತ್ತೆ ಸಾಯಿಬಾಬಾ ದೋಷಮುಕ್ತರಾಗಿದ್ದಾರೆ. ಬಂಧನಕ್ಕೂ ಮುನ್ನ, ಸಾಯಿಬಾಬಾ ಅವರು ದೆಹಲಿ ವಿಶ್ವವಿದ್ಯಾಲಯದ ರಾಮ್ ಲಾಲ್ ಆನಂದ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದರು.
ಸಾಯಿಬಾಬಾ ಹಿನ್ನಲೆ
ಆಂಧ್ರಪ್ರದೇಶದ ಬಡ ಕುಟುಂಬದಲ್ಲಿ ಜನಿಸಿದ ಜಿ.ಎನ್.ಸಾಯಿಬಾಬಾ ವ್ಹೀಲ್‌ಚೇರ್‌ನಲ್ಲಿ ಕುಳಿತೇ ಪಾಠ ಮಾಡುತ್ತಿದ್ದರು. ಅವರು ಕೋಚಿಂಗ್ ಕ್ಲಾಸ್‌ನಲ್ಲಿ ಪರಿಚಯವಾಗಿದ್ದ ವಸಂತಾ ಅವರನ್ನು ಪ್ರೇಮ ವಿವಾಹವಾಗಿದ್ದರು. ಸಾಯಿಬಾಬಾ ಅವರು ಮಾವೋವಾದಿಗಳ ಗುಂಪು ರೆವಲ್ಯೂಷನರಿ ಡೆಮಾಕ್ರಟಿಕ್ ಫ್ರಂಟ್‌ನ ಸದಸ್ಯ ಎಂದು ಆರೋಪಿಸಲಾಗಿತ್ತು. ಆದಾಗ್ಯೂ, ಮಾವೋವಾದಿಗಳನ್ನು ಬೆಂಬಲಿಸುವ ಆರೋಪಗಳನ್ನು ಸ್ವತಃ ಅವರೇ ತಳ್ಳಿ ಹಾಕುತ್ತಿದ್ದರು. ಸದ್ಯ ನ್ಯಾಯಾಲಯವೇ ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿದ್ದಲ್ಲದೇ ಜೀವಾವಧಿ ಶಿಕ್ಷೆಯನ್ನೂ ರದ್ದುಗೊಳಿಸಿದೆ.
ಇದನ್ನೂ ಓದಿ: G N Saibaba | ಮಾವೋವಾದಿಗಳ ಜತೆ ಸಂಪರ್ಕ ಕೇಸಿನಲ್ಲಿ ಪ್ರೊ. ಜಿ ಎನ್ ಸಾಯಿಬಾಬಾ ಖುಲಾಸೆ